
ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನ ಭಾರತ ಪಾಕ್ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ( ceasefire violation)ನಿರಂತರವಾಗಿ ದಾಳಿ ಮಾಡುತ್ತಲೇ ಇದೆ. ಇಂದು ಅದು ಗಡಿ ನಿಯಂತ್ರಣ ರೇಖೆಯುದ್ದಕ್ಕೂ 8ಕಡೆಗಳಲ್ಲಿ ಗುಂಡಿನ ದಾಳಿ ಮಾಡಿದೆ. ಕುಪ್ವಾರ, ಬಾರಾಮುಲ್ಲಾ, ಪೂಂಚ್, ರಾಜೌರಿ, ಮೆಂಧರ್, ನೌಶೇರಾ, ಸುಂದರಬಾನಿ ಮತ್ತು ಅಖ್ನೂರ್ ಮುಂತಾದ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಭಾರತೀಯ ಸೇನೆಯೂ ಪ್ರತಿದಾಳಿ ನಡೆಸಿ ತಕ್ಕ ಉತ್ತರ ನೀಡಿದೆ ಎಂದು ವರದಿಯಾಗಿದೆ.
ಶನಿವಾರ ಮತ್ತು ಭಾನುವಾರ ನಡುವೆ ಮಧ್ಯರಾತ್ರಿಯಲ್ಲಿ ಕೇಂದ್ರಾಡಳಿತ ಪ್ರದೇಶದ ಐದು ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಮಾಡಿರುವುದು ವರದಿಯಾಗಿದೆ ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನ ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆಯೂ ಸತತ 10ನೇ ದಿನವೂ ನಡೆದ ಅಪ್ರಚೋದಿತ ಗುಂಡಿನ ದಾಳಿ ಇದಾಗಿದೆ.
ಮೇ 3 ಮತ್ತು 4 ರ ರಾತ್ರಿ, ಪಾಕಿಸ್ತಾನ ಸೇನಾ ಪೋಸ್ಟ್‌ಗಳು ಜಮ್ಮು ಕಾಶ್ಮೀರದ ( Jammu and Kashmir) ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ರಾಜೌರಿ, ಮೆಂಧರ್, ನೌಶೇರಾ, ಸುಂದರ್‌ಬಾನಿ ಮತ್ತು ಅಖ್ನೂರ್ ಎದುರಿನ ಪ್ರದೇಶಗಳಲ್ಲಿ ಎಲ್‌ಒಸಿಯಾದ್ಯಂತ ಸಣ್ಣ ಶಸ್ತ್ರಾಸ್ತ್ರಗಳಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಇದಕ್ಕೆ ಭಾರತೀಯ ಸೇನೆಯು ತಕ್ಷಣ ಪ್ರತ್ಯುತ್ತರ ನೀಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
2021 ಫೆಬ್ರವರಿ 25ರಂದು ಭಾರತ ಮತ್ತು ಪಾಕಿಸ್ತಾನ (Pakistan) ಕದನ ವಿರಾಮ ಒಪ್ಪಂದವನ್ನು ನವೀಕರಿಸಿದಾಗಿನಿಂದ ಎಲ್‌ಒಸಿ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ (ಐಬಿ) ಕದನ ವಿರಾಮ ಉಲ್ಲಂಘನೆಗಳು ಬಹಳ ಅಪರೂಪವಾಗಿದ್ದವು. ಆದರೆ ಪಹಲ್ಗಾಮ್ ದಾಳಿಯ ನಂತರ ಇದು ನಿರಂತರವಾಗಿದೆ. ಹೀಗಾಗಿ ಭಯಭೀತರಾದ ಗಡಿ ಗ್ರಾಮಸ್ಥರು ತಮ್ಮ ಸಮುದಾಯ ಮತ್ತು ವೈಯಕ್ತಿಕ ಬಂಕರ್‌ಗಳನ್ನು ವಾಸಯೋಗ್ಯವಾಗಿಸಲು ಈಗಾಗಲೇ ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳ ನಂತರ, ಏಪ್ರಿಲ್ 24 ರ ರಾತ್ರಿಯಿಂದಲೇ ಪಾಕಿಸ್ತಾನಿ ಪಡೆಗಳು ಕಾಶ್ಮೀರ ಕಣಿವೆಯಿಂದ ಪ್ರಾರಂಭಿಸಿ ಜೆ-ಕೆ ಯ ಎಲ್‌ಒಸಿಯ ವಿವಿಧ ಸ್ಥಳಗಳಲ್ಲಿ ನಿರಂತರ ಅಪ್ರಚೋದಿತ ಗುಂಡಿನ ದಾಳಿ (unprovoked firing) ನಡೆಸುತ್ತಲೇ ಇವೆ. ಆರಂಭದಲ್ಲಿ ಉತ್ತರ ಕಾಶ್ಮೀರದ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎಲ್‌ಒಸಿ ಉದ್ದಕ್ಕೂ ಹಲವಾರು ಪೋಸ್ಟ್‌ಗಳ ಮೇಲೆ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಲು ಪ್ರಾರಂಭಿಸಿದ ಪಾಕಿಸ್ತಾನ, ನಂತರ ತನ್ನ ಕದನ ವಿರಾಮ ಉಲ್ಲಂಘನೆಯನ್ನು ಪೂಂಚ್ ವಲಯಕ್ಕೆ ಮತ್ತು ನಂತರ ಜಮ್ಮು ಪ್ರದೇಶದ ಅಖ್ನೂರ್ ವಲಯಕ್ಕೂ ವಿಸ್ತರಿಸಿತು.
ಇದರ ನಂತರ ರಾಜೌರಿ ಜಿಲ್ಲೆಯ ಸುಂದರ್‌ಬನಿ ಮತ್ತು ನೌಶೇರಾ ಸೆಕ್ಟರ್‌ಗಳಲ್ಲಿನ ಎಲ್‌ಒಸಿ ಉದ್ದಕ್ಕೂ ಹಲವಾರು ಪೋಸ್ಟ್‌ಗಳ ಮೇಲೆ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಲಾಗಿದೆ ಇದಾದ ನಂತರ ಪೂಂಚ್ ಜಿಲ್ಲೆಯ ಮೆಂಧರ್ ಮತ್ತು ಜಮ್ಮು ಜಿಲ್ಲೆಯ ಪರ್ಗ್ವಾಲ್ ಸೆಕ್ಟರ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿಗೂ ಈ ಅಪ್ರಚೋದಿತ ದಾಳಿ ವಿಸ್ತರಿಸಿದೆ. ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ ಇತ್ತೀಚೆಗೆ ನಡೆದ ಹಾಟ್‌ಲೈನ್ ಸಂಭಾಷಣೆಯ ಹೊರತಾಗಿಯೂ, ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದ್ದರೂ, ಕದನ ವಿರಾಮ ಉಲ್ಲಂಘನೆಗಳು ಇಲ್ಲಿ ಮುಂದುವರಿಯುತ್ತಲೇ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ