
ಮುಂಬೈ: ತಮ್ಮನ್ನು ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ ಹುದ್ದೆಯಿಂದ ಮುಕ್ತಗೊಳಿಸಿ ಪಕ್ಷದಲ್ಲಿಯೇ ಯಾವುದಾದರೂ ಉನ್ನತ ಹುದ್ದೆ ನೀಡುವಂತೆ ಎನ್‌ಸಿಪಿ ಹಿರಿಯ ನಾಯಕ ಅಜಿತ್ ಪವಾರ್ ಹೇಳಿದ್ದಾರೆ. ಪಕ್ಷದ ಮುಖ್ಯಸ್ಥರಾಗಿರುವ ಹಿರಿಯ ನಾಯಕ ಶರದ್ ಪವಾರ್ ಇತ್ತೀಚೆಗೆ ತಮ್ಮ ಪುತ್ರಿ ಸುಪ್ರಿಯಾ ಸುಳೆ ಹಾಗೂ ಪ್ರಫುಲ್ ಪಟೇಲ್‌ರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದ್ದರು. ಬಳಿಕ ಅಜಿತ್ ಈ ವಿಷಯವಾಗಿ ಪವಾರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪೂರಕ ಎಂಬಂತೆ ಅಜಿತ್ ಈ ಬೇಡಿಕೆ ಸಲ್ಲಿಸಿದ್ದಾರೆ.
ಮುಂಬೈಯಲ್ಲಿ ನಡೆದ ಪಕ್ಷದ 24ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರ ಮುಂದೆ ಈ ಬೇಡಿಕೆ ಇಟ್ಟಿರುವ ಅಜಿತ್, ಈ ಮೂಲಕ ಪಕ್ಷದಲ್ಲಿ ಉನ್ನತ ಹುದ್ದೆ ನೀಡಿಲ್ಲ ಎಂಬ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ನಾನು ಕಠಿಣವಾಗಿ ವರ್ತಿಸುವುದಿಲ್ಲ ಎಂದು ನನಗೆ ಪಕ್ಷದ ನಾಯಕರು ಹೇಳುತ್ತಾರೆ. ಹೀಗಾಗಿ ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ ಎಂದಿದ್ದೆ. ಆದರೆ ಶಾಸಕರ ಒತ್ತಾಯದ ಮೇರೆಗೆ ಈ ಸ್ಥಾನಕ್ಕೆ ಒಪ್ಪಿಕೊಂಡಿದ್ದೆ. ಈ ಕುರಿತು ನಿರ್ಧರಿಸುವುದು ಪಕ್ಷದ ನಾಯಕತ್ವಕ್ಕೆ ಬಿಟ್ಟಿದ್ದು. ಪಕ್ಷ ಸಂಘಟನೆಯಲ್ಲಿ ನನಗೆ ಯಾವುದೇ ಕರ್ತವ್ಯ ನೀಡಿ. ನಾನು ಆ ಕೆಲಸಕ್ಕೆ ನ್ಯಾಯ ಒದಗಿಸುತ್ತೇನೆ’ ಎಂದಿದ್ದಾರೆ.
ಅಜಿತ್ ಪವಾರ್ ಬದಲು ಪುತ್ರಿ ಸುಪ್ರಿಯಾಗೆ ಹುದ್ದೆ : ಸೋದರ ಸಂಬಂಧಿಗೆ ಶರದ್ ಪವಾರ್ ಶಾಕ್
ಇತ್ತೀಚೆಗಷ್ಟೇ ಪಕ್ಷದಲ್ಲಿ ಅಧಿಕಾರ ಹಸ್ತಾಂತರಕ್ಕೆ ಮುನ್ನುಡಿ ಬರೆದಿದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್, ಪಕ್ಷದ ನೂತನ ಕಾರ್ಯಾಧ್ಯಕ್ಷರನ್ನಾಗಿ ಪಕ್ಷದ ಹಿರಿಯ ನಾಯಕ ಪ್ರಫುಲ್ ಪಟೇಲ್ ಮತ್ತು ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನು ನೇಮಕ ಮಾಡಿದ್ದರು. ಇದೇ ವೇಳೆ, ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸುವ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ಸುಪ್ರಿಯಾರನ್ನು ಮುಖ್ಯಸ್ಥೆ ಎಂದು ನೇಮಿಸಿ, ಇನ್ನೂ ಕೆಲವು ಹೆಚ್ಚುವರಿ ಹೊಣೆಗಾರಿಕೆ ದಯಪಾಲಿಸಿದ್ದರು. ಈ ಮೂಲಕ ಪಕ್ಷದ ಚುಕ್ಕಾಣಿ ಹಿಡಿಯುವ ಬಹುದೊಡ್ಡ ಆಸೆ ಹೊಂದಿದ್ದ ತಮ್ಮ ಸೋದರ ಸಂಬಂಧಿ, ಪ್ರಭಾವಿ ನಾಯಕ ಅಜಿತ್ ಪವಾರ್‌ಗೆ (Ajit Pawar) ಶಾಕ್ ನೀಡಿದ್ದರು.
ಈ ದಿಢೀರ್ ಘೋಷಣೆಯಿಂದ ತೀವ್ರ ಅಸಮಾಧಾನಗೊಂಡಂತೆ ಕಂಡುಬಂದ ಅಜಿತ್ ಪವಾರ್, ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡದೇ ಹಾಗೆಯೇ ತೆರಳಿದರು. ಆದರೆ, ಬಳಿಕ ನೇಮಕದ ಕುರಿತು ಟ್ವೀಟ್ ಮಾಡಿದ ಅಜಿತ್ ಪವಾರ್ ‘ಶರದ್ ಪವಾರ್ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಎನ್‌ಸಿಪಿ ತನ್ನ ಸಂಸ್ಥಾಪನಾ ದಿನದ ಬೆಳ್ಳಿಹಬ್ಬದ ವರ್ಷದತ್ತ ಕಾಲಿಡುತ್ತಿದೆ. ಈ ಹಂತದಲ್ಲಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಮೌಲ್ಯಯುತ ಕಾಣಿಕೆ ನೀಡಲು ಸಿದ್ಧ. ಪಕ್ಷದ ಪ್ರತಿ ಕಾರ್ಯಕರ್ತ ಮತ್ತು ಪದಾಧಿಕಾರಿಗಳು, ಈ ಗುರಿಯನ್ನು ಮುಟ್ಟುವಲ್ಲಿ ಕಾರ್ಯನಿರ್ವಹಿಸುವ ನಂಬಿಕೆ ಇದೆ. ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ಮತ್ತೊಮ್ಮೆ ಶುಭಹಾರೈಕೆಗಳು’ ಎಂದು ಪ್ರತಿಕ್ರಿಯಿಸಿದ್ದರು.
ನಾಲ್ಕೇ ದಿನದಲ್ಲಿ ಶರದ್ ಪವಾರ್ ಯು-ಟರ್ನ್, ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆ ವಾಪಸ್!
ಇದಕ್ಕೂ ಮೊದಲು ಮೇ ತಿಂಗಳಲ್ಲಿ ದಿಢೀರನೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದ ಪವಾರ್ ಕಾರ್ಯಕರ್ತರಲ್ಲಿ ತಲ್ಲಣ ಮೂಡಿಸಿದ್ದರು. ಆದರೆ ಬಳಿಕ ಪಕ್ಷದ ನಾಯಕರು, ಕಾರ್ಯಕರ್ತರ ಆಗ್ರಹಕ್ಕೆ ಮಣಿದು ತಮ್ಮ ನಿರ್ಧಾರ ಹಿಂದಕ್ಕೆ ಪಡೆದಿದ್ದರು. .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ