
ಕೋಲ್ಕತಾ (ಮಾ.12): ಚುನಾವಣಾ ನಾಮಪತ್ರ ಸಲ್ಲಿಕೆಗೆ ಬುಧವಾರ ನಂದಿಗ್ರಾಮಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಗಾಯವಾದ ಘಟನೆಯು ಉದ್ದೇಶಪೂರ್ವಕ ಹಲ್ಲೆಯಲ್ಲ. ಇದೊಂದು ಅವಘಡ ಎಂಬ ಅಂಶವನ್ನೊಳಗೊಂಡ ಪ್ರಾಥಮಿಕ ವರದಿಯನ್ನು ಪೊಲೀಸರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.
ಬುಧವಾರ ಇಲ್ಲಿಗೆ ಬಂದಿದ್ದ ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದಿರುವುದು ಹಲ್ಲೆಯೇ ಅಥವಾ ಆಕಸ್ಮಿಕ ಘಟನೆಯೇ ಎಂಬುದರ ಬಗ್ಗೆ ಸ್ಥಳೀಯ ಪೊಲೀಸರು, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು, ಪ್ರತ್ಯಕ್ಷದರ್ಶಿಗಳು ಮತ್ತು ವಿಡಿಯೋ ಫುಟೇಜ್ಗಳನ್ನು ಆಧರಿಸಿ ಪೊಲೀಸರು ವರದಿಯೊಂದನ್ನು ಸಿದ್ಧಪಡಿಸಿದ್ದು, ಅದನ್ನು ಚುನಾವಣಾ ಆಯೋಗಕ್ಕೆ ರವಾನಿಸಲಾಗಿದೆ. ಈ ವರದಿಯಲ್ಲಿನ ಅಂಶಗಳು ತನಗೆ ಲಭ್ಯವಾಗಿದೆ. ಆ ಪ್ರಕಾರ ಇದು ಉದ್ದೇಶಪೂರ್ವಕ ದಾಳಿಯಲ್ಲ. ಬದಲಿಗೆ ಅವಘವಷ್ಟೇ ಎಂದು ಉಲ್ಲೇಖಿಸಲಾಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಶಾಂತಿ ಕಾಪಾಡಿ, ವ್ಹೀಲ್ ಚೇರ್‌ನಲ್ಲಿದ್ದೇ ಚುನಾವಣೆ ಎದುರಿಸ್ತೀನಿ: ಜನತೆಗೆ ಮಮತಾ ಸಂದೇಶ! ..
ಅಪಘಾತ ಎಂದು ಪರೋಕ್ಷ ಒಪ್ಪಿದ ದೀದಿ
ಕೋಲ್ಕತಾ: ನಂದಿಗ್ರಾಮದಲ್ಲಿ ನಾಲ್ಕೈದು ಮಂದಿ ತಮ್ಮನ್ನು ತಳ್ಳಾಡಿದ್ದಾರೆ. ಇದರಿಂದಾಗಿ ತಮ್ಮ ಕಾಲಿಗೆ ಗಾಯವಾಗಿದೆ ಎಂದು ಬುಧವಾರ ದೂರಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರವೇ ಉಲ್ಟಾಹೊಡೆದಿದ್ದಾರೆ. ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೀದಿ ಅವರು, ತಮ್ಮ ಪರ ಪ್ರತಿಭಟನೆ ನಡೆಸುತ್ತಿರುವ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಶಾಂತಿಯಿಂದ ಇರುವಂತೆ ಕರೆ ನೀಡಿದ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಸಂದೇಶದಲ್ಲಿ, ‘ನಾನು ಕಾರಿನ ಮುಂಭಾಗದಲ್ಲಿ ಕುಳಿತಿದ್ದ ನಾನು ಎರಡೂ ಕೈಗಳನ್ನು ಜೋಡಿಸಿ ಜನತೆಗೆ ನಮಿಸುತ್ತಿದ್ದೆ. ಈ ವೇಳೆ ಇದ್ದಕ್ಕಿದ್ದಂತೆ ಸಾಗರದ ನೀರಿನ ರೀತಿ ಒಮ್ಮೆಲೆ ಬಂದ ಜನಸಮೂಹವು ನಮ್ಮತ್ತ ಹರಿದುಬಂದಿತು. ಈ ವೇಳೆ ನನ್ನನ್ನು ಒತ್ತಡದಿಂದ ಹಿಡಿದು ತಳ್ಳಿದಂತಾಯಿತು. ಜೊತೆಗೆ ಕಾರಿನ ಬಾಗಿಲಿನಿಂದ ನನ್ನ ಕಾಲುಗಳಿಗೆ ಗಾಯವಾಯಿತು’ ಎಂದಿದ್ದಾರೆ. ತನ್ಮೂಲಕ ನಂದಿಗ್ರಾಮದ ಘಟನೆಯು ಪೂರ್ವ ನಿಯೋಜಿತ ಸಂಚು ಎಂಬ ತಮ್ಮ ಆರೋಪವನ್ನು ತಿರಸ್ಕರಿಸಿದಂತಾಗಿದ್ದು, ತಾವು ಅವಘಡದಲ್ಲಿ ಗಾಯಗೊಂಡಿದ್ದಾಗಿ ಒಪ್ಪಿಕೊಂಡಂತಾಗಿದೆ.
ನಿಜವಾಗಿಯೂ ಆಗಿದ್ದೇನು?
ಕೋಲ್ಕತಾ: ಕಾರಿನ ಹೊರಗೆ ವಿಶೇಷವಾಗಿ ಅಳವಡಿಸಿದ ಪಟ್ಟಿಯ ಮೇಲೆ ನಿಂತು ಮಮತಾ ಅಭಿಮಾನಿಗಳತ್ತ ಕೈಬೀಸುತ್ತಾ ರೋಡ್ ಶೋ ನಡೆಸುತ್ತಿದ್ದರು. ಈ ವೇಳೆ ರಸ್ತೆಯ ಪಕ್ಕದಲ್ಲಿ ನೆಟ್ಟಿದ್ದ ಎರಡು ಕಬ್ಬಿಣದ ಪಟ್ಟಿಗಳು ಮಮತಾ ಕಾರಿನ ಚಾಲಕನಿಗೆ ಕಂಡಿಲ್ಲ. ಪರಿಣಾಮ ಕಾರಿನ ಬಾಗಿಲು ಕಬ್ಬಿಣದ ಕಂಬಿಗೆ ಬಡಿದು, ಅದು ದಿಢೀರನೆ ಮಮತಾ ಕಾಲಿಗೆ ಬಡಿದು ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ