
ದೌಸಾ: ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್ ವೇ ಎಂಬ ಖ್ಯಾತಿ ಪಡೆಯಲಿರುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿಯ ಒಂದು ಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದರು. ದೆಹಲಿ-ದೌಸಾ-ಲಾಲ್ಸೋಟ್ ನಡುವಿನ 246 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್ ಹೆದ್ದಾರಿ ಇದಾಗಿದೆ. ದಿಲ್ಲಿ-ಜೈಪುರ ನಡುವಿನ ಪ್ರಯಾಣ ಅವಧಿಯನ್ನು 5 ಗಂಟೆಯಿಂದ 3.5 ಗಂಟೆಗೆ ಇಳಿಸಲಿದೆ. ರಾಜಸ್ಥಾನದ ದೌಸಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಈ ರಸ್ತೆಯನ್ನು ಉದ್ಘಾಟಿಸುವುದರ ಜೊತೆಗೆ 18,000 ಕೋಟಿ ರು. ವೆಚ್ಚದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿಯ ಇನ್ನೊಂದು ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
‘12,150 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ದೆಹಲಿ-ದೌಸಾ-ಲಾಲ್ಸೋಟ್ ಎಕ್ಸ್‌ಪ್ರೆಸ್ (Delhi-Dausa-Lalsot Expressway) ಹೆದ್ದಾರಿಯು ದೆಹಲಿ ಮತ್ತು ಜೈಪುರದ ನಡುವಿನ ಪ್ರಯಾಣ ಅವಧಿಯನ್ನು ಅರ್ಧಕ್ಕರ್ಧ ಕಡಿತಗೊಳಿಸಲಿದೆ. ಜೈಪುರದಿಂದ (Jaipur) ದೆಹಲಿಗೆ (Delhi)ಕೆಲಸಕ್ಕೆ ಹೋಗುವವರು ಇನ್ನು ಮುಂದೆ ಮನೆಯಿಂದಲೇ ಓಡಾಡಬಹುದು ಎಂದು ಮೋದಿ ಹೇಳಿದರು. ಅಲ್ಲದೆ, ತಮ್ಮ ಸರ್ಕಾರ ಮೂಲಸೌಕರ್ಯಕ್ಕೆ ಒತ್ತು ನೀಡುತ್ತಿದೆ ಎಂದು ಹೇಳಿಕೊಂಡರು.
1386 ಕಿ.ಮೀ ದೂರದ ದೇಶದ ಅತೀ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ನೋಟ!
ಈ ಹೆದ್ದಾರಿಯ ಭಾಗವು ಸರಿಸ್ಕಾ, ಕೇವಲಾದೇವ್ (Kewaladev), ರಣಥಂಬೋರ್ ರಾಷ್ಟ್ರೀಯ ಉದ್ಯಾನ (Ranthambore National Park) ಹಾಗೂ ಜೈಪುರ ಮತ್ತು ಅಜ್ಮೇರ್‌ನಂತಹ ನಗರಗಳಿಗೆ ಉತ್ತಮ ಸಂಪರ್ಕ ಕಲ್ಪಿಸಲಿದ್ದು, ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಆನ್‌ಲೈನ್ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಉದ್ದೇಶಿತ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿಯು (Delhi-Mumbai Expressway) ದೆಹಲಿ (Delhi), ಹರ್ಯಾಣ(Haryana), ರಾಜಸ್ಥಾನ (Rajasthan), ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಹಾದುಹೋಗಲಿದೆ. ಇದು ದೆಹಲಿ-ಮುಂಬೈ ನಡುವಿನ ರಸ್ತೆ ಪ್ರಯಾಣದ ಅವಧಿಯನ್ನು ಈಗಿನ 24 ಗಂಟೆಯಿಂದ 12 ಗಂಟೆಗೆ ಇಳಿಸಲಿದೆ ಎಂದು ಹೇಳಲಾಗಿದೆ.
ಸರ್ಕಾರ ಹೆದ್ದಾರಿ, ಬಂದರು, ರೈಲ್ವೆ, ಆಪ್ಟಿಕಲ್ ಫೈಬರ್‌ನಲ್ಲಿ ಹೂಡಿಕೆ ಮಾಡಿದರೆ ಅದರಿಂದ ವ್ಯಾಪಾರಿಗಳಿಗೆ, ಸಣ್ಣ ಉದ್ದಿಮೆದಾರರಿಗೆ ಅನುಕೂಲವಾಗುತ್ತದೆ. ಮೂಲಸೌಕರ್ಯ ವ್ಯವಸ್ಥೆಗೆ ತೊಡಗಿಸುವ ಬಂಡವಾಳದಿಂದ ಇನ್ನಷ್ಟು ಬಂಡವಾಳ ಹರಿದು ಬರುತ್ತದೆ ಎಂದು ಪ್ರಧಾನಿ (Prime Minister Narendra Modi) ಕಾರ್ಯಕ್ರಮದಲ್ಲಿ ಹೇಳಿದರು.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಅದ್ಭುತ ಫೋಟೋ ಇಲ್ಲಿದೆ ನೋಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ