
ಕೇರಳ(ಆ.22): ಕುಟುಂಬ ಸದಸ್ಯರು ತೆಗೆದ ಫೋಟೋವೊಂದು ಇದೀಗ ಭಾರಿ ಚರ್ಚೆಯಾಗುತ್ತಿದೆ. ಕೇರಳದ ಮಲ್ಲಪಲ್ಲಿಯ 95 ವರ್ಷದ ಅಜ್ಜಿ ಮರಿಯಮ್ಮ ನಿಧನರಾಗಿದ್ದಾರೆ. ಅಜ್ಜಿಯ ಮೃತದೇಹದ ಮುಂದೆ ಕುಟುಂಬದ ಇಡೀ ಸದಸ್ಯರು ಫೋಟೋ ತೆಗೆದಿದ್ದಾರೆ. ಈ ಫೋಟೋಗೆ ಭಾರಿ ಟೀಕೆಗಳು ವ್ಯಕ್ತವಾಗಿದೆ. ಇದಕ್ಕೆ ಕಾರಣ ಅಜ್ಜಿಯ ಮೃತದೇಹ ಮುಂದೆ ತೆಗೆದ ಕುಟುಂಬ ಸದಸ್ಯರ ಫೋಟೋದಲ್ಲಿ ಯಾವುದೇ ದುಃಖ ಇರಲಿಲ್ಲ. ಎಲ್ಲರೂ ನಗುತ್ತಿರುವ ಫೋಟೋ ಇದಾಗಿದೆ. ಪ್ರತಿಯೊಬ್ಬ ಸದಸ್ಯ ನಕ್ಕಿದ್ದಾನೆ. ಅಜ್ಜಿಯ ನಿಧನ ಇಡೀ ಕುಟುಂಬಕ್ಕೆ ಸಂತಸ ತಂದಿದೆ ಎಂದು ಟೀಕೆಗಳು ವ್ಯಕ್ತವಾಗಿದೆ. ಈ ಫೋಟೋ ಕುರಿತು ವಿರೋಧ ಹೆಚ್ಚಾಗುತ್ತಿದ್ದಂತೆ ಕುಟುಂಬ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ಈ ನಗುವಿನ ಫೋಟೋ ಹಿಂದಿನ ಉದ್ದೇಶವನ್ನು ಬಹಿರಂಗ ಪಡಿಸಿದ್ದಾರೆ. ಅಜ್ಜಿಯ ಮೃತದೇಹ ಮುಂದೆ ಇಡೀ ಕುಟುಂಬ ಸದಸ್ಯರು ಕುಳಿತು ಅಜ್ಜಿಯ ಹಳೆ ನೆನಪುಗಳು, ಮಕ್ಕಳನ್ನು ಬೆಳೆಸಿದ ರೀತಿ, ಸಮಾಜಮುಖಿ ಕಾರ್ಯಗಳು, ನೆರವು ನೀಡಿದ ರೀತಿಗಳ ಕುರಿತು ಸತತ 4 ಗಂಟೆ ಮಾತನಾಡಿದ್ದೇವೆ. ಅಜ್ಜಿ ನಮಗೆ ತೋರಿದ ಆದರ್ಶಗಳ ಕುರಿತು ಮಾತನಾಡಿದ್ದೇವೆ. ಬೆಳಗಿನ ಜಾವ 4 ಗಂಟೆ ತನಗ ಅಜ್ಜಿ ನಮಗೆ ಮಾಡಿದ ನೆರವಿನ ಕುರಿತು ಮಾತನಾಡಿದ್ದೇವೆ. ಬಳಿಕ ನಾವು ಅಜ್ಜಿಯ ಜೊತೆಗಿನ ಕೊನೆಯ ಕ್ಷಣವನ್ನು ಫೋಟೋ ಮೂಲಕ ಅಚ್ಚೊತ್ತಲು ನಿರ್ಧರಿಸಿದೆವು. ಹೀಗಾಗಿ ಎಲ್ಲರೂ ನಗುವಿನೊಂದಿಗೆ ಅಜ್ಜಿಯನ್ನು ಕಳುಹಿಸಿಕೊಡಲು ನಿರ್ಧರಿಸಿದೆವು. ಹೀಗಾಗಿ ಆ ಫೋಟೋದಲ್ಲಿ ಎಲ್ಲರೂ ನಕ್ಕಿದ್ದಾರೆ ಎಂದು ಪುತ್ರ ಹಾಗೂ ಪಾದ್ರಿ ಜಾರ್ಜ್ ಉಮ್ಮನ್ ಏಷ್ಯಾನೆಟ್‌ಗೆ ಸ್ಪಷ್ಟನೆ ನೀಡಿದ್ದಾರೆ.
ಕುಟುಂಬದ ಎಲ್ಲಾ ಸದಸ್ಯರು ನಗುತ್ತಿದ್ದಾರೆ. ಅಜ್ಜಿಯ ಮೃತದೇಹದ ಮುಂದೆ ಎಲ್ಲರೂ ನಗುತ್ತಿದ್ದಾರೆ ಅಂದರೆ ಏನರ್ಥ ಎಂದು ಹಲವು ಪ್ರಶ್ನಿಸಿದ್ದಾರೆ. ನಾವು ಈ ಫೋಟೋ ಕುರಿತು ಬಂದಿರುವ ಕೆಮೆಂಟ್ ಗಮನಿಸಿದ್ದೇವೆ. ಆದರೆ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾರಣ ನಮ್ಮ ಅಜ್ಜಿಯನ್ನು ಇಳೀ ವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಂಡಿದ್ದೇವೆ. ನಮ್ಮ ಕುಟುಂಬದವರನ್ನು ಗೊತ್ತಿರುವ ಎಲ್ಲರಿಗೂ ಇದು ತಿಳಿದಿದೆ. ಅಜ್ಜಿಯ ಇಡೀ ಕುಟುಂಬ ಸದಸ್ಯರು ಮುದ್ದಿನ ಮಗುವಿನಂತೆ ನೋಡಿಕೊಂಡಿದ್ದೇವೆ. ನಮಗೆ ಜೀವನ ಪಾಠಗಳನ್ನು ಹೇಳಿಕೊಟ್ಟು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಕಲಿಸಿದ ನಮ್ಮ ಅಜ್ಜಿಯ ಕೊನೆಯ ಕ್ಷಣಗಳನ್ನು ಫೋಟೋದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇವೆ. ನಮ್ಮ ಅಮ್ಮಚ್ಚಿಯ ಜೊತೆಗಿನ ಕೊನೆಯ ಫೋಟೋ ಇದು. ಹೀಗಾಗಿ ನಗುತ್ತಲೇ ಅಜ್ಜಿಗೆ ವಿದಾಯ ಹೇಳಲು ನಿರ್ಧರಿಸಿ ಫೋಟೋ ತೆಗಿದಿದ್ದೇವೆ ಎಂದು ಜಾರ್ಜ್ ಹೇಳಿದ್ದಾರೆ.
ಬಾಲ್ಯದ ಫೋಟೋ ಶೇರ್ ಮಾಡಿ ಪ್ರೀತಿಯ ಅಜ್ಜಿಗೆ ಪ್ರಿಯಾಂಕಾ ಚೋಪ್ರಾ ಬರ್ತಡೇ ವಿಶ್
ಅಜ್ಜಿಯ ಮಕ್ಕಳು ಪಾದ್ರಿ, ಬಿಷಪ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಜ್ಜಿಯ ನೆನಪನ್ನು ಮೆಲುಕು ಹಾಕುತ್ತಾ, ಮರಣದ ಬಳಿಕ ದಿನವನ್ನು ಕಳೆದಿದ್ದಾರೆ. ಟೀಕೆಗಳ ಜೊತೆಗೆ ಹಲವರು ಮರಣದ ಬಳಿಕ ಈ ರೀತಿಯ ವಿದಾಯ ಸಿಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಜ್ಜಿಯನ್ನು ಹತ್ತಿರದಿಂದ ಬಲ್ಲವರು, ಕುಟುಂಬವನ್ನು ಬಲ್ಲವರು ಕಮೆಂಟ್ ಮಾಡಿದ್ದಾರೆ. ಅತ್ಯಂತ ಪ್ರೀತಿಯಿಂದ ಅಜ್ಜಿಯನ್ನು ನೋಡಿಕೊಂಡಿದ್ದಾರೆ. ಇದೀಗ ಅಷ್ಟೇ ಪ್ರೀತಿಯಿಂದ ಅಜ್ಜಿಯನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ