ಬಿಬಿಸಿ ವಿರುದ್ಧ ಮತ್ತಷ್ಟು ಆಕ್ರೋಶ: ನಿಷೇಧದ ಬಳಿಕವೂ ಮತ್ತೆ ಸಾಕ್ಷ್ಯಚಿತ್ರ ಶೇರ್‌ ಮಾಡಿದ ಟಿಎಂಸಿ ಎಂಪಿ..!

Published : Jan 23, 2023, 09:28 AM IST
ಬಿಬಿಸಿ ವಿರುದ್ಧ ಮತ್ತಷ್ಟು ಆಕ್ರೋಶ: ನಿಷೇಧದ ಬಳಿಕವೂ ಮತ್ತೆ ಸಾಕ್ಷ್ಯಚಿತ್ರ ಶೇರ್‌ ಮಾಡಿದ ಟಿಎಂಸಿ ಎಂಪಿ..!

ಸಾರಾಂಶ

ಬಿಬಿಸಿಗೆ ಚರ್ಚಿಲ್‌ ಬಗ್ಗೆ ಸಾಕ್ಷ್ಯ​ಚಿತ್ರ ಮಾಡಲು ಧೈರ್ಯ​ವಿ​ದೆ​ಯೇ? ಎಂದು ಶೇಖರ್‌ ಕಪೂರ್‌ ಪ್ರಶ್ನೆ ಮಾಡಿದ್ದಾರೆ. ಸುಳ್ಳು ಸಾಕ್ಷ್ಯ​ಚಿ​ತ್ರ​ಗ​ಳನ್ನು ನಿರ್ಮಾಣ ಮಾಡು​ವು​ದ​ರಲ್ಲಿ ಬಿಬಿಸಿ ಎತ್ತಿದ ಕೈ ಎಂದು ಉದ್ಯಮಿ ಅರುಣ್‌ ಪುದೂರ್‌ ಕಿಡಿ ಕಾರಿದ್ದಾರೆ. ಅಲ್ಲದೆ, ಕೆಲವರಿಗೆ ಸುಪ್ರೀಂಕೋರ್ಟ್‌ಗಿಂತ ಬಿಬಿಸಿಯೇ ಹೆಚ್ಚು ಎಂದೂ ಕೇಂದ್ರ ಸಚಿವ ರಿಜಿಜು ಟೀಕೆ ಮಾಡಿದ್ದಾರೆ.

ನವ​ದೆ​ಹ​ಲಿ (ಜನವರಿ 23, 2023): ಗುಜ​ರಾತ್‌ ಗಲ​ಭೆಯ ಕುರಿ​ತಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬ್ರಿಟನ್‌ ಸುದ್ದಿವಾಹಿನಿ ‘ಬಿಬಿಸಿ’ ನಿರ್ಮಾಣ ಮಾಡಿ​ರುವ ಸಾಕ್ಷ್ಯ​ಚಿ​ತ್ರಕ್ಕೆ ಭಾರ​ತ​ದಾ​ದ್ಯಂತ ಭಾರಿ ಆಕ್ರೋಶ ಮುಂದುವರಿದಿದೆ. ಭಾರತದ ಗಣ್ಯರ ಕುರಿತು ಸಾಕ್ಷ್ಯಚಿತ್ರ ಸಿದ್ಧಪಡಿಸಿರುವ ಬಿಬಿಸಿಗೆ, ಬ್ರಿಟಿಷ್‌ ಮಹನೀಯರ ಕರ್ಮಕಾಂಡಗಳ ಸಾಕ್ಷ್ಯಚಿತ್ರ ಮಾಡುವ ಧೈರ್ಯ ಇದೆಯೇ ಎಂದು ಭಾರತದಲ್ಲಿನ ಕೆಲವು ಗಣ್ಯರು ಪ್ರಶ್ನಿಸಿದ್ದಾರೆ.

ಚಿತ್ರನಿರ್ಮಾಣಕಾರ ಶೇಖರ್‌ ಕಪೂರ್‌ ಟ್ವೀಟ್‌ ಮಾಡಿ, ‘ಬ್ರಿಟನ್‌ನಲ್ಲಿ ಅಂದಿನ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ಅವರು ಆರಾಧ್ಯ ದೈವರಲ್ಲಿ ಒಬ್ಬರು. ಇಂಥ ಚರ್ಚಿಲ್‌ ಅವರು ಭಾರತದ ಬಂಗಾ​ಳ​ದಲ್ಲಿ ಬರ​ಗಾಲ ಉಂಟಾ​ಗಿ​ದ್ದಾಗ ಲಕ್ಷಾಂತರ ಜನರ ಸಾವಿಗೆ ಕಾರಣರಾಗಿದ್ದರು. ಅಲ್ಲದೆ, ಕುರ್ದ್‌ ಆದಿವಾಸಿಗಳ ಮೇಲೆ ರಾಸಾಯನಿಕ ಬಾಂಬ್‌ ಹಾಕಿದ ಮೊದಲ ವ್ಯಕ್ತಿ ಅವರು. ಇಂಥವರ ಬಗ್ಗೆ ಸಾಕ್ಷ್ಯ​ಚಿತ್ರ ಮಾಡುವ ಧೈರ್ಯ ಬಿಬಿ​ಸಿಗೆ ಇದೆ​ಯೇ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ‘ನಿಷೇಧ’

ಇನ್ನು ಉದ್ಯಮಿ ಅರುಣ್‌ ಪುದೂರ್‌ ಅವರು, ‘ಸುಳ್ಳು ಸಾಕ್ಷ್ಯ​ಚಿ​ತ್ರ​ಗ​ಳನ್ನು ನಿರ್ಮಾಣ ಮಾಡು​ವು​ದ​ರಲ್ಲಿ ಬಿಬಿಸಿ ಎತ್ತಿದ ಕೈ. ಇಂಥ ನಕಲಿ ಸಾಕ್ಷ್ಯಚಿತ್ರಗಳ ಇತಿಹಾಸವನ್ನೇ ಬಿಬಿಸಿ ಹೊಂದಿದೆ’ ಎಂದು ಕಿಡಿಕಾರಿದ್ದಾರೆ.

ರಿಜಿಜು ತಿರುಗೇಟು:
ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಪ್ರತಿಕ್ರಿಯಿಸಿ, ‘ಭಾರತದಲ್ಲಿ ಇನ್ನೂ ಕೆಲವರು ವಸಾಹತುಶಾಹಿಯ ಅಮಲು ಬಿಟ್ಟಿಲ್ಲ. ಅವರು ಬಿಬಿಸಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕಿಂತ ಹೆಚ್ಚಾಗಿ ಪರಿಗಣಿಸುತ್ತಾರೆ ಮತ್ತು ತಮ್ಮ ನಾಯಕರನ್ನು ಮೆಚ್ಚಿಸಲು ದೇಶದ ಘನತೆ ಮತ್ತು ಇಮೇಜ್‌ಅನ್ನು ಕೆಳಮಟ್ಟಕ್ಕೆ ತಗ್ಗಿಸುತ್ತಾರೆ. ಹೇಗಿದ್ದರೂ ಈ ತುಕ್ಡೆ ತುಕ್ಡೆ ಗ್ಯಾಂಗ್‌ ಸದಸ್ಯರಿಂದ ಉತ್ತಮ ಭರವಸೆ ಇಲ್ಲ, ಅವರ ಏಕೈಕ ಗುರಿ ಭಾರತದ ಶಕ್ತಿಯನ್ನು ದುರ್ಬಲಗೊಳಿಸುವುದು’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಮೋದಿ ವಿರುದ್ಧ ಅಪಪ್ರಚಾರ, ಸಾಕ್ಷ್ಯ ಚಿತ್ರದ ಮೂಲಕ ಬ್ರಿಟಿಷ್ ಟಿವಿ ಹುನ್ನಾರ!

ಮತ್ತೆ ಸಾಕ್ಷ್ಯಚಿತ್ರ ಶೇರ್‌ ಮಾಡಿದ ಟಿಎಂಸಿ ಎಂಪಿ
ಗುಜ​ರಾತ್‌ ಗಲ​ಭೆ​ ಕುರಿ​ತಾಗಿ ಬಿಬಿಸಿ ನಿರ್ಮಾಣ ಮಾಡಿ​ರುವ ಸಾಕ್ಷ್ಯ​ಚಿ​ತ್ರ​ವನ್ನು ಭಾರ​ತ​ದಲ್ಲಿ ಸರ್ಕಾರ ನಿಷೇ​ಧಿ​ಸಿ​ದ್ದರೂ ಸಹ ತೃಣ​ಮೂಲ ಕಾಂಗ್ರೆ​ಸ್‌ನ ಸಂಸದೆ ಮಹುವಾ ಮೊಯಿತ್ರಾ ಸಾಕ್ಷ್ಯ​ಚಿ​ತ್ರದ ಲಿಂಕ್‌ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿ​ಕೊಂಡಿ​ದ್ದಾರೆ. ಈ ಮೂಲಕ ಕೇಂದ್ರ ಸರ್ಕಾ​ರದ ನಿರ್ಧಾ​ರಕ್ಕೆ ಸಡ್ಡು ಹೊಡೆ​ದಿ​ದ್ದಾರೆ.

‘ಕ್ಷ​ಮಿಸಿ, ಸೆನ್ಸಾ​ರ್‌​ಶಿಪ್‌ ಅನ್ನು ಒಪ್ಪಿ​ಕೊ​ಳ್ಳು​ವು​ದ​ಕ್ಕಾಗಿ ವಿಶ್ವದ ಅತಿ ದೊಡ್ಡ ಪ್ರಜಾ​ಪ್ರ​ಭುತ್ವ ರಾಷ್ಟ್ರವನ್ನು ಪ್ರತಿ​ನಿ​ಧಿ​ಸಲು ಆಯ್ಕೆ​ಯಾ​ಗಿಲ್ಲ’ ಎಂದು ಮಹುವಾ ಹೇಳಿ​ದ್ದಾ​ರೆ. ಈ ಸಾಕ್ಷ್ಯ​ಚಿ​ತ್ರದ ಮೊದಲ ಭಾಗದ ಲಿಂಕ್‌​ಗ​ಳನ್ನು ಸಾಮಾ​ಜಿಕ ಜಾಲ​ತಾ​ಣ​ದಿಂದ ತೆಗೆ​ದು​ಹಾ​ಕು​ವಂತೆ ಸರ್ಕಾರ ಸೂಚಿ​ಸಿದ ಒಂದು ದಿನದ ತರು​ವಾಯ ಮಹುವಾ ಇದನ್ನು ಹಂಚಿ​ಕೊಂಡಿ​ದ್ದಾರೆ.

ಇದನ್ನೂ ಓದಿ: ವಿವಾದಿತ ಮೋದಿ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಂಸ್ಥೆ ಸಮರ್ಥನೆ: ಭಾರತ, ರಿಷಿ ಸುನಕ್‌ ಟೀಕೆಗೆ ಸ್ಪಷ್ಟನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ
ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ