ರಾಜಕೀಯವು ಅತೃಪ್ತ ಆತ್ಮಗಳ ಸಾಗರವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಜೀವನವು ಸವಾಲುಗಳಿಂದ ತುಂಬಿದ್ದು, 'ಬದುಕುವ ಕಲೆ' ಕಲಿಯಬೇಕು ಎಂದು ಅವರು ಹೇಳಿದರು.
ನವದೆಹಲಿ (ಡಿ.3): ರಾಜಕೀಯ ಅನ್ನೋದು ಅತೃಪ್ತ ಆತ್ಮಗಳ ಸಾಗರ. ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ಅತೃಪ್ತಿಯಲ್ಲೇ ಇರುತ್ತಾರೆ. ಪ್ರಸ್ತುತ ತಾನು ಇರುವ ಸ್ಥಾನಕ್ಕಿಂತ ಉನ್ನತ ಹುದ್ದೆಯ ನಿರೀಕ್ಷೆಯೇ ಆತನಲ್ಲಿರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಾಗ್ಪುರದಲ್ಲಿ ಭಾನುವಾರ ನಡೆದ '50 ರೂಲ್ಸ್ ಆಫ್ ಗೋಲ್ಡನ್ ಲೈಫ್' ಬಿಡುಗಡೆ ಸಮಾರಂಭದಲ್ಲಿ ಅವರು ಪ್ರಸ್ತುತ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಹೊಂದಾಣಿಕೆ, ಒತ್ತಾಯ, ಮಿತಿ, ವೈರುಧ್ಯಗಳ ಆಟವೇ ಜೀವನ ಎಂದು ಹೇಳಿದ ನಿತಿನ್ ಗಡ್ಕರಿ, ಒಬ್ಬ ವ್ಯಕ್ತಿಯು ಕುಟುಂಬದಲ್ಲಿ, ಸಮಾಜದಲ್ಲಿ, ರಾಜಕೀಯದಲ್ಲಿ ಅಥವಾ ಕಾರ್ಪೊರೇಟ್ ಜೀವನದಲ್ಲಿ ಇರಲಿ, ಜೀವನವು ಸವಾಲುಗಳು ಮತ್ತು ಸಮಸ್ಯೆಗಳಿಂದ ತುಂಬಿರುತ್ತದೆ. ಅವುಗಳನ್ನು ಎದುರಿಸಲು ವ್ಯಕ್ತಿ 'ಬದುಕುವ ಕಲೆ' ಕಲಿಯಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ರಾಜಸ್ಥಾನದಲ್ಲಿ ಮಾತನಾಡಿದ್ದ ಅಲ್ಲಿಯೂ ಇದೇ ರೀತಿಯ ಮಾತನ್ನು ಹೇಳಿದ್ದರು. ರಾಜಕಾರಣದಲ್ಲಿ ಎಲ್ಲರೂ ದುಃಖಿತರಾಗಿಯೇ ಇರುತ್ತಾರೆ. ಶಾಸಕರಾಗುವ ಅವಕಾಶ ಸಿಗದ ಕಾರಣ ಕಾರ್ಪೋರೇಟರ್, ಸಂಪುಟಕ್ಕೆ ಸೇರ್ಪಡೆಯಾಗದ ಕಾರಣ ಶಾಸಕ ಅತೃಪ್ತಿಯಲ್ಲಿರುತ್ತಾರೆ. ಮಂತ್ರಿಯಾದವನು ಒಳ್ಳೆ ಇಲಾಖೆ ಸಿಗದೆ, ಮುಖ್ಯಮಂತ್ರಿ ಆಗಲಾರದೆ ಅತೃಪ್ತನಾಗಿದ್ದಾನೆ. ಇನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂತವನಾದರೂ ನೆಮ್ಮದಿಯಲ್ಲಿ ಇರುತ್ತಾನಾ? ಎಂದರೆ, ಹೈಕಮಾಂಡ್ ಯಾವಾಗ ತನ್ನನ್ನು ಸಿಎಂ ಸ್ಥಾನದಿಂದ ತೆಗೆದು ಹಾಕುತ್ತದೆಯೋ ಅನ್ನೋ ಆತಂಕವೇ ಅವನಲ್ಲಿರುತ್ತದೆ ಎಂದಿದ್ದಾರೆ.
ಪ್ರಧಾನಿಯಾಗಲು ಸಾಕಷ್ಟು ಬಾರಿ ಆಫರ್ ಬಂದಿತ್ತು: ‘ರಾಜಕೀಯ ಬಾಂಬ್’ ಸಿಡಿಸಿದ ಕೇಂದ್ರ ಸಚಿವ
ತನ್ನ ರಾಜಕೀಯ ಜೀವನದಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ಆತ್ಮಚರಿತ್ರೆಯ ಉಲ್ಲೇಖವನ್ನು ನೆನಪಿಸಿಕೊಳ್ಳುತ್ತೇನೆ ಎಂದು ಗಡ್ಕರಿ ಹೇಳಿದರು. 'ಒಬ್ಬ ವ್ಯಕ್ತಿಯು ಸೋತ ನಂತರ ಅವನ ಜೀವನ ಮುಗಿಯೋದಿಲ್ಲ. ಅವನು ಸೋಲನ್ನು ಒಪ್ಪಿಕೊಂಡಾಗ ಮಾತ್ರವೇ ಮುಗಿದು ಹೋಗುತ್ತದೆ' ಅನ್ನೋ ಮಾತನ್ನು ನಾನು ನಂಬುತ್ತೇನೆ ಎಂದಿದ್ದಾರೆ. ಸಂತೋಷದ ಜೀವನಕ್ಕಾಗಿ ಉತ್ತಮ ಮಾನವೀಯ ಮೌಲ್ಯಗಳು ಮತ್ತು ಸಂಸ್ಕಾರಗಳಿಗೆ ಗಡ್ಕರಿ ಒತ್ತು ನೀಡಿದರು. ಬದುಕಲು ಮತ್ತು ಯಶಸ್ವಿಯಾಗಲು ತಮ್ಮ ಸುವರ್ಣ ನಿಯಮವನ್ನು ಹಂಚಿಕೊಂಡ ಅವರು, 'ವ್ಯಕ್ತಿ, ಪಕ್ಷ ಮತ್ತು ಪಕ್ಷದ ತತ್ವಗಳ' ಮಹತ್ವದ ಬಗ್ಗೆ ಮಾತನಾಡಿದರು.
ಸೇತುವೆ ಕುಸಿತಕ್ಕೆ ದೋಷಪೂರಿತ ಡಿಪಿಆರ್ ಕಾರಣ: ಕೇಂದ್ರ ಸಚಿವ ನಿತಿನ್ ಗಡ್ಕರಿ