ಉತ್ತರ ಪ್ರದೇಶ: ಈ ಜೈಲಲ್ಲಿ 200ಕ್ಕೂ ಹೆಚ್ಚು ಮುಸ್ಲಿಮರಿಂದ Navratri ಉಪವಾಸ

By BK AshwinFirst Published Oct 2, 2022, 3:11 PM IST
Highlights

ಉತ್ತರ ಪ್ರದೇಶದ ಮುಜಾಫರ್‌ನಗರ ಜೈಲಿನಲ್ಲಿ ಹಿಂದೂ ಕೈದಿಗಳ ಜತೆಗೆ ಹಲವು ಮುಸ್ಲಿಂ ಕೈದಿಗಳು ಸಹ ನವರಾತ್ರಿ ಉಪವಾಸ ಆಚರಿಸುತ್ತಿದ್ದಾರೆ. ಈ ಜೈಲು ಕೋಮು ಸವಹಾರ್ದತೆಗೆ ಹೆಸರಾಗಿದೆ ಎಂದು ತಿಳಿದುಬಂದಿದೆ. 

ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರುವಾಸಿಯಾಗಿದೆ. ಕೋಮು ವಿವಾದಗಳು, ಧಾರ್ಮಿಕ ಸಂಘರ್ಷಗಳ ಘಟನೆಗಳು ನಡೆಯುತ್ತಿದ್ದರೂ, ಕೋಮು ಸೌಹಾರ್ದತೆ ಈಗಲೂ ಸಾಕಷ್ಟಿದೆ. ಇದೇ ರೀತಿ ಧಾರ್ಮಿಕ ಸೌಹಾರ್ದತೆಗೆ ಉದಾಹರಣೆಯಾಗಿ, ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲಾ ಕಾರಾಗೃಹದಲ್ಲಿ 200 ಕ್ಕೂ ಹೆಚ್ಚು ಮುಸ್ಲಿಂ ಕೈದಿಗಳು ಇತರ ಹಿಂದೂ ಕೈದಿಗಳೊಂದಿಗೆ 9 ದಿನಗಳ ನವರಾತ್ರಿ ಉಪವಾಸ ಆಚರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.  ಪವಿತ್ರ ರಂಜಾನ್ ತಿಂಗಳಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಹಲವು ಹಿಂದೂ ಕೈದಿಗಳು ‘ರೋಜಾ’ ಅಥವಾ ಉಪವಾಸ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಹಿಂದೂಗಳ ಭಾವನೆ ಗೌರವಿಸಲು ನವರಾತ್ರಿಯ ವೇಳೆ ಮುಸ್ಲಿಂ ಕೈದಿಗಳು ಸಹ ಉಪವಾಸ ಮಾಡುತ್ತಿದ್ದಾರೆ ಎಂದು ಜೈಲು ಅಧಿಕಾರಿಯೊಬ್ಬರು ಹೇಳಿದರು.

ಮುಜಾಫರ್‌ನಗರ ಜಿಲ್ಲಾ ಕಾರಾಗೃಹದ 3,000 ಕೈದಿಗಳ ಪೈಕಿ ಸುಮಾರು 1,100 ಹಿಂದೂಗಳು ಮತ್ತು 218 ಮುಸ್ಲಿಮರು ನವರಾತ್ರಿ ಉಪವಾಸವನ್ನು ಆಚರಿಸುತ್ತಿದ್ದಾರೆ ಎಂದು ಜಿಲ್ಲಾ ಕಾರಾಗೃಹದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಇನ್ನು, ಉಪವಾಸ ನಿರತ ಕೈದಿಗಳ ಆಹಾರದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜೈಲು ಅಧಿಕಾರಿಗಳು ಕ್ಯಾಂಟೀನ್‌ನಲ್ಲಿ ಕೆಲವು ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದಾರೆ. ಉಪವಾಸ ವ್ರತ ಆಚರಿಸುತ್ತಿರುವ ಕೈದಿಗಳಿಗೆ ವಿವಿಧ ಬಗೆಯ ಹಣ್ಣುಗಳು, ಹಾಲು, ಹುರುಳಿ ಹಿಟ್ಟು, ಟೀ ಮತ್ತು ಇತರ ಪದಾರ್ಥಗಳನ್ನು ಕ್ಯಾಂಟೀನ್‌ನಲ್ಲಿ ಒದಗಿಸಲಾಗಿದೆ ಎಂದು ಮುಜಾಫರ್‌ನಗರ ಜೈಲು ಅಧೀಕ್ಷಕ ಸೀತಾರಾಮ್ ಶರ್ಮಾ ತಿಳಿಸಿದ್ದಾರೆ.

Latest Videos

ಇದನ್ನು ಓದಿ: ಮುಸ್ಲಿಂ ಸಿಬ್ಬಂದಿ ತೆಗೆದು ಹಿಂದೂಗಳ ನಿಯೋಜಿಸಿದ ಮಥುರಾ ಹೊಟೇಲ್‌

ಉಪವಾಸ ಆಚರಣೆ ಬಗ್ಗೆ ಮುಸ್ಲಿಂ ಕೈದಿಗಳು ಹೇಳಿದ್ದು ಹೀಗೆ..
"ಸಂಸ್ಕೃತಿ ಮತ್ತು ಧರ್ಮಗಳ ಏಕತೆ" ಯಲ್ಲಿ ತಮ್ಮ ಆಳವಾದ ನಂಬಿಕೆಯೇ ಉಪವಾಸ ಮಾಡಲು ಪ್ರೇರೇಪಿಸಿತು ಎಂದು ಉಪವಾಸವನ್ನು ಆಚರಿಸುತ್ತಿರುವ ಕೈದಿಗಳಲ್ಲಿ ಒಬ್ಬರು, ಹೇಳಿದರು. ಜೈಲಿನಲ್ಲಿ ಹೇಗೆ ಕೋಮು ಸೌಹಾರ್ದತೆ ಪಾಲನೆಯಾಗುತ್ತದೆ ಎಂಬುದನ್ನು ಜನರು ಕಲಿಯಬೇಕು. ಇದೇ ಸಾಂಸ್ಕೃತಿಕ ನೆಲೆಯಲ್ಲಿ ನಾವೆಲ್ಲರೂ ಒಟ್ಟಾಗಿ ಬಾಳಬೇಕು, ಸಹಬಾಳ್ವೆ ನಡೆಸಬೇಕು ಎಂದೂ ಅವರು ಹೇಳಿದರು.

ಹಾಗೆ, ಮತ್ತೋರ್ವ ಕೈದಿ, "ಕೋಮು ಸೌಹಾರ್ದತೆಗೆ ಉದಾಹರಣೆಯಾಗಲು ನಾವು ಹೆಮ್ಮೆ ಪಡುತ್ತೇವೆ. ರಂಜಾನ್ ಸಮಯದಲ್ಲಿ ಹಿಂದೂ ಸಹೋದರರು ಉಪವಾಸ ಮಾಡಿದರೆ, ನಾವು ಕೂಡ ನವರಾತ್ರಿಯಲ್ಲಿ ಉಪವಾಸ ಮಾಡಬಹುದು. ಪ್ರೀತಿಗೆ ಉತ್ತರವೆಂದರೆ ಪ್ರೀತಿ, ದ್ವೇಷವಲ್ಲ." ಎಂದು ಹೇಳಿದರು. ಇನ್ನು, "ನವರಾತ್ರಿ ಅಥವಾ ರಂಜಾನ್‌ನಂತಹ ಧಾರ್ಮಿಕ ಆಚರಣೆಗಳಲ್ಲಿ ನಾವು ಹೆಚ್ಚು ಜಾಗರೂಕರಾಗಿರುತ್ತೇವೆ" ಎಂದು ಜೈಲು ಅಧೀಕ್ಷಕರು ಹೇಳಿದರು. "ಕೈದಿಗಳ ನಡುವೆ ಕೋಮು ಸೌಹಾರ್ದತೆ ಬೆಳೆಸಲು ನಾವು ಇಂತಹ ಆಚರಣೆಗಳನ್ನು ಉತ್ತೇಜಿಸುತ್ತೇವೆ" ಎಂದೂ ಅವರು ಹೇಳಿದರು.
 
ಜಿಲ್ಲಾ ಕಾರಾಗೃಹದಲ್ಲಿ ಎಲ್ಲ ಪಂಗಡದ ಕೈದಿಗಳು ಯಾವುದೇ ತಾರತಮ್ಯವಿಲ್ಲದೆ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಜೈಲು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. "ಇಂತಹ ಸಕಾರಾತ್ಮಕ ವಾತಾವರಣವನ್ನು ನೋಡುವುದು ತುಂಬಾ ಸಂತೋಷವಾಗಿದೆ. ವಾಸ್ತವವಾಗಿ, ಆಹಾರವನ್ನು ಸಹ ಸಮಾನವಾಗಿ ವಿತರಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಅವರದೇ ಆದ ಇಚ್ಛಾಶಕ್ತಿ ಇರುತ್ತದೆ. ಅವರು ತಮ್ಮ ಇಚ್ಛೆಯ ಮೇರೆಗೆ ಪೂಜೆ ಮಾಡುತ್ತಿದ್ದಾರೆ,'' ಎಂದು ಅವರು ಹೇಳಿದರು. 

ಇದನ್ನೂ ಓದಿ: Communal Harmony ಮಸೀದಿಗೆ ಅಡಿಗಲ್ಲು ಹಾಕಿದ ಸಿಖ್ ಗುರು, ಸಾಮರಸ್ಯ ಸಾರಿ ಹೇಳಿದ ಗ್ರಾಮ!
 
9 ದಿನಗಳ ನವರಾತ್ರಿ ಉತ್ಸವಗಳು ಸೆಪ್ಟೆಂಬರ್ 26, 2022 ರಂದು ಘಡಸ್ಥಾಪನಾ ವಿಧಿಯೊಂದಿಗೆ ಪ್ರಾರಂಭವಾಯಿತು. ಹಾಗೂ, ಅಕ್ಟೋಬರ್ 5, 2022 ರಂದು ದುರ್ಗಾ ವಿಸರ್ಜನೆ ಅಥವಾ ದಸರಾ/ವಿಜಯದಶಮಿ ಆಚರಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ದಿನಗಳಲ್ಲಿ ಭಕ್ತರು ಬೇಗ ಎದ್ದು ಸ್ನಾನ ಮಾಡುತ್ತಾರೆ. ಅವರು ಉಪವಾಸವನ್ನು ಆಚರಿಸುತ್ತಾರೆ ಅಥವಾ ಮಾಂಸಾಹಾರಿ ಆಹಾರ, ಈರುಳ್ಳಿ, ಬೆಳ್ಳುಳ್ಳಿ, ಆಲ್ಕೋಹಾಲ್ ಮತ್ತು ತಂಬಾಕನ್ನು ತ್ಯಜಿಸುತ್ತಾರೆ. ಅವರು ಹೂವುಗಳು, ರೋಲಿ, ಚಂದನ ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಸಂಪೂರ್ಣ ಪೂಜೆಯ ಸಾಮಾಗ್ರಿಗಳನ್ನು ಸಂಗ್ರಹಿಸಿ ದೇವಿಗೆ ಅರ್ಪಿಸುತ್ತಾರೆ. 

click me!