ಪೊಲೀಸ್​ ರೂಪದ ರಕ್ಕಸರು! ಎಂಜಲು ಕಾಸಿಗೆ ಬಾಲಕನ ಜೀವದ ಜೊತೆ ಚೆಲ್ಲಾಟವಾಡಿದ ಕ್ರೂರ ಅಧಿಕಾರಿಗಳು

Published : Feb 07, 2026, 06:30 PM IST
Police

ಸಾರಾಂಶ

ಎಂಜಲು ಕಾಸಿಗೆ ಯಾರ ಜೀವದ ಜೊತೆ ಬೇಕಾದರೂ ಚೆಲ್ಲಾಟವಾಡುವ ಪೊಲೀಸ್​ ಇಲಾಖೆಯ ಅತ್ಯಂತ ಕ್ರೂರ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಡ್ರಗ್ಸ್ ಪೆಡ್ಲರ್‌ಗಳಿಂದ ಲಂಚ ಪಡೆದ ಪೊಲೀಸ್​ ಅಧಿಕಾರಿಗಳು ಮಾಡಿರುವ ಘನಂದಾರಿ ಕೆಲಸ ನೋಡಿ!

ಜನಸಾಮಾನ್ಯರು ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ ಇದ್ದಾರೆ ಎಂದರೆ ಅದರ ಬಹುಪಾಲು ಶ್ರೇಯಸ್ಸನ್ನು ಪೊಲೀಸ್​ ಇಲಾಖೆಗೆ ನೀಡಬೇಕು. ಆದರೆ, ಪೊಲೀಸ್​ ಇಲಾಖೆಯ ಕೆಲವು ಉನ್ನತ ಅಧಿಕಾರಿಗಳಿಂದ ಹಿಡಿದು ಕೆಳಹಂತದ ನೌಕರರವರೆಗೆ ಮಾಡುವ ಕೆಲವೊಂದು ಕಾರ್ಯಗಳ ಬಗ್ಗೆ ಇದಾಗಲೇ ಜನಸಾಮಾನ್ಯರು ರೋಸಿ ಹೋಗುತ್ತಿದ್ದಾರೆ. ಅದರಲ್ಲಿಯೂ ಸಾಮಾನ್ಯ ಜನರ ಯಾವುದಾದರೂ ವಸ್ತು, ವಾಹನ ಕಳುವಾದರೆ, ತಮ್ಮದೇ ವ್ಯಾಪ್ತಿಯ ಕಳ್ಳರ ಬಗ್ಗೆ ಅರಿವಿದ್ದರೂ, ಅವರನ್ನು ಹಿಡಿಯದೇ, ದುಡ್ಡು ನುಂಗಿ ನೀರು ಕುಡಿಯುತ್ತಾರೆ, ಸಾಮಾನ್ಯ ಜನರ ವಸ್ತುಗಳು, ವಾಹನಗಳು ಕಳುವಾಯಿತು ಎಂದರೆ, ಅದು ಸಿಗುವುದು ದೂರದ ಮಾತೇ ಎನ್ನುವ ಬಗ್ಗೆ ಇದಾಗಲೇ ಹಲವಾರು ಅಸಮಾಧಾನ ತೋಡಿಕೊಂಡಿರುವುದು ಇದೆ. ಅದರಲ್ಲಿಯೂ ರಸ್ತೆ ಬದಿಯ ಅಂಗಡಿಗಳನ್ನೂ ಬಿಡದೇ, ಕೊನೆಗೆ ಭಿಕ್ಷುಕರನ್ನೂ ಬಿಡದೇ 10-20 ರೂಪಾಯಿಯನ್ನಾದರೂ ವಸೂಲಿ ಮಾಡಿಕೊಂಡು ಹೋಗುವವರು ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ.

ಪೊಲೀಸರ ಪೈಶಾಚಿಕ ಕೃತ್ಯ

ಆದರೆ, ಇವೆಲ್ಲವುಗಳಿಗಿಂತಲೂ ಘನಘೋರ ಎನ್ನುವಂಥ, ಪೈಶಾಚಿಕ ಕೃತ್ಯಕ್ಕೆ ಇಳಿದಿರುವ ಘಟನೆ ಮಧ್ಯಪ್ರದೇಶದಲ್ಲಿ ಈಚೆಗೆ ನಡೆದಿದೆ. ಅಮಾಯಕ ಬಾಲಕನ ಜೀವನ ಜೊತೆ ಚೆಲ್ಲಾಟವಾಡಿದ್ದಾರೆ ಈ ಧನದಾಹಿ ಪೊಲೀಸರು. ಡ್ರಗ್ಸ್​ ಪೆಡ್ಲರ್​ಗಳಿಂದ ಲಂಚ ಪಡೆದು, ಅವರು ಕೊಟ್ಟ ಕಾಸನ್ನು ನುಂಗಿ ತೇಗಿ, ಅಮಾಯಕ ಬಾಲಕನನ್ನು ಈ ಕೇಸ್​ನಲ್ಲಿ ಸಿಲುಕಿಸುವ ಪ್ಲ್ಯಾನ್​ ಮಾಡಿರುವ ಹೇಯ ಕೃತ್ಯ ಮಾಡಿದ್ದಾರೆ ಈ ಪೊಲೀಸ್​ ಅಧಿಕಾರಿಗಳು. ಅದೊಂದು ಸಾಕ್ಷಿ ಸಿಗದೇ ಹೋಗಿದ್ದರೆ, ಆ ಬಾಲಕ ಇಂದು ಕೋರ್ಟ್​ನಿಂದ ಘೋರ ಶಿಕ್ಷೆಯನ್ನೋ ಇಲ್ಲವೇ, ಆತ್ಮ*ಹತ್ಯೆಯನ್ನೋ ಮಾಡಿಕೊಳ್ಳುವ ಸ್ಥಿತಿಗೆ ತಂದೊಡ್ಡುತ್ತಿದ್ದರು ಈ ಲಂಚಕೋರ ಪೊಲೀಸ್​ ಅಧಿಕಾರಿಗಳು.

 

ದೇಶದ ಅತ್ಯುತ್ತಮ ಪೊಲೀಸ್ ಠಾಣೆಯ ಸ್ಟೋರಿ ಇದು

ಈ ಘಟನೆ ನಡೆದಿರುವುದು ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದ ಮಲ್ಹರ್‌ಗಢ ಪೊಲೀಸ್ ಠಾಣೆಯ ಪೊಲೀಸ್​ ಅಧಿಕಾರಿಗಳಿಂದ. ಐದಾರು ಮಂದಿ ಅಧಿಕಾರಿಗಳು ಅಂದು ಖಾಸಗಿ ಬಸ್​ ಒಂದನ್ನು ನಿಲ್ಲಿಸಿ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ಪ್ರಯಾಣಿಕರ ಎದುರೇ ದರದರ ಎಳೆದುಕೊಂಡು ಬಂದರು. ಆ ವಿದ್ಯಾರ್ಥಿ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ ಈ ಪಾಪಿ ಪೊಲೀಸರು ಆತನನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿ, ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಆತನನ್ನು ಸಿಲುಕಿಸಿದರು. ಅದಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಬಾಲಕನ ಮೇಲೆ ಎಫ್​ಐಆರ್​ ದಾಖಲು ಮಾಡಿದರು.

ಮಗನ ಬಂಧನದ ಸುದ್ದಿ ತಿಳಿಯುತ್ತಲೇ ಪಾಲಕರು ದಿಕ್ಕೇ ತೋಚದಾರರು.ಪೊಲೀಸರ ಬಳಿ ಬಂದು ಕೇಳಿದಾಗ ನಿಮ್ಮ ಮಗ ಡ್ರಗ್ಸ್​ ವ್ಯವಹಾರ ನಡೆಸುತ್ತಿದ್ದ ಎಂದಿದ್ದಾರೆ. ಶಾಲೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎನ್ನಿಸಿಕೊಂಡಿರುವ ಮಗ, ಪ್ರತಿದಿನವೂ ಶಾಲೆಗೆ ಹಾಜರಾಗುತ್ತಿದ್ದ ಮಗ, ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿರುವುದು ಕೇಳಿ ಅಪ್ಪ-ಅಮ್ಮನಿಗೆ ದಿಕ್ಕೇ ತೋಚದಾಯಿತು. 2.7 ಕೆಜಿ ಅಫೀಮು ಜೊತೆ ಸಿಕ್ಕಿಬಿದ್ದಿದ್ದಾನೆ ಎಂದರು. ಕೊನೆಗೆ ಆ ಬಾಲಕನನ್ನು ಕೋರ್ಟ್​ ಮುಂದೆ ಹಾಜರು ಪಡಿಸಲಾಯಿತು. ಎಲ್ಲವೂ ಆತನ ವಿರುದ್ಧವಾಗಿಯೇ ಇದ್ದವು. ಆದ್ದರಿಂದ ಆತನನ್ನು ಜೈಲಿಗೆ ಕಳುಹಿಸಲಾಯಿತು. ಮೂರು ತಿಂಗಳು ತನ್ನದಲ್ಲದ ತಪ್ಪಿಗೆ ಆತ ಜೈಲಿನಲ್ಲಿಯೇ ಇರಬೇಕಾದ ಸ್ಥಿತಿ ಬಂತು.

ಹೈಕೋರ್ಟ್​ನಲ್ಲಿ ಸತ್ಯ ಬಯಲು

ಕೊನೆಗೆ ಈ ಘಟನೆ ಹೈಕೋರ್ಟ್​ ಮೆಟ್ಟಿಲೇರಿತು. ವಕೀಲರು ಬುದ್ಧಿವಂತರಾಗಿದ್ದರಿಂದಲೋ ಏನೋ, ಎಲ್ಲಾ ಘಟನೆಗಳನ್ನು ಒಂದೊಂದಾಗಿ ಪೋಣಿಸಿದಾಗ ಎಲ್ಲೋ ಎಡವಟ್ಟಾಗಿರುವುದನ್ನು ಹೈಕೋರ್ಟ್​ ಗಮನಕ್ಕೆ ತಂದರು. ನ್ಯಾಯಮೂರ್ತಿಗಳು ಮಂಡ್ಸೌರ್ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಮೀನಾ ಅವರ ವೈಯಕ್ತಿಕ ಹಾಜರಾತಿಗೆ ಆದೇಶಿಸಿದರು. ಬಳಿಕ, ಆ ಬಾಲಕ ಡ್ರಗ್ಸ್​ ತೆಗೆದುಕೊಂಡು ಹೋಗುತ್ತಿದ್ದ. ಅವನನ್ನು 30 ಕಿಲೋ ಮೀಟರ್​ ಚೇಜ್​ ಮಾಡಿ ತಾವು ಮಾಡಿರುವ ಸಾಹಸದ ಬಗ್ಗೆ ವಿವರಿಸಿದರು. ಬಳಿಕ ವಕೀಲರು, ಅಕ್ಕಪಕ್ಕ ಇರುವ ಎಲ್ಲಾ ಸಿಸಿಟಿವಿಗಳ ಫುಟೇಜ್​ ತಂದುಕೊಟ್ಟರು.

ಕೊನೆಗೆ ಬಸ್​ ಒಳಗೆ ಇರುವ ಫುಟೇಜ್​ ನೋಡಿದಾಗ, ಆ ವಿದ್ಯಾರ್ಥಿ ಪೊಲೀಸ್​ ಅಧಿಕಾರಿಗಳು ಹೇಳಿದಂತೆ ಅಲ್ಲೆಲ್ಲೋ ಇರಲಿಲ್ಲ. ಬದಲಿಗೆ ಬಸ್​ ಸ್ಟಾಪ್​ನಿಂದ ಬಸ್​ ಹತ್ತಿ ಕುಳಿತಿರುವುದು ತಿಳಿಯುತ್ತಲೇ ಕೋರ್ಟ್​ ಗರಂ ಆಯಿತು. ವಕೀಲರು ಬಾಯಿ ಬಿಡಿಸಿದಾಗ ತಿಳಿದು ಬಂದಿದ್ದು ಭಯಾನಕ ಸತ್ಯ. ಡ್ರಗ್ಸ್​ ಪೆಡ್ಲರ್​ಗಳು ಆ ಭಾಗದಲ್ಲಿ ಹೆಚ್ಚಾಗಿದ್ದರು. ಅವರನ್ನು ಇದೇ ಪೊಲೀಸರು ಅರೆಸ್ಟ್​ ಮಾಡಿದ್ದರು. ಅವರಿಂದ ಡ್ರಗ್ಸ್​ ವಶಪಡಿಸಿಕೊಂಡಿದ್ದರು. ಬಳಿಕ ಅವರಿಂದ ಒಂದಿಷ್ಟು ಹಣ ಪಡೆದು ಅವರನ್ನು ಬಿಟ್ಟರು. ಯಾರಾದರೂ ಆ ಡ್ರಗ್ಸ್​ ಮಾಲೀಕರು ಎಂದು ತೋರಿಸಲು ಬೇಕಿತ್ತಲ್ಲ, ಅದಕ್ಕಾಗಿಯೇ, ಅಮಾಯಕ ಬಾಲಕನನ್ನು ಬಸ್​ನಿಂದ ಕರೆದುಕೊಂಡು ಹೋಗಿ ಸಿಲುಕಿಸಿದ್ದರು. ಆ ಖಾಸಗಿ ಬಸ್​ನಲ್ಲಿ ಸಿಸಿಟಿವಿ ಇಲ್ಲದೇ ಹೋಗಿದ್ದರೆ ಆ ಬಾಲಕನ ಸ್ಥಿತಿ ಏನಾಗುತ್ತಿತ್ತೋ ಗೊತ್ತಿಲ್ಲ.

ಅಮಾನತು ಆದೇಶ ಸಾಕೆ?

ಈ ರಕ್ಕಸ ಪೊಲೀಸರನ್ನು ಅಮಾನತು ಮಾಡಲು ಆದೇಶಿಸಲಾಗಿದೆ. ಬಹುಶಃ ಇಂಥವರಿಗೆ ಇದೊಂದೇ ಶಿಕ್ಷೆ ಸಾಲದು. ಅಮಾನತು ಮಾಡಿದ ಬಳಿಕ ಒಂದಿಷ್ಟು ತಿಂಗಳಾದ ಮೇಲೆ ವಾಪಸ್​ ಕರೆಸಿಕೊಳ್ಳುತ್ತಾರೆ. ಸಂಬಳವೂ ಬರತ್ತೆ. ಆದರೆ, ತನ್ನದಲ್ಲದ ತಪ್ಪಿಗೆ ಆ ಬಾಲಕ ಅನುಭವಿಸಿದ ನೋವು, ಜೈಲಿನಲ್ಲಿ ಅನುಭವಿಸಿದ ಕಿರುಕುಳ, ಹಿಂಸೆ, ವಾಪಸ್​ ಬಂದ ಮೇಲೆ ಆತನನ್ನು ಕಳ್ಳ ಎಂದು ನೋಡುವ ಸಮಾಜ... ಆ ಬಾಲಕ ಸ್ಥಿತಿ ಯಾರಿಗೂ ಬೇಡ. ಇಂಥ ಅದೆಷ್ಟು ಕೇಸ್​ಗಳು ದಿನನಿತ್ಯವೂ ಆಗುತ್ತಿರಬಹುದು ಎಂದು ನೆನೆಸಿಕೊಂಡರೆ ಭಯ ಆಗುತ್ತದೆ ಎಂಬ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಟ್ರೋ ನಿಲ್ದಾಣದಲ್ಲಿ ಗೆಳತಿಯ ಜೊತೆ ಕೂತಿದ್ದ ಮಗನನ್ನ ನೋಡಿದ ಅಮ್ಮ ಅಲ್ಲೇ ಎಂಗೇಜ್‌ಮೆಂಟ್ ಮಾಡೇಬಿಟ್ಲು!
ಪತ್ನಿಗೆ ತೃಪ್ತಿ ನೀಡಲು ಸಾಧ್ಯವಾಗದ್ದಕ್ಕೆ ಜನನಾಂಗ ಕತ್ತರಿಸಿಕೊಂಡ ಗಂಡ; ಜೋಡಣೆಗೆ ವೈದ್ಯರ ಕಸರತ್ತು