ಏಕ ಚುನಾವಣೆಗೆ 13 ಲಕ್ಷ ಮತಗಟ್ಟೆ, 7 ಲಕ್ಷ ಸಿಬ್ಬಂದಿ, 27 ಲಕ್ಷ ಹೆಚ್ಚುವರಿ ಇವಿಎಂಗೆ ಬೇಕು ಇಷ್ಟು ಕೋಟಿ!

By Kannadaprabha News  |  First Published Sep 25, 2024, 11:28 AM IST

2029ರಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಬರೋಬ್ಬರಿ 8000 ಕೋಟಿ ರು. ಬೇಕಾಗುತ್ತದೆ ಎಂದು ಚುನಾವಣಾ ಆಯೋಗವು ಕೋವಿಂದ್‌ ಸಮಿತಿಗೆ ವರದಿ ನೀಡಿದೆ. ಹೊಸ ಇವಿಎಂಗಳು, ಸಿಬ್ಬಂದಿ ನಿಯೋಜನೆ ಸೇರಿದಂತೆ ಹಲವು ಖರ್ಚುಗಳನ್ನು ಈ ಮೊತ್ತ ಒಳಗೊಂಡಿದೆ.


ನವದೆಹಲಿ: ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವ ‘ಒಂದು ದೇಶ ಒಂದು ಚುನಾವಣೆ’ ನೀತಿ ಜಾರಿಗೆ ಬಂದರೆ 2029ರಲ್ಲಿ ಮೊದಲ ಬಾರಿ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಬರೋಬ್ಬರಿ 8000 ಕೋಟಿ ರು. ಬೇಕಾಗುತ್ತದೆ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.

ಒಂದು ದೇಶ ಒಂದು ಚುನಾವಣೆ ಕುರಿತು ವರದಿ ನೀಡಲು ನೇಮಕಗೊಂಡಿದ್ದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಸಮಿತಿಗೆ ಕೆಲ ತಿಂಗಳ ಹಿಂದೆ ಚುನಾವಣಾ ಆಯೋಗ ಇಂತಹದ್ದೊಂದು ವರದಿ ನೀಡಿತ್ತು. 2023ರ ಮಾರ್ಚ್‌ನಲ್ಲಿ ಕಾನೂನು ಆಯೋಗಕ್ಕೆ ಹಾಗೂ 2024ರ ಜನವರಿಯಲ್ಲಿ ಕೋವಿಂದ್‌ ಸಮಿತಿಗೆ ಚುನಾವಣಾ ಆಯೋಗ ನೀಡಿರುವ ಈ ವರದಿಯಲ್ಲಿ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಅಗತ್ಯವಿರುವ ಸರಕು, ಸಿಬ್ಬಂದಿ, ಸಂಪನ್ಮೂಲ ಹೀಗೆ ನಾನಾ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ.

Tap to resize

Latest Videos

‘2029ರಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು 7951 ಕೋಟಿ ರು. ಬೇಕಾಗುತ್ತದೆ. ಹೊಸ ಇವಿಎಂಗಳ ಖರೀದಿ, ಚುನಾವಣಾ ಸಿಬ್ಬಂದಿಯ ನಿಯೋಜನೆ, ಮತದಾರರ ಪಟ್ಟಿ ಸಿದ್ಧಪಡಿಸುವುದು ಹೀಗೆ ನಾನಾ ಖರ್ಚುಗಳಿವೆ. ಮತಗಟ್ಟೆಗಳ ಸಂಖ್ಯೆ 13.6 ಲಕ್ಷಕ್ಕೆ ಏರಿಕೆಯಾಗಬೇಕಾಗುತ್ತದೆ. 26.5 ಲಕ್ಷ ಇವಿಎಂಗಳ ಕೊರತೆಯಿದೆ. ಸದ್ಯ ನಮ್ಮ ಬಳಿ 30 ಲಕ್ಷ ಇವಿಎಂಗಳು ಮಾತ್ರ ಇವೆ. ಏಕ ಚುನಾವಣೆಯ ವ್ಯವಸ್ಥೆ ಜಾರಿಗೂ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕೂಡ ಒಂದೇ ಸಲಕ್ಕೆ ನಡೆಸುವ ವ್ಯವಸ್ಥೆ ಮಾಡಬೇಕಾಗುತ್ತದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಂದೇ ಸಲ ಚುನಾವಣೆ ನಡೆಸುವುದರಿಂದ ಪ್ರಾದೇಶಿಕ ಪಕ್ಷಗಳು ದುರ್ಬಲವಾಗುತ್ತವೆಯೇ?

ಏಕಕಾಲಕ್ಕೆ ಚುನಾವಣೆ ನಡೆಸಲು ಸುಮಾರು 7 ಲಕ್ಷ ಚುನಾವಣಾ ಸಿಬ್ಬಂದಿಯ ಅಗತ್ಯವಿದೆ. ಹೆಚ್ಚುವರಿ 800 ಉಗ್ರಾಣಗಳು ಬೇಕಾಗುತ್ತವೆ. ಸದ್ಯ ಸೆಮಿಕಂಡಕ್ಟರ್‌ಗಳ ಪೂರೈಕೆ ಸಮರ್ಪಕವಾಗಿಲ್ಲ. ಹೊಸ ಇವಿಎಂಗಳನ್ನು ತಯಾರಿಸಲು ಸೆಮಿಕಂಡಕ್ಟರ್‌ಗಳ ಅಗತ್ಯವಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗಷ್ಟೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಂದು ದೇಶ ಒಂದು ಚುನಾವಣಾ ನೀತಿಯ ಜಾರಿಗೆ ಒಪ್ಪಿಗೆ ದೊರೆತಿದೆ. ಸಂಸತ್ತಿನಲ್ಲಿ ಈ ಬಗ್ಗೆ ಮಸೂದೆಗಳು ಇನ್ನಷ್ಟೇ ಅಂಗೀಕಾರವಾಗಬೇಕಿದೆ.

ಒಂದು ದೇಶ ಒಂದು ಚುನಾವಣೆಗೆ ಮೋದಿ ಸರ್ಕಾರ ಅಸ್ತು: 2029ರಿಂದ ಏಕಕಾಲಕ್ಕೆ ಎಲೆಕ್ಷನ್‌?

click me!