ರಾಷ್ಟ್ರಪತಿ ಕೋವಿಂದ್ ಭೇಟಿಯಾದ ಪ್ರಧಾನಿ, ಮಹತ್ವದ ಮಾತುಕತೆ!

By Chethan KumarFirst Published Jul 13, 2022, 3:37 PM IST
Highlights
  • ಜುಲೈ 24ಕ್ಕೆ ರಾಷ್ಟ್ರಪತಿ ಕೋವಿಂದ್ ಅವಧಿ ಮುಕ್ತಾಯ
  • ಜುಲೈ 18ಕ್ಕೆ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ, 21ಕ್ಕೆ ಮತ ಎಣಿಕೆ
  • ಕೋವಿಂದ್ ಭೇಟಿಯಾಗಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ

ನವದೆಹಲಿ(ಜು.13): ದೇಶದಲ್ಲಿ ರಾಷ್ಟ್ರಪತಿ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ.  ಹಲವು ರಾಜ್ಯಗಳಿಗೆ ಈಗಾಗಲೇ ಮತಪೆಟ್ಟಿಗೆ ತಲುಪಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವದಿ ಜುಲೈ 24ಕ್ಕೆ ಅಂತ್ಯವಾಗಲಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.   ಜುಲೈ 18ಕ್ಕೆ ನೂತನ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 21ಕ್ಕೆ ಮತ ಎಣಿಕೆ ನಡೆಯಲಿದೆ. ಇದರ ಬೆನ್ನಲ್ಲೇ  ಪ್ರಧಾನಿ ಮೋದಿ ಹಾಗೂ ರಾಮನಾಥ್ ಕೋವಿಂದ್ ಭೇಟಿ ಮಹತ್ವದ ಪಡೆದುಕೊಂಡಿದೆ.  ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ದ್ರೌಪದಿ ಮುರ್ಮು ಕಣಕ್ಕಿಳಿಸಿದೆ. ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ. ಈ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ ಮೋದಿ ಹಾಗೂ ಕೋವಿಂದ್ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ ಭೇಟಿ ಹಾಗೂ ಮಾತುಕತೆ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು(NDA Candidate) ಆಯ್ಕೆ ಮಾಡಿತ್ತು. ಆದಿವಾಸಿ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಎನ್‌ಡಿಎ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ದ್ರೌಪದಿ ಮುರ್ಮುಗೆ(Draupadi Murmu) ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. 

 

ಶಿಕ್ಷಣ, ತಂತ್ರಜ್ಞಾನದಲ್ಲಿ ರಾಜ್ಯದ ಪ್ರಗತಿಗೆ ರಾಷ್ಟ್ರಪತಿ ಕೋವಿಂದ್‌ ಶ್ಲಾಘನೆ

ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಮಂಗಳವಾರ ಶಿವಸೇನೆ ಘೋಷಿಸಿದೆ. ಪಕ್ಷದ ಬಹುತೇಕ ಸಂಸದರು ಮುರ್ಮು ಬೆಂಬಲಿಸಲು ಆಗ್ರಹಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಈ ಕುರಿತು ಪ್ರತಿಕ್ರಯಿಸಿರುವ ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ನಾವು ಮುರ್ಮು ಬೆಂಬಲಿಸಬಾರದು. ಆದರೆ ಬುಡಕಟ್ಟು ಪಂಗಡಕ್ಕೆ ಸೇರಿದ ನಮ್ಮ ಸಂಸದರು, ಮೊದಲ ಬಾರಿಗೆ ಬುಡಕಟ್ಟು ಸಮುದಾಯಕ್ಕೆ ಗೌರವ ನೀಡಲಾಗುತ್ತಿದೆ. ಹೀಗಾಗಿ ಅವರನ್ನು ಬೆಂಬಲಿಸುವುದು ಸೂಕ್ತ ಎಂದರು. ಹೀಗಾಗಿ ಇದು ಯಾವುದೇ ಒತ್ತಡಕ್ಕೆ ಒಳಗಾಗಿ ಕೈಗೊಂಡ ನಿರ್ಧಾರವಲ್ಲ. ಈ ನಿರ್ಧಾರ, ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂದೂ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಮಾನದಲ್ಲಿ ಬೆಂಗಳೂರಿಗೆ ತಲುಪಿದ Presidential Election ಮತಪೆಟ್ಟಿಗೆ

ರಾಷ್ಟ್ರಪತಿ ಚುನಾವಣೆಯಲ್ಲಿ(presidential election 2022) ಸಲ್ಲಿಸಿದ 115 ನಾಮಪತ್ರಗಳ ಪರಿಶೀಲನೆ ಬಳಿಕ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿ ಯಶವಂತ್‌ ಸಿನ್ಹಾರ ನಾಮಪತ್ರ ಮಾತ್ರ ಕ್ರಮಬದ್ಧವಾಗಿದೆ ಎಂದು ಘೋಷಿಸಲಾಗಿದ್ದು, ಹೀಗಾಗಿ ಇವರಿಬ್ಬರು ಮಾತ್ರವೇ ಜು.18ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ, ಸಲ್ಲಿಕೆಯಾದ 94 ಜನರ 115 ನಾಮಪತ್ರಗಳನ್ನು ಪರಿಶೀಲಿಸಿದ್ದು, ಅಗತ್ಯ ಮಾನದಂಡಗಳನ್ನು ಪೂರೈಸದ 107 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.

ಮುರ್ಮು ಹಾಗೂ ಸಿನ್ಹಾ ಅವರ ತಲಾ 4 ಸೆಟ್‌ ನಾಮಪತ್ರಗಳು ಮಾತ್ರ ಎಲ್ಲ ಅಗತ್ಯ ಮಾನದಂಡಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅವುಗಳನ್ನು ಸ್ವೀಕರಿಸಲಾಗಿದೆ. ಜು.2 ರಂದು ನಾಮಪತ್ರವನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಅಂದೇ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. ಮುರ್ಮು ಹಾಗೂ ಸಿನ್ಹಾ ಹೊರತುಪಡಿಸಿ ಮುಂಬೈಯ ಸ್ಲಮ್‌ ಕಾರ್ಮಿಕ, ಲಾಲು ಪ್ರಸಾದ್‌ ಹೆಸರುಳ್ಳ ಬಿಹಾರದ ವ್ಯಕ್ತಿ, ದೆಹಲಿಯ ಪ್ರೊಫೆಸರ್‌ ಹಾಗೂ ತಮಿಳುನಾಡಿದ ಸಾಮಾಜಿಕ ಕಾರ್ಯಕರ್ತ ನಾಮಪತ್ರ ಸಲ್ಲಿಸಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಇವರ ನಾಮಪತ್ರಗಳು ತಿರಸ್ಕೃತವಾಗಿವೆ.

click me!