‘ಹೊಗೆಬಾಂಬ್’ ಹಿಂದೆ ಬೇರೆ ಮಾಸ್ಟರ್‌ಮೈಂಡ್‌? ಸಂಸತ್‌ ದಾಳಿಗೆ ಪ್ಲ್ಯಾನ್‌ ಬಿ ಸಹ ಯೋಜಿಸಿದ್ದ ದಾಳಿಕೋರರು!

By Kannadaprabha NewsFirst Published Dec 16, 2023, 10:19 AM IST
Highlights

ಒಂದು ವೇಳೆ ಕಾರಣಾಂತರಗಳಿಂದ ನೀಲಮ್‌ ಮತ್ತು ಅಮೋಲ್‌ ಸಂಸತ್ತನ್ನು ಪ್ರವೇಶಿಸಲು ಸಾಧ್ಯವಾಗದಿದ್ದರೆ ಇನ್ನಿಬ್ಬರು ಆರೋಪಿಗಳಾದ ಮಹೇಶ್‌ ಮತ್ತು ಕೈಲಾಶ್‌ ಬೇರೊಂದು ದಿಕ್ಕಿನಿಂದ ಸಂಸತ್ತಿನ ಆವರಣ ತಲುಪಿ ಹೊಗೆ ಬಾಂಬ್‌ ಸಿಡಿಸಬೇಕೆಂದು ‘ಪ್ಲ್ಯಾನ್‌ ಬಿ’ ಪ್ರಕಾರ ಯೋಜಿಸಲಾಗಿತ್ತು.

ನವದೆಹಲಿ (ಡಿಸೆಂಬರ್ 16, 2023): ಸಂಸತ್ತಿನೊಳಗೆ ‘ಹೊಗೆಬಾಂಬ್‌’ ಸಿಡಿಸಿ ಭಾರಿ ಭದ್ರತಾ ಲೋಪಕ್ಕೆ ಕಾರಣರಾದ ಐವರು ಆರೋಪಿಗಳ ಹಿಂದೆ ‘ಮಾಸ್ಟರ್‌ಮೈಂಡ್‌’ ಇರುವ ಸಾಧ್ಯತೆ ಇದ್ದು, ಈ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಗುರುವಾರ ಬಂಧನಕ್ಕೆ ಒಳಗಾದ ಲಲಿತ್‌ ಝಾನನ್ನೇ ಈವರೆಗೂ ಪ್ರಮುಖ ಆರೋಪಿ ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ಮತ್ತಷ್ಟು ಆಳಕ್ಕೆ ಇಳಿದಂತೆಲ್ಲಾ ಆತ ಪ್ರಮುಖ ರೂವಾರಿಯಾಗಿರುವ ಸಾಧ್ಯತೆ ಕ್ಷೀಣವಾಗುತ್ತಿರುವ ಸ್ಪಷ್ಟ ಸುಳಿವು ಪೊಲೀಸರಿಗೆ ದೊರಕುತ್ತಿದೆ.

ಇದಕ್ಕೆ ಕೆಲವೊಂದು ಕಾರಣಗಳನ್ನೂ ತನಿಖಾಧಿಕಾರಿಗಳು ನೀಡುತ್ತಿದ್ದಾರೆ. ಈ ಘಟನೆ ನಡೆದಿರುವುದು 2001ರ ಸಂಸತ್‌ ಭವನದ ಮೇಲಿನ ಉಗ್ರರ ದಾಳಿ ಪ್ರಕರಣದ ವರ್ಷಾಚರಣೆ ದಿನದಂದೇ. ಬಂಧಿತ ಎಲ್ಲ ಆರೋಪಿಗಳಿಗೂ ತಾವು ಈ ರೀತಿಯ ಕೃತ್ಯವನ್ನು ನಡೆಸಿದರೆ ಅದರಿಂದ ಆಗುವ ಪರಿಣಾಮ ಏನು ಎಂಬುದರ ಸ್ಪಷ್ಟ ಅರಿವು ಇದ್ದೇ ಇದೆ. ಬಂಧಿತ ಆರೋಪಿಗಳ ಸಿದ್ಧಾಂತ ಅವರನ್ನು ಇಂತಹ ದೊಡ್ಡ ಕೃತ್ಯಕ್ಕೆ ಕೈಹಾಕುವುದಕ್ಕೆ ಪ್ರೇರೇಪಿಸಿರುವ ಸಾಧ್ಯತೆ ಕಂಡುಬರುತ್ತಿಲ್ಲ. ಹೀಗಾಗಿ ಇಂತಹ ದೊಡ್ಡ ಕೆಲಸಕ್ಕೆ ಕೈಹಾಕುವಂತೆ ಯಾರೋ ಅವರ ತಲೆಕೆಡಿಸಿದ್ದಾರೆ. ಹಾಗೆ ಮಾಡಿದವರು ಇನ್ನೂ ಪರದೆ ಮೇಲೆ ಬಂದಿಲ್ಲ. ಲಲಿತ್‌ ಝಾನೇ ಮಾಸ್ಟರ್‌ಮೈಂಡ್‌ ಎನ್ನಲಾಗುತ್ತಿತ್ತಾದರೂ, ಆತನ ಹಿಂದೆ ಬೇರೊಬ್ಬರು ಇರುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

Latest Videos

ಇದನ್ನು ಓದಿ: ಸಂಸತ್ತಲ್ಲಿ ಈವರೆಗೆ 40 ಬಾರಿ ಭದ್ರತಾ ಲೋಪ: ರಾಜಕೀಯ ಬೇಡ; ಅಮಿತ್‌ ಶಾ ಮೊದಲ ಪ್ರತಿಕ್ರಿಯೆ

ಭಗತ್‌ ಸಿಂಗ್‌ ಮಾದರಿ ದಾಳಿ:
ಬ್ರಿಟಿಷರ ಆಳ್ವಿಕೆ ದೇಶದಲ್ಲಿ ಇದ್ದಾಗ ಭಗತ್‌ ಸಿಂಗ್‌ ಕೇಂದ್ರೀಯ ಅಸೆಂಬ್ಲಿಯೊಳಗೆ ಬಾಂಬ್‌ಗಳ ದಾಳಿ ನಡೆಸಿದ್ದ. ಅದೇ ಮಾದರಿಯಲ್ಲಿ ನಾವು ದಾಳಿ ನಡೆಸಲು ಬಯಸಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರಿಂದ ಸಂದರ್ಶಕರ ಪಾಸ್‌ ಪಡೆದಿದ್ದ ಮನೋರಂಜನ್‌ ಹಾಗೂ ಸಾಗರ್ ಶರ್ಮಾ ಎಂಬ ಇಬ್ಬರು ಬುಧವಾರ ಲೋಕಸಭೆಯೊಳಗೆ ಹೊಗೆ ಕ್ಯಾನ್‌ ಸಿಡಿಸಿ, ಹಳದಿ ಹೊಗೆ ತುಂಬುವಂತೆ ಮಾಡಿದ್ದರು. ಅವರನ್ನು ಸಂಸದರು ಹಿಡಿದು ಚಚ್ಚಿ, ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು. ಸಂಸತ್ತಿನ ಹೊರಗೆ ಅಮೋಲ್‌ ಹಾಗೂ ನೀಲಂ ದೇವಿ ಎಂಬಿಬ್ಬರು ಹೊಗೆ ಬರುವ ಕ್ಯಾನಿಸ್ಟರ್ ಇಟ್ಟು ಪ್ರತಿಭಟಿಸಿದ್ದರು.

ಸಂಸತ್‌ ಸ್ಮೋಕ್‌ ಬಾಂಬ್ ದಾಳಿ ಮಾಸ್ಟರ್‌ ಮೈಂಡ್‌ ಲಲಿತ್ ಝಾ ಅರೆಸ್ಟ್‌

ಸಂಸತ್ತಿನ ದಾಳಿಗೆ ‘ಪ್ಲ್ಯಾನ್‌ ಬಿ’ ಸಹ ಯೋಜಿಸಿದ್ದ ದಾಳಿಕೋರರು
ಬಹುದಿನಗಳಿಂದ ಸಂಚು ರೂಪಿಸಿ ಬುಧವಾರದಂದು ಸಂಸತ್ತಿನ ಮೇಲೆ ದಾಳಿ ನಡೆಸಿದ ಆರೋಪಿಗಳು, ತಮ್ಮ ಮೂಲ ಪ್ಲ್ಯಾನ್‌ ವಿಫಲವಾದರೆ ಮತ್ತೊಂದು ‘ಪ್ಲ್ಯಾನ್‌ ಬಿ’ಯನ್ನು ಈ ಮೊದಲೇ ಯೋಜಿಸಿದ್ದರು ಎಂಬ ಮತ್ತಷ್ಟು ಭಯಾನಕ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

‘ಪ್ಲ್ಯಾನ್‌ ಎ’ ಏನು?
ಸಾಗರ್‌ ಶರ್ಮಾ ಮತ್ತು ಮನೋರಂಜನ್‌ ಸಂಸತ್ತಿನೊಳಗೆ ಹೋಗುವುದು ಮೊದಲೇ ಪಕ್ಕಾ ಆಗಿತ್ತು. ‘ಪ್ಲ್ಯಾನ್‌ ಎ’ ಪ್ರಕಾರ ಇನ್ನಿಬ್ಬರು ಆರೋಪಿಗಳಾದ ನೀಲಮ್‌ ಮತ್ತು ಅಮೋಲ್‌ ಸಂಸತ್ತಿನ ಹೊರಗೆ ಹೊಗೆ ಬಾಂಬ್ ಸಿಡಿಸಿ ಸರ್ಕಾರದ ವಿರುದ್ಧ ಮಾಧ್ಯಮಗಳೆದುರು ಘೋಷಣೆ ಕೂಗಬೇಕು ಎಂದು ಯೋಜಿಸಲಾಗಿತ್ತು.

ಸಂಸತ್‌ ದಾಳಿಕೋರರ ಗುರಿ ಪ್ರಧಾನಿ ಮೋದಿ! ದಾಳಿಗೆ ಅಸಲಿ ಕಾರಣ ಇದೇನಾ?

‘ಪ್ಲ್ಯಾನ್‌ ಬಿ’ ಏಕೆ?
ಒಂದು ವೇಳೆ ಕಾರಣಾಂತರಗಳಿಂದ ನೀಲಮ್‌ ಮತ್ತು ಅಮೋಲ್‌ ಸಂಸತ್ತನ್ನು ಪ್ರವೇಶಿಸಲು ಸಾಧ್ಯವಾಗದಿದ್ದರೆ ಇನ್ನಿಬ್ಬರು ಆರೋಪಿಗಳಾದ ಮಹೇಶ್‌ ಮತ್ತು ಕೈಲಾಶ್‌ ಬೇರೊಂದು ದಿಕ್ಕಿನಿಂದ ಸಂಸತ್ತಿನ ಆವರಣ ತಲುಪಿ ಹೊಗೆ ಬಾಂಬ್‌ ಸಿಡಿಸಬೇಕೆಂದು ‘ಪ್ಲ್ಯಾನ್‌ ಬಿ’ ಪ್ರಕಾರ ಯೋಜಿಸಲಾಗಿತ್ತು.

ಆದರೆ ಮಹೇಶ್‌ ಮತ್ತು ಕೈಲಾಶ್‌ ಇಬ್ಬರೂ ಗುರುಗ್ರಾಮ್‌ನಲ್ಲಿರುವ ವಿಶಾಲ್ ಶರ್ಮಾ ಅಲಿಯಾಸ್ ವಿಕ್ಕಿ ಮನೆಗೆ ತಲುಪಲು ಸಾಧ್ಯವಾಗಲಿಲ್ಲ. ಇದೇ ವೇಳೆ ಅಮೋಲ್‌ ಹಾಗೂ ನೀಲಂ ಕೂಡ ಪ್ಲ್ಯಾನ್‌ ಎ ಯೋಜನೆಯಂತೆ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ವತ ಪ್ರಮುಖ ಆರೋಪಿ ಲಲಿತ್‌ ಝಾ ಈ ಮಾಹಿತಿಯನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಸಂಸತ್‌ ದಾಳಿ ಮುಖ್ಯ ಆರೋಪಿ ಲಲಿತ್‌ ಝಾ 7 ದಿನ ಪೊಲೀಸ್‌ ಕಸ್ಟಡಿಗೆ
ನೂತನ ಸಂಸತ್‌ ಭವನ ದಾಳಿಯ ಮಾಸ್ಟರ್‌ಮೈಂಡ್‌ ಎಂದೇ ಗುರುತಿಸಲಾದ ಲಲಿತ್‌ ಝಾನನ್ನು 7 ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಪಟಿಯಾಲ ಹೌಸ್‌ ಆವರಣದಲ್ಲಿರುವ ಎನ್ಐಎ ಸಂಬಂಧಿತ ವಿಶೇಷ ನ್ಯಾಯಾಲಯದಲ್ಲಿ ನ್ಯಾ। ಹರ್ದೀಪ್‌ ಕೌರ್‌ ವಿಚಾರಣೆ ನಡೆಸಿದರು. ಪೊಲೀಸರು 15 ದಿನಗಳ ಕಾಲ ವಶಕ್ಕೆ ಕೇಳಿದರಾದರೂ ನ್ಯಾಯಮೂರ್ತಿಗಳು 7 ದಿನಗಳ ಕಾಲ ವಶಕ್ಕೆ ನೀಡಿ ಆದೇಶಿಸಿದರು. ಪ್ರಕರಣದಲ್ಲಿ ಉಳಿದ ನಾಲ್ವರನ್ನೂ ಸಹ ಇದೇ ನ್ಯಾಯಾಲಯ ಗುರುವಾರ 7 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿತ್ತು.

click me!