ಅಣ್ಣ ಡ್ರಗ್ ವಿರೋಧಿ ಅಂದೋಲನದಿಂದ ಫೇಮಸ್ ಆಗಿ ಜೈಲಿನಿಂದಲೇ ಗೆದ್ದ: ತಮ್ಮ ಡ್ರಗ್‌ನೊಂದಿಗೆ ಸಿಕ್ಕಿಬಿದ್ದ

By Anusha KbFirst Published Jul 12, 2024, 2:39 PM IST
Highlights

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಅಮೃತ್‌ಪಾಲ್ ಸಿಂಗ್ ಸೋದರ ಸೇರಿದಂತೆ ಇಬ್ಬರನ್ನು ಪಂಜಾಬ್‌ನ ಜಲಂಧರ್ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಅಮೃತ್‌ಪಾಲ್ ಸಿಂಗ್ ಸೋದರ ಸೇರಿದಂತೆ ಇಬ್ಬರನ್ನು ಪಂಜಾಬ್‌ನ ಜಲಂಧರ್ ಪೊಲೀಸರು ಬಂಧಿಸಿದ್ದಾರೆ. ಮಾದಕ ದ್ರವ್ಯ ಸೇವನೆ ಹಾಗೂ ಜೊತೆಯಲ್ಲಿ ಮಾದಕ ವಸ್ತುಗಳನ್ನು ಇರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತ್‌ಪಾಲ್ ಸಿಂಗ್ ಸೋದರ ಹರ್‌ಪ್ರೀತ್‌ ಸಿಂಗ್ ಹಾಗೂ ಈತನಿಗೆ ಡ್ರಗ್ ಮಾರಾಟ ಮಾಡಿದ್ದ ಸಂದೀಪ್ ಆರೋರಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ವಿಪರ್ಯಾಸ ಎಂದರೆ ಈತನ ಸೋದರ ವಾರೀಸ್ ಪಂಜಾಬ್ ಮುಖ್ಯಸ್ಥನಾಗಿದ್ದು, ಈತ ಡ್ರಗ್ ವಿರೋಧಿ ಆಂದೋಲನದ ಮೂಲಕ ಹೆಸರು ಗಳಿಸಿದ್ದ. ಆದರೆ ಸ್ವಂತ ಸೋದರ ಮಾದಕವಸ್ತುಗಳಿಗೆ ದಾಸನಾಗಿ ಪೊಲೀಸರ ಅತಿಥಿಯಾಗಿದ್ದಾನೆ. 

ಖದೂರ್ ಸಾಹೀಬ್ ನಿವಾಸಿಯಾದ ಹರ್‌ಪ್ರೀತ್ ಸಿಂಗ್ ಫೀಲ್ಲೌರ್ ಚೆಕ್‌ಪೋಸ್ಟ್ ಬಳಿ  ಕ್ರಿಸ್ಟೆಲ್ ಮೆಥಾಂಫೆಟಮೈನ್ (crystal methamphetamine)ಹೆಸರಿನ ಡ್ರಗ್‌ನೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈತನ ಜೊತೆಗೆ ಚೀಮಾಬಾತ್ ಗ್ರಾಮದ ವ್ಯಕ್ತಿಯೊಬ್ಬನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ಆಗಿದೆ. ಎಬಿಪಿ ನ್ಯೂಸ್ ವರದಿಯ ಪ್ರಕಾರ  ಜಲಂಧರ್‌ ಗ್ರಾಮೀಣ ಪೊಲೀಸ್ ಠಾಣೆಯ ಎಸ್‌ಎಸ್‌ಪಿ ಅಂಕುರ್ ಗುಪ್ತಾ ಅವರು ಹರ್‌ಪ್ರೀತ್ ಬಂಧನವನ್ನು ಖಚಿತಪಡಿಸಿದ್ದಾರೆ. ಕೂಡಲೇ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ. ಆದರೆ ಎಷ್ಟು ಮೊತ್ತದ ಡ್ರಗ್‌ ಅನ್ನು ಹರ್‌ಪ್ರೀತ್‌ ಬಳಿಯಿಂದ ವಶಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.  ಆದರೆ ಜಲಂಧರ್‌ ಎಎಸ್‌ಎಸ್‌ಪಿ ಅವರ ಪ್ರಕಾರ, ಹರ್‌ಪ್ರಿತ್ ಸಿಂಗ್ ಅವರ ಮೂತ್ರ ಪರೀಕ್ಷೆ ಮಾಡಿದ ವೇಳೆ ಪಾಸಿಟಿವ್ ಬಂದಿದ್ದು, ಡ್ರಗ್ ಸೇವನೆ ಮಾಡಿರುವುದು ಸಾಬೀತಾಗಿದೆ. ಈತನ ಬಳಿ 4 ಗ್ರಾಂ ಡ್ರಗ್ ಇದ್ದು, ಇದಕ್ಕಾಗಿ ಆತ 10 ಸಾವಿರ ರೂಪಾಯಿ ಪೇಮೆಂಟ್ ಮಾಡಿರುವುದು ಕೂಡ ವರದಿ ಆಗಿದೆ. 

Latest Videos

ತಾಯಿ ಮಾತಿನಿಂದ ಮನಸ್ಸಿಗೆ ತೀವ್ರ ನೋವಾಗಿದೆ… ಮತ್ತೆ ವಿಷ ಉಗುಳಿದ ಜೈಲಿನಲ್ಲಿರೋ ಸಂಸದ ಅಮೃತಪಾಲ್ 

ಲೂಧಿಯಾನ ಮೂಲದ ಸಂದೀಪ್ ಆರೋರಾ ಎಂಬಾತನಿಂದ ಈ ಡ್ರಗ್ ಅನ್ನು ಖರೀದಿಸಿದ್ದ, ಆತನನ್ನು ಕೂಡ ಈಗ ಪೊಲೀಸರು ಬಂಧಿಸಿದ್ದಾರೆ. ಇತ್ತ ಅಮೃತ್‌ಪಾಲ್ ಸಿಂಗ್ ಅಸ್ಸಾಂನ ದಿಬ್ರುಗರ್ ಜೈಲಿನಲ್ಲಿ ಬಂಧಿತನಾಗಿದ್ದು, ಖಲಿಸ್ತಾನಿ ಪ್ರತ್ಯೇಕತವಾದಿ ಪರವಾಗಿರುವ ಈತನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ. ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ ಅನುಮತಿ ನೀಡಿದ ನಂತರ ಲೋಕಸಭೆಯಲ್ಲಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕಾಗಿ ಆತನನ್ನು 4 ದಿನಗಳ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದಾದ ನಂತರ ಭಾರಿ ಭದ್ರತೆಯಲ್ಲಿ ಆತನನ್ನು ಲೋಕಸಭೆಗೆ ಕರೆತರಲಾಗಿತ್ತು. ಕೆಲ ವರದಿಗಳ ಪ್ರಕಾರ, ಆತ ಕೆಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಲೋಕಸಭಾ ಸ್ಪೀಕರ್ ಚೇಂಬರ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾನೆ ಎಂದು ವರದಿ ಆಗಿದೆ. 

ವಾರಿಸ್ ದೇ ಪಂಜಾಬ್‌ನ ಮುಖ್ಯಸ್ಥನಾಗಿದ್ದ ಈತ ಬಂಧನಕ್ಕೂ ಮೊದಲು ಪಂಜಾಬ್‌ನಲ್ಲಿ ಡ್ರಗ್ ವಿರೋಧಿ ಆಂದೋಲನದ ಮೂಲಕ ಫೇಮಸ್ ಆಗಿದ್ದ. ಜೊತೆ ಡ್ರಗ್ ಚಟ ನಿರ್ಮೂಲನಾ ಕೇಂದ್ರವನ್ನು ಕೂಡ ನಡೆಸುತ್ತಿದ್ದ. 2024ರ ಲೋಕಸಭಾ ಚುನಾವಣೆಯಲ್ಲಿ ಜೈಲಿನಲ್ಲಿದ್ದುಕೊಂಡೆ ಆತ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದಿದ್ದ ಭಾರಿ ಮತಗಳ ಅಂತರದಿಂದ ಕಾಂಗ್ರೆಸ್‌ನ ಅಭ್ಯರ್ಥಿ ಕುಲ್ಬೀರ್  ಸಿಂಗ್ ಝೀರಾ ವಿರುದ್ಧ ಗೆದ್ದು ಬಂದಿದ್ದ. 

ಜೈಲಿನಿಂದಲೇ ಗೆದ್ದ ತೀವ್ರವಾದಿ ಅಮೃತ್‌ಪಾಲ್, ಕಾಶ್ಮಿರದ ಎಂಜಿನಿಯರ್ ಉಗ್ರ ರಶೀದ್‌: ಮುಂದೇನು?

click me!