
ಭುವನೇಶ್ವರ: ಜೂ.2ರಂದು ಸಂಭವಿಸಿದ 292 ಜನರ ಸಾವಿಗೆ ಕಾರಣವಾದ ತ್ರಿವಳಿ ರೈಲು ದುರಂತದ ವಿಚಾರಣೆ ನಡೆಸುತ್ತಿರುವ ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಗ್ನಲ್ ಜೂನಿಯರ್ ಎಂಜಿನಿಯರ್‌ನನ್ನು ವಿಚಾರಣೆಗೆ ಒಳಪಡಿಸಿದೆ. ಅಲ್ಲದೇ ಹೆಚ್ಚಿನ ತನಿಖೆಗಾಗಿ ಆತನ ಮನೆಯನ್ನು ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆ ನಡೆಸುತ್ತಿರುವ ಸಿಬಿಐನ ಐವರು ಅಧಿಕಾರಿಗಳ ತಂಡ ಸೋಮವಾರ ಎಂಜಿನಿಯರ್ ಮನೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದು, ಸೀಲ್ ಮಾಡಿದ್ದಾರೆ. ಅಲ್ಲದೆ ಎಂಜಿನಿಯರ್‌ನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮಾಡಲಾಗಿದೆ. ಹೆಚ್ಚಿನ ವಿಚಾರಣೆಗೆ ಆತನನ್ನು ಮನೆಗೂ ಕರೆತರಬಹುದು ಎಂದು ವರದಿಗಳು ಹೇಳಿವೆ.
ಈ ನಡುವೆ, ಎಂಜಿನಿಯರ್ ಘಟನೆ ನಡೆದಾಗಿನಿಂದ ತಲೆಮರೆಸಿಕೊಂಡಿದ್ದಾನೆ ಎಂಬ ವದಂತಿಗಳು ಹರಡಿದ್ದವು. ಆದರೆ ಅದನ್ನು ತಳ್ಳಿಹಾಕಿರುವ ರೈಲ್ವೆ ವಕ್ತಾರರು, ‘ಯಾವ ಸಿಬ್ಬಂದಿಯೂ ನಾಪತ್ತೆಯಾಗಿಲ್ಲ. ಎಲ್ಲರೂ ಸಿಬಿಐ ಹಾಗೂ ರೈಲ್ವೆ ಸುರಕ್ಷತಾ ಆಯುಕ್ತರ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದಿದ್ದಾರೆ. ವಿಚಾರಣೆಗೆ ಒಳಪಟ್ಟ ಎಂಜಿನಿಯರ್, ಸಿಗ್ನಲಿಂಗ್ ಉಪಕರಣಗಳ ಅಳವಡಿಕೆ, ನಿರ್ವಹಣೆ ಹಾಗೂ ದುರಸ್ತಿಯ ಹೊಣೆ ಹೊತ್ತಿದ್ದರು. ರೈಲು ದುರಂತದಲ್ಲಿ 292 ಜನರು ಮೃತಪಟ್ಟು, 11 00 ಜನರು ಗಾಯಗೊಂಡಿದ್ದರು. ಘಟನೆಗೆ ಸಿಗ್ನಲ್ ವ್ಯವಸ್ಥೆಯಲ್ಲಿನ ವೈಫಲ್ಯವೇ ಕಾರಣ ಎಂದು ಆರೋಪಿಸಲಾಗಿತ್ತು.
ಒಡಿಶಾ ರೈಲು ದುರಂತ: ಗುರುತೇ ಸಿಗದೆ ಅನಾಥವಾದ 83 ಶವ; ಕೃತಕ ಬುದ್ಧಿಮತ್ತೆ ಬಳಸಿ ಮೃತರ ಗುರುತು ಪತ್ತೆಗೆ ಯತ್ನ
ಒಡಿಶಾದಲ್ಲಿ ತ್ರಿವಳಿ ರೈಲು ದುರಂತದಲ್ಲಿ ಮೃತರಾದ 83 ಜನರ ಮೃತದೇಹಗಳ ಗುರುತು ಪತ್ತೆ ಸಾಧ್ಯವಾಗಿಲ್ಲ. ಹೀಗಾಗಿ ತಮ್ಮವರನ್ನು ಕಳೆದುಕೊಂಡವರು ಇನ್ನೂ ಶವಗಳ ಅಂತ್ಯಸಂಸ್ಕಾರ ಮಾಡಲಾಗದೇ ಪರಿತಪಿಸುವಂತಾಗಿದೆ. ಅಪಘಾತದ ತೀವ್ರತೆಗೆ ಹಲವು ಶವಗಳು ಗುರುತು ಪತ್ತೆಯಾಗದ ರೀತಿಯಲ್ಲಿ ನಜ್ಜುಗುಜ್ಜಾಗಿರುವುದು, ಮೃತರ ಬಳಿ ಯಾವುದೇ ಗುರುತಿನ ವಸ್ತುಗಳು ಪತ್ತೆಯಾಗದೇ ಇರುವುದು ಅಥವಾ ವಾರಸುದಾರರು ಬರದೇ ಇರುವುದು ಶವಗಳ ಗುರುತು ಪತ್ತೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಘಟನೆಯಲ್ಲಿ ಮೃತ 288 ಜನರ ಗುರುತು ಪತ್ತೆಗೆ ರೈಲ್ವೆ ಅಧಿಕಾರಿಗಳು ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಬಳಕೆ ಮಾಡಿದ್ದಾರೆ. ಸಂಚಾರ್ ಸಾರಥಿ ಮತ್ತು ಸಿಮ್‌ಕಾರ್ಡ್ ಟ್ರಯಾಂಗ್ಯುಲೇಷನ್ ಮಾದರಿ ಬಳಸಿದ ಕಾರಣ ಇದುವರೆಗೂ 45 ಶವಗಳ ಗುರುತು ಸಾಧ್ಯವಾಗಿದೆ. ಇನ್ನೂ 83 ಶವಗಳ ಗುರುತು ಪತ್ತೆಯಾಗಿಲ್ಲ.
ಒಡಿಶಾ ರೈಲು ಅಪಘಾತದಲ್ಲಿ ಜೀವ ಉಳಿದರೂ, ವಾಪಸ್ ಮನೆಗೆ ಬರುವ ಮೊದಲೇ ಪ್ರಾಣ ಹೋಯ್ತು
ಘಟನೆ ನಡೆದ ಬಳಿಕ ಆಧಾರ್ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಿ, ಬೆರಳಚ್ಚುಗಳ ಮೂಲಕ ಶವಗಳ ಗುರುತು ಪತ್ತೆಗೆ ರೈಲ್ವೆ ಅಧಿಕಾರಿಗಳು ಯತ್ನಿಸಿದ್ದರು. ಆದರೆ ಘಟನೆಯಲ್ಲಿ ಹಲವರ ಬೆರಳಿಗೆ ಘಾಸಿಯಾಗಿದ್ದ ಕಾರಣ ಆ ವಿಧಾನ ಪೂರ್ಣ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಅಧಿಕಾರಿಗಳು ಅಂತಿಮವಾಗಿ ಕೃತಕ ಬುದ್ಧಿಮತ್ತೆಯಡಿಯಲ್ಲಿ ಕೆಲಸ ಮಾಡುವ ಸಂಚಾರ್ ಸಾಥಿ ಪೋರ್ಟಲ್ ಬಳಸಿಕೊಂಡು ಮೃತರ ಪತ್ತೆ ಮಾಡುತ್ತಿದ್ದಾರೆ. ಇದರಡಿಯಲ್ಲಿ 64 ಮೃತದೇಹಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 45 ಮೃತದೇಹಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏನಿದು ಸಂಚಾರ್ ಸಾಥಿ?:
ಗ್ರಾಹಕರು ಪಡೆದುಕೊಂಡಿರುವ ಮೊಬೈಲ್ ಕನೆಕ್ಷನ್‌ಗಳ ಮಾಹಿತಿಯನ್ನು ಇದು ಒದಗಿಸಲಿದ್ದು, ಕಳೆದು ಹೋದ ಮೊಬೈಲ್‌ಗಳನ್ನು ಟ್ರ್ಯಾಕ್ ಮತ್ತು ಬ್ಲಾಕ್ ಮಾಡಲು ಸಹಾಯ ಮಾಡುತ್ತದೆ. ಈ ಪೋರ್ಟಲ್, ಬಳಕೆದಾರರ ಫೋಟೋ ಆಧಾರವಾಗಿಟ್ಟುಕೊಂಡು ಅವರ ಮೊಬೈಲ್ ನಂಬರ್ ನಂಬರ್ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ಪತ್ತೆ ಹಚ್ಚುತ್ತದೆ. ಈ ಮಾಹಿತಿ ಆಧರಿಸಿ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಲಾಗಿದೆ. ಇದರ ಜೊತೆಗೆ ಅಪಘಾತಕ್ಕೂ ಸಮೀಪದ ಮೊಬೈಲ್ ಟವರ್‌ಗಳ ಮೂಲಕ ಮಾಡಲಾದ ಕರೆಯನ್ನು ಮೊಬೈಲ್ ನಂಬರ್‌ನೊಂದಿಗೆ ಹೊಂದಾಣಿಕೆ ಮಾಡಿ ಮತ್ತು ಘಟನೆ ನಡೆದ ಬಳಿಕ ಸ್ವಿಚಾಫ್ ಆದ ಸಂಖ್ಯೆಯನ್ನು ಪತ್ತೆ ಮಾಡಿ ಅವುಗಳ ಮೂಲಕವೂ ಗುರುತು ಪತ್ತೆ ಮಾಡಲಾಗುತ್ತಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತದ ಶವಗಳನ್ನು ಇಟ್ಟ ಶಾಲೆಯನ್ನು ಧ್ವಂಸ ಮಾಡಿದ ಸರ್ಕಾರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ