
ಇತ್ತೀಚೆಗೆ ವಿಮಾನ ಎಂಜಿನ್‌ಗಳ ಸಮಸ್ಯೆ, ವಿಮಾನದ ತಾಂತ್ರಿಕ ದೋಷ, ಟೈರ್ ಸ್ಫೋಟ ಮುಂತಾದ ಸಮಸ್ಯೆಗಳ ಬಗ್ಗೆ ಹೆಚ್ಚು ವರದಿಯಾಗುತ್ತಲೇ ಇದೆ. ಇದೇ ರೀತಿ, ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಎಂಜಿನ್‌ಗೆ ತೊಂದರೆ ಉಂಟಾಗಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ನೌಕಾಪಡೆಯ ರಕ್ಷಣಾ ತಂಡದ ಸಹಾಯದಿಂದ ಇಳಿಯಬೇಕಾಯಿತು. ಗೋವಾ ವಿಮಾನ ನಿಲ್ದಾಣದಲ್ಲಿ ರನ್‌ವೇಗೆ ತೆರಳುತ್ತಿದ್ದಾಗ ವಿಮಾನದ ಬಲ ಎಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಕೆಲ ಕಾಲ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರು. ಆದರೆ, ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ತಿಳಿದುಬಂದಿದೆ. ಇನ್ನು, ಮುಂಬೈಗೆ ತೆರಳಬೇಕಿದ್ದ ವಿಮಾನ ಪ್ರಯಾಣಿಕರಿಗೆ ಮತ್ತೊಂದು ವಿಮಾನದಲ್ಲಿ ಮುಂಬೈಗೆ ಹೋಗಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿದುಬಂದಿದೆ. ಮುಂಬೈಗೆ ತೆರಳುವ ವಿಮಾನದಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ವಸತಿ ಕಲ್ಪಿಸಲಾಗಿದೆ ಮತ್ತು ಅವರ ಕನೆಕ್ಟಿಂಗ್ ವಿಮಾನಗಳನ್ನು ತಪ್ಪಿಸಿದವರಿಗೆ ಹೋಟೆಲ್ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಮಧ್ಯಾಹ್ನ ಗೋವಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 187 ಪ್ರಯಾಣಿಕರೊಂದಿಗೆ ಮುಂಬೈಗೆ ತೆರಳಬೇಕಿದ್ದ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ದೋಷ ಉಂಟಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಗೋವಾ ವಿಮಾನ ನಿಲ್ದಾಣವು ನೌಕಾಪಡೆಯ INS ಹಂಸಾ ನೆಲೆಯ ಒಂದು ಭಾಗವಾಗಿದೆ. ಇಂಡಿಗೋ ವಿಮಾನ 6E 6097 ಗೋವಾದಿಂದ ಮುಂಬೈಗೆ ನಾಲ್ಕು ಮಕ್ಕಳು ಸೇರಿದಂತೆ 187 ಪ್ರಯಾಣಿಕರೊಂದಿಗೆ 1 ಗಂಟೆ ಸಮಯದಲ್ಲಿ ರನ್‌ವೇಗೆ ತೆರಳುತ್ತಿದ್ದಾಗ ಬಲ ಎಂಜಿನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನು ಟ್ಯಾಕ್ಸಿ ಬೇ ಸಂಖ್ಯೆ 9 ರಿಂದ ಹಿಂದಕ್ಕೆ ತಳ್ಳಬೇಕಾಯಿತು. ಆದರೆ, ಘಟನೆಯಿಂದಾಗಿ ಇತರ ವಿಮಾನಗಳ ಚಲನೆಗೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ವಿಮಾನ ಹಾರಾಟದ ವೇಳೆ 25 ನಿಮಿಷ ಪೈಲಟ್‌ಗಳ ಜೋರು ನಿದ್ರೆ, ನಿಗದಿಯಾಗಿದ್ದ ಲ್ಯಾಂಡಿಂಗ್ ಕೂಡ ಮಿಸ್!
ಇಂಡಿಗೋ ಹಂಚಿಕೊಂಡ ಅಧಿಕೃತ ಅಪ್‌ಡೇಟ್ ಪ್ರಕಾರ, ಟ್ಯಾಕ್ಸಿಯ ವೇಳೆ ಪೈಲಟ್ ಎಂಜಿನ್ ಕ್ಷಣಿಕ ಎಚ್ಚರಿಕೆಯನ್ನು ಪಡೆದ ನಂತರ ಗೋವಾದಿಂದ ಮುಂಬೈಗೆ 6E6097 ಅನ್ನು ನಿರ್ವಹಿಸುವ ಏರ್‌ಬಸ್ (VT-IZR) ಹಿಂತಿರುಗಿದೆ. ಪೈಲಟ್ ನಂತರ ತಮ್ಮ ಕಾರ್ಯವಿಧಾನಗಳನ್ನು ಕೈಗೊಂಡರು ಮತ್ತು ಅಗತ್ಯ ತಪಾಸಣೆಗಾಗಿ ವಿಮಾನವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಭಾರತೀಯ ನೌಕಾಪಡೆಯ ರಕ್ಷಣಾ ತಂಡಗಳು ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದವು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಎಸ್ ವಿ ಟಿ ಧನಂಜಯ ರಾವ್ ತಿಳಿಸಿದ್ದಾರೆ. ಹಾಗೂ, ನೌಕಾಪಡೆಯ ತಂಡಗಳು ವಿಮಾನವನ್ನು ಟ್ಯಾಕ್ಸಿ ಬೇಗೆ ಕೊಂಡೊಯ್ಯಲಾಯಿತು ಎಂದೂ ಅವರು ಪಿಟಿಐಗೆ ತಿಳಿಸಿದರು.
ವಿಮಾನದೊಳಗೆ ಸಿಗರೇಟ್ ಸೇದಿದ್ದ ಬಾಡಿ ಬಿಲ್ಡರ್ ವಿರುದ್ಧ ಕೇಸ್ ದಾಖಲು
"ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಈ ಎಚ್ಚರಿಕೆಯು ಹುಸಿಯಾಗಿದೆ ಮತ್ತು ಯಾವುದೇ ಬೆಂಕಿ ಕಾಣಿಸಿಕೊಂಡಿಲ್ಲ" ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಈ ಮಧ್ಯೆ, ಕಳೆದ 3 ದಿನಗಳಲ್ಲಿ ಇಂಡಿಗೋ ವಿಮಾನದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಭಾನುವಾರ ದೆಹಲಿಯಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಇಳಿಯುವ ಮೊದಲು ಕಾರ್ಗೋದಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂದು ಸುಳ್ಳು ಎಚ್ಚರಿಕೆ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ