
ನವದೆಹಲಿ: ಪಹಲ್ಗಾಂ ದಾಳಿ ನಡೆಸಿದ ಶಂಕಿತರು ಎನ್ನಲಾದ ಮೂವರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರಳಿಸಲಾಗಿದೆ. ಮೂರು ತಿಂಗಳ ಹಿಂದೆ ಪಹಲ್ಗಾಂನಲ್ಲಿದ್ದ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸ್ಥಳೀಯ ವ್ಯಕ್ತಿ ಸೇರಿದಂತೆ 26 ಜನರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಸಂಬಂಧಿಸಿದ್ದ ಎನ್ನಲಾದ ಪಾಕಿಸ್ತಾನ ಮೂಲದ ಮೂವರು ಉಗ್ರರನ್ನು ಹೊಡೆದುರಳಿಸಿರುವ ಬಗ್ಗೆ ಭಾರತೀಯ ಸೇನೆ ಖಚಿತಪಡಿಸಿದೆ.
ಶ್ರೀನಗರದ ಲಿಡ್ವಾಸ್‌ನ ಸಾಮಾನ್ಯ ಪ್ರದೇಶದಲ್ಲಿ ಮೌಂಟ್ ಬಳಿಯ ಪ್ರದೇಶದಲ್ಲಿ ಕಾರ್ಯಚರಣೆ ನಡೆದಿದೆ. ಮೂವರು ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿಯನ್ನು ಆಧರಿಸಿದ ಸೇನೆ, ಜೆ & ಕೆ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಚಣೆಯನ್ನು ನಡೆಸಿದ್ದವು. ಆಪರೇಷನ್ ಮಹಾದೇವ್ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದಿತ್ತು.
ಮೌಂಟ್ ಮಹಾದೇವ್ ಬಳಿಯ ಲಿಡ್ವಾಸ್ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಸೇನೆಗೆ ಸಿಕ್ಕ ನಂತರ ಎನ್‌ಕೌಂಟರ್ ಆರಂಭವಾಯಿತು ಎಂದು ವರದಿಯಾಗಿದೆ. ಎರಡು ದಿನಗಳ ಹಿಂದೆ ದಾಚಿಗಾಮ್ ಕಾಡಿನಲ್ಲಿ ಸೇನೆ ಪತ್ತೆ ಹಚ್ಚಿದ್ದ ಅನುಮಾನಾಸ್ಪದ ಸಂವಹನ ಸಂಕೇತದಿಂದ ಈ ಗುಪ್ತಚರ ಮಾಹಿತಿ ಬಂದಿತ್ತು. ಸ್ಥಳೀಯ ಅಲೆಮಾರಿಗಳು ಅನುಮಾನಸ್ಪದ ಚಟುವಟಿಕೆಗಳು ನಡೆಯುತ್ತಿರೋದನ್ನು ಗಮನಿಸಿದ್ದರು. ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಇರುವಿಕೆಯ ಮಾಹಿತಿಯನ್ನು ಸೇನೆಗೆ ನೀಡಿದ್ದರು.
ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಆಪರೇಷನ್ ಮಹಾದೇವ್ ಹೆಸರಿನಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿವೆ. ಕಾರ್ಯಾಚರಣೆಯ ಸಮಯದಲ್ಲಿ, ಉಗ್ರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಸುತ್ತುವರಿಯಲ್ಪಟ್ಟರು. ಕೆಲ ಸಮಯ ಗುಂಡಿನ ಚಕಮಕಿಯ ನಂತರ, ಮೂವರನ್ನೂ ಹತ್ಯೆ ಮಾಡಲಾಯಿತು. ಆರಂಭಿಕ ಶೋಧದ ಸಮಯದಲ್ಲಿ ಎರಡು ಸುತ್ತು ಗುಂಡಿನ ಶಬ್ದ ಕೇಳಿಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳನ್ನು ತ್ವರಿತವಾಗಿ ಪ್ರದೇಶಕ್ಕೆ ಕಳುಹಿಸಲಾಯಿತು ಮತ್ತು ಶೋಧವನ್ನು ವಿಸ್ತರಿಸಲಾಯಿತು.
ಈ ವರ್ಷದ ಆರಂಭದಲ್ಲಿ ನಡೆದ ಪಹಲ್ಗಾಮ್ ದಾಳಿಗೆ ಉಗ್ರರು ಸಂಬಂಧ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೈಸರನ್ ಕಣಿವೆಯಲ್ಲಿ ನಡೆದ ಆ ದಾಳಿಯು ದೇಶವನ್ನು ಬೆಚ್ಚಿಬೀಳಿಸಿತು ಮತ್ತು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಭಯೋತ್ಪಾದಕ ಗುಂಪು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊಣೆ ಹೊತ್ತುಕೊಂಡಿತ್ತು. ನಂತರ ದಿ ರೆಸಿಸ್ಟೆನ್ಸ್ ಫ್ರಂಟ್ ಹೇಳಿಕೆಯನ್ನು ಹಿಂಪಡೆದುಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ