ಅತ್ತ ಗಲ್ಲಿಗೆ ಪ್ರ್ಯಾಕ್ಟೀಸ್, ಇತ್ತ ಆಪ್ತರ ಮೀಟಿಂಗ್ಸ್: INSIDE ತಿಹಾರ್!

By Suvarna News  |  First Published Jan 8, 2020, 2:18 PM IST

ತಿಹಾರ್‌ ಜೈಲಿನಲ್ಲಿ ನೇಣು ಶಿಕ್ಷೆಗೆ ಸಿದ್ಧತೆ ಆರಂಭ | ನೇಣಿಗೇರಿಸಲು 4 ನೇಣುಗಂಬಗಳ ತಯಾರಿಕೆಗೆ ಸಿದ್ಧತೆ |  ಒಂದೇ ಏಟಿಗೆ 4 ಮಂದಿಯನ್ನು ಗಲ್ಲಿಗೇರಿಸಲು 4 ಗಲ್ಲುಗಂಬ


ನವದೆಹಲಿ (ಜ. 08): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಾಗೂ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ದೆಹಲಿಯ ನಿರ್ಭಯಾ ರೇಪ್‌ ಆ್ಯಂಡ್‌ ಮರ್ಡರ್‌ ಪ್ರಕರಣದ ದೋಷಿಗಳಿಗೆ ಗಲ್ಲು ಶಿಕ್ಷೆಗೆ ದಿಲ್ಲಿ ನ್ಯಾಯಾಲಯ ಜನವರಿ 22ನೇ ತಾರೀಖಿನ ಬೆಳಗ್ಗೆ 7 ಗಂಟೆಯ ‘ಮುಹೂರ್ತ’ ನಿಗದಿಪಡಿಸಿದೆ. ಇದರ ಬೆನ್ನಲ್ಲೇ ನಾಲ್ವರೂ ಅತ್ಯಾಚಾರಿಗಳನ್ನು ನೇಣಿಗೇರಿಸಲು ಸಿದ್ಧತೆಗಳು ತಿಹಾರ್‌ ಜೈಲಿನಲ್ಲಿ ಆರಂಭವಾಗಿವೆ.

ಎಲ್ಲಾ 4 ಆರೋಪಿಗಳನ್ನು ‘ಫಾಸಿ ಕೋಠಾ’ (ನೇಣು ಕೊಠಡಿ) ಎಂಬಲ್ಲಿ ಏಕಕಾಲಕ್ಕೆ ನೇಣುಗಂಬಕ್ಕೆ ಏರಿಸಲು ತಿಹಾರ್‌ ಜೈಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಸದ್ಯ ತಿಹಾರ್‌ ಜೈಲಿನಲ್ಲಿ ಒಂದು ನೇಣುಗಂಬ ಮಾತ್ರ ಇದ್ದು, ಇನ್ನು ಮೂರು ಹೊಸ ನೇಣುಗಂಬಗಳನ್ನು ತಯಾರು ಮಾಡಲಾಗುತ್ತಿದೆ.

Latest Videos

ನಿರ್ಭಯಾ ರೇಪಿಸ್ಟ್‌ಗಳಿಗೆ ಗಲ್ಲು, ಮಗಳನ್ನೇ ರೇಪ್‌ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ!

ನೇಣಿಗೇರಿಸಿದ ಬಳಿಕ ಶವವನ್ನು ಸಾಗಿಸಲು ಜೆಸಿಬಿ ಮೂಲಕ ಸುರಂಗ ಕೊರೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಸ್ಥಳದಲ್ಲಿ ಸಂಸತ್‌ ದಾಳಿ ದೋಷಿ ಅಫ್ಜಲ್‌ ಗುರು ಹಾಗೂ ಕಾಶ್ಮೀರಿ ಪ್ರತ್ಯೇಕತಾವಾದಿ ಮಕಬೂಲ್‌ ಭಟ್‌ ಅವರನ್ನು ನೇಣಿಗೇರಿಸಿ ದಫನ್‌ ಮಾಡಲಾಗಿತ್ತು ಎಂಬುದು ಗಮನಾರ್ಹ.

ಈವರೆಗೆ ಏಕಕಾಲಕ್ಕೆ ಓರ್ವ ದೋಷಿಯನ್ನು ಮಾತ್ರ ಗಲ್ಲಿಗೇರಿಸಲಾಗುತ್ತಿದ್ದು, ಒಂದು ವೇಳೆ ನಾಲ್ವರು ದೋಷಿಗಳನ್ನು ಏಕ ಕಾಲಕ್ಕೆ ಗಲ್ಲಿಗೇರಿಸಿದರೆ, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಮಂದಿಯನ್ನು ಗಲ್ಲಿಗೇರಿಸಿದ ದೇಶದ ಮೊದಲ ಜೈಲು ತಿಹಾರ್‌ ಆಗಲಿದೆ.

ಈ ನಡುವೆ, ನೇಣುಗಾರರ ಒದಗಿಸಿ ಎಂದು ತಿಹಾರ್‌ ಜೈಲಿನಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರದಿದೆ. ‘ಮೇರಠ್‌ನಿಂದ ನೇಣುಗಾರನನ್ನು ಕಳಿಸಿ’ ಎಂದು ಪತ್ರದಲ್ಲಿ ಕೋರಲಾಗಿದೆ. ಇದರ ಬೆನ್ನಲ್ಲೇ ಮೇರಠ್‌ನ ಪವನ್‌ ಎಂಬ ನೇಣುಗಾರ ಪ್ರತಿಕ್ರಿಯೆ ನೀಡಿದ್ದು, ‘ಸರ್ಕಾರವು ನನಗೆ ಸೂಚಿಸಿದರೆ ನೇಣು ಹಾಕಲು ಸಿದ್ಧನಿದ್ದೇನೆ. ನಾಲ್ವರಿಗೂ ನೇಣು ಹಾಕಿದರೆ ನನಗೆ ನಿರಾಳತೆ ಲಭಿಸಲಿದೆ’ ಎಂದಿದ್ದಾನೆ.

ಬಕ್ಸರ್‌ ಜೈಲಿನಿಂದ ಹಗ್ಗ?:

ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ನಾಲ್ವರು ದೋಷಿಗಳನ್ನು ನೇಣಿಗೇರಿಸಲು ಬಿಹಾರದ ಬಕ್ಸರ್‌ ಜೈಲಿನಿಂದ ನೇಣು ಹಗ್ಗ ತರಿಸಲಾಗುತ್ತದೆ ಎಂದು ಹೇಳಲಾಗಿದೆ.

ಕಳೆದ ತಿಂಗಲೇ, ನೇಣು ಹಗ್ಗವನ್ನು ತಯಾರಿಸಲು ಪ್ರಸಿದ್ಧಿ ಪಡೆದಿರುವ ಬಿಹಾರದ ಬಕ್ಸರ್‌ ಜೈಲಿಗೆ ಕೇಂದ್ರ ಬಂದೀಖಾನೆ ಇಲಾಖೆಯಿಂದ ಒಂದು ಸೂಚನೆ ಬಂದಿತ್ತು. ‘ಡಿ.14ರೊಳಗೆ 10 ಹಗ್ಗಗಳನ್ನು ಸಿದ್ಧಪಡಿಸಿ ಕೊಡಿ’ ಎಂದು ಇಲಾಖೆಯು ಬಕ್ಸರ್‌ ಜೈಲಿಗೆ ಕೋರಿತ್ತು.

ಬಕ್ಸರ್‌ ಜೈಲು ನೇಣುಹಗ್ಗ ತಯಾರಿಕೆಯಲ್ಲಿ ಪರಿಣತಿ ಪಡೆದಿದ್ದು, ಇದಕ್ಕೆ ದೊಡ್ಡ ಇತಿಹಾಸವೇ ಇದೆ. ಸಂಸತ್‌ ದಾಳಿಕೋರ ಅಫ್ಜಲ್‌ ಗುರುವನ್ನು ನೇಣಿಗೇರಿಸಲು ಇಲ್ಲಿಂದ ತಯಾರಿಸಿದ ಹಗ್ಗವನ್ನೇ ಬಳಸಲಾಗಿತ್ತು.

ನಿರ್ಭಯಾ ಹತ್ಯಾಚಾರಿಗಳಿಗೆ ಡೆತ್ ವಾರೆಂಟ್: ರಾಕ್ಷಸರ ಸಂಹಾರಕ್ಕೆ ದಿನಾಂಕ ಫಿಕ್ಸ್!

ಹಗ್ಗ ತಯಾರಿ ಹೇಗೆ?

- 1 ಹಗ್ಗವನ್ನು ತಯಾರಿಸಲು 3 ದಿನ ಬೇಕು. ಹಗ್ಗ ತಯಾರಿಕೆಯಲ್ಲಿ ಯಂತ್ರಗಳ ಬಳಕೆ ಕಮ್ಮಿ. ಮಾನವ ಬಳಕೆಯೇ ಹೆಚ್ಚು.

- ಒಂದು ಹಗ್ಗ ತಯಾರಿಸಲು 6 ಮಂದಿಯನ್ನು ಬಳಸಲಾಗುತ್ತದೆ.

- ಸಣಬು ಮತ್ತು ಕಬ್ಬಿಣದ ಅಂಶಗಳನ್ನು ನೇಣುಹಗ್ಗ ತಯಾರಿಸಲು ವಿನಿಯೋಗಿಸಲಾಗುತ್ತದೆ

- ನೇಣು ಹಾಕಿದಾಗ ವ್ಯಕ್ತಿಯ ಕುತ್ತಿಗೆಗೆ ಹಗ್ಗವು ಚೆನ್ನಾಗಿ ಬಿಗಿದು ಗಂಟು ಬಿಚ್ಚದಿರಲಿ ಎಂಬ ಕಾರಣಕ್ಕೆ ಅದರಲ್ಲಿ ಕಬ್ಬಿಣ ಮಿಶ್ರಣ ಮಾಡಲಾಗುತ್ತದೆ.

- ಹಗ್ಗವನ್ನು ತಯಾರಿಸಿದ ಕೂಡಲೇ ಬಳಸಬೇಕು. ಬಹುಕಾಲ ಹಾಗೆಯೇ ಇಟ್ಟರೆ ಹಾಳಾಗಿ ಬಿಡುತ್ತವೆ

- ಒಂದು ನೇಣು ಹಗ್ಗದ ಬೆಲೆ ಸುಮಾರು 2000 ರು.

ತಿಹಾರ್‌ ಜೈಲಲ್ಲಿ 4 ನೇಣುಗಂಬ ಸಿದ್ಧ: ನಿರ್ಭಯಾ ರೇಪಿಸ್ಟ್‌ಗೆ ಒಮ್ಮೆಗೇ ಗಲ್ಲು?

ಗಲ್ಲು ಶಿಕ್ಷೆ ಮುನ್ನ ಏನೇನಾಗುತ್ತೆ..? 

- ನ್ಯಾಯಾಲಯ ಹೊರಡಿಸಿರುವ ಡೆತ್ ವಾರಂಟ್ ಕಾರಾಗೃಹಕ್ಕೆ ರವಾನೆಯಾಗಬೇಕು

-  ಅಪರಾಧಿಗಳು ಯಾವುದೇ ಕೋರ್ಟ್‌ನಿಂದ ತಡೆ ತರದಿದ್ದರೆ ಜ.೨೨ರಂದು ಗಲ್ಲು ಶಿಕ್ಷೆ ನಿಶ್ಚಿತ

- ನೇಣುಗಂಬಕ್ಕೇರಿಸುವ ದಿನ ಅಪರಾಧಿಗಳನ್ನು ನಸುಕಿನ ಜಾವ ನಿದ್ರೆಯಿಂದ ಎಬ್ಬಿಸಲಾಗುತ್ತದೆ

-  ದೋಷಿಗಳ ಆಸೆಯಂತೆ ಬಿಸಿ ನೀರು ಅಥವಾ ತಣ್ಣೀರಿನಲ್ಲಿಸ್ನಾನ ಮಾಡಲು ಅವಕಾಶವಿರುತ್ತದೆ

- ಅಪರಾಧಿಗಳ ಅಚ್ಚುಮೆಚ್ಚಿನ ಆಹಾರಗಳನ್ನು ಪೂರೈಸಲಾಗುತ್ತದೆ

- ಜೈಲಿನ ಆವರಣದಲ್ಲಿ ಸುತ್ತಾಡಲು ಬಿಡಲಾಗುತ್ತದೆ. ತನ್ಮೂಲಕ ಜೀವನದ ಸುಮಧುರ ನೆನಪನ್ನು ಸ್ಮರಿಸಲು ಅನುವು ಮಾಡಿಕೊಡಲಾಗುತ್ತದೆ

- ಆತ್ಮಶಾಂತಿಗಾಗಿ ಅಭಿರುಚಿಗೆ ತಕ್ಕುದಾದ ಧಾರ್ಮಿಕ ಗ್ರಂಥಗಳು ಅಥವಾ ಇಷ್ಟದ ದೇವರ ಪ್ರಾರ್ಥನೆಗೆ ಅವಕಾಶ ನೀಡಲಾಗುತ್ತದೆ

- ಅಪರಾಧಿಗಳ ಆರೋಗ್ಯ ಪರಿಸ್ಥಿತಿ ಕುರಿತು ವೈದ್ಯರು ಪರಿಶೀಲಿಸುತ್ತಾರೆ. ಆರೋಗ್ಯ ಸರಿ ಇದ್ದರೆ ನೇಣಿಗೇರಿಸುವ ಪ್ರಕ್ರಿಯೆ ಆರಂಭವಾಗುತ್ತದೆ

- ನೇಣುಗಂಬಕ್ಕೆ ಕರೆದೊಯ್ಯುವ ಮುನ್ನ ಮುಖಕ್ಕೆ ಬಟ್ಟೆ, ನೇಣುಗಂಬದ ಬಳಿ ಕಾಲಿಗೆ ಹಗ್ಗ ಕಟ್ಟಲಾಗುತ್ತದೆ

- ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಅಪರಾಧಿಯನ್ನು ಹೆಸರಿನಿಂದ ಗುರುತಿಸುತ್ತಾರೆ. ಗಲ್ಲಿಗೇರಿಸಲು ಹ್ಯಾಂಗ್‌ಮನ್‌ಗೆ ಸೂಚಿಸುತ್ತಾರೆ

- ಸಾವನ್ನು ವೈದ್ಯರು ಖಚಿತಪಡಿಸಿಕೊಳ್ಳುತ್ತಾರೆ. ಗಲ್ಲು ಶಿಕ್ಷೆ ಪ್ರಕ್ರಿಯೆ ಪೂರ್ಣಗೊಂಡು, ಮೃತದೇಹ ರವಾನೆಯಾಗುವವರೆಗೆ ಇತರೆ ಕೈದಿಗಳನ್ನು ಸೆಲ್‌ನಿಂದ ಹೊರಬಿಡುವುದಿಲ್ಲ

- ಅಪರಾಧಿಗಳನ್ನು ನೇಣಿಗೇರಿಸುವ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಅಪರಾಧಿಗಳ ಕುಟುಂಬಸ್ಥರಿಂದ ಸಮಸ್ಯೆಯಾಗಬಹುದೆಂದು ಗೌಪ್ಯತೆ ಕಾಪಾಡಲಾಗುತ್ತದೆ

ಇತ್ತೀಚಿಗೆ ಗಲ್ಲುಶಿಕ್ಷೆಗೊಳಗಾದವರು..! 

ಧನಂಜಯ್: 2004, ಆ.14: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು, ಹತ್ಯೆ ಮಾಡಿದ್ದ ಧನಂಜಯ್ ಚಟರ್ಜಿ ಎಂಬುವನನ್ನು ಪಶ್ಚಿಮ ಬಂಗಾಳದ ಅಲಿಪೊರ್ ಕೇಂದ್ರೀಯ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.

ಕಸಬ್: 2012, ನ.21: 2008 ರ ಮುಂಬೈ ದಾಳಿಕೋರ ಹಾಗೂ ಪಾಕಿಸ್ತಾನದ ಉಗ್ರ ಅಜ್ಮಲ್ ಅಮಿರ್ ಕಸಬ್‌ನನ್ನು ಪುಣೆಯ ಯರವಾಡ ಜೈಲಿನಲ್ಲಿ ನೇಣಿಗಂಬಕೇರಿಸಲಾಗಿತ್ತು.

ಅಫ್ಜಲ್: 2013, ನ.9: 2001 ರಲ್ಲಿ ಸಂಸತ್ತಿನ ಮೇಲೆ ದಾಳಿಗೈದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕ ಮಾಡಿದ್ದ ಉಗ್ರ ಮೊಹಮ್ಮದ್ ಅಫ್ಜಲ್ ಗುರುಗೆ ದೆಹಲಿಯ ತಿಹಾರ್ ಜೈಲಿನಲ್ಲಿ ನೇಣಿನ ಕುಣಿಕೆ ಬಿಗಿಯಲಾಗಿತ್ತು.

ಯಾಕೂಬ್: 2015, ಜು.30: 1993 ರ ಸರಣಿ ಬಾಂಬ್ ಸ್ಫೋಟ ನಡೆಸಿದ್ದ ಉಗ್ರ ಯಾಕೂಬ್ ಮೆಮನ್ ಗೆ ಮಹಾರಾಷ್ಟ್ರದ ನಾಗಪುರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. 

 

 

click me!