
ನವದೆಹಲಿ: ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತದ ಜತೆಗೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಪಾಕಿಸ್ತಾನವು 450 ಕಿ.ಮೀ. ದೂರ ಕ್ರಮಿಸಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದನ್ನು ಪರೀಕ್ಷಿಸಿದೆ. ಈ ಮೂಲಕ ಮತ್ತೊಮ್ಮೆ ಭಾರತವನ್ನು ಕೆರಳಿಸುವ ಪ್ರಯತ್ನ ನಡೆಸಿದೆ. ‘ಅಬ್ದಾಲಿ ವೆಪಸ್ ನಿಸ್ಟಂ’ ಹೆಸರಿನ ಈ ನೆಲದಿಂದ ನೆಲಕ್ಕೆ ಹಾರುವ ಈ ಕ್ಷಿಪಣಿಯನ್ನು ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ‘ಇಂಡಸ್’ ಸಮರಾಭ್ಯಾಸದ ಭಾಗವಾಗಿ ಪರೀಕ್ಷಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಈ ಕ್ಷಿಪಣಿ ಪರೀಕ್ಷೆಯು ಯುದ್ಧಸನ್ನದ್ಧ ಸ್ಥಿತಿ ಪರೀಕ್ಷಿಸಲು ಹಾಗೂ ಪ್ರಮುಖ ತಾಂತ್ರಿಕ ಮಾನದಂಡಗಳನ್ನು ಪರಿಶೀಲಿಸಲು ಕೈಗೊಳ್ಳಲಾಗಿದೆ ಎಂದು ಪಾಕ್ ಸರ್ಕಾರ ತಿಳಿಸಿದೆ. ಆದರೆ, ಭಾರತ ಸರ್ಕಾರದ ಮೂಲಗಳು, ಪಾಕಿಸ್ತಾನದ ಈ ಕ್ರಮವನ್ನು ಬೇಜವಾಬ್ದಾರಿಯ ಪ್ರಚೋದನಾ ಕೃತ್ಯ ಎಂದು ಟೀಕಿಸಿವೆ.
ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆಯೇ, ಪಾಕಿಸ್ತಾನವು ಲೈನ್ ಆಫ್ ಕಂಟ್ರೋಲ್‌ನಲ್ಲಿ ನಿಯಮಿತವಾಗಿ ಕದನ ವಿರಾಮ ಉಲ್ಲಂಘಿಸುತ್ತಲೇ ಇದ್ದು, ಇದಕ್ಕೆ ಭಾರತ ಕೂಡ ಸೂಕ್ತ ಪ್ರತ್ಯುತ್ತರ ನೀಡಿದೆ.
ಪಂಜಾಬ್‌ನ ಮಾಜಿ ಸಿಎಂ ಚರಣಜೀತ್ ಸಿಂಗ್ ಚನ್ನಿ ವಿವಾದಾತ್ಮಕ ಹೇಳಿಕೆ
ಪಹಲ್ಗಾಂ ಉಗ್ರದಾಳಿಯ ಬಳಿಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ಭಾರತೀಯ ಸೇನೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ, 2019ರಲ್ಲಿ ನಡೆದ ಪುಲ್ವಾಮಾ ಉಗ್ರದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಅನ್ನು ಪಂಜಾಬ್‌ನ ಮಾಜಿ ಸಿಎಂ ಚರಣಜೀತ್ ಸಿಂಗ್ ಚನ್ನಿ ಅನುಮಾನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೆನ್ನಿ, ‘ಸರ್ಜಿಕಲ್ ದಾಳಿಯನ್ನು ಯಾರೂ ನೋಡಿಲ್ಲ. ಅದು ಪಾಕಿಸ್ತಾನದ ಯಾವ ಭಾಗದಲ್ಲಿ ನಡೆಯಿತು ಎಂದು ಯಾರಿಗೂ ಗೊತ್ತಿಲ್ಲ. ದಾಳಿ ಸಂಬಂಧ ನಾನು ಸಾಕ್ಷ್ಯಗಳನ್ನು ಕೇಳುತ್ತಲೇ ಇದ್ದೇನೆ’ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಅಂತೆಯೇ, ‘ಪಹಲ್ಗಾಂ ದಾಳಿಯಾಗಿ 10 ದಿನವಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. 56 ಇಂಚಿನ ಎದೆಯಿರುವ(ಪ್ರಧಾನಿ ಮೋದಿ)ವರ ಪ್ರತಿಕ್ರಿಯೆಗೆ ದೇಶ ಕಾಯುತ್ತಿದೆ’ ಎಂದು ಹೇಳಿದ್ದಾರೆ.
ಪಾಕ್‌ಗೆ ಹೋಗಿ ನೋಡಿ ಎಂದ ಬಿಜೆಪಿ
ಚನ್ನಿ ಹೇಳಿಕೆಗೆ ತಿರುಗೇಟು ನೀಡಿರುವ ದೆಹಲಿ ಸಚಿವ ಮಜಿಂದರ್ ಸಿಂಗ್ ಸಿರ್ಸಾ, ‘ಇದು ಕಾಂಗ್ರೆಸ್ ಮತ್ತು ಗಾಂಧಿ ಪರಿವಾರದ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ. ಇವರೆಲ್ಲ ದೇಶದ ಸೇನೆಯ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಜಿಕಲ್ ದಾಳಿಯಿಂದ ಭಾರತ ನಮಗೆ ಅಪಾರ ಹಾನಿ ಮಾಡಿದೆ ಎಂದು ಪಾಕಿಸ್ತಾನವೇ ಹೇಳುತ್ತಿದೆ. ಇದಕ್ಕೆ ಸಾಕ್ಷಿ ಬೇಕಿದ್ದಲ್ಲಿ ರಾಹುಲ್ ಗಾಂಧಿ ಜತೆ ಪಾಕಿಸ್ತಾನಕ್ಕೇ ಹೋಗಿ’ ಎಂದಿದ್ದಾರೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಾತನಾಡಿ, ‘ಹೊರಗಿಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಂತೆ ಕಂಡರೂ ಅದು ಪಾಕಿಸ್ತಾನ ಕಾರ್ಯಕಾರಿ ಸಮಿತಿ. ಅದು ಪಾಕಿಸ್ತಾನಿ ಸೇನೆ, ಉಗ್ರರಿಗೆ ಆಮ್ಲಜನಕ ಪೂರೈಸಿ ನೈತಿಕ ಸ್ಥೈರ್ಯ ತುಂಬುವ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ’ ಎಂದು ಟೀಕಿಸಿದ್ದಾರೆ.
ಆಗಿದ್ದು ಆಗಿ ಹೋಯಿತು: ಫಾರೂಖ್ ಅಬ್ದುಲ್ಲಾ ವಿವಾದ
‘1990ರ ಕಾಶ್ಮೀರಿ ಪಂಡಿತರ ನರಮೇಧ ನನ್ನ ಅವಧಿಯಲ್ಲಿ ನಡೆದಿಲ್ಲ. ಅದು ನಡೆದಿದ್ದೇ ಹೌದಾದರೆ, ಆಗಿದ್ದು ಆಗಿಹೋಯಿತು. ನಾನೇನು ಮಾಡಲಿ?’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ‘1990ರ ಕಾಶ್ಮೀರಿ ಪಂಡಿತರ ನರಮೇಧಕ್ಕೆ ನೀವು ನನ್ನನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದೀರಿ. ಅದು ಆಗಿಹೋಗಿದೆ. ನಾನೇನು ಮಾಡಲಿ?’ ಎಂದಿದ್ದಾರೆ.
ಅಬ್ದುಲ್ಲಾ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ
1990ರ ಜ.19ರಂದು, ಅಬ್ದುಲ್ಲಾ ರಾಜೀನಾಮೆ ಬಳಿಕ ಉಗ್ರರಿಂದ ಸುಮಾರು 1,500 ಕಾಶ್ಮೀರಿ ಪಂಡಿತರ ಹತ್ಯೆ ನಡೆದಿತ್ತು. 5 ಲಕ್ಷಕ್ಕೂ ಅಧಿಕ ಪಂಡಿತರು ಪ್ರಾಣ ಉಳಿಸಿಕೊಳ್ಳಲು ರಾತ್ರೋರಾತ್ರಿ ಕಾಶ್ಮೀರ ಬಿಟ್ಟು ಓಡಿಬಂದಿದ್ದರು. ಆ ಕುರಿತು ಅಬ್ದುಲ್ಲಾರಿಗೆ ಮೊದಲೇ ಮಾಹಿತಿಯಿತ್ತು ಎಂಬ ಆರೋಪ ಮೊದಲಿನಿಂದಲೂ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ