ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಷರೀಫ್ ಶೀಘ್ರದಲ್ಲೇ ಭೇಟಿ, ವೇದಿಕೆ ಸಿದ್ದ!

By Suvarna NewsFirst Published Jul 22, 2022, 9:25 PM IST
Highlights

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಪ್ ಭೇಟಿಗೆ ವೇದಿಕೆ ಸಿದ್ಧಗೊಂಡಿದೆ. 6 ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ಪ್ರಧಾನಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

ನವದೆಹಲಿ(ಜು.22): ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್  ಭೇಟಿಗೆ ವೇದಿಕೆ ಸಜ್ಜಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸೆಪ್ಟೆಂಬರ್ 15 ಹಾಗೂ 16 ರಂದು ಉಜ್ಬೇಕಿಸ್ತಾನದಲ್ಲಿ ಮೋದಿ ಹಾಗೂ ಷರೀಫ್ ಭೇಟಿಯಾಗುವ ಸಾಧ್ಯತೆ ಇದೆ. ಸಮರಕಂದ್‌ದಲ್ಲಿ ಸ್ಕೋ(SCO) ವಾರ್ಷಿಕ ಸಭೆ ನಡೆಯಲಿದೆ. ಈ ಸಭೆಗೆ ಈಗಾಗಲೇ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿದೆ. SCO ಕಾರ್ಯದರ್ಶಿ ಝಾಂಗ್ ಮಿಂಗ್ ಮೂರು ದಿನಗಳ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್‌ಗೆ SCO ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಿದ್ದಾರೆ. ಇಬ್ಬರು ಪ್ರಧಾನಿಗಳು ಈ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡರೆ 6 ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ಪ್ರಧಾನಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

SCO ವಾರ್ಷಿಕ ಸಭೆಯಲ್ಲಿ ಭಾರತ ಇದುವರೆಗೂ ಯಾವುದೇ ದ್ವಿಪಕ್ಷೀಯ ಮಾತುಕತೆಗೆ ಮನವಿ ಮಾಡಿಲ್ಲ. ಭಾರತದ ಮನವಿ ಮಾಡಿದರೆ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ನೀಡಲು ಉಜ್ಬೇಕಿಸ್ತಾನ ಸಿದ್ಧವಾಗಿದೆ. ಇಷ್ಟೇ ಅಲ್ಲ ಪಾಕಿಸ್ತಾನ ಕೂಡ ತಯಾರಿದೆ. ಆದರೆ ಭಾರತ ಪಾಕಿಸ್ತಾನ ಜೊತೆಗಿನ ದ್ವಿಪಕ್ಷೀಯ ಮಾತುಕತೆಗೆ ಸದ್ಯಕ್ಕೆ ತಯಾರಿಲ್ಲ. ಗಡಿ ಸಮಸ್ಯೆ, ಭಯೋತ್ಪಾದನೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪಾಕಿಸ್ತಾನ ಕಡಿವಾಣ ಹಾಕಿದರೆ ಮಾತ್ರ ಪಾಕ್ ಜೊತೆ ಮಾತುಕತೆ ಎಂದು ಈಗಾಲೇ ನರೇಂದ್ರ ಮೋದಿ ಸರ್ಕಾರ ಸ್ಪಷ್ಟವಾಗಿ ಹೇಳಿದೆ.

 

ಆರ್ಥಿಕ ದಿವಾಳಿತನ ತಪ್ಪಿಸಲು ತೆರಿಗೆ ದ್ವಿಗುಣಗೊಳಿಸಿದ ಪಾಕಿಸ್ತಾನದ ಹೊಸ ಬಜೆಟ್‌

ಉಜ್ಬೇಕಿಸ್ತಾನದಲ್ಲಿ ನಡೆಯುವ SCO ವಾರ್ಷಿಕ ಸಭೆಯಲ್ಲಿ ಭಾರತ, ರಷ್ಯಾ, ಚೀನಾ, ತಜಕಿಸ್ತಾನ, ಕ್ರೈಗಿಸ್ತಾನ, ಕಜಕಿಸ್ತಾನ ಹಾಗೂ ಪಾಕಿಸ್ತಾನ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ಮಹತ್ವದ ವಾರ್ಷಿಕ ಸಭೆಯಲ್ಲಿ ಮೋದಿ ಭಾಗವಹಿಸುವ ಸಾಧ್ಯತೆಯೂ ಇದೆ. ಇತ್ತ ವಾರ್ಷಿಕ ಸಭೆಯಲ್ಲಿ ಪಾಕಿಸ್ತಾನ ತುದಿಗಾಲಲ್ಲಿ ನಿಂತಿದೆ. 

ಪಾಕಿಸ್ತಾನದಲ್ಲಿ ಶೆಹಬಾಜ್ ಷರೀಪ್ ನೇತೃತ್ವದ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಹಲವು ದೇಶಗಳ ನೆರವು ಕೇಳಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನ ಬಿಕ್ಕಟ್ಟಿನಿಂದ ಹೊರಬರಲು ಬಳಸಿಕೊಳ್ಳುತ್ತಿದೆ. ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ನಿರ್ಣಾಯಕ ಬೆಂಬಲವನ್ನು ಪಡೆದುಕೊಳ್ಳುವ ಸಲುವಾಗಿ ಇಂಧನಕ್ಕೆ ನೀಡುತ್ತಿದ್ದ ಎಲ್ಲಾ ಸಹಾಯಧನವನ್ನು ತೆಗೆದುಹಾಕಿದೆ. ಪಾಕಿಸ್ತಾನಕ್ಕೆ ಅಗತ್ಯ ಪ್ರಮಾಣದಲ್ಲಿ ದ್ರವೀಕೃತ ನೈಸರ್ಗಿಕ ಅನಿಲದ ಪೂರೈಕೆಯಿಲ್ಲದ ಕಾರಣದಿಂದಾಗಿ ಭಾರೀ ವಿದ್ಯುತ್‌ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ಆಪರೇಟರ್‌ಗಳು ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್‌ ಬಿಕ್ಕಟ್ಟಿನ ಕಾರಣದಿಂದಾಗಿ ಜುಲೈ ತಿಂಗಳಿನಿಂದ ದೇಶದಲ್ಲಿ ಲೋಡ್‌ ಶೆಡ್ಡಿಂಗ್‌ ಪ್ರಮಾಣವನ್ನು ಹೆಚ್ಚಿಸುವುದಾಗಿ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ.

ಭಾರತವು ಪಾಕಿಸ್ತಾನವನ್ನು ಮೂರು ಹೋಳು ಮಾಡುತ್ತದೆ ಎಂದು ಎಚ್ಚರಿಸಿದ ಮಾಜಿ ಪ್ರಧಾನಿ ಇಮ್ರಾನ್ ಖಾನ್!

ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಶೆಹಬಾಜ್‌ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸ್ಥಗಿತವಾದ ದ್ವಿಪಕ್ಷೀಯ ಮಾತುಕತೆಯನ್ನು ಪುನಾರಂಭಿಸುವಲ್ಲಿ ಆಸಕ್ತಿ ತೋರಿದ್ದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಭಾರತವೂ ಭಯೋತ್ಪಾದನಾ ಮುಕ್ತ ವಲಯದ ಸ್ಥಾಪನೆಯನ್ನು ಬಯಸುತ್ತದೆ ಎಂದು ಟ್ವೀಟ್‌ ಮಾಡುವ ಮೂಲಕ ದ್ವಿಪಕ್ಷೀಯ ಮಾತುಕತೆಗೆ ಭಾರತವೂ ಸಿದ್ಧವಾಗಿದೆ ಎಂದು ಸೂಚ್ಯವಾಗಿ ತಿಳಿಸಿದ್ದರು.

click me!