ಟಿಎಂಸಿ ನಾಯಕ ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡುವಂತೆ ವಿಶೇಷ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಕಳಿಸಲಾಗಿದೆ. ಅನುಬ್ರತಾ ಮಂಡಲ್ ಅವರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ನ್ಯಾಯಾಧೀಶರ ಕುಟುಂಬವನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಆ ಪತ್ರದಲ್ಲಿ ಹೇಳಲಾಗಿದೆ.
ನವದೆಹಲಿ (ಆ.23): ಪಶ್ಚಿಮ ಬಂಗಾಳದಲ್ಲಿ ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಟಿಎಂಸಿ ನಾಯಕ ಅನುಬ್ರತಾ ಮಂಡಲ್ ಅವರನ್ನು ಬಿಡುಗಡೆ ಮಾಡುವಂತೆ ವಿಶೇಷ ನ್ಯಾಯಾಧೀಶರಿಗೆ ಬೆದರಿಕೆ ಹಾಕಲಾಗಿದೆ. ಈ ಪ್ರಕರಣದಲ್ಲಿ ಅನುಬ್ರತಾ ಮಂಡಲ್‌ಗೆ ಜಾಮೀನು ನೀಡದಿದ್ದರೆ, ನ್ಯಾಯಾಧೀಶರ ಕುಟುಂಬದ ಮೇಲೆ ಸುಳ್ಳು ಕೇಸ್ ದಾಖಲು ಮಾಡಿ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ವಿಶೇಷ ನ್ಯಾಯಾಧೀಶರ ಪರವಾಗಿ ದೂರು ನೀಡಲಾಗಿದ್ದು ಕ್ರಮಕ್ಕೆ ಆಗ್ರಹಿಸಲಾಗಿದೆ. ರಾಜೇಶ್ ಚಕ್ರವರ್ತಿ ಎಂಬ ನ್ಯಾಯಾಧೀಶರು, ಬಪ್ಪ ಚಟರ್ಜಿ ಎಂಬ ವ್ಯಕ್ತಿಯಿಂದ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅನುಬ್ರತಾ ಮಂಡಲ್‌ಗೆ ಜಾಮೀನು ನೀಡದಿದ್ದರೆ, ಅವರ ಕುಟುಂಬವನ್ನು ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್) ಅಡಿಯಲ್ಲಿ ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಆ ಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಜಾನುವಾರು ಕಳ್ಳ ಸಾಗಣೆ ಪ್ರಕರಣದಲ್ಲಿ ಅನುಬ್ರತಾ ಮೊಂಡಲ್‌ಗೆ ಸಿಬಿಐ ಸಾಕಷ್ಟು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ, ಅದನ್ನು ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. 10 ದಿನಗಳ ಹಿಂದೆ ಅವರನ್ನು ಸಿಬಿಐ ಬಂಧನ ಮಾಡಿತ್ತು.
ಟಿಎಂಸಿ ನಾಯಕ ಅನುಬ್ರತಾ ಮಂಡಲ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಿಮಗೆ ಆದೇಶ ನೀಡಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಹಾಗೆ ಮಾಡಲು ವಿಫಲವಾದರೆ ನಿಮ್ಮ ಕುಟುಂಬದ ವಿರುದ್ಧ ಎನ್‌ಡಿಪಿಎಸ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತದೆ. ನಿಮ್ಮ ಮಾಹಿತಿಗಾಗಿ ಈ ವಿಷಯವನ್ನು ಈಗಾಗಲೇ ನಿಮಗೆ ತಿಳಿಸಲಾಗಿದೆ. ಆದರೆ ಬಪ್ಪಾ ಚಟರ್ಜಿ ಈ ಪತ್ರದಿಂದ ದೂರ ಉಳಿದಿದ್ದಾರೆ. ಅವರ ಪ್ರಕಾರ, ಅಂತಹ ಯಾವುದೇ ಪತ್ರದ ಬಗ್ಗೆ ಅವರಿಗೆ ತಿಳಿದಿಲ್ಲ. ಆತನನ್ನು ಸಿಲುಕಿಸಲು, ತನ್ನ ಇಮೇಜ್ ಹಾಳು ಮಾಡಲು ಇದೆಲ್ಲವನ್ನೂ ಮಾಡಲಾಗಿದೆ ಎಂದು ಹೇಳಿದ್ದಾರೆ.
CBI Judge in Asansol gets threat letter, asking him to give bail to criminal Anubroto Mondal, failing which his entire family would be framed in NDPS case.
The judge has written to the District Judge and High Court.
Mamata Banerjee has been defending Mondal even after his arrest. pic.twitter.com/MDsPavxZwa
ಗೋವುಗಳ ಸಾಗಣೆ ಪ್ರಕರಣ ಮಮತಾ ಬ್ಯಾನರ್ಜಿ ಆಪ್ತ, ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ ಬಂಧಿಸಿದ ಸಿಬಿಐ!
ಏನಿದು ವಿಚಾರ: ಅನುಬ್ರತಾ ಮಂಡಲ್ ಅವರನ್ನು ಬಂಧಿಸಿರುವ ಪ್ರಕರಣವು ಅಕ್ರಮ ಗೋವು ಸಾಗಾಟಕ್ಕೆ ಸಂಬಂಧಿಸಿದ್ದು. 2020 ರಲ್ಲಿ, ಮಾಜಿ ಬಿಎಸ್ಎಫ್ ಕಮಾಂಡರ್ ಅನ್ನು ಸಿಬಿಐ ಇದೇ ವಿಚಾರದಲ್ಲಿ ಬಂಧ ಮಾಡಿತ್ತು. ಆತನನ್ನು ವಿಚಾರಣೆಗೊಳಪಡಿಸಿದ ನಂತರವೇ ಈ ವಿಷಯದ ಸರಮಾಲೆಗಳು ಅನುಬ್ರತಾ ಮೊಂಡಲ್ ಅವರೊಂದಿಗೆ ಸಂಪರ್ಕಗೊಂಡಿದ್ದು ಬೆಳಕಿಗೆ ಬಂದಿತ್ತು. ಕಳೆದ ಆಗಸ್ಟ್ 11 ರಂದು, ಸಿಬಿಐ, ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿ, ಟಿಎಂಸಿಯ ಜಿಲ್ಲಾ ಮುಖ್ಯಸ್ಥ ಅನುಬ್ರತಾ ಮಂಡಲ್ ಅವರನ್ನು ಬಂಧನ ಮಾಡಿತ್ತು. ಈ ಬೆದರಿಕೆ ಪತ್ರದ ನಂತರ ಬಿಜೆಪಿ ಮತ್ತೆ ಟಿಎಂಸಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಅನುಬ್ರತಾ ಬಂಧನದ ನಂತರವೂ ಮಮತಾ ಅವರನ್ನು ನಿರಂತರವಾಗಿ ಸಮರ್ಥಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸಿಬಿಐ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬಂದಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಅನುಬ್ರತಾ ಅವರನ್ನು ಬಿಡುಗಡೆ ಮಾಡದಿದ್ದರೆ ನ್ಯಾಯಾಧೀಶರ ಕುಟುಂಬವನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಮಮತಾ ಈ ನಾಯಕನನ್ನು ಸಮರ್ಥಿಸಿಕೊಂಡಿದ್ದಾರೆ, ಅವರ ಬಂಧನದ ನಂತರವೂ ಅವರನ್ನು ಉಳಿಸಲು ಪ್ರಯತ್ನಗಳು ನಡೆಯುತ್ತಿವೆ.
100 ಕೋಟಿಗೆ ಗೌರ್ನರ್, ಎಂಪಿ ಸ್ಥಾನ: ವಂಚನೆ ಸಂಚು ಬಯಲು!
ಟ್ವಿಟರ್‌ನಲ್ಲಿ ಈ ವಿಚಾರ ಹಂಚಿಕೊಂಡಿರುವ ಮಾಳವಿಯಾ, "ಅಸನ್ಸೋಲ್‌ನ ಸಿಬಿಐ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬಂದಿದೆ, ಕ್ರಿಮಿನಲ್ ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡುವಂತೆ ಕೇಳಿಕೊಳ್ಳಲಾಗಿದೆ, ಇಲ್ಲದಿದ್ದರೆ ಅವರ ಇಡೀ ಕುಟುಂಬವನ್ನು ಎನ್‌ಡಿಪಿಎಸ್ ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಬೆದರಿಸಲಾಗಿದೆ. ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರು ಮತ್ತು ಹೈಕೋರ್ಟ್‌ಗೆ ಈ ಪತ್ರ ಬರೆದಿದ್ದಾರೆ. ಮೊಂಡಲ್ ಬಂಧನದ ನಂತರವೂ ಮಮತಾ ಬ್ಯಾನರ್ಜಿ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.