ಭಾರತದ ಪ್ರಗತಿಗೆ ಮೋದಿ 3ಟಿ ಸೂತ್ರ

By Kannadaprabha NewsFirst Published Aug 8, 2022, 5:40 AM IST
Highlights

ಟ್ರೇಡ್‌, ಟೂರಿಸಂ, ಟೆಕ್ನಾಲಜಿಗೆ ಒತ್ತು ನೀಡಿ: ಸಿಎಂಗಳಿಗೆ ಸಲಹೆ
 

ನವದೆಹಲಿ(ಆ.08): ದೇಶವು ಸ್ವಾವಲಂಬಿಯಾಗಲು ಹಾಗೂ ಕೃಷಿ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ಕೃಷಿ, ಪಶು ಸಂಗೋಪನೆ ಮತ್ತು ಆಹಾರ ಸಂಸ್ಕರಣೆಯನ್ನು ಆಧುನೀಕರಿಸುವ ಅವಶ್ಯಕತೆಯನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ಜೊತೆಗೆ ‘ವ್ಯಾಪಾರ, ಪ್ರವಾಸೋದ್ಯಮ ಹಾಗೂ ತಂತ್ರಜ್ಞಾನದ ಅಭಿವೃದ್ಧಿಯತ್ತ (3ಟಿ-ಟ್ರೇಡ್‌, ಟೂರಿಸಂ ಮತ್ತು ಟೆಕ್ನಾಲಜಿ) ಗಮನ ಹರಿಸಿ ಆಮದಿಗೆ ಕಡಿವಾಣ ಹಾಕಬೇಕು ಹಾಗೂ ರಫ್ತಿನ ಪ್ರಮಾಣವನ್ನು ಹೆಚ್ಚಿಸಬೇಕು’ ಎಂದು ಮೋದಿ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.

2020ರಲ್ಲಿ ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಂಡ ಬಳಿಕ ವಚ್ರ್ಯುವಲಿ ಆಗಿ ನಡೆಯುತ್ತಿದ್ದ ನೀತಿ ಆಯೋಗದ ಆಡಳಿತ ಮಂಡಳಿಯ 7ನೇ ಸಭೆಯನ್ನು ಭಾನುವಾರ ದೆಹಲಿಯಲ್ಲಿ ಆಯೋಜಿಸಲಾಗಿತ್ತು. 23 ಮುಖ್ಯಮಂತ್ರಿಗಳು, 3 ಲೆಫ್ಟಿನೆಂಟ್‌ ಗವರ್ನರ್‌ಗಳು ಮತ್ತು ಇಬ್ಬರು ಆಡಳಿತಗಾರರು, ಕೇಂದ್ರ ಸಚಿವರು ಭಾಗಿಯಾಗಿದ್ದ ಸಭೆಯ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.

ರಕ್ಷಾ ಬಂಧನ ಹಬ್ಬಕ್ಕೆ ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನಿ ಸಹೋದರಿ, ಜೊತೆಗೊಂದು ಪತ್ರ!

ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ವೋಕಲ್‌ ಫಾರ್‌ ಲೋಕಲ್‌’ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ, ಇದು ಎಲ್ಲರ ಸಾಮಾನ್ಯ ಗುರಿಯಾಗಿರಬೇಕು. ಜನರಿಗೆ ಸ್ಥಳೀಯವಾಗಿ ಉತ್ಪಾದನೆಯಾದ ವಸ್ತುಗಳನ್ನೇ ಖರೀದಿಸಲು ಪ್ರೋತ್ಸಾಹಿಸಬೇಕು ಎಂದು ಕರೆ ಕೊಟ್ಟರು.

ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ಜಾಗತಿಕ ನಾಯಕನಾಗಲು ಈ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ನೀಡುವ ಅಗತ್ಯವಿದೆ. ಬಹುವೇಗವಾಗಿ ಆಗುತ್ತಿರುವ ನಗರೀಕರಣವನ್ನು ನಾವು ತಂತ್ರಜ್ಞಾನ ಬಳಕೆಯ ಮೂಲಕ ದೌರ್ಬಲ್ಯದ ಬದಲು ನಮ್ಮ ಶಕ್ತಿಯನ್ನಾಗಿಸಬಹುದು. ಜನಸಂಪನ್ಮೂಲ ಮತ್ತು ತಂತ್ರಜ್ಞಾನದ ಮೂಲಕ ಜನಜೀವನ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜನರ ಜೀವನ ಮಟ್ಟಸುಧಾರಿಸಲು ಮುಂದಾಗಬಹುದು ಎಂದು ಸಲಹೆ ನೀಡಿದರು.

ರಾಜ್ಯಗಳಿಗೆ ಶ್ಲಾಘನೆ:

ಈ ವೇಳೆ ಪ್ರಧಾನಿ ಎಲ್ಲ ರಾಜ್ಯಗಳು ಒಟ್ಟಾಗಿ ಕೋವಿಡ್‌ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ್ದಕ್ಕಾಗಿ ಮೋದಿ ರಾಜ್ಯಗಳನ್ನು ಶ್ಲಾಘಿಸಿದರು. ‘ಪ್ರತಿಯೊಂದು ರಾಜ್ಯವೂ ಕೋವಿಡ್‌ ವಿರುದ್ಧದ ಭಾರತದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿ, ತನ್ನದೇ ಆದ ಕೊಡುಗೆ ನೀಡಿದೆ. ಈ ಮೂಲಕ ಭಾರತವು ಅಭಿವೃದ್ಧಿ ಹೊಂದಿದ ದೇಶಗಳಿಗೂ ಮಾದರಿಯಾಗಿದ್ದು, ಅವು ದೇಶವನ್ನು ಜಾಗತಿಕ ನಾಯಕನಾಗಿ ನೋಡುವಂತೆ ಮಾಡಿತು’ ಎಂದಿದ್ದಾರೆ.

ಸಿಎಸ್‌ಗಳ ಸಭೆ:

ಸ್ವಾತಂತ್ರ್ಯ ಸಿಕ್ಕ 75ನೇ ವರ್ಷದಲ್ಲಿ ಮೊದಲ ಭಾರಿ ದೇಶದ ಎಲ್ಲ ಮುಖ್ಯ ಕಾರ್ಯದರ್ಶಿಗಳು ಒಂದೇ ಸ್ಥಳದಲ್ಲಿ ಸೇರಿ ಮಹತ್ವದ ರಾಷ್ಟ್ರೀಯ ವಿಚಾರಗಳ ಮೇಲೆ 3 ದಿನಗಳ ಕಾಲ ಚರ್ಚೆ ನಡೆಸಿದ್ದಾರೆ. ಇದು ಮಹತ್ವದ ಬೆಳವಣಿಗೆ. ಇನ್ನು ಜಿಎಸ್‌ಟಿ ಸಂಗ್ರಹವನ್ನು ಹೆಚ್ಚಿಸಲು ರಾಜ್ಯಗಳು ಸಾಮೂಹಿಕ ಪ್ರಯತ್ನಗಳನ್ನು ಮಾಡಬೇಕು. ದೇಶವನ್ನು 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನಾಗಿ ಮಾಡುವ ಗುರಿಸಾಧನೆಗೆ ಇದು ಮಹತ್ವವಾದದ್ದು’ ಎಂದು ಹೇಳಿದರು.

ಸಭೆಯ ಮಹತ್ವ:

‘ನೀತಿ ಆಯೋಗವು ಎಲ್ಲ ರಾಜ್ಯಗಳ ಅಗತ್ಯಗಳು, ಸವಾಲುಗಳು, ಉತ್ತಮ ಅಭ್ಯಾಸಗಳು ಹಾಗೂ ಮುಂದಿನ ಗುರಿಯ ಬಗ್ಗೆ ಅಧ್ಯಯನ ನಡೆಸುತ್ತದೆ. ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಮುಂದಿನ 25 ವರ್ಷಗಳಿಗಾಗಿ ರಾಷ್ಟ್ರದ ಆದ್ಯತೆಯನ್ನು ವ್ಯಾಖ್ಯಾನಿಸುತ್ತವೆ. ಇಂದು ನಾವು ಬಿತ್ತಿದ ಬೀಜಗಳು ಫಲವು 2047ರಲ್ಲಿ ಲಭ್ಯವಾಗುತ್ತದೆ’ ಎಂದರು.

ಪೂಜಾ ಗೆಹ್ಲೋಟ್‌ ಸಂತೈಸಿದ ಪ್ರಧಾನಿ: ಸಾಮಾಜಿಕ ಜಾಲತಾಣದಲ್ಲಿ ‘ನಮೋ’ಗೆ ಪ್ರಶಂಸೆಯ ಸುರಿಮಳೆ

2023ರಲ್ಲಿ ಜಿ20 ರಾಷ್ಟ್ರಗಳ ಸಭೆಯನ್ನು ಭಾರತದ ಅಧ್ಯಕ್ಷತೆಯನ್ನು ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ಮೋದಿ, ‘ಜಿ20 ಸುತ್ತ ಸಾಮೂಹಿಕ ಚಳುವಳಿಯನ್ನು ಅಭಿವೃದ್ಧಿಪಡಿಸಬೇಕು. ಇದು ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಉಪಕ್ರಮದ ಗರಿಷ್ಠ ಸಂಭವನೀಯ ಪ್ರಯೋಜನವನ್ನು ಪಡೆಯಲು ರಾಜ್ಯಗಳಲ್ಲಿ ಜಿ20 ಗಾಗಿ ಮೀಸಲಾದ ತಂಡ ರಚಿಸಬೇಕು’ ಎಂದರು.

ಮೋದಿ ಕಿವಿಮಾತು

- ‘ವೋಕಲ್‌ ಫಾರ್‌ ಲೋಕಲ್‌’ ಯಾವುದೇ ರಾಜಕೀಯ ಪಕ್ಷದ ಅಭಿಯಾನವಲ್ಲ
- ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ ಅಭಿವೃದ್ಧಿ ಮೂಲಕ ರಫ್ತು ಹೆಚ್ಚಿಸಿ
- ಈ ಮೂಲಕ ಆಮದಿಗೆ ಕಡಿವಾಣ ಹಾಕಲು ಸಹಕರಿಸಿ, ಸ್ವಾವಲಂಬನೆಗೆ ನೆರವಾಗಿ
- ಕೃಷಿ, ಪಶುಸಂಗೋಪನೆ, ಆಹಾರ ಸಂಸ್ಕರಣೆ ಸ್ವಾವಲಂಬನೆಗೆ ಆಧುನಿಕತೆ ಅಗತ್ಯ
- ಕೋವಿಡ್‌ ನಿರ್ವಹಣೆಯಲ್ಲಿ ಎಲ್ಲಾ ರಾಜ್ಯಗಳು ವಹಿಸಿದ ಪಾತ್ರ ಶ್ಲಾಘನೀಯ
 

click me!