
ನವದೆಹಲಿ (ಡಿಸೆಂಬರ್ 16, 2023): ಬಿಗಿಭದ್ರತೆಯನ್ನು ಭೇದಿಸಿ ಸಂಸತ್ತಿನೊಳಗೆ ಬಣ್ಣಮಿಶ್ರಿತ ಹೊಗೆಯನ್ನು ಪಸರಿಸುವ ಮೂಲಕ ಆತಂಕ ಮೂಡಿಸಿದ್ದ ಆರೋಪಿಗಳು ಈ ದಾಳಿಗಾಗಿ ಸರ್ವಸಿದ್ಧತೆಯೊಂದಿಗೆ ಬಂದಿದ್ದರು. ಸಂಸತ್ ಭವನದಲ್ಲಿ ಸಂದರ್ಶಕರ ತಪಾಸಣೆ ಕಟ್ಟುನಿಟ್ಟಾಗಿರುವ ಹಿನ್ನೆಲೆಯಲ್ಲಿ ಬಣ್ಣ ಉಗುಳುವ ಡಬ್ಬಿ(ಕ್ಯಾನಿಸ್ಟರ್)ಗಳನ್ನು ಬಚ್ಚಿಡಲು ತಮ್ಮ ಶೂನಲ್ಲಿ ಕುಳಿಗಳನ್ನು ಮಾಡಿದ್ದರು. ಆ ಕುಳಿಯೊಳಗೆ ಕ್ಯಾನಿಸ್ಟರ್ ಇಟ್ಟು, ಅದರ ಮೇಲೆ ದಪ್ಪದಾದ ರಬ್ಬರ್ ಪದರವನ್ನು ಅಂಟಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳು ಬಳಸಿರುವ ಕ್ಯಾನಿಸ್ಟರ್‌ಗಳು ಚೀನಾ ನಿರ್ಮಿತ. ಅವನ್ನು ಕನ್ನಡಕ ಹಾಗೂ ಕೈಗವಸು ಧರಿಸಿಯೇ ಬಳಸಬೇಕು. ಒಳಾಂಗಣ ಅಥವಾ ಮುಚ್ಚಿದ ಸ್ಥಳಗಳಲ್ಲಿ ಬಳಸುವಂತಿಲ್ಲ ಎಂಬ ಸಂದೇಶ ಕ್ಯಾನಿಸ್ಟರ್ ಮೇಲಿತ್ತು ಎಂದು ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್‌ನಲ್ಲಿ ಮಾಹಿತಿ ಇದೆ.
ಇದನ್ನು ಓದಿ: ‘ಹೊಗೆಬಾಂಬ್’ ಹಿಂದೆ ಬೇರೆ ಮಾಸ್ಟರ್‌ಮೈಂಡ್? ಸಂಸತ್ ದಾಳಿಗೆ ಪ್ಲ್ಯಾನ್ ಬಿ ಸಹ ಯೋಜಿಸಿದ್ದ ದಾಳಿಕೋರರು!
ಲೋಕಸಭೆಯ ಒಳಗೆ ಕ್ಯಾನಿಸ್ಟರ್‌ಗಳನ್ನು ತೆರೆಯುವ ಸಲುವಾಗಿ ಆರೋಪಿಗಳಾದ ಸಾಗರ್ ಶರ್ಮಾ ಹಾಗೂ ಮನೋರಂಜನ್ ತಮ್ಮ ಶೂಗಳಲ್ಲಿ ವಿಶೇಷ ವಿನ್ಯಾಸ ಮಾಡಿದ್ದರು. ಸಾಗರ್ ಶರ್ಮಾ ತನ್ನ ಎಡಗಾಲಿನ ಎಲ್‌ಸಿಆರ್ ಕಂಪನಿ ನಿರ್ಮಿತ ಬೂದುಬಣ್ಣದ ಸ್ಪೋಟ್ಸ್ ಶೂನಲ್ಲಿ ಕುಳಿಯನ್ನು ನಿರ್ಮಿಸಿದ್ದ. ಹೆಚ್ಚುವರಿ ರಬ್ಬರ್ ಬಳಸಿ ಅದರ ದಪ್ಪವನ್ನು ಹೆಚ್ಚು ಮಾಡಿದ್ದ. ಮನೋರಂಜನ್‌ನ ಎಡಗಾಲಿನ ಶೂನಲ್ಲೂ ಇದೇ ರೀತಿ ಕುಳಿ ಇತ್ತು ಎಂಬ ಮಾಹಿತಿ ಪೊಲೀಸ್ ಸಿಬ್ಬಂದಿಯೊಬ್ಬರ ಮಾಹಿತಿ ಆಧರಿಸಿ ದಾಖಲಿಸಲಾಗಿರುವ ಎಫ್‌ಐಆರ್‌ನಲ್ಲಿದೆ. ಈ ಕುಳಿಯ ಒಳಗೆ ಆರೋಪಿಗಳು ಲೋಕಸಭೆಯೊಳಗೆ ಬಣ್ಣ ಉಗುಳುವ ಕ್ಯಾನಿಸ್ಟರ್ ತಂದಿದ್ದರು.
ಈ ನಡುವೆ ಕ್ಯಾನಿಸ್ಟರ್ ಖರೀದಿಸಿದ್ದು ಮಹಾರಾಷ್ಟ್ರದ ಲಾತೂರ್‌ನ ಆರೋಪಿ ಅಮೋಲ್ ಶಿಂಧೆ. ಆತ 1200 ರೂ. ಕೊಟ್ಟು ಮುಂಬೈನಿಂದ 4 ಕ್ಯಾನಿಸ್ಟರ್ ತಂದಿದ್ದ ಎಂದು ಗೊತ್ತಾಗಿದೆ.
ಇದನ್ನು ಓದಿ: ಸಂಸತ್ತಲ್ಲಿ ಈವರೆಗೆ 40 ಬಾರಿ ಭದ್ರತಾ ಲೋಪ: ರಾಜಕೀಯ ಬೇಡ; ಅಮಿತ್ ಶಾ ಮೊದಲ ಪ್ರತಿಕ್ರಿಯೆ
ಕರಪತ್ರ ಪತ್ತೆ:
ಮನೋರಂಜನ್ ಹಾಗೂ ಸಾಗರ್ ಬಳಿ ಕರಪತ್ರಗಳು ಸಿಕ್ಕಿವೆ. ಅದರಲ್ಲಿ ತ್ರಿವರ್ಣವನ್ನು ಹಿನ್ನೆಲೆಯಾಗಿಸಿಕೊಂಡು ಮುಷ್ಟಿಯ ಚಿತ್ರವಿದೆ. ಅದರಲ್ಲಿ ಮಣಿಪುರ ಹಿಂಸಾಚಾರ ವಿರುದ್ಧದ ಘೋಷಣೆ ಇದೆ. ಆರೋಪಿಗಳ ಶೂ ಹಾಗೂ ಆಧಾರ್ ಕಾರ್ಡ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಎಫ್‌ಐಆರ್ ಹೇಳುತ್ತದೆ.
ಉಳಿದಂತೆ ಸಂಸತ್ತಿನ ಹೊರಭಾಗದಲ್ಲಿ ಕ್ಯಾನಿಸ್ಟರ್ ಸಿಡಿಸಿದ ಅಮೋಲ್ ಹಾಗೂ ನೀಲಂ ಬಳಿ 4 ಬಳಸಿದ ಹಾಗೂ 1 ತುಂಬಿದ ಬಣ್ಣದ ಹೊಗೆ ಉಗುಳುವ ಕ್ಯಾನಿಸ್ಟರ್ ಪತ್ತೆಯಾಗಿದೆ.
ಸಂಸತ್ ಸ್ಮೋಕ್ ಬಾಂಬ್ ದಾಳಿ ಮಾಸ್ಟರ್ ಮೈಂಡ್ ಲಲಿತ್ ಝಾ ಅರೆಸ್ಟ್
ದಾಳಿ ಆರೋಪಿ ಲಲಿತ್, ಟಿಎಂಸಿ ಮಧ್ಯೆ ನಂಟು: ಬಿಜೆಪಿ ಆರೋಪ
ಸಂಸತ್ತಿನಲ್ಲಿ ನಡೆದ ಸ್ಮೋಕ್ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾಗಿರುವ ಪಶ್ಚಿಮ ಬಂಗಾಳದ ಕೋಲ್ಕತಾ ನಿವಾಸಿ ಲಲಿತ್ ಮೋಹನ್ ಝಾ, ಟಿಎಂಸಿ ಶಾಸಕ ತಪಸ್ ರಾಯ್ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೋಗಳನ್ನು ಬಿಜೆಪಿ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಇದು ಉಭಯ ಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಫೋಟೋಗಳನ್ನು ಟ್ವೀಟ್ ಮಾಡಿರುವ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, ‘ಝಾ ಮತ್ತು ತಪಸ್ ಬಹಳ ಸಮಯದಿಂದಲೂ ಸಂಪರ್ಕದಲ್ಲಿದ್ದು, ದಾಳಿಗೆ ಇವರ ಸಹಕಾರ ಇದೆ ಎಂಬುದಕ್ಕೆ ತನಿಖೆ ನಡೆಸಲು ಸಾಕ್ಷಿ ಸಾಕಲ್ಲವೇ’ ಎಂದು ಕಿಡಿಕಾರಿದ್ದಾರೆ.
ಸಂಸತ್ ದಾಳಿಕೋರರ ಗುರಿ ಪ್ರಧಾನಿ ಮೋದಿ! ದಾಳಿಗೆ ಅಸಲಿ ಕಾರಣ ಇದೇನಾ?
ಇದಕ್ಕೆ ಪ್ರತ್ಯುತ್ತರ ನೀಡಿರುವ ಶಾಸಕ ರಾಯ್ ‘ಫೋಟೋ ಮೂಲಕ ನೀವು ಏನು ಸಾಬೀತುಪಡಿಸಬಹುದು? ನನಗೆ ದುಷ್ಕರ್ಮಿ ಯಾರೆಂದು ತಿಳಿದಿಲ್ಲ. ಅವನ ಹೆಸರಾಗಲೀ ಮುಖವಾಗಲೀ ಪರಿಚಯವಿಲ್ಲ. ಬಿಜೆಪಿ ಸಂಸದ ಹಾಗೂ ರಾಜ್ಯಾಧ್ಯಕ್ಷರು ಪ್ರಬುದ್ಧರಾಗಿರಬೇಕು. ಇದು ಬಾಲಿಶ ವರ್ತನೆಯಾಗಿದೆ’ ಎಂದಿದ್ದಾರೆ.
2020 ರ ಸರಸ್ವತಿ ಪೂಜೆಯಲ್ಲಿ ಶಾಸಕ ತಪಸ್‌ರೊಂದಿಗೆ ತೆಗೆಸಿಕೊಂಡಿದ್ದ ಫೋಟೋವನ್ನು ಝಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ. ಇವು ಈಗ ವೈರಲ್ ಆಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ