ಶವಸಂಸ್ಕಾರಕ್ಕಾಗಿ ಬರುವ ಮೃತದೇಹಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆ | ಕೇಶೋಡ್‌ನ ಮುಸ್ಲಿಂ ಕಬ್ರಾಸ್ತಾನ್ ಸಮಿತಿಯಿಂದ ಸ್ಮಶಾನಕ್ಕೆ ಕಟ್ಟಿಗೆ ದಾನ
ಗಾಂಧೀನಗರ(ಏ.30): ಗುಜರಾತ್‌ನ ಜುನಾಗಡ್‌ನ ಕೆಶೋಡ್ ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ ಕಳೆದ ಕೆಲವು ವಾರದಲ್ಲಿ ಕೊರೋನಾ ಸಾವಿನ ಸಂಖ್ಯೆಯಲ್ಲಿ 5 ಪಟ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಶೋಡ್‌ನಲ್ಲಿರುವ ಮುಸ್ಲಿಂ ಸಮುದಾಯ ಮೂರು ಟ್ರಾಕ್ಟರ್ ಟ್ರಾಲಿ-ಲೋಡ್ ಉರುವಲು ಸ್ಮಶಾನಕ್ಕೆ ದಾನ ಮಾಡಿದೆ.
ಸಾಮಾನ್ಯವಾಗಿ ಅಲ್ಲಿ ಎರಡು ಮೃತದೇಹಗಳಷ್ಟೇ ಸಂಸ್ಕಾರಕ್ಕೆ ಬರುತ್ತಿತ್ತು. ಆದರೆ ಕಳೆದೊಂದು ತಿಂಗಳಿಂದ ದಿನಕ್ಕೆ 8ರಿಂದ 10 ಮೃತದೇಹ ಅಂತ್ಯಸಂಸ್ಕಾರಕ್ಕಾಗಿ ಬರುತ್ತಿದೆ ಎಂದು ಕೆಶೋಡ್ ನಗರಪಾಲಿಕೆಯ ಮುಖ್ಯಾಧಿಕಾರಿ ಪಾರ್ಥಿವ್ ಪಾರ್ಮರ್ ತಿಳಿಸಿದ್ದಾರೆ.
undefined
ಇಲ್ಲೊಬ್ಬ ಆಹಾರ ಯೋಧ: ಪ್ರತಿದಿನ 200 ಕೊರೋನಾ ರೋಗಿಗಳಿಗೆ ಆಹಾರ ಪೂರೈಕೆ
ಕೆಶೋಡ್ ನಗರದಲ್ಲಿ 2011ರ ಸೆನ್ಸಸ್ ಪ್ರಕಾರ 76 ಸಾವಿರ ಜನ ಸಂಖ್ಯೆ ಇದೆ. ಇದೀಗ ನಗರದ ಜನ ಮಾತ್ರವಲ್ಲ ಆಸು ಪಾಸಿನ ಜನರೂ ಮೃತದೇಹ ಅಂತ್ಯಸಂಸ್ಕಾರಕ್ಕೆ ಕೆಶೋಡ್‌ಗೆ ಬರುತ್ತಿದ್ದಾರೆ ಎಂದಿದ್ದಾರೆ.
ಶವಸಂಸ್ಕಾರಕ್ಕಾಗಿ ಬರುವ ಮೃತದೇಹಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆಯಾದಾಗ ಕೇಶೋಡ್‌ನ ಮುಸ್ಲಿಂ ಕಬ್ರಾಸ್ತಾನ್ ಸಮಿತಿಯು ಸ್ಮಶಾನಕ್ಕೆ ಉರುವಲು ದಾನ ಮಾಡಿದೆ. ಮುಸ್ಲಿಂ ಸಮುದಾಯದ ಪರವಾಗಿ, ಸ್ಥಳೀಯ ಪತ್ರಕರ್ತ ಹರುಣ್ಷಾ ಸರ್ವಾಡಿ ಅವರು ಕೇಶೋಡ್ ಪುರಸಭೆಯ ಉದ್ಯೋಗಿ ಪಂಕಜ್ ಮೇಘನಾಥಿಯನ್ನು ಸಂಪರ್ಕಿಸಿ ಸ್ಮಶಾನಕ್ಕೆ ಉರುವಲು ದಾನ ಮಾಡಲು ಮುಂದಾದರು. ನಾವು ಈ ಪ್ರಸ್ತಾಪವನ್ನು ಸ್ವೀಕರಿಸಿದ್ದೇವೆ, ನಮ್ಮ ಕೆಲಸಗಾರರನ್ನು ಮತ್ತು ಯಂತ್ರೋಪಕರಣಗಳನ್ನು ಕಬ್ರಾಸ್ತಾನ್‌ಗೆ ಕಳುಹಿಸಿದ್ದೇವೆ, ಉರುವಲನ್ನು ಮೂರು ಟ್ರಾಕ್ಟರ್ ಟ್ರಾಲಿಗಳಲ್ಲಿ ತುಂಬಿಸಿ ಅದನ್ನು ಶವಾಗಾರಕ್ಕೆ ಸಾಗಿಸಿದ್ದೇವೆ ಎಂದು ಮುಖ್ಯ ಅಧಿಕಾರಿ ತಿಳಿಸಿದ್ದಾರೆ.
ಭಾರತಕ್ಕೆ ಅಮೆರಿಕದಿಂದ ನೆರವಿನ ಪೂರ: ತುರ್ತು ನೆರವಿನ ವಸ್ತುಗಳೊಂದಿಗೆ ತಲುಪಿದ ಮೊದಲ ವಿಮಾನ
ಉತಾವಲಿಯಾ ನದಿಯ ಪೂರ್ವ ದಂಡೆಯಲ್ಲಿರುವ ಮುಸ್ಲಿಂ ಸ್ಮಶಾನದಿಂದ ಪಶ್ಚಿಮ ದಂಡೆಯಲ್ಲಿರುವ ಶವಾಗಾರಕ್ಕೆ ಉರುವಲು ಸಾಗಿಸಲಾಯಿತು ಎಂದು ಪರ್ಮಾರ್ ಹೇಳಿದ್ದಾರೆ. ನಮ್ಮ ಶ್ಮಶಾನದಲ್ಲಿ ಡೀಸೆಲ್‌ನಿಂದ ಸುಡುವ ವ್ಯವಸ್ಥೆ ಮತ್ತು ನಾಲ್ಕು ಕಟ್ಟಿಗೆಯಿಂದ ಸುಡುವ ವ್ಯವಸ್ಥೆ ಇದೆ. ಕೋರೋನೇತರ ಮೃತದೇಹದ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಬಳಸಲಾಗುತ್ತದೆ. ಇಲ್ಲಿ ಉರುವಲು ಕೊರತೆಯಿದೆ ಎಂದು ಅಲ್ಲ ಆದರೆ ಮುಸ್ಲಿಂ ಸಮುದಾಯವು ತಮ್ಮಲ್ಲಿದ್ದ ಕಟ್ಟಿಗೆ ಸಂಗ್ರಹವನ್ನು ಸದ್ಭಾವನೆಯ ಸೂಚಕವಾಗಿ ನೀಡಿದೆ. ಅದನ್ನು ನಾವು ಸ್ವೀಕರಿಸಿದ್ದೇವೆ ಎಂದು ಮುಖ್ಯ ಅಧಿಕಾರಿ ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona