
ಭಾರತದಲ್ಲಿ ಅನಕ್ಷರಸ್ಥರಿಗಿಂತ ಕೆಲ ಸುಶಿಕ್ಷಿತರೇ ಅನಾಗರಿಕರಂತೆ ವರ್ತಿಸುತ್ತಾರೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ದೇಶದ ಪ್ರವಾಸಿ ತಾಣಗಳಲ್ಲಿ ಎಲ್ಲೆಂದರಲ್ಲಿ ಎಸೆದಿರುವ ಕಸವೇ ಇದಕ್ಕೊಂದು ದೊಡ್ಡ ಸಾಕ್ಷಿಯಾಗಿದೆ. ಸರ್ಕಾರ ಕಸದ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೂ ನಮ್ಮ ಸಾರ್ವಜನಿಕ ಸ್ಥಳಗಳು ಸದಾ ಕಸಕಡ್ಡಿಗಳಿಂದ ಬೇಡದ ಪ್ಲಾಸ್ಟಿಕ್‌ಗಳಿಂದ ತುಂಬಿರುತ್ತದೆ. ಇದಕ್ಕೆ ಯಾರು ಹೊಣೆ ಎಂದರೆ ನಾವೇ, ಸುಶಿಕ್ಷಿತರೇ, ವೈಯಕ್ತಿಕ ಆಸ್ತಿಯ ಬಗ್ಗೆ ನಮಗಿರುವ ಕಾಳಜಿ ಸಾರ್ವಜನಿಕ ಆಸ್ತಿ ಸ್ಥಳಗಳ ಬಗ್ಗೆ ಇರುವುದಿಲ್ಲ, ಸಾರ್ವಜನಿಕ ಸಾರಿಗೆಯಲ್ಲಿಯೂ ನೀವು ಇದನ್ನು ನೋಡಬಹುದು, ಸರ್ಕಾರಿ ಬಸ್, ರೈಲುಗಳಲ್ಲಿ ಎಲ್ಲೆಂದರಲ್ಲಿ ಜನ ಕಸವನ್ನು ಕಾಲ ಕೆಳಗೆಯೇ ಎಸೆಯುತ್ತಾರೆ ಅಥವಾ ಕಿಟಕಿಯಿಂದ ಹೊರಗೆ ಎಸೆಯುತ್ತಾರೆ. ಇದು ಭೂಮಿಯೊಳಗೆ ಸೇರಿ ಪರಿಸರಕ್ಕೆ ಹಾನಿ ಮಾಡುತ್ತದೆ.. ಅವಿದ್ಯಾವಂತರು ಈ ರೀತಿ ಮಾಡಿದರೆ ಅವರಿಗೆ ಅರಿವಿಲ್ಲ ಎಂದು ಹೇಳಬಹುದು. ಆದರೆ ಶಿಕ್ಷಣ ಪಡೆದಿರುವ ಸುಶಿಕ್ಷಿತರೇ ಮರ್ಸಿಡಿಸ್ ಬೇಂಜ್ ಕಾರಲ್ಲಿ ಓಡಾಡುವವರೇ ಹೀಗೆ ಮಾಡಿದರೆ ಹೇಗೆ?
ಮರ್ಸಿಡಿಸ್ ಬೇಂಜ್ ಕಾರಿನಿಂದ ರಸ್ತೆಗೆ ಕಸ ಎಸೆದ ಮಹಿಳೆ:
ಹೌದು ಇಲ್ಲೊಬ್ಬಳು ಮರ್ಸಿಡಿಸ್ ಕಾರ್‌ನಲ್ಲಿ ಸಾಗುತ್ತಿದ್ದ ಯುವತಿ ತನ್ನ ಕಾರಿನಲ್ಲಿದ್ದ ಕಸವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ. ಚಾಲಕ ಕಾರು ಓಡಿಸುತ್ತಿದ್ದರೆ 40 ದಾಟಿದ ಮಹಿಳೆಯೊಬ್ಬರು ಆಹಾರವನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ತಿಂದು ನಂತರ ಆಹಾರ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆಗೆ ಎಸೆದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಆ ಮಹಿಳೆ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು ಪ್ರಶ್ನೆ ಮಾಡಿದವರನ್ನೇ ಇಂಗ್ಲೀಷ್‌ನಲ್ಲಿ ಬೈದಿದ್ದಾಲೆ. ಹರ್ಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯ ಬ್ಯುಸಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ವಿಚಾರವನ್ನು ನೋಡಿದ ವ್ಯಕ್ತಿಯೊಬ್ಬರು ರೆಡಿಟ್‌ನಲ್ಲಿ ಈ ಬಗ್ಗೆ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ. @TurbulentRikhi1990 ಎಂಬ ರೆಡಿಟ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ.
ರೆಡಿಟ್‌ನಲ್ಲಿ ಘಟನೆಯ ವಿವರ ನೀಡಿದ ವ್ಯಕ್ತಿ
ಗಣ್ಯ ವ್ಯಕ್ತಿಗಳ ನಾಗರಿಕ ಪ್ರಜ್ಞೆ ಹೇಗಿದೆ ನೋಡಿ ಎಂದು ಶೀರ್ಷಿಕೆ ನೀಡಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಇಂದು ನನಗೆ ಆಘಾತ ಮತ್ತು ನಿರಾಶೆ ಮೂಡಿಸಿದ ಘಟನೆಯೊಂದು ನಡೆಯಿತು. ನಾನು ಗಾಲ್ಫ್ ಕೋರ್ಸ್ ರಸ್ತೆಯ ವುಡನ್ ಸ್ಟ್ರೀಟ್ ಶೋರೂಮ್ ಮುಂದೆ ನನ್ನ ಪಾರ್ಕ್ ಮಾಡಿದ ಕಾರಿನಲ್ಲಿ ಕುಳಿತಿದ್ದಾಗ ಸುಮಾರು 10 ಮೀಟರ್ ದೂರದಲ್ಲಿ ಮರ್ಸಿಡಿಸ್ ಇ-ಕ್ಲಾಸ್ ಕಾರು ನಿಂತಿರುವುದನ್ನು ಗಮನಿಸಿದೆ. ಬಹುಶಃ 40ರ ಹರೆಯದ ಮಹಿಳೆಯೊಬ್ಬರು ಹಿಂದಿನ ಸೀಟಿನಲ್ಲಿ ಆರಾಮವಾಗಿ ಕುಳಿತಿದ್ದರು. ಅವರ ಚಾಲಕ ಡ್ರೈವಿಂಗ್ ಸೀಟ್‌ನಲ್ಲಿದ್ದರು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆಕೆ ಏನನ್ನೊ ತಿಂದು ಕಾರಿನ ಕಿಟಕಿ ಗ್ಲಾಸನ್ನು ಕೆಳಗಿಳಿಸಿದ ಆಕೆ ಅದರ ಮೂಲಕ ತಾನು ತಿಂದ ಆಹಾರದ ತಟ್ಟೆ ಹಾಗೂ ಕೈ ಉಜ್ಜಿದ ಪೇಪರ್‌ನ್ನು ಸೀದಾ ಸೆನ್ರೈಸ್ ರಸ್ತೆಗೆ ಎಸೆದಳು. ಇದನ್ನು ನೋಡಿದ ನಾನು ನನ್ನ ಕಾರಿನಿಂದ ಹೊರಗೆ ಬಂದು, ಅವಳ ಕಿಟಕಿಗೆ ನಯವಾಗಿ ಬಡಿದು, ಕಸ ಹಾಕಬೇಡಿ ಎಂದು ಬೇಡಿಕೊಂಡೆ. ಅವಳ ಕಾರು, ಅವಳ ಉಡುಗೆ ಮತ್ತು ಅವಳ ಹಾವಭಾವವನ್ನು ನೋಡಿದಾಗ ಆಕೆಗೆ ಇದರ ಬಗ್ಗೆ ಅರಿವಿದ್ದು, ಆಕೆ ಅರ್ಥಮಾಡಿಕೊಂಡು ಜವಾಬ್ದಾರಿಯಿಂದ ವರ್ತಿಸಬಹುದು ಎಂದು ಭಾವಿಸಿದೆ. ಆದರೆ ಅವಳ ಪ್ರತಿಕ್ರಿಯೆ ನನ್ನನ್ನು ದಿಗ್ಭ್ರಮೆಗೊಳಿಸಿತು.
ಕಾರು ಸ್ವಚ್ಛ ಮಾಡೋದು ತುಂಬಾ ದುಬಾರಿ ಎಂದ ಮಹಿಳೆ:
ತನಗೆ ಎಲ್ಲೂ ಕಸದ ಬುಟ್ಟಿ ಕಾಣಿಸಲಿಲ್ಲ, ನನ್ನ ಕಾರಿನೊಳಗೆ ಕಸ ಹಾಕಲು ಆಗುವುದಿಲ್ಲ, ಬಹುಶಃ ನಿಮಗೆ ಗೊತ್ತಿಲ್ಲದಿರಬಹುದು. ಕಾರು ಕ್ಲೀನ್ ಮಾಡಿಸುವುದಕ್ಕೆ ತುಂಬಾ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಆಕೆ ಹೇಳಿದ್ದಾಳೆ. ನಂತರ ಕಿಟಕಿಯನ್ನು ಮುಚ್ಚಿದ ಆಕೆ ತನ್ನ ಕಾರು ಚಾಲಕನೊಂದಿಗೆ ಏನೋ ಗೊಣಗಾಡಿದ್ದಾಳೆ. ಇದಾದ ನಂತರ ಅವನು ಹೊರಬಂದು ನನ್ನನ್ನು ಅಲ್ಲಿಂದ ಹೋಗುವಂತೆ ಹೇಳಿದನು. ನಾನು ಅವರಲ್ಲಿ ವಾದಕ್ಕೆ ಸಿದ್ಧನಾಗಿದೆ. ಆದರೆ ಅದರಿಂದ ಪ್ರಯೋಜನವಿಲ್ಲವೆಂಬುದರ ಅರಿವಾಯ್ತು. ಪರಿಸ್ಥಿತಿಯ ವ್ಯಂಗ್ಯವೆಂದರೆ ಘನತೆ, ಶ್ರೀಮಂತಿಕೆ, ಶಿಕ್ಷಣ ಮುಂತಾದವನ್ನೆಲ್ಲಾ ಪ್ರದರ್ಶಿಸುವ ಜನರಿಗೆ ಸಾಮಾನ್ಯವಾಗಿ ಇರಬೇಕಾದ ನಾಗರಿಕ ಪ್ರಜ್ಞೆಯೂ ಇರುವುದಿಲ್ಲ, ಆ ದಿನದ ಪಾಠವೇನೆಂದರೆ ಶ್ರೀಮಂತರಾಗಿರುವುದು ನಿಮ್ಮನ್ನು ಗಣ್ಯರನ್ನಾಗಿ ಮಾಡುವುದಿಲ್ಲ. ನಿಜವಾದ ಘನತೆ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಗೌರವಿಸುವುದರಲ್ಲಿದೆ ಎಂದು ಅವರು ರೆಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ತಮಗೂ ಇದೇ ರೀತಿಯ ಅನುಭವ ಆದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಾಗರಿಕ ಪ್ರಜ್ಞೆಯ ವಿಚಾರಕ್ಕೆ ಬಂದರೆ ಗುರುಗ್ರಾಮ ಅತ್ಯಂತ ಕೆಟ್ಟ ನಗರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಶಿಕ್ಷಣ ನಿಮಗೆ ಉದ್ಯೋಗ ನೀಡುತ್ತದೆ ನಿಜ ಆದರೆ ಕೆಲವು ಕಾಮನ್ ಸೆನ್ಸ್‌ಗಳನ್ನು ಕಲಿಸುವುದಿಲ್ಲ ಎಂಬುದು ಅಷ್ಟೇ ಸತ್ಯ.
ಇದನ್ನೂ ಓದಿ: ಈ ಸೀರೆಗೆ ರವಿಕೆ ಬೇಕಿಲ್ಲ... ಹೊಸ ರೆಡಿ ಟು ವೇರ್ ಸೀರೆಗೆ ಫಿದಾ ಆದ ಹೆಂಗೆಳೆಯರು.. ವೀಡಿಯೋ ನೋಡಿ
ಇದನ್ನೂ ಓದಿ: ಇಷ್ಟೊಂದು ಹೊಟ್ಟೆಉರಿನಾ... ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ತೊಡಿಸುವ ಬದಲು ಬೀಳಿಸಲು ಯತ್ನಿಸಿದ ಬ್ಯೂಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ