ಒಂದೇ ಸಲ ಚುನಾವಣೆ ನಡೆಸುವುದರಿಂದ ಪ್ರಾದೇಶಿಕ ಪಕ್ಷಗಳು ದುರ್ಬಲವಾಗುತ್ತವೆಯೇ?
ಒಂದು ದೇಶ ಒಂದು ಚುನಾವಣೆ ಪದ್ಧತಿಯಿಂದ ಹಣಬಲವಿಲ್ಲದ ಜನಸಾಮಾನ್ಯನೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ. ಅಬ್ಬರದ ಪ್ರಚಾರ, ಮದ್ಯ-ಮಾಂಸಗಳ ಸರಬರಾಜು, ಹಣ ಮತ್ತು ಬೆಲೆಬಾಳುವ ವಸ್ತುಗಳ ಹಂಚಿಕೆ, ಬ್ಯಾನರ್ ಮತ್ತು ಪೋಸ್ಟರ್‌ಗಳ ಅಸಹ್ಯ ಪ್ರಚಾರಕ್ಕೆ ತಡೆ ಬೀಳ್ಳುತ್ತದೆ.
ದೇಶ ಸಾಂಸ್ಥಿಕ ಸುಸ್ಥಿರತೆಯತ್ತ ಮುನ್ನಡೆಯುತ್ತಿದೆ. ಸಂಸ್ಥೆಗಳು ಸಬಲವಾಗಿದ್ದರೆ ದೇಶ ಪ್ರಬಲವಾಗುತ್ತದೆ. ಸಂವಿಧಾನಾತ್ಮಕ ಅಧಿಕಾರವನ್ನು ಹೊಂದಿದ ಸಂಸ್ಥೆಗಳು ಕ್ರಮಬದ್ಧವಾದ ಕಾರ್ಯಭಾರವನ್ನು ಮಾಡುವಂತಹ ವಾತಾವರಣ ಮತ್ತು ಕಟ್ಟುಪಾಡು ಇಂದು ನಿರ್ಮಾಣವಾಗುತ್ತಿದೆ.
ಗುಣಾತ್ಮಕ ಬದಲಾವಣೆಯ ಮೂಲಕ ದೇಶದ ಪ್ರಗತಿಗೆ ಈ ಸಂಸ್ಥೆಗಳು ಅಣಿಯಾಗಿವೆ. ನಿಗದಿತ ಮತ್ತು ನಿಸ್ಪಕ್ಷಪಾತ ಚುನಾವಣೆಗಳನ್ನು ನಡೆಸುವ ಮೂಲಕ ಚುನಾವಣಾ ಆಯೋಗ ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಈಗ ಅದರ ಕಾರ್ಯಕ್ಷಮತೆಯನ್ನು ಮತ್ತಷ್ಟುಹೆಚ್ಚಿಸುವ, ಅನಪೇಕ್ಷಿತ ಒತ್ತಡವನ್ನು ಕಡಿಮೆ ಮಾಡುವ, ಚುನಾವಣೆಯ ನೆಪದಲ್ಲಿ ಇಡೀ ಸರ್ಕಾರಿ ಯಂತ್ರ ಜನರ ಕುಂದುಕೊರತೆಗಳನ್ನು ಆಲಿಸುವ, ಪರಿಹರಿಸುವ ಮೂಲಭೂತ ಕೆಲಸವನ್ನು ಬಿಟ್ಟು ತಿಂಗಳುಗಟ್ಟಲೆ ಚುನಾವಣಾ ಕೆಲಸವನ್ನು ಮಾಡುವುದನ್ನು ತಪ್ಪಿಸುವ ಹಾಗೂ ಜನಪರ ಅಭಿವೃದ್ಧಿಗೆ ಬಳಕೆಯಾಗಬೇಕಾದ ಅಪಾರ ಹಣ ಚುನಾವಣಾ ವೆಚ್ಚಕ್ಕೆ ಪೋಲಾಗುವುದನ್ನು ತಗ್ಗಿಸುವ ಮಹತ್ತರವಾದ ಆಲೋಚನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ.
ಒಮ್ಮೆಯೂ ಒಡೆಯದೆ 100 ವರ್ಷ ನೆಲೆ ನಿಂತ ಏಕೈಕ ಭಾರತೀಯ ಸಂಘಟನೆ RSS, ಕಾರಣ..?
ಅದುವೇ ಒಂದು ದೇಶ ಒಂದು ಚುನಾವಣೆ ಎಂಬ ಚಿಂತನೆ. ಚುನಾವಣೆ ಆಯೋಗ ಸಹ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕ ಚುನಾವಣೆ ನಡೆಸಲು ಸಿದ್ಧ ಎಂದು ತನ್ನ ಸಮ್ಮತಿ ಸೂಚಿಸಿದೆ. ಈ ಆಲೋಚನೆ ಕಾರ್ಯಗತವಾಗಬೇಕಾದರೆ ಚುನಾವಣಾ ನಿಯಮಗಳಿಗೆ ತಿದ್ದುಪಡಿ ತರಬೇಕಾಗಿದೆ.
ಚುನಾವಣಾ ವೆಚ್ಚ ಇಳಿಕೆ
ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಸಂಸತ್ತಿನವರೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ದೇಶದ ಒಂದಿಲ್ಲೊಂದು ಭಾಗದಲ್ಲಿ ನಿರಂತರ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ಜೀವಂತಿಕೆಯನ್ನು ಪ್ರತಿನಿಧಿಸುತ್ತವೆ. ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬಗಳು. ಆದರೆ ಅಕಾಲಿಕವಾಗಿ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ವಿರೂಪತೆಯನ್ನು ತೋರಿಸುತ್ತವೆæ. ಈ ಹಿನ್ನೆಲೆಯಲ್ಲಿ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಯನ್ನು ನಡೆಸುವ ಮೂಲಕ ಚುನಾವಣಾ ವೆಚ್ಚವನ್ನು ತಗ್ಗಿಸಬಹುದು. ಆದರೆ, ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಿಗೆ ಏಕ ಚುನಾವಣೆ ನಡೆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಅಥವಾ ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆಯುವ ಅವಕಾಶವಿದೆ.
ಇದು ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಏಕ ಚುನಾವಣೆ ನಡೆಸುವ ಸಲುವಾಗಿ ಸದ್ಯ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಪದಚ್ಯುತಗೊಳಿಸಬೇಕಾಗುತ್ತದೆ. ಹೀಗೆ ಏಕ ಚುನಾವಣೆ ನಡೆದು ಅಧಿಕಾರಕ್ಕೆ ಬರುವ ರಾಜ್ಯ ಸರ್ಕಾರ ಯಾವುದೋ ಕಾರಣಕ್ಕೆ ಬಹುಮತ ಕಳೆದುಕೊಂಡರೆ ಮತ್ತೆ ಅಕಾಲಿಕ ಚುನಾವಣೆ ಅನಿವಾರ್ಯವಾಗುತ್ತದೆ. ಇಂತಹ ಅನಿವಾರ್ಯ ಚುನಾವಣೆಗಳನ್ನು ತಪ್ಪಿಸುವುದಕ್ಕೆ ಯಾವ ಪರ್ಯಾಯಗಳಿವೆ ಎಂಬುದನ್ನು ಆಲೋಚಿಸಬೇಕಾಗಿದೆ.
ಪುನಃ ಗೆದ್ದರೆ ಮಮತಾ ಬ್ಯಾನರ್ಜಿಗೆ ರಾಜ್ಯ ಪ್ರಾಪ್ತಿ, ಸೋತರೆ ವೀರ ರಾಜಕೀಯ ಪತನ
ಹೆಚ್ಚು ಎಲೆಕ್ಷನ್ ಕಂಡ ದೇಶ
ಭಾರತದ ಚುನಾವಣಾ ಇತಿಹಾಸ ಗಮನಿಸಿದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಚುನಾವಣೆಗಳನ್ನು ಕಂಡ ದೇಶ ನಮ್ಮದು. ದೇಶದ 626 ಜಿಲ್ಲೆಗಳ 543 ಲೋಕಸಭೆ ಸ್ಥಾನಗಳಿಗೆ, 4120 ರಾಜ್ಯ ವಿಧಾನಸಭೆ ಸ್ಥಾನಗಳಿಗೆ, ರಾಜ್ಯಸಭೆಯ 250 ಸ್ಥಾನಗಳಿಗೆ ಹಾಗೂ 5 ರಾಜ್ಯಗಳ ವಿಧಾನ ಪರಿಷತ್ತಿನ ಸುಮಾರು 393 ಸ್ಥಾನಗಳಿಗೆ ನಿಗದಿತವಾಗಿ ಚುನಾವಣೆಗಳು ನಡೆಯತ್ತವೆ.
ಒಂದು ಸರ್ಕಾರ ಬಹುಮತ ಕಳೆದುಕೊಂಡು ಹೊರ ನಡೆದರೆ, ಉಳಿದ ಅವಧಿಗೆ ಬೇರೆ ಸರ್ಕಾರ ರಚನೆಯಾಗದಿದ್ದರೆ ಅನಿವಾರ್ಯವಾಗಿ ದೇಶದ ಮೇಲೆ ಅಕಾಲಿಕ ಚುನಾವಣೆಯ ಹೇರಿಕೆಯಾಗುತ್ತದೆ. ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿ ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ ಅಥವಾ ಸದನದಿಂದ ಉಚ್ಚಾಟಿಸಲ್ಪಟ್ಟರೆ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಅಧಿಕಾರ ಮತ್ತು ಪ್ರತಿಷ್ಠೆಯ ಕಾರಣಗಳಿಗಾಗಿ ಉಪ ಚುನಾವಣೆ, ಮರು ಚುನಾವಣೆಗಳು ಹೇರಲ್ಪಟ್ಟಿವೆ.
ಸಾಮಾನ್ಯನೂ ಸ್ಪರ್ಧಿಸಬಹುದು
2019ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಒಟ್ಟಾರೆ 55,000 ಕೋಟಿ ರು. ಹಣ ವೆಚ್ಚವಾಗಿದೆ! ಸರ್ಕಾರ ಈ ಚುನಾವಣೆ ನಡೆಸಲು 3426 ಕೋಟಿ ಖರ್ಚು ಮಾಡಿದೆ. ಪ್ರಜಾಪ್ರಭುತ್ವ ಇಷ್ಟೊಂದು ದುಬಾರಿಯಾಗುವುದು ದೇಶಕ್ಕೆ ದೊಡ್ಡ ಹೊರೆ. ಚುನಾವಣಾ ದುಂದು ವೆಚ್ಚ ಮತ್ತು ಕಪ್ಪು ಹಣದ ಪ್ರಾಬಲ್ಯವನ್ನು ತಪ್ಪಿಸಿ ಸರಳ ಮತ್ತು ಪ್ರಜಾತಾಂತ್ರಿಕ ರೀತಿಯಲ್ಲಿ ಚುನಾವಣೆಗಳು ನಡೆಯಬೇಕಾಗಿದೆ.
ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ವಾಂಛೂ ಮತ್ತು ತಾರ್ಕುಂಡೆ ಸಮಿತಿಗಳು ನೀಡಿದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ಅಮೆರಿಕ, ಬ್ರಿಟನ್, ಜರ್ಮನಿ, ಆಸ್ಪ್ರೇಲಿಯಾ, ಕೆನಡಾ, ಫ್ರಾನ್ಸ್‌ನಂತಹ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುತ್ತವೆ. ಇದರಿಂದ ಹಣಬಲವಿಲ್ಲದ ಜನಸಾಮಾನ್ಯನೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ. ಅಬ್ಬರದ ಪ್ರಚಾರ, ಮದ್ಯ-ಮಾಂಸಗಳ ಸರಬರಾಜು, ಹಣ ಮತ್ತು ಬೆಲೆಬಾಳುವ ವಸ್ತುಗಳ ಹಂಚಿಕೆ, ಬ್ಯಾನರ್ ಮತ್ತು ಪೋಸ್ಟರ್‌ಗಳ ಅಸಹ್ಯ ಪ್ರಚಾರಕ್ಕೆ ತಡೆ ಬೀಳ್ಳುತ್ತದೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ, ಮೇ ನಲ್ಲಿ ಒಡೆಯುತ್ತಾ ರಾಷ್ಟ್ರೀಯ ಕಾಂಗ್ರೆಸ್.?
ನೆಹರು ಮಾತು ಮಂತ್ರವಾಗಲಿ
ಮೊದಲ ಪ್ರಧಾನಿ ನೆಹರು ಅವರು ‘ಚುನಾವಣೆಗಳ ಫಲಿತಾಂಶಕ್ಕಿಂತ ನಾವು ಗೆಲ್ಲುವ ಅಥವಾ ಸೋಲುವ ರೀತಿ ಹೆಚ್ಚು ಮುಖ್ಯವಾದುದು. ತಪ್ಪು ದಾರಿಯಲ್ಲಿ ಗೆಲ್ಲುವುದಕ್ಕಿಂತ ಗೌರವದಿಂದ ಸೋಲುವುದು ಉತ್ತಮ’ ಎಂದು ಹೇಳಿದ ಮಾತು ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಮತ್ತು ಅಭ್ಯರ್ಥಿಗೂ ಚುನಾವಣಾ ಮಂತ್ರವಾಗಬೇಕು. ಜಾತಿ ಆಧಾರಿತ ಪಕ್ಷಗಳು, ಶಾಲೆಗಳು, ಹಾಸ್ಟೆಲ್‌ಗಳು, ಹೌಸಿಂಗ್ ಸೊಸೈಟಿಗಳು, ಧಾರ್ಮಿಕ ಕೇಂದ್ರಗಳು, ಸಮುದಾಯ ಭವನಗಳು, ಸ್ವಸಹಾಯ ಸಂಘಗಳು, ಮಹಿಳಾ ಮಂಡಳಿಗಳು, ಯುವಕ ಸಂಘಗಳು ಇಂದು ಮತ ಬ್ಯಾಂಕ್‌ಗಳಾಗಿ ಪರಿವರ್ತನೆಗೊಳ್ಳುತ್ತಿವೆ.
ಜಗತ್ತಿನ 135 ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತದ ಪ್ರಜಾಪ್ರಭುತ್ವ ವಿಶಿಷ್ಟವಾದುದು ಎಂದು ನಾವು ಹೇಳಿಕೊಳ್ಳುತ್ತೇವೆ. ಬಹು ಭಾಷೆ, ಜಾತಿ, ಧರ್ಮ, ವರ್ಣ, ಕುಲ-ಗೋತ್ರಗಳನ್ನು ಹೊಂದಿದಾಗ್ಯೂ ಏಕತೆ ಮತ್ತು ಅಖಂಡತೆ ಅದರ ವಿಶಿಷ್ಟಸ್ವಭಾವವಾಗಿದೆ.
‘ಇಷ್ಟೊಂದು ವಿಭಿನ್ನತೆ ಹೊಂದಿದ ಒಂದು ನಾಡು, ಒಂದು ದೇಶವಾಗಿ ಬಹುಕಾಲ ಉಳಿಯಲಾರದು’ ಎಂದು ವಿದೇಶಿ ರಾಜ್ಯಶಾಸ್ತ್ರಜ್ಞರು ಹೇಳಿದ ಊಹೆಯನ್ನು ನಾವು ಸುಳ್ಳು ಮಾಡಬೇಕಾಗಿದೆ. ನಮ್ಮ ವೈವಿದ್ಯತೆಯನ್ನೇ ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕಾಗಿದೆ. 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕೇವಲ ಶೇ.16ರಷ್ಟಿದ್ದ ನಮ್ಮ ಸಾಕ್ಷರತೆ ಪ್ರಮಾಣ ಶೇ.74ಕ್ಕೆ ಏರಿದೆ. ಆದರೆ ಪ್ರಥಮ ಚುನಾವಣೆಯಲ್ಲಿ ನಮ್ಮ ಮತದಾರರು ಹಾಗೂ ಜನಪ್ರತಿನಿಧಿಗಳು ತೋರಿಸಿದ ನಾಗರಿಕ ಪ್ರಜ್ಞೆ ಇಂದಿನ ಚುನಾವಣೆಗಳಲ್ಲಿ ಕಂಡುಬರುತ್ತಿಲ್ಲ. ನಾವು ಸಾಕ್ಷರರಾದಷ್ಟುರಾಜಕೀಯ ಅನಾಗರಿಕತೆಯನ್ನು ತೋರಿಸುತ್ತಿದ್ದೇವೆ.
ಏನೇನು ಸುಧಾರಣೆ ಆಗಬೇಕು?
ಇಂದಿನ ಚುನಾವಣೆಗಳ ದೋಷವನ್ನು ಕಡಿಮೆ ಮಾಡಲು ಮತ್ತು ಅಕಾಲಿಕವಾಗಿ ನಡೆಯುವ ಅನಪೇಕ್ಷಿತ ಚುನಾವಣೆಗಳನ್ನು ತಪ್ಪಿಸಲು ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಯನ್ನು ಜಾರಿಗೆ ತರಬೇಕು. ಏಕ ಮತ ವರ್ಗಾವಣೆ ಪದ್ಧತಿ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಎ,ಬಿ,ಸಿ ಮತ್ತು ಡಿ ಎಂದು ಪ್ರಾತಿನಿಧ್ಯ ನೀಡಿ ಆಯ್ಕೆ ಮಾಡಬೇಕು. ಇದರಿಂದ ಅಭ್ಯರ್ಥಿಯ ಸ್ಥಾನ ಖಾಲಿಯಾದರೆ 2ನೇ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ಪ್ರತಿನಿಧಿಯೆಂದು ಘೋಷಿಸಿ ಉಪ ಚುನಾವಣೆಯನ್ನು ತಪ್ಪಿಸಬಹುದು.
ನೇತ್ಯಾತ್ಮಕ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು. ಆಯ್ಕೆಯಾದ ಅಭ್ಯರ್ಥಿ ಜನರ ಆಶೋತ್ತರಗಳಿಗೆ ಸ್ಪಂದಿಸದೇ ಇದ್ದರೆ, ಭ್ರಷ್ಟನಾದರೆ, ದುರಾಡಳಿತದಲ್ಲಿ ತೊಡಗಿದರೆ ಅಂತಹ ಅಭ್ಯರ್ಥಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪದ್ಧತಿಯನ್ನು ಜಾರಿಗೆ ತರಬೇಕು. ಅಲ್ಲದೆ ಅಮೆರಿಕದಲ್ಲಿರುವಂತೆ ಲಿಸ್ಟ್ ಪದ್ಧತಿಯನ್ನು ಸಹ ಜಾರಿಗೆ ತರಬಹುದು. ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸುಧಾರಣೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಚುನಾವಣೆ ಸುಧಾರಣೆ ಅತ್ಯಂತ ಮಹತ್ವದ್ದು.
- ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ಧಾರವಾಡ