
ನವದೆಹಲಿ (ಡಿ.6): ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಿಜೆಪಿಯ 10 ಮಂದಿ ಸಂಸದರು ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬುಧವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಸಭೆಯ ಬಳಿಕ ಈ ತೀರ್ಮಾನ ಮಾಡಿದ್ದಾರೆ. ಸಂಸದರಾದ ನರೇಂದ್ರ ಸಿಂಗ್ ತೋಮರ್, ಪ್ರಲ್ಹಾದ್ ಸಿಂಗ್ ಪಟೇಲ್, ರಾಕೇಶ್ ಸಿಂಗ್, ಉದಯ್ ಪ್ರತಾಪ್ ಹಾಗೂ ರಿತಿ ಪಾಠಕ್ ಮಧ್ಯಪ್ರದೇಶ ಚುನಾವಣೆಯಲ್ಲಿ ಗೆಲುವು ಕಂಡಿದ್ದರೆ, ಅರುಣ್ ಸಾವೋ ಹಾಗೂ ಗೋಮತಿ ಸಾಯಿ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಗೆಲುವು ಸಾಧಿಸಿದ್ದರು. ಇನ್ನು ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ದಿಯಾ ಕುಮಾರಿ ಹಾಗೂ ಕಿರೋಡಿ ಲಾಲ್ ಮೀನಾ ರಾಜಸ್ಥಾನದ ಚುನಾವಣೆಯಲ್ಲಿ ಗೆಲುವು ಕಾಣುವ ಮೂಲಕ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ತೆಲಂಗಾಣದಲ್ಲಿ ಎಂಟು ಸ್ಥಾನಗಳನ್ನು ಗೆದ್ದಿದೆ. ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 21 ಸಂಸದರಿಗೆ ಟಿಕೆಟ್ ನೀಡಿತ್ತು. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ ಏಳು ಸಂಸದರು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಅದೇ ಸಮಯದಲ್ಲಿ ಛತ್ತೀಸ್‌ಗಢದಲ್ಲಿ ನಾಲ್ವರು ಮತ್ತು ತೆಲಂಗಾಣದಲ್ಲಿ ಮೂವರಿಗೆ ವಿಧಾನಸಭೆಯಲ್ಲಿ ಟಿಕೆಟ್ ನೀಡಲಾಗಿತ್ತು. ಇದೀಗ ಬಿಜೆಪಿ ಹೈಕಮಾಂಡ್ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಸಂಸದರನ್ನು ಭೇಟಿ ಮಾಡಿ ಸಂಸತ್ ಸದಸ್ಯತ್ವ ತೊರೆಯುವಂತೆ ಸೂಚನೆ ನೀಡಿದೆ.
ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಮೂವರು ಸಂಸದರು: ರಾಜೀನಾಮೆ ನೀಡಿದವರಲ್ಲಿ ಪ್ರಹ್ಲಾದ್ ಪಟೇಲ್ ಮತ್ತು ನರೇಂದ್ರ ತೋಮರ್ ಕೇಂದ್ರ ಸಚಿವರಾಗಿದ್ದಾರೆ. ಇದೇ ವೇಳೆ ಛತ್ತೀಸ್‌ಗಢ ಸಂಸದೆ ಹಾಗೂ ಕೇಂದ್ರ ಸಚಿವೆ ರೇಣುಕಾ ಸಿಂಗ್ ಕೂಡ ರಾಜೀನಾಮೆ ನೀಡಲಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಸಂಪುಟದಲ್ಲಿ ಮೂವರು ಸಚಿವರು ಕಡಿಮೆಯಾಗಲಿದ್ದಾರೆ. ಇದಲ್ಲದೇ ರಾಜಸ್ಥಾನ ಸಂಸದ ಬಾಬಾ ಬಾಲಕನಾಥ್ ಕೂಡ ರಾಜೀನಾಮೆ ನೀಡಲಿದ್ದಾರೆ. ರಾಜೀನಾಮೆ ನೀಡಿರುವ ಸಂಸದರ ಸಂಖ್ಯೆ 12 ಎಂದೂ ಹೇಳಲಾಗುತ್ತಿದೆ.
ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಸ್ಥಾನದಲ್ಲಿ ಗೆದ್ದ ನಾಯಕರಿಗೆ ಹೈಕಮಾಂಡ್ ಸೂಚನೆ!
ಮೂರೂ ರಾಜ್ಯಕ್ಕೆ ವೀಕ್ಷಕರ ನೇಮಕ: ಅದೇ ಸಮಯದಲ್ಲಿ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಕ್ಕೂ ಶೀಘ್ರದಲ್ಲೇ ವೀಕ್ಷಕರನ್ನು ಕಳುಹಿಸಲಾಗುವುದು ಎಂದು ಬಿಜೆಪಿ ಮೂಲಗಳು ಹೇಳುತ್ತವೆ. ಇಂದು ಅಂದರೆ ಬುಧವಾರ ಸಂಜೆ ಅಥವಾ ನಾಳೆ ಬೆಳಗ್ಗೆ ವೀಕ್ಷಕರು ದೆಹಲಿಯಿಂದ ಹೊರಡಲಿದ್ದಾರೆ. ಶನಿವಾರ ಮತ್ತು ಭಾನುವಾರ ಮೂರೂ ರಾಜ್ಯಗಳಲ್ಲಿ ಶಾಸಕಾಂಗ ಪಕ್ಷದ ಸಭೆಗಳು ನಡೆಯಲಿವೆ. ಅದರಲ್ಲಿ ಮುಖ್ಯಮಂತ್ರಿಗಳ ಹೆಸರನ್ನು ಪ್ರಕಟಿಸಲಾಗುವುದು.
ಲೋಕಸಭೆಯೋ? ವಿಧಾನಸಭೆಯೋ? ಚುನಾವಣೆಯಲ್ಲಿ ಗೆದ್ದ ಬಿಜೆಪಿ ಸಂಸದರಿಗೆ ಇನ್ನು 14 ದಿನದ ಡೆಡ್‌ಲೈನ್!
ಸಿಎಂ ಆಗುವ ಪ್ರಶ್ನೆಗೆ ಪ್ರಲ್ಹಾದ್ ಪಟೇಲ್ ಮೌನ: ರಾಜೀನಾಮೆ ನೀಡಿದ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ನಾನು ಸಂಸತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಕೆಲ ಸಮಯದ ನಂತರ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಮುಖ್ಯಮಂತ್ರಿ ಆಗುವ ಪ್ರಶ್ನೆಗೆ ಮಾತ್ರ ಅವರು ಮೌನ ವಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ