ಲಖ್‌ಬೀರ್ ಸಿಂಗ್ ರೋಡೆ: ಪಾಕಿಸ್ತಾನದಲ್ಲಿ ಸಾವಿಗೀಡಾದ ಖಲಿಸ್ತಾನಿ ಉಗ್ರ ನಾಯಕ, ಭಿಂದ್ರನ್‌ವಾಲೆ ಸೋದರಳಿಯ!

Published : Dec 06, 2023, 03:18 PM IST
ಲಖ್‌ಬೀರ್ ಸಿಂಗ್ ರೋಡೆ: ಪಾಕಿಸ್ತಾನದಲ್ಲಿ ಸಾವಿಗೀಡಾದ ಖಲಿಸ್ತಾನಿ ಉಗ್ರ ನಾಯಕ, ಭಿಂದ್ರನ್‌ವಾಲೆ ಸೋದರಳಿಯ!

ಸಾರಾಂಶ

ಭಾರತ ಸರ್ಕಾರದ ಅನ್‌ಲಾಫುಲ್ ಆ್ಯಕ್ಟಿವಿಟೀಸ್ ಪ್ರಿವೆನ್ಷನ್ ಆ್ಯಕ್ಟ್ (ಯುಎಪಿಎ), 1967ರ ಪ್ರಕಾರ, ಲಖ್‌ಬೀರ್ ಸಿಂಗ್ ರೋಡೆ ಓರ್ವ ಉಗ್ರಗಾಮಿಯಾಗಿದ್ದ.  

ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಖಲಿಸ್ತಾನಿ ಪ್ರತ್ಯೇಕತಾವಾದಿ ಚಳವಳಿಯ ಪ್ರಮುಖ ನಾಯಕ, ಲಖ್‌ಬೀರ್ ಸಿಂಗ್ ರೋಡೆ ಹೃದಯಾಘಾತದಿಂದ ಪಾಕಿಸ್ತಾನದಲ್ಲಿ ಸಾವಿಗೀಡಾಗಿದ್ದಾನೆ. ಆತ 1985ರಲ್ಲಿ ಏರ್ ಇಂಡಿಯಾ ವಿಮಾನದ ಬಾಂಬ್ ಸ್ಫೋಟದ ರೂವಾರಿಯಾಗಿದ್ದ ಖಲಿಸ್ತಾನಿ ಉಗ್ರಗಾಮಿ ಎಂಬ ಆರೋಪವಿತ್ತು. ಏರ್ ಇಂಡಿಯಾ ಕನಿಷ್ಕಾ ಬಾಂಬ್ ಸ್ಫೋಟ ಜೂನ್ 23, 2023ರಂದು ನಡೆದಿತ್ತು. ಅಂದು ಫ್ಲೈಟ್ 182 ಸಂಖ್ಯೆ ಹೊಂದಿದ್ದ ಬೋಯಿಂಗ್ 747 ವಿಮಾನ ಕೆನಡಿಯನ್ ಸಿಖ್ ಪ್ರತ್ಯೇಕತಾವಾದಿಗಳು ಮಾರ್ಗ ಮಧ್ಯದಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮವಾಗಿ ಛಿದ್ರಗೊಂಡಿತ್ತು. ಕೆನಡಾದ ಮಾಂಟ್ರಿಯಲ್ ನಿಂದ ಹೊರಟಿದ್ದ ಈ ವಿಮಾನ, ಟೊರಾಂಟೋದಲ್ಲಿ ಒಂದು ನಿಲುಗಡೆಯ ಬಳಿಕ ದೆಹಲಿಗೆ ತೆರಳುತ್ತಿತ್ತು. ಈ ಭೀಕರ ದಾಳಿಯ ಪರಿಣಾಮವಾಗಿ ವಿಮಾನದಲ್ಲಿದ್ದ ಎಲ್ಲ 329 ಪ್ರಯಾಣಿಕರು ಸಾವಿಗೀಡಾಗಿದ್ದರು. ಈ ದುರ್ಘಟನೆಯನ್ನು ಇತಿಹಾಸದಲ್ಲಿ ಅತ್ಯಂತ ಘೋರ ವಿಮಾನ ಸ್ಫೋಟಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಇದಾದ ಬಳಿಕ ನಡೆಸಿದ ವಿಚಾರಣೆಯಲ್ಲಿ, ಈ ಬಾಂಬ್ ದಾಳಿಯ ಜವಾಬ್ದಾರಿ ಹೊಂದಿದ್ದ ವ್ಯಕ್ತಿಗಳು ಖಲಿಸ್ತಾನ್ ಎಂಬ ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ನಡೆಯುತ್ತಿದ್ದ ಪ್ರತ್ಯೇಕತಾವಾದಿ ಹೋರಾಟದೊಡನೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂತು. ಈ ಘಟನೆ ಸಿಖ್ ಉಗ್ರವಾದದೆಡೆಗೆ ಮತ್ತು ಅದು ಭಾರತ ಮತ್ತು ಕೆನಡಾಗಳಲ್ಲಿ ಉಂಟುಮಾಡುತ್ತಿದ್ದ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳ ಮೇಲೆ ಜಾಗತಿಕ ಗಮನ ಸೆಳೆದಿತ್ತು.

ನಿರ್ಬಂಧಿತ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಸಂಘಟನೆಯನ್ನು ಮುನ್ನಡೆಸುತ್ತಿದ್ದ ಲಖ್‌ಬೀರ್ ಸಿಂಗ್ ರೋಡೆ ಪಾಕಿಸ್ತಾನದ ಲಾಹೋರ್‌ನಲ್ಲಿ ನೆಲೆಸಿ, ಪ್ರತ್ಯೇಕತಾವದಿ ಸಂಘಟನೆಯ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಎನ್ನಲಾಗಿದೆ. 72 ವರ್ಷ ವಯಸ್ಸಿನ ರೋಡೆ ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‌ವೈಎಫ್) ಹಾಗೂ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಎಂಬ ಎರಡು ನಿಷೇಧಿತ ಸಂಘಟನೆಗಳ ಮುಖ್ಯಸ್ಥನಾಗಿ, ಪಾಕಿಸ್ತಾನದಿಂದಲೇ ಚಟುವಟಿಕೆಗಳನ್ನು ನಡೆಸುತ್ತಿದ್ದ. ಈ ಸಂಘಟನೆಗಳು ಪಶ್ಚಿಮ ಯುರೋಪ್‌ನ ಹಲವು ರಾಷ್ಟ್ರಗಳು ಮತ್ತು ಕೆನಡಾದಲ್ಲಿ ತಮ್ಮ ಶಾಖೆಗಳನ್ನು ಹೊಂದಿವೆ.

ಲಖ್‌ಬೀರ್ ಸಿಂಗ್ ರೋಡೆ ಖಲಿಸ್ತಾನಿ ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಸೋದರಳಿಯನಾಗಿದ್ದ. ಭಿಂದ್ರನ್‌ವಾಲೆ ಖಲಿಸ್ತಾನಿ ಚಳುವಳಿಯಲ್ಲಿನ ತನ್ನ ಪಾತ್ರಕ್ಕಾಗಿ ತಕ್ಕ ಶಿಕ್ಷೆ ಎದುರಿಸಿದ್ದ. ಆತ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಅಮೃತಸರದ ಸ್ವರ್ಣ ಮಂದಿರದಲ್ಲಿ ನಡೆಸಿದ್ದ ಆಪರೇಶನ್ ಬ್ಲೂ ಸ್ಟಾರ್ ಎಂಬ ಸೇನಾ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದ. ಭಾರತ ಸರ್ಕಾರದ ಅನ್‌ಲಾಫುಲ್ ಆ್ಯಕ್ಟಿವಿಟೀಸ್ ಪ್ರಿವೆನ್ಷನ್ ಆ್ಯಕ್ಟ್ (ಯುಎಪಿಎ), 1967ರ ಪ್ರಕಾರ, ಲಖ್‌ಬೀರ್ ಸಿಂಗ್ ರೋಡೆ ಓರ್ವ ಉಗ್ರಗಾಮಿಯಾಗಿದ್ದ.

1992ರಲ್ಲಿ ಸೆರೆಯಾಗಿದ್ದ, ತಲ್‌ವಿಂದರ್ ಸಿಂಗ್ ಪಾರ್ಮರ್ ಎಂಬ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮುಖ್ಯಸ್ಥನ ಪ್ರಕಾರ, ಆತನನ್ನು ಇಂಟರ್ನ್ಯಾಷನಲ್ ಸಿಖ್ ಯೂತ್ ಫೌಂಡೇಶನ್ ಸದಸ್ಯ ಎಂದು ಹೇಳಿಕೊಂಡಿದ್ದ ಲಖ್‌ಬೀರ್ ಸಿಂಗ್ ಎಂಬ ವ್ಯಕ್ತಿ ಸಂಪರ್ಕಿಸಿದ್ದ. ಲಖ್‌ಬೀರ್ ಸಿಂಗ್ ಸಿಖ್ ಸಮುದಾಯದ ಆಕ್ರೋಶವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಹಿಂಸಾತ್ಮಕ ಚಟುವಟಿಕಗೆಳನ್ನು ನಡೆಸಲು ಬೆಂಬಲ ಕೋರಿದ್ದ. ತನ್ನ ತಪ್ಪೊಪ್ಪಿಗೆಯ ವೇಳೆ ತಲ್‌ವಿಂದರ್ ಸಿಂಗ್ ಪಾರ್ಮರ್ ಏರ್ ಇಂಡಿಯಾ 182ರ ಬಾಂಬ್ ಸ್ಫೋಟದ ಹಿಂದೆ ಲಖ್‌ಬೀರ್ ಸಿಂಗ್ ಕೈವಾಡವಿತ್ತು ಎಂದಿದ್ದರೂ, ಅದನ್ನು ಅಧಿಕೃತವಾಗಿ ಖಚಿತಪಡಿಸಲಾಗಿಲ್ಲ, ಅಲ್ಲಗಳೆದೂ ಇಲ್ಲ.

ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಬಿಂದ್ರನ್‌ವಾಲೆ ಸಂಬಂಧಿ ಲಕ್ಬೀರ್ ಸಿಂಗ್ ಪಾಕಿಸ್ತಾನದಲ್ಲಿ ಮೃತ!

ಭಾರತ ಸರ್ಕಾರದ ದಾಖಲೆಗಳ ಪ್ರಕಾರ, ಲಖ್‌ಬೀರ್ ಸಿಂಗ್ ಗಡಿಯಾಚೆಯಿಂದ ಪಂಜಾಬಿಗೆ ಆಯುಧಗಳು ಮತ್ತು ಸ್ಫೋಟಕಗಳನ್ನು ಸಾಗಾಟ ನಡೆಸುವುದರ ಹಿಂದಿದ್ದ. ಇದರ ಹಿಂದೆ, ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ವಿವಿಐಪಿಗಳು ಸೇರಿದಂತೆ, ಮುಖ್ಯ ವ್ಯಕ್ತಿಗಳನ್ನು ಕೊಲ್ಲುವ ಉದ್ದೇಶವಿತ್ತು. ಲಖ್‌ಬೀರ್ ಸಿಂಗ್ ಪುತ್ರ, ಪ್ರಸ್ತುತ ಕೆನಡಾದಲ್ಲಿ ವಾಸಿಸುತ್ತಿರುವ ಭಗ್ಗು ಬ್ರಾರ್ ಸಹ ಪಂಜಾಬಿನಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪಗಳಿವೆ. ಈ ಹಿಂದೆ, ಆತ ತನ್ನ ತಂದೆಗೆ ಆರ್ಥಿಕ ಮತ್ತು ಆಯುಧಗಳ ಸಹಾಯ ಒದಗಿಸಲು ನಿಯಮಿತವಾಗಿ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ಅದರೊಡನೆ, ಆತ ಕೆನಡಾದಲ್ಲಿ ಭಾರತದ ಹಿತಾಸಕ್ತಿಯ ವಿರುದ್ಧ ಬೆಂಬಲ ನೀಡುತ್ತಿರುವ ಆರೋಪ ಎದುರಿಸುತ್ತಿದ್ದಾನೆ. ಅದರೊಡನೆ, ಆತ ಭಾರತ - ನೇಪಾಳ ಗಡಿಯ ಬಳಿ ಗೊಂದಲ ಉಂಡುಮಾಡುತ್ತಿದ್ದ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಹಿಂದಿನ ರೂವಾರಿಯೂ ಆಗಿದ್ದ ಎನ್ನಲಾಗಿದೆ.

ಮೈಸೂರು ದಸರಾ: ಟಾಂಗಾ ಸವಾರಿ ಮಾಡಿ ದೀಪಾಲಂಕಾರ ವೀಕ್ಷಿಸಿದ ಸಚಿವ ಎಸ್‌ಟಿಎಸ್‌..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ
ಪ್ರಿಯಾಂಕಾ ಗಾಂಧಿ ಪ್ರತಿದಿನ 'ನೀಲಿ ಅರಿಶಿನ' ಸೇವಿಸುತ್ತಾರೆ, ಇಲ್ಲಿದೆ ಇದರ ಅದ್ಭುತ ಪ್ರಯೋಜನಗಳ ಲಿಸ್ಟ್!