ಅಂದು ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಕೆಫೆಯೊಂದರ ಮಾಲಕಿ

Suvarna News   | Asianet News
Published : Jan 31, 2022, 04:47 PM IST
ಅಂದು ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಕೆಫೆಯೊಂದರ ಮಾಲಕಿ

ಸಾರಾಂಶ

ಇದು ಅನಾಥ ಬಾಲಕಿಯೊಬ್ಬಳ ಸಾಹಸಗಾಥೆ ಪರಿತ್ಯಕ್ತ ಸ್ಥಿತಿಯಲ್ಲಿ ಭಿಕ್ಷುಕ ದಂಪತಿಗೆ ಸಿಕ್ಕಿದ್ದ ಬಾಲಕಿ ಪಾಟ್ನಾ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಜ್ಯೋತಿ

ಪಾಟ್ನಾ(ಜ.31):  ಹೀಗೆ ಇಂತಲ್ಲೇ ಹುಟ್ಟಬೇಕು ಎಂಬುದನ್ನು ನಾವು ನಿರ್ಧರಿಸಲಾಗದು ಆದರೆ ಹೀಗೆಯೇ ಬದುಕಬೇಕು ಎಂಬುದನ್ನು ನಾವು ನಿರ್ಧರಿಸಬಹುದು. ಹಾಗೂ ಅದಕ್ಕಾಗಿ ಚಲ ಬಿಡದೇ ಹೋರಾಡಿದಲ್ಲಿ ನಮ್ಮಿಷ್ಟದ ಬದುಕು ನಮದಾಗುವುದು. ಇದಕ್ಕೆ ಸಾಕ್ಷಿಯೇ ಬಿಹಾರದ ಈ ಯುವತಿ.  ಯಾರೂ ಇಲ್ಲದ  ಪರಿತ್ಯಜಿಸಲ್ಪಟ್ಟ ಸ್ಥಿತಿಯಲ್ಲಿ ಈ ಬಾಲಕಿ ಒಂದು ಭಿಕ್ಷುಕ ದಂಪತಿಗೆ ರೈಲು ನಿಲ್ದಾಣದಲ್ಲಿ ಸಿಕ್ಕಿದ್ದಳು. ತನ್ನನ್ನು ಸಲಹಿದ ಪೋಷಕರಂತೆ ರೈಲು ನಿಲ್ದಾಣದಲ್ಲಿ ತಾನು ಭಿಕ್ಷೆ ಬೇಡುತ್ತಿದ್ದ ಈ ಬಾಲಕಿಯ ಇಂದಿನ ಬದುಕು ಹಾಗೂ ಸಾಧನೆ ಈ ದೇಶದ ಸಾವಿರಾರು ಹೆಣ್ಣು ಮಕ್ಕಳ ಪಾಲಿಗೆ ಪ್ರೇರಕ ಶಕ್ತಿಯಾಗುವುದರಲ್ಲಿ ಸಂಶಯವೇ ಇಲ್ಲ. 

ಹೌದು ಹುಟ್ಟಿಸಿದ ತಂದೆ ತಾಯಿಯಿಂದಲೇ ಪರಿತ್ಯಜಿಸಲ್ಪಟ್ಟ ಈ ಬಾಲಕಿ ಪಾಟ್ನಾ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಲೇ ತನ್ನ ಬಾಲ್ಯವನ್ನು ಕಳೆದಳು. ಆದರೆ ಅದರ ಜೊತೆ ಜೊತೆಗೆ ಇದ್ದ ತನ್ನ ಅಗಾಧವಾದ ಶ್ರದ್ಧೆ ಮತ್ತು ದೃಢಸಂಕಲ್ಪದಿಂದ ಅವಳು ಈಗ ತನ್ನ 19ನೇ ವಯಸ್ಸಿಗೆ ಸ್ಥಳೀಯ ನಗರದಲ್ಲಿ ಕೆಫೆಯೊಂದನ್ನು ಸ್ಥಾಪಿಸಿ ಉದ್ಯಮ ರಂಗಕ್ಕೆ ಕಾಲಿರಿಸಿದ್ದಾಳೆ. ಹತ್ತೊಂಬತ್ತರ ಹರೆಯದ ಜ್ಯೋತಿಗೆ ತನ್ನ ನಿಜವಾದ ತಂದೆ-ತಾಯಿ ಯಾರೆಂದು ಇಲ್ಲಿಯವರೆಗೂ ತಿಳಿದಿಲ್ಲ. ಆದರೆ ಕೆಲವು ಮಾನವೀಯ ಮೌಲ್ಯ ಹೊಂದಿರುವ ವ್ಯಕ್ತಿಗಳ ಮಾರ್ಗದರ್ಶನ ಹಾಗೂ ಸಹಾಯದಿಂದ ಇಂದು ತಾನು ಈ ಮಟ್ಟಕ್ಕೆ ಏರಿದ್ದೇನೆ ಎನ್ನುತ್ತಾರೆ ಜ್ಯೋತಿ. 

60 ಭಿಕ್ಷುಕರಿಗೆ ತರಬೇತಿ ನೀಡಿ ಉದ್ಯೋಗ ಕೊಟ್ಟ ರಾಜಸ್ಥಾನ ಸರ್ಕಾರ!

ಪಾಟ್ನಾ ರೈಲು ನಿಲ್ದಾಣದಲ್ಲಿ ಆಕೆಯನ್ನು ಸಲುಹುತ್ತಿದ್ದ ಭಿಕ್ಷುಕ ದಂಪತಿಯ ಜೊತೆ ಆಕೆಯೂ ಭಿಕ್ಷೆ ಬೇಡುತ್ತಿದ್ದಳು. ಆದರೆ ಇದರಲ್ಲಿ ಬರುತ್ತಿದ್ದ ಸಂಪಾದನೆ ಸರಿಯಾಗಿ ಹೊಟ್ಟೆ ತುಂಬಿಸಿಕೊಳ್ಳಲು ಕೂಡ ಸಾಲುತ್ತಿರಲಿಲ್ಲ ಹೀಗಾಗಿ ಆಕೆ ಬಳಿಕ  ಕಸ ಎತ್ತುವ ಕೆಲಸವನ್ನು ಕೂಡ ಮಾಡಲು ಶುರು ಮಾಡಿದಳು. ಇದರ ಜೊತೆಗೆ ವಿದ್ಯಾಭ್ಯಾಸ ಮಾಡುವ ಬಯಕೆ ಅವಳ ಮನಸ್ಸಿನಲ್ಲಿತ್ತು. ಅವಳ ಬಾಲ್ಯವಿಡೀ ಶಿಕ್ಷಣವಿಲ್ಲದೆ ಕಳೆದುಹೋಯಿತು. ಆದರೆ ಶಿಕ್ಷಣ ಪಡೆಯಬೇಕೆಂಬ ಆಕೆಯ ಮಹತ್ವಕಾಂಕ್ಷೆ  ಇನ್ನು ಜೀವಂತವಾಗಿತ್ತು. 

ಹೀಗೆ ಅವಳು ತನ್ನ ಅಧ್ಯಯನವನ್ನು ಮುಂದುವರಿಸಲು ನಿರ್ಧರಿಸಿದಳು. ಈ ಮಧ್ಯೆ ಆಕೆ ತನ್ನನ್ನು ಬೆಳೆಸಿದ ತಾಯಿಯನ್ನು ಕಳೆದುಕೊಂಡಳು ಜೀವನದಲ್ಲಿ ಎದುರಾದ ಅಪಾರ ಕಷ್ಟಗಳ ಮಧ್ಯೆಯೂ ಜ್ಯೋತಿ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಜೀವನದಲ್ಲಿ ಮುಂದುವರೆಯಬೇಕೆಂಬ ಗುರಿ ಹೊಂದಿದ್ದ ಆಕೆಗೆ ಪಾಟ್ನಾ (Patna) ಜಿಲ್ಲಾಡಳಿತವು ಸ್ವಯಂಸೇವಕ ಸಂಸ್ಥೆ ರಾಂಬೊ ಫೌಂಡೇಶನ್ ಮೂಲಕ ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡಿತು. 

ಅಂದು ಭಿಕ್ಷಾಟನೆ, ಇಂದು ಅಭ್ಯರ್ಥಿಯಾಗಿ ಮತಯಾಚನೆ; ಅಚ್ಚರಿಗೆ ಸಾಕ್ಷಿಯಾಯ್ತು ಗ್ರಾಪಂ ಚುನಾವಣೆ

ಈ ಬಗ್ಗೆ ಮಾತನಾಡಿದ ರಾಂಬೊ ಫೌಂಡೇಶನ್‌ನ ಬಿಹಾರದ ಮುಖ್ಯಸ್ಥೆ ವಿಶಾಖ ಕುಮಾರಿ (Vishakha Kumari), ಪಾಟ್ನಾದಲ್ಲಿ ಬಡ ಮತ್ತು ಅನಾಥ ಯುವಕಯುವತಿಯರನ್ನು ಇಟ್ಟುಕೊಂಡು ಶಿಕ್ಷಣವನ್ನು ನೀಡುವ ಐದು ಕೇಂದ್ರಗಳಿವೆ. ಈ ಅನಾಥ ಬಾಲಕಿ ಜ್ಯೋತಿ (Jyoti) ರಾಂಬೊ ಫೌಂಡೇಶನ್‌ಗೆ ಸೇರಿದ ನಂತರ,  ತನ್ನ ಅಧ್ಯಯನವನ್ನು ಮುಂದುವರಿಸಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಸಾಧಾರಣ ಅಂಕಗಳೊಂದಿಗೆ ಉತ್ತೀರ್ಣಳಾದಳು. ಇದರಿಂದ ಆಕೆಯ ಜೀವನ ಸಂಪೂರ್ಣವಾಗಿ ಬದಲಾಯಿತು. ಇದರ ಪರಿಣಾಮವಾಗಿ ಆಕೆಗೆ ಉಪೇಂದ್ರ ಮಹಾರಥಿ ಸಂಸ್ಥೆಯಲ್ಲಿ ( Upendra Maharathi Institute) ಮಧುಬನಿ ಚಿತ್ರಕಲೆಯಲ್ಲಿ (Madhubani paintings) ತರಬೇತಿ ಪಡೆಯುವ ಅವಕಾಶ ಸಿಕ್ಕಿತ್ತು. ಅಲ್ಲಿ ಸೇರಿದ  ಆಕೆ ಚಿತ್ರಕಲೆಯನ್ನೂ ಕಲಿತಳು ಎಂದರು.

ಆದರೆ ಜ್ಯೋತಿ ಬರೀ ಇಷ್ಟರಲ್ಲಿ ತೃಪ್ತಿ ಪಟ್ಟುಕೊಂಡು ಸುಮ್ಮನಾಗಿಲ್ಲ. ಅವಳ ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಅವಳು ಸಂಸ್ಥೆಯೊಂದರಲ್ಲಿ ಕೆಫೆಟೇರಿಯಾವನ್ನು (cafeteria) ನಡೆಸುವ ಕೆಲಸವನ್ನು ಪಡೆದಳು. ದಿನವಿಡೀ ಕೆಫೆಟೇರಿಯಾ ನಡೆಸುವ ಆಕೆ ತನ್ನ ಬಿಡುವಿನ ವೇಳೆಯಲ್ಲಿ ಅಧ್ಯಯನ ಮಾಡುವುದಾಗಿ ಹೇಳುತ್ತಾಳೆ. ಇಂದು ಆಕೆ ಸ್ವಂತ ಸಂಪಾದನೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಳೆ. ಅಲ್ಲದೇ ಮುಂದೆ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ನಡೆಸುವ ಕನಸು ಹೊಂದಿದ್ದಾರೆ ಮತ್ತು ದೂರ ಶಿಕ್ಷಣದ ಮೂಲಕ ತನ್ನ ಅಧ್ಯಯನವನ್ನು ಮುಂದುವರಿಸುತ್ತಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!