ಇತ್ತೀಚೆಗೆ ಗೂಗಲ್ ಮ್ಯಾಪ್ ನೋಡಿ ಸಾಗಿದ ಕಾರು ಸೇತುವೆ ಮೇಲಿಂದ ಬಿದ್ದು ಮೂವರು ಮೃತಪಟ್ಟ ಘಟನೆ ನಡೆದ 10 ದಿನದಲ್ಲಿ ಮತ್ತೊಂದು ಮ್ಯಾಪ್ ದುರಂತ ನಡೆದಿದೆ. ಆದರೆ ಈ ಬಾರಿ ಟಾಟಾ ಕಾರು ಪ್ರಯಾಣಿಕರ ಜೀವ ಉಳಿಸಿದೆ.
ಬರೇಲಿ(ಡಿ.03)ಎಲ್ಲೇ ಹೋಗಬೇಕಿದ್ದರೂ ದಾರಿಯಲ್ಲಿ ಸಿಕ್ಕವರನ್ನು ಕೇಳುವ ಪ್ರಶ್ನೆ ಇಲ್ಲ. ಗೂಗಲ್ ಮ್ಯಾಪ್ ಹಾಕಿದರೆ ಸಾಕು. ಹತ್ತಿರದ ಮಾರ್ಗ, ಕ್ರಮಿಸಬೇಕಾದ ದೂರ, ಸಮಯ ಎಲ್ಲವನ್ನು ಹೇಳುತ್ತೆ. ಆದರೆ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದಂತೆ ಜೀವನ ಸುಲಭವಾಗಬೇಕಿತ್ತು. ಆದರೆ ಇತ್ತೀಚಗೆ ಅಪಾಯಗಳು ಹೆಚ್ಚಾಗುತ್ತಿದೆ. ಕಾರಣ ಇದೇ ಜಿಪಿಎಸ್ ಮಾರ್ಗ ನಂಬಿ ತೆರಳುತ್ತಿರುವ ಪ್ರಯಾಣಿಕರು ಅಪಘಾತಕ್ಕೀಡಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. 10 ದಿನಗಳ ಹಿಂದೆ ಮದುವೆ ಹೊರಟ ಕಾರು ಸೇತುವೆ ಮೇಲಿಂದ ಬಿದ್ದ ಮೂವರು ಪ್ರಾಣಕ್ಕೆ ಕುತ್ತು ತಂದಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಜಿಪಿಎಸ್ ಮ್ಯಾಪ್ ಮೂಲಕ ಸಾಗಿದ ಕಾರು ಕಾಲುವೆಗೆ ಬಿದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಆದರೆ ಟಾಟಾ ಕಾರು ಈ ಪ್ರಯಾಣಿಕರ ಜೀವ ಉಳಿಸಿದೆ.
ಬರೇಲಿಯ ಪಿಲಿಭಿತ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಟಾಟಾ ಟಿಗೋರ್ ಕಾರಿನಲ್ಲಿ ದಿವ್ಯಾಂಶು ಸಿಂಗ್ ಸೇರಿದಂತೆ ಮೂವರು ಪ್ರಯಾಣ ಆರಂಭಿಸಿದ್ದಾರೆ. ದಾರಿ ಗೊತ್ತಿಲ್ಲದ ಕಾರಣ ಜಿಪಿಎಸ್ ಮ್ಯಾಪ್ ಆನ್ ಮಾಡಿ ವಿಳಾಸ ಹಾಕಿದ್ದಾರೆ. ಬಳಿಕ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಸಾಗಿದ್ದಾರೆ. ಆದರೆ ಬರ್ಕಾಪುರ ಗ್ರಾಮದ ಬಳಿ ಬರುತ್ತಿದ್ದಂತೆ ರಸ್ತೆ ಕಾಮಗಾರಿಗಳು ಎದುರಾಗಿದೆ. ಹೀಗಾಗಿ ರಸ್ತೆ ಸಂಚಾರ ಬದಲಿಸಲಾಗಿತ್ತು. ಆದರೆ ಗೂಗಲ್ ಮ್ಯಾಪ್ ಮಾತ್ರ ನೇರವಾಗಿ ಸಾಗಲು ಸೂಚಿಸಿದೆ.
undefined
ಜಿಪಿಎಸ್ ತೋರಿದ ದಾರೀಲಿ ಮದುವೆ ಮನೆಗೆ ಹೋಗ್ತಿದ್ದ ಕಾರು ಸೀದಾ ನದಿಗೆ ಬಿದ್ದು ಮೂವರ ಸಾವು!
ಗೂಗಲ್ ಮ್ಯಾಪ್ ಸೂಚಿಸಿದ ದಾರಿಯಲ್ಲಿ ಸಾಗಿದ ಕೆಲವೇ ಕ್ಷಣದಲ್ಲಿ ಕಾಲಾಪುರ ಕಾಲುವೆಗೆ ಕಾರು ಉರುಳಿ ಬಿದ್ದಿದೆ.ವೇಗವಾಗಿ ಸಾಗುತ್ತಿದ್ದ ಕಾರಣ ಅಪಘಾತದ ಪ್ರಮಾಣ ಹೆಚ್ಚಾಗಿದೆ. ಕಾರು ಹಲವು ಪಲ್ಟಿಯಾಗಿದೆ. ಆದರೆ ಟಾಟಾ ಮೋಟಾರ್ಸನ ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಸೆಡಾನ್ ಕಾರಾಗಿದ್ದ ಕಾರಣ ಪ್ರಯಾಣಿಕರ ಬದುಕುಳಿದಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದರೂ ಮೂವರು ಪ್ರಯಾಣಿಕರ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ.
ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಮೂವರುು ಪ್ರಯಾಣಿಕರನ್ನು ಕಾರಿನಿಂದ ಹೊರತೆಗೆದಿದ್ದಾರೆ. ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಗಂಭೀರ ಗಾಯಗಳಿಲ್ಲದ ಕಾರಣ ಮೂವರು ಪ್ರಯಾಣಿಕರು ತಪಾಸಣೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇತ್ತ ಕಾರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಲಾಗಿದೆ. ಗೂಗಲ್ ಮ್ಯಾಪ್ ನೀಡಿದ ತಪ್ಪು ಸೂಚನೆಯಿಂದ ಕಾರು ಕಾಲುವೆಗೆ ಮಗುಚಿ ಬಿದ್ದಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ಹತ್ತು ದಿನದ ಹಿಂದೆ ಅಂದರೆ ನವೆಂಬರ್ 24 ರಂದು ಉತ್ತರ ಪ್ರದೇಶದ ಖಲ್ಪುರ-ದಾತ್‌ಗಂಜ್ ರಸ್ತೆಯಲ್ಲಿ ಇದೇ ರೀತಿ ಜಿಪಿಎಸ್ ಮ್ಯಾಪ್ ಬಳಸಿ ಸಾಗಿದ ಪ್ರಯಾಣಿಕರು ಮೃತಪಟ್ಟಿದ್ದರು. ದಾತ್‌ಗಂಜ್‌ನಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಖಲ್ಪುರ್-ದಾತ್‌ಗಂಜ್ ಬಳಿ ರಸ್ತೆ ಕಾಮಾಗಾರಿ ನಡೆಯುತ್ತಿತ್ತು. ಆದರೆ ಜಿಪಿಎಸ್ ಮ್ಯಾಪ್ ಈ ಕುರಿತು ಯಾವುದೇ ಸೂಚನೆ ನೀಡಿಲ್ಲ. ನೇರವಾಗಿ ಸಾಗಲು ಸೂಚಿಸಿದೆ. ಇದೇ ದಾರಿಯಲ್ಲಿ ಹೊಸದಾಗಿ ಸೇತುವೆ ನಿರ್ಮಾಣ ಕಾರ್ಯವೂ ಆರಂಭಗೊಂಡಿತ್ತು. ಮ್ಯಾಪ್ ಈ ಸೇತುವೆ ಮೇಲಿಂದ ಸಾಗಲು ಸೂಚಿಸಿದೆ.
ರಾಮ್‌ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ಸೇತುವೆ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಅರ್ಧ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇನ್ನರ್ಧ ಸೇತುವೆ ಹಾಗೇ ಉಳಿದಿತ್ತು. ಆದರೆ ಮ್ಯಾಪ್ ಸೂಚನೆಯಂತೆ ಸಾಗುತ್ತಿದ್ದ ಕಾರು ಏಕಾಏಕಿ ಸೇತುವೆ ಅಂತ್ಯಗೊಂಡಿದೆ. ಪರಿಣಾಮ ಕಾರು ಸೇತುವೆ ಮೇಲಿಂದ ರಾಮ್ ಗಂಗಾ ನದಿಗೆ ಉರುಳಿ ಬಿದ್ದಿದೆ. ವೇಗ, ಅತೀ ಎಚ್ಚರದಿಂದ ಬಿದ್ದ ರಭಸದಲ್ಲಿ ಕಾರು ನಜ್ಜುಗುಜ್ಜಾಗಿದೆ. ಇದರಿಂದ ಮೂವರು ದುರಂತ ಅಂತ್ಯಕಂಡಿದ್ದರು.