
ದೆಹಲಿ ಸಚಿವ ಹಾಗೂ ಆಪ್ ನಾಯಕ ಸತ್ಯೇಂದ್ರ ಜೈನ್ ಹಲವು ತಿಂಗಳುಗಳಿಂದ ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿನಲ್ಲಿದ್ದಾರೆ. ಇನ್ನು, ಜೈಲಿನಲ್ಲಿ ನನಗೆ ಸರಿಯಾದ ಊಟ ಕೊಡುತ್ತಿಲ್ಲ. ಇದರಿಂದ ನಾನು 28 ಕೆಜಿ ತೂಕ ಕಳೆದುಕೊಂಡಿದ್ದೇನೆ ಎಂದು ಆಪ್ ಸಚಿವ ಸತ್ಯೇಂದ್ರ ಜೈನ್ ನಿನ್ನೆಯಷ್ಟೇ ದೆಹಲಿಯ ಕೋರ್ಟ್‌ವೊಂದಕ್ಕೆ ಹೇಳಿಕೊಂಡಿದ್ದರು. ಈ ದೂರು ನೀಡಿದ ಮರು ದಿನವೇ ತಿಹಾರ್ ಜೈಲಿನ ಮತ್ತಷ್ಟು ಸಿಸಿಟಿವಿ ದೃಶ್ಯಾವಳಿಗಳು ಬಿಡುಗಡೆಯಾಗಿದೆ. ಈ ದೃಶ್ಯಾವಳಿಗಳಲ್ಲಿ, ನಾವು ಸತ್ಯೇಂದ್ರ ಜೈನ್ ಅವರು ಹೊರಗಿನಿಂದ ಆಹಾರ ತರಿಸಿ ತಿನ್ನುವುದನ್ನು ನೋಡಬಹುದು.
ಇತ್ತೀಚೆಗಷ್ಟೇ ಸತ್ಯೇಂದ್ರ ಜೈನ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೈರಲ್ ವಿಡಿಯೋಗಳು ಬಿಡುಗಡೆಯಾಗಿದ್ದವು. ಈಗ ತಿಹಾರ್ ಜೈಲಿನಲ್ಲಿ ಅವರು ಸಲಾಡ್, ಹಣ್ಣು ಹಾಗೂ ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಆಹಾರ ತಿನ್ನುತ್ತಿರುವುದನ್ನು ಸಹ ನೋಡಬಹುದಾಗಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ 3 ದಿನಗಳ ಕಾಲ ಕ್ಯಾಪ್ಚರ್ ಆಗಿರುವ ಸಿಸಿ ಕ್ಯಾಮೆರಾ ಫೂಟೇಜ್ ಈಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋ ನೋಡಿದರೆ ಸತ್ಯೇಂದ್ರ ಜೈನ್ ಕೋರ್ಟ್‌ನಲ್ಲಿ ಮಾಡಿರುವ ಆರೋಪಗಳು ಸುಳ್ಳು ಎಂದು ತೋರಿಸುತ್ತದೆ.
ಇದನ್ನು ಓದಿ: ಸಚಿವ ಜೈನ್‌ಗೆ ಜೈಲಲ್ಲಿ ಮಸಾಜ್ ಮಾಡಿದ್ದು ಫಿಸಿಯೋಥೆರಪಿಸ್ಟ್ ಅಲ್ಲ ರೇಪಿಸ್ಟ್
ಜೈಲಿನಲ್ಲಿ ಸತ್ಯೇಂದ್ರ ಜೈನ್ ಭರ್ಜರಿ ಔತಣಕೂಟ ಮಾಡುತ್ತಿರುವ ದೃಶ್ಯಾವಳಿಗಳನ್ನು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಬಿಡುಗಡೆ ಮಾಡಿದ್ದು, ಇದಕ್ಕೆ ಹಲವು ನೆಟ್ಟಿಗರು ಸಹ ಆಪ್ ಸಚಿವರಿಗೆ ಹಾಗೂ ಎಎಪಿಯನ್ನು ಕಾಲೆಳೆದಿದ್ದಾರೆ.
ಅಲ್ಲದೆ, ತಿಹಾರ್ ಜೈಲು ಮೂಲಗಳು ಸಹ ಸಚಿವರಿಗೆ ಸರಿಯಾದ ಆಹಾರ ನೀಡುತ್ತಿಲ್ಲ ಎಂಬುದು ಸುಳ್ಳು ಎಂದು ಹೇಳಿದ್ದಾರೆ. ಅಲ್ಲದೆ, ಸಚಿವರು ಹೇಳಿದಂತೆ, ಅವರು 28 ಕೆಜಿ ತೂಕ ಕಳೆದುಕೊಂಡಿಲ್ಲ.. ಬದಲಾಗಿ 8 ಕೆಜಿ ತೂಕ ಹೆಚ್ಚಾಗಿದೆ ಎಂದು ತಿಹಾರ್ ಜೈಲು ಮೂಲಗಳು ಹೇಳಿವೆ. ಇನ್ನು, ದೆಹಲಿ ಪಾಲಿಕೆ ಚುನಾವಣೆಯ ಸಮಯದಲ್ಲಿ ಆಪ್ ಸಚಿವ ಸತ್ಯೇಂದ್ರ ಜೈನ್‌ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವುದು ಹಾಗೂ ಹೊರಗಿನ ಆಹಾರ ತಿನ್ನುತ್ತಿರುವುದು ದೆಹಲಿಯ ಆಡಳಿತಾರೂಢ ಎಎಪಿ ಹಾಗೂ ಬಿಜೆಪಿ ನಡುವೆ ರಾಜಕೀಯ ಆರೋಪ - ಪ್ರತ್ಯಾರೋಪಗಳಿಗೂ ಕಾರಣವಾಗಿದೆ.
ಸತ್ಯೇಂದ್ರ ಜೈನ್ ಜೈಲಿನಲ್ಲಿ ಫಿಸಿಯೋಥೆರಪಿ ಪಡೆದುಕೊಳ್ಳುತ್ತಿದ್ದಾರೆಯೇ ಹೊರತು ಮಸಾಜ್ ಮಾಡಿಸಿಕೊಳ್ಳುತ್ತಿಲ್ಲ ಎಂಬ ಎಎಪಿಯ ಪ್ರತಿಕ್ರಿಯೆಯನ್ನೂ ಜೈಲು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅವರಿಗೆ ಮಸಾಜ್ ಮಾಡುತ್ತಿರುವುದು ತನ್ನ ಮಗಳನ್ನೇ ಅತ್ಯಾಚಾರ ಮಾಡಿರುವ ಆರೋಪ ಹೊತ್ತಿರುವವರು ಎಂದು ತಿಳಿಸಿದೆ.
ಇದನ್ನೂ ಓದಿ: ದೆಹಲಿಯ ತಿಹಾರ್ ಜೈಲಿನಲ್ಲಿ ಆಪ್ ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್: ವಿಡಿಯೋ ವೈರಲ್..!
ದೆಹಲಿ ಕೋರ್ಟ್‌ವೊಂದಕ್ಕೆ ದೂರು ನೀಡಿದ ಆಪ್ ಸಚಿವ ಸತ್ಯೇಂದ್ರ ಜೈನ್, ತನಗೆ ಜೈಲಿನಲ್ಲಿ ಉಪವಾಸ ಹಾಕಲಾಗಿದೆ. ಧಾರ್ಮಿಕ ಉಪವಾಸದ ಸಮಯದಲ್ಲಂತೂ ಆಹಾರವನ್ನೇ ನೀಡಿಲ್ಲವೆಂಬಂತೆ ಹೇಳಿಕೊಂಡಿದ್ದಾರೆ. ಅವರು ಈ ದೂರು ನೀಡಿದ ಒಂದೇ ದಿನದ ಬಳಿಕ ಈ ಸಿಸಿಟಿವಿ ದೃಶ್ಯಾವಳಿಗಳು ಬಿಡುಗಡೆಯಾಗಿದೆ. ಮೇ 31 ರಂದು ನನ್ನ ಬಂಧನದ ಬಳಿಕ ನನಗೆ ಸೂಕ್ತ ಆಹಾರ ಹಾಗೂ ಔಷಧಿಗಳನ್ನು ನೀಡುತ್ತಿಲ್ಲ ಎಂದು ಸತ್ಯೆಂದ್ರ ಜೈನ್ ಅರ್ಜಿಯೊಂದರಲ್ಲಿ ಹೇಳಿದ್ದರು. ಅಲ್ಲದೆ, ಕಳೆದ 12 ದಿನಗಳಿಂದ ಜೈಲು ಆಡಳಿತ ನನ್ನ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಮೂಲಭೂತ ಆಹಾರವನ್ನು ನೀಡುವುದನ್ನು ಸಹ ನಿಲ್ಲಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಬೇಯಿಸಿದ ಆಹಾರ, ಕಾಳುಗಳು, ಧಾನ್ಯ ಮತ್ತು ಹಾಲಿನ ಉತ್ಪನ್ನವನ್ನು ಅವರು ಧಾರ್ಮಿಕ ಉಪವಾಸದ ವೇಳೆ ಸೇವನೆ ಮಾಡಲ್ಲ. ಅವರು ಜೈನ ಧರ್ಮದ ಕಟ್ಟಾ ಅನುಯಾಯಿ ಎಂದೂ ಸತ್ಯೇಂದ್ರ ಜೈನ್ ಅವರ ಪರ ವಕೀಲ ಹೇಳಿದ್ದರು. ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದಡಿ ಬಂಧಿಸಲಾಗಿದೆ ಹಾಗೂ ಭ್ರಷ್ಟಾಚಾರದ ಆರೋಪವನ್ನೂ ಮಾಡಲಾಗಿದೆ. ಆಪ್ ಸಚಿವರಿಗೆ ಕಳೆದ ವಾರ ಸಹ ಜಾಮೀನನ್ನು ನಿರಾಕರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ