
ಮುಂಬೈ: ಮುಂಬೈ ಏರ್‌ಪೋರ್ಟ್‌ನಲ್ಲಿ ಮತ್ತೊಂದು ಅವಾಂತರ ನಡೆದಿದೆ. ಮುಂಬೈನಿಂದ ಕತಾರ್‌ನ ದೋಹಾಗೆ ಹೊರಟಿದ್ದ ಇಂಡಿಗೋ ವಿಮಾನವೂ ವಿಳಂಬವಾಗಿದ್ದಲ್ಲದೇ ಕನಿಷ್ಟ 5 ಗಂಟೆಗಳ ಕಾಲ ಪ್ರಯಾಣಿಕರನ್ನು ವಿಮಾನದಲ್ಲೇ ಕೂರಿಸಿ ಕಾಯಿಸಿದ ಆರೋಪ ಕೇಳಿ ಬಂದಿದೆ. ಹಲವು ಗಂಟೆ ವಿಮಾನದಲ್ಲೇ ಕಾದ ನಂತರ ಮುಂಜಾನೆ 3:55 ಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನದಿಂದ ಕೆಳಗಿಳಿಯುವಂತೆ ಪ್ರಯಾಣಿಕರನ್ನು ಕೇಳಲಾಯ್ತು. ವಿಮಾನದಲ್ಲಿ ತಾಂತ್ರಿಕ ತೊಂದರೆಯ ಕಾರಣ ಹೇಳಿ ಮುಂಬೈ ಏರ್‌ಪೋರ್ಟ್‌ನ ವಲಸೆ ವಿಭಾಗದ ಕಾಯುವ ಸ್ಥಳಕ್ಕೆ ಪ್ರಯಾಣಿಕರನ್ನು ಕರೆದೊಯ್ದರು. ಇದರಿಂದ 250ರಿಂದ 300 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡರು ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.
ಇಮಿಗ್ರೇಷನ್ ಮುಗಿದ ಕಾರಣ ನಮಗೆ ವಿಮಾನದಿಂದ ಇಳಿಯಲು ಕೂಡ ಬಿಡಲಿಲ್ಲ ಎಂದು ಹೆಂಡತಿ ಹಾಗೂ ಪುಟ್ಟ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಆದರೆ ನಾವು ಅವರೊಂದಿಗೆ ಜಗಳವಾಡಿದ ನಂತರ ಅವರು ನಮ್ಮನ್ನು ಹೋಲ್ಡಿಂಗ್ ಪ್ರದೇಶದಲ್ಲಿ ಕಾಯುವಂತೆ ಹೇಳಿದರು. ಈ ವಿಚಾರದ ಬಗ್ಗೆ ಯಾವುದೇ ಅಧಿಕಾರಿಗಳು ನಮ್ಮ ಬಳಿ ಮಾತನಾಡಲು ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪಿಎಂ ಹುದ್ದೆಗೆ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ಹೇಳಿದ್ರು, ಆದರೆ ... :ನಿತಿನ್ ಗಡ್ಕರಿ ಹೇಳಿದ್ದೇನು?
ಅಲ್ಲದೇ ವಿಮಾನಯಾನ ಸಿಬ್ಬಂದಿ ನಮಗೆ ಈ ಸಮಯದಲ್ಲಿ ನೀರನ್ನಾಗಲಿ ಊಟವನ್ನಾಗಲಿ ನೀಡಲಿಲ್ಲ. ಇಲ್ಲಿ ತೀವ್ರ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ಜನರು ವಿಮಾನ ವಿಳಂಬವಾಗಿದ್ದರಿಂದ ತಮ್ಮ ಉದ್ಯೋಗ ಹೋಗುವ ಚಿಂತೆಯಲ್ಲಿದ್ದರೆ , ಮತ್ತೆ ಕೆಲವು ಪ್ರಯಾಣಿಕರು ಪುಟ್ಟ ಮಕ್ಕಳನ್ನು ಕರೆದುಕೊಂಡು ಕಾಯುವ ಸ್ಥಿತಿ ಎದುರಾಗಿತ್ತು ಎಂದು ಮತ್ತೊಬ್ಬ ಪ್ರಯಾಣಿಕರು ಹೇಳಿದ್ದಾರೆ.
ಆದರೆ ಈ ಬಗ್ಗೆ ಇಂಡಿಗೋ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ಯಾರೋ ಒಬ್ಬರು ಟ್ವಿಟ್ಟರ್ ಬಳಕೆದಾರರು ದೋಹಾಗೆ ಹೋಗಬೇಕಾದ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಥಗಿತಗೊಂಡಿದೆ ಎಂಬ ವಿಚಾರ ಪೋಸ್ಟ್ ಮಾಡಿದಾಗ ಅದಕ್ಕೆ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದೆ.
ದೋಹಾಗೆ ಹೋಗಬೇಕಾದ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಥಗಿತಗೊಂಡಿದೆ . ವಲಸೆ ಪ್ರಾಧಿಕಾರವೂ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಲು ಅನುಮತಿ ನೀಡಿಲ್ಲ ಎಂದು ಒಬ್ಬರು ಪೋಸ್ಟ್ ಮಾಡಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಇಂಡಿಗೋ ವಿಮಾನಯಾನ ಸಂಸ್ಥೆ ಆಗಿರುವ ಅನಾನುಕೂಲಕ್ಕೆ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: 10 ಕೋಟಿ ಪಡೆದು ಪಾಕಿಸ್ತಾನದಲ್ಲಿ ಡಾನ್ಸ್: ಐಶ್ವರ್ಯಾ ರೈಯನ್ನು ಸುತ್ತಿಕೊಂಡಿದ್ದ ಆ ವಿವಾದ ನಿಜವೇ?
ಇದಕ್ಕೂ ಮೊದಲು ನಿನ್ನೆ ದೆಹಲಿಯಿಂದ ಬಿಹಾರದ ದರ್ಭಂಗಾಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನವೂ ಇನ್ನೇನು ಹೊರಡಲು 5 ನಿಮಿಷ ಇರುವಾಗ ವಿಮಾನ ರದ್ದಾಗಿದೆ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಘೋಷಿಸಿದ್ದರು. ಇದು ಪ್ರಯಾಣಿಕರು ಹಾಗೂ ವಿಮಾನಯಾನ ಸಂಸ್ಥೆಯ ಅಧಿಕಾರಿಗಳ ಮಧ್ಯೆ ತೀವ್ರ ವಾಕ್ಸಮರಕ್ಕೆ ಕಾರಣವಾಯ್ತು. ಪ್ರಯಾಣಿಕರು ಸ್ಪೈಸ್ ಜೆಟ್ ಎಸ್‌ಜಿ495 ವಿಮಾನವನ್ನು ಏರಲು ಏರ್‌ಪೋರ್ಟ್‌ನಲ್ಲಿ ಕಾಯುತ್ತಿದ್ದರು. ಈ ಮಾರ್ಗದ ವಿಮಾನವನ್ನು ಈ ವಿಮಾನಯಾನ ಸಂಸ್ಥೆ ಆಗಾಗ ರದ್ದುಪಡಿಸುತ್ತಿದೆ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆ ಯಾವುದೇ ಹೇಳಿಕೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ