ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ, ಆಪ್ತೆ ಅರ್ಪಿತಾಗೆ 14 ದಿನ ನ್ಯಾಯಾಂಗ ಬಂಧನ

By BK AshwinFirst Published Aug 5, 2022, 6:47 PM IST
Highlights

ಶಾಲಾ ಶಿಕ್ಷಕರ ನೇಮಕಾತಿ ಹಗರಣ ಆರೋಪ ಸಂಬಂಧ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಆರೋಪಿಯಾಗಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತಾ ಮುಖರ್ಜಿಗೆ ಈಗ 14 ದಿನ ನ್ಯಾಯಾಂಗ ಬಂಧನ ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೆ, ಆಗಸ್ಟ್ 18 ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಬಂಗಾಳದ ಮಾಜಿ ಶಿಕ್ಷಣ ಸಚಿವ ಹಾಗೂ ಅರ್ಪಿತಾ ಮುಖರ್ಜಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಜಾರಿ ನಿರ್ದೇಶನಾಲಯ (Enforcement Directorate) ಮನವಿ ಮಾಡಿಕೊಂಡಿತ್ತು. 
 
ಈ ಪ್ರಕರಣದಲ್ಲಿ ಕೆಲ ಹೊಸ ಬೆಳವಣಿಗೆಗಳು ಬೆಳಕಿಗೆ ಬಂದ ಹಿನ್ನೆಲೆ ಈ ಕುರಿತು ಅವರನ್ನು ವಿಚಾರಣೆ ನಡೆಸಬೇಕೆಂದು ಕೇಂದ್ರ ತನಿಖಾ ಸಂಸ್ಥೆಯ ವಕೀಲರು ಕೋರ್ಟ್‌ನಲ್ಲಿ ಹೇಳಿದ್ದರು. ಅಲ್ಲದೆ, ಪಾರ್ಥ ಚಟರ್ಜಿಅವರು "ಈ ಹಗರಣದ ಅತ್ಯಂತ ಶಕ್ತಿಶಾಲಿ ವ್ಯಕ್ತಿ" ಎಂದು ಹೇಳಿದ್ದರು. ಮತ್ತೊಂದೆಡೆ, ಮಾಜಿ ಸಚಿವರ ಪರ ವಕೀಲರು ಜಾಮೀನಿಗಾಗಿ ಮನವಿ ಸಲ್ಲಿಸಿದ್ದರು. ಎರಡೂ ಕಡೆಯ ವಾದ ವಿವಾದ ಆಲಿಸಿದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿಶೇಷ ಕೋರ್ಟ್‌ ಜಡ್ಜ್‌ ಜಿಬೋನ್‌ ಕುಮಾರ್‌ ಸಾಧು ತೀರ್ಪನ್ನು ಕೆಲ ಕಾಲ ಕಾಯ್ದಿರಿಸಿದ್ದರು. 

ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿಗೆ ಚಪ್ಪಲಿ ತೂರಿದ ಮಹಿಳೆ..!

ನಂತರ, ಮಾಜಿ ಸಚಿವ ಹಾಗೂ ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಅರ್ಪಿತಾ ಅವರನ್ನು ಆಲಿಪೋರ್‌ ಮಹಿಳಾ ಕರೆಕ್ಷನಲ್‌ ಹೋಂನಲ್ಲಿ ಇರಿಸಲಾಗುತ್ತದೆ ಹಾಗೂ ಪಾರ್ಥ ಚಟರ್ಜಿಯನ್ನು ಪ್ರೆಸಿಡೆನ್ಸಿ ಜೈಲಿನಲ್ಲಿ ಇಡಲಾಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ಜಾರಿ ನಿರ್ದೇಶನಾಲಯ ಮತ್ತೆ ಇಬ್ಬರೂ ಆರೋಪಿಗಳನ್ನು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಅಕ್ರಮ ನೇಮಕಾತಿಗಳಲ್ಲಿ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪ ಸಂಬಂಧ ಈ ಇಬ್ಬರೂ ಜುಲೈ 23 ರಿಂದಲೂ ಇಡಿ ವಶದಲ್ಲಿದ್ದರು. 

ಇಡಿ ಕಸ್ಟಡಿ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ

ಪಾರ್ಥ ಚಟರ್ಜಿ ಈಗ ಸಾಮಾನ್ಯ ವ್ಯಕ್ತಿ..! 
ಈ ಮಧ್ಯೆ, ಕೋರ್ಟ್‌ ವಿಚಾರಣೆ ವೇಳೆ  ಪಾರ್ಥ ಚಟರ್ಜಿಯವರ ಜಾಮೀನಿಗೆ ಮನವಿ ಮಾಡಿದ ಅವರ ಪರ ವಕೀಲ, ನಮ್ಮ ಕಕ್ಷಿದಾರ ಈಗ ಸಾಮಾನ್ಯ ವ್ಯಕ್ತಿಯಾಗಿದ್ದು, ತನಿಖೆಯಿಂದ ಓಡಿ ಹೋಗುವುದಿಲ್ಲ ಎಂದು ಕೇಳಿಕೊಂಡಿದ್ದರು. ಅವರು ಈಗ ಪ್ರಭಾವಿ ವ್ಯಕ್ತಿಯಾಗಿ ಉಳಿದಿಲ್ಲ ಹಾಗೂ ತಮ್ಮ ಶಾಸಕ ಹುದ್ದೆಯನ್ನು ಸಹ ತೊರೆಯಲು ಅವರು ಸಿದ್ಧರಿದ್ದಾರೆ ಎಂದೂ ಪಾರ್ಥ ಚಟರ್ಜಿ ಪರ ವಕೀಲರು ಹೇಳಿದ್ದಾರೆ. ಈಗಾಗಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪಾರ್ಥ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಲಾಗಿತ್ತು, ನಂತರ ತೃಣಮೂಲ ಕಾಂಗ್ರೆಸ್‌, ಪಕ್ಷದಲ್ಲಿ ಅವರು ಹೊಂದಿದ್ದ ಎಲ್ಲ ಹುದ್ದೆಗಳಿಂದಲೂ ಕಿತ್ತು ಹಾಕಿದೆ. 

15 ದಿನಗಳ ಕಾಲ ಅವರು ತಮ್ಮ ಕಸ್ಟಡಿಯಲ್ಲಿದ್ದರೂ, ಈ ಪೈಕಿ ಅವರು ಆಸ್ಪತ್ರೆಯಲ್ಲಿದ್ದ ಕಾರಣ ಎರಡು ದಿನ ತನಿಖೆ ನಡೆಸಲಾಗಲಿಲ್ಲ. ಹಾಗೂ, 49.8 ಕೋಟಿ ರೂ. ನಗದು, ಹೆಚ್ಚು ಮೌಲ್ಯದ ಆಭರಣಗಳು, ಚಿನ್ನದ ಗಟ್ಟಿ, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಇಡಿ ಹೇಳಿಕೊಂಡಿತ್ತು. ಈ ಮಧ್ಯೆ, ತನ್ನ ಜೀವ ಆಪತ್ತಿನಲ್ಲಿದೆ, ಈ ಹಿನ್ನೆಲೆ ತನಗೆ ನೀಡುವ ಎಲ್ಲ ಆಹಾರವನ್ನು ಪರೀಕ್ಷೆ ಮಾಡಿದ ನಂತರವೇ ಕೊಡಬೇಕು ಎಂದು ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ತಮ್ಮ ವಕೀಲರ ಮೂಲಕ ಕೋರ್ಟ್‌ನಲ್ಲಿ ಕೇಳಿಕೊಂಡಿದ್ದರು. 

click me!