ನೀರವ್ ಮೋದಿ ಮತ್ತೊಂದು ಶಾಕ್, 253 ಕೋಟಿ ಮೌಲ್ಯದ ಚರಾಸ್ತಿ ಇಡಿ ವಶಕ್ಕೆ!

By Suvarna NewsFirst Published Jul 22, 2022, 8:08 PM IST
Highlights

ಭಾರತದ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಗೆ ಇಡಿ ಮತ್ತೊಂದು ಶಾಕ್ ನೀಡಿದೆ ನೀರವ್ ಮೋದಿಯ ಆಭರಣ, ರತ್ನ, ವಜ್ರಗಳ ಸೇರಿದಂತೆ 253 ಕೋಟಿ ರೂಪಾಯಿ ಚರಾಸ್ತಿಗಳನ್ನು ಸೀಜ್ ಮಾಡಲಾದಿದೆ. ಈ ಕುರಿತ ವಿವರ ಇಲ್ಲಿವೆ.

ನವದೆಹಲಿ(ಜು.22):  ಬ್ಯಾಂಕ್ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಸಂಕಷ್ಟ ಹೆಚ್ಚಾಗಿದೆ. ನೀರವ್ ಮೋದಿ ವಿರುದ್ಧ ಪ್ರಕರಣ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಇದೀಗ 253 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿದೆ. ಬ್ಯಾಂಕ್ ಖಾತೆಯಲ್ಲಿದ್ದ ಹಣ, ವಜ್ರ ವೈಡೂರ್ಯ, ಚಿನ್ನಾಭರಣ, ರತ್ನ ಸೇರಿದಂತೆ ಚಿರಾಸ್ತಿಗಳನ್ನು ಇಡಿ ವಶಪಡಿಸಿಕೊಂಡಿದೆ. ಇದರೊಂದಿಗೆ ಇಡಿ ಅಧಿಕಾರಿಗಳು ವಶಪಡಿಸಿಕೊಂಡ ನೀರವ್ ಮೋದಿ ಒಟ್ಟು ಆಸ್ತಿಗಳ ಮೊತ್ತ 2,650 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹಾಂಕ್‌ಕಾಂಗ್‌ನಲ್ಲಿರುವ ನೀರವ್ ಮೋದಿ ವಜ್ರ ಹಾಗೂ ಚಿನ್ನಾಭರಣ ಕಂಪನಿಯಿಂದ ಈ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.  ನೀರವ್ ಮೋದಿ ಅವರ  2,396.45 ಕೋಟಿ ರೂಪಾಯಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಪೈಕಿ ಇಡಿ ಅಧಿಕಾರಿಗಳು 2018ರಲ್ಲಿ  1,389 ಕೋಟಿ ರೂಪಾಯಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ವಶಕ್ಕೆ ಪಡೆದಿತ್ತು.

ಈ ಎಲ್ಲಾ ಚರಾಸ್ತಿಗಳು ಹಾಂಕಾಂಗ್‌ನಲ್ಲಿ(Nirav Modi Properties) ಜಪ್ತಿ ಮಾಡಲಾಗಿದೆ. ಎಲ್ಲಾ ಆಭರಣಗಳು ಮತ್ತು ರತ್ನಗಳನ್ನು ಖಾಸಗಿ ಬ್ಯಾಂಕುಗಳ ಭದ್ರತೆಯಲ್ಲಿ ನೀರವ್‌ ಮೋದಿ ಗ್ರೂಪ್‌ ಆಫ್‌ ಕಂಪನೀಸ್‌ ಹೆಸರಿನಲ್ಲಿ ಇಡಲಾಗಿತ್ತು. ಇವುಗಳೆಲ್ಲವನ್ನೂ ಅಕ್ರಮ ಹಣ ವರ್ಗಾವಣೆ ನಿಯಂತ್ರಣಾ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ.(enforcement directorate) ತಿಳಿಸಿದೆ. 2 ಬಿಲಿಯನ್‌ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ(PNB Case) ಪ್ರಕರಣದ ನಂತರ ನೀರವ್‌ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದಾನೆ.

ನೀರವ್ ಗಡೀಪಾರಾದರೆ ಆತ್ಮಹತ್ಯೆ ಸಾಧ್ಯತೆ!

ಭಾರತದ ಬ್ಯಾಂಕ್‌ಗೆ ಬರೋಬ್ಬರಿ 7,000 ಕೋಟಿ ರೂಪಾಯಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿಯನ್ನು ಗಡೀಪಾರು ಮಾಡಲು ಎಲ್ಲಾ ಸಹಕಾರ ನೀಡುವುದಾಗಿ ಹಿಂದಿನ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಭರವಸೆ ನೀಡಿದ್ದರು. ಆದರೆ ಇತ್ತೀಚೆಗೆ ಬೋರಿಸ್ ಜಾನ್ಸನ್ ರಾಜಕೀಯ ಬಿಕ್ಕಟ್ಟಿನಿಂದ ರಾಜೀನಾಮೆ ನೀಡಿದ್ದಾರೆ. ಬ್ರಿಟನ್‌ನಲ್ಲಿ ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆಯಲ್ಲಿದೆ. ಹೀಗಾಗಿ ಸದ್ಯ ಗಡೀಪಾರು ವಿಚಾರ ಮಂದಗತಿಯಲ್ಲಿ ಸಾಗಿದೆ. 

ನೀರವ್ ಮೋದಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸುಭಾಷ್‌ ಶಂಕರ್‌ ಪರಬ್‌ರನ್ನು ಸುದೀರ್ಘ ರಾಜತಾಂತ್ರಿಕ ಹಾಗೂ ಕಾನೂನು ಪ್ರಕ್ರಿಯೆಯ ನಂತರ ಈಜಿಪ್‌್ಟನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಈಜಿಪ್ಟಿನ ಕೈರೋದಲ್ಲಿ ನೀರವ್‌ ತಮ್ಮನ್ನು ಅಕ್ರಮ ಬಂಧನದಲ್ಲಿಟ್ಟಿದ್ದರು ಎಂದು ಆರೋಪಿಸಿದ ಪರಬ್‌ನನ್ನು ಸ್ವತಃ ಸಿಬಿಐ ಅಧಿಕಾರಿಗಳೇ ಭಾರತಕ್ಕೆ ಕರೆ ತಂದಿದ್ದಾರೆ. ನೀರವ್‌ನ ಫೈರ್‌ಸ್ಟಾರ್‌ ಡೈಮಂಡ್‌ ಕಂಪನಿಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕರಾಗಿದ್ದ ಇವರನ್ನು ಮುಂಬೈಗೆ ಕರೆತರಲಾಯಿತು. ಸಿಬಿಐ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. 

ಇಡಿ ಖಾತೆಗೆ 17 ಕೋಟಿ ಹಾಕಿದ ನೀಮೋ ಸೋದರಿ ಪೂರ್ವಿ ಮೋದಿ!

ನೀರವ್‌ ಮೋದಿಗೆ ಅಮೆರಿಕದಲ್ಲೂ ಹಿನ್ನಡೆ 
 ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್‌ ಮೋದಿಗೆ ಅಮೆರಿಕ ಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ. ತಮ್ಮ ಮೇಲಿರುವ ವಂಚನೆ ಕೇಸು ವಜಾಗೊಳಿಸುವಂತೆ ನೀರವ್‌ ಮೋದಿ ಹಾಗೂ ಆತನ ಇಬ್ಬರು ಸಹವರ್ತಿಗಳಾದ ಮಿಹಿರ್‌ ಬನ್ಸಾಲಿ ಮತ್ತು ಅಜಯ್‌ ಗಾಂಧಿ ನ್ಯೂಯಾರ್ಕ್ ಕೋರ್ಟ್‌ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ವಜಾಗೊಳಿಸಿರುವ ಅಮೆರಿಕ ಕೋರ್ಟ್‌ ತನಿಖೆಗೆ ಮೂವರು ಸದಸ್ಯರ ಸಮಿತಿ ರಚಿಸಿದೆ. ಸದ್ಯ ಬ್ರಿಟನ್‌ ಜೈಲಿನಲ್ಲಿರುವ ನೀರವ್‌ ಮೋದಿ ಅಮೆರಿಕದಲ್ಲೂ ಸಾಲ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾನೆ. ರಿಚರ್ಡ್‌ ಲೆವಿನ್‌ ಎಂಬುವವರು ಕೋರ್ಟ್‌ ಮೊರೆಹೋಗಿದ್ದು, 15 ದಶಲಕ್ಷ ಡಾಲರ್‌ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ.
 

click me!