
ಭೋಪಾಲ್: 23 ವರ್ಷ ಪ್ರಾಯದ ಎಳೆಯ ಗರ್ಭಿಣಿ ಮಹಿಳೆಯನ್ನು ವರದಕ್ಷಿಣೆಗಾಗಿ ಅತ್ತೆ ಮನೆಯವರೇ ಕೈ ಕಾಲು ಕತ್ತರಿಸಿ ಬರ್ಬರವಾಗಿ ಹತ್ಯೆಗೈದ ಅಮಾನೀಯ ಘಟನೆ ಮಧ್ಯಪ್ರದೇಶದ ರಾಜ್‌ಗರ್‌ನಲ್ಲಿ ನಡೆದಿದೆ. 23 ವರ್ಷದ ರೀನಾ ತನ್ವರ್ ಕೊಲೆಯಾದ ಗರ್ಭಿಣಿ, ಆಕೆಯ ಗಂಡ ಮಿಥುನ್ ಹಾಗೂ ಆತನ ಮನೆಯವವರು ವರದಕ್ಷಿಣೆ ತರುವಂತೆ ತಮ್ಮ ಮಗಳನ್ನು ಪೀಡಿಸುತ್ತಿದ್ದರು ಎಂದು ಹತ್ಯೆಯಾದ ರೀನಾಳ ಪೋಷಕರು ಆರೋಪಿಸಿದ್ದಾರೆ.
ರಾಜ್‌ಗರ್ ಜಿಲ್ಲೆಯ ತಂಡಿ ಕಾಳಿಪೀಠ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಖುರ್ದ್ ಗ್ರಾಮದಲ್ಲಿ ಈ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ. ತಮ್ಮ ಮಗಳನ್ನು ಮದುವೆ ಮಾಡಿ ಕೊಟ್ಟ ಗ್ರಾಮದ ವ್ಯಕ್ತಿಯೊಬ್ಬ ನಿಮ್ಮ ಮಗಳ ಕೊಲೆಯಾಗಿದೆ ಎಂದು ನಮಗೆ ಮಾಹಿತಿ ನೀಡಿದ ಎಂದು ಮಾಹಿತಿ ನೀಡಿದ್ದರು. ಹಿನ್ನೆಲೆಯಲ್ಲಿ ರೀನಾಳ ತಂದೆ ರಾಮ್‌ಪ್ರಸಾದ್ ತನ್ವರ್ ಅವರು ತಂಡಿ ಖುರ್ದ್ ಗ್ರಾಮಕ್ಕೆ ಪೊಲೀಸರೊಂದಿಗೆ ಬಂದಿದ್ದು, ಅಷ್ಟರಲ್ಲೇ ಆರೋಪಿಗಳು ಸೊಸೆಯ ಚಿತೆಗೆ ಬೆಂಕಿ ಇಟ್ಟು ಬೆಂಕಿ ಆರುವ ಮೊದಲೇ ಸ್ಥಳದಿಂದ ಪರಾರಿಯಾಗಿದ್ದಾರೆ.
ಕೂಡಲೇ ರೀನಾಳ ಕುಟುಂಬ ಸದಸ್ಯರು ಬೆಂಕಿ ನಂದಿಸಿದ್ದು,ಆಕೆಯ ಅರ್ಧ ಸುಟ್ಟ ದೇಹವನ್ನು ಹೊರತೆಗೆದು ಬಟ್ಟೆಯಲ್ಲಿ ಸುತ್ತಿ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. 5 ವರ್ಷದ ಹಿಂದೆ ಆಗಷ್ಟೇ 19ವರ್ಷ ತುಂಬಿದ್ದ ಮಗಳು ರೀನಾಳನ್ನು ಪೋಷಕರು ಮಿಥುನ್‌ಗೆ ಮದುವೆ ಮಾಡಿ ಕೊಟ್ಟಿದ್ದರು. ಈ ಜೋಡಿಗೆ ಒಂದು ಹೆಣ್ಣು ಮಗು ಇದ್ದು, ರೀನಾ 2ನೇ ಮಗುವಿಗಾಗಿ ಮತ್ತೆ ಗರ್ಭಿಣಿಯಾಗಿದ್ದರು.
ಆದರೆ ಧನದಾಹಿಗಳಾದ ಗಂಡನ ಮನೆಯವರು ಹಣಕ್ಕೆ ಬೇಡಿಕೆ ಇಟ್ಟು ನಿತ್ಯವೂ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ರೀನಾಳ ತಂದೆ ರಾಮ್‌ಪ್ರಸಾದ್ ಆರೋಪ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಳಿಪೀಠ್ ಪೊಲೀಸ್ ಠಾಣೆ ಇನ್‌ಚಾರ್ಜ್ ರಜನೀಶ್ ಸಿರೊಥಿಯಾ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ತನಿಖೆ ವೇಳೆ ತಿಳಿದು ಬರುವ ವಿಚಾರಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಘಟನೆಯ ಬಳಿಕ ಮಿಥುನ್ ತನ್ವರ್ ಕುಟುಂಬ ಪರಾರಿಯಾಗಿದ್ದಾರೆ.
ಎರಡು ದೇಹ ಎರಡು ಮುಖ 4 ಕೈಕಾಲುಗಳಿರುವ ವಿಚಿತ್ರ ಮಗುವಿಗೆ ಜನ್ಮ ನೀಡಿದ ತಾಯಿ
ಘಟನೆಗೆ ಸಂಬಂಧಿಸಿದಂತೆ ರೀನಾ ತನ್ವರ್ ಮನೆಯವರು ಮಾತನಾಡಿ, ರೀನಾ ಗಂಡನ ಮನೆಯವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನಾವು ಪ್ರತಿಸಲವೂ ವಿವಾದ ಬಗೆಹರಿಸುವುದಕ್ಕಾಗಿ ಅವರಿಗೆ ಹಣ ಕಳುಹಿಸುತ್ತಿದ್ದೆವು. ಈ ಸಲ ಮಾತ್ರ ಅವರು ಅವರು ಮಿತಿಮೀರಿದರು ಎಂದು ರೀನಾ ಸಂಬಂಧಿ ವಿಷ್ಣು ತನ್ವರ್ ಹೇಳಿದ್ದಾರೆ. ರೀನಾಳ ಗ್ರಾಮದವರೊಬ್ಬರು ನಮಗೆ ಕರೆ ಮಾಡಿದ್ದು, ರೀನಾಳನ್ನು ಕೊಂದು ಸುಟ್ಟು ಹಾಕುತ್ತಿದ್ದಾರೆ ಎಂದು ತಿಳಿಸಿದರು. ವಿಚಾರ ತಿಳಿದು ಇಲ್ಲಿಗೆ ಬರುವ ವೇಳೆಗೆ ಬೆಂಕಿ ಹೊತ್ತಿ ಉರಿಯುತ್ತಿತ್ತು ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಒಟ್ಟಿನಲ್ಲಿ ಗರ್ಭಿಣಿ, ಹೊಟ್ಟೆಯಲ್ಲಿ ಮತ್ತೊಂದು ಜೀವವಿದೆ ಎಂಬುದನ್ನು ಲೆಕ್ಕಿಸದೇ ಪಾಪಿಗಳು ಹಣದಾಸೆಗಾಗಿ ಇನ್ನೂ ಬದುಕಿ ಬಾಳಬೇಕಾದ 23ರ ಹರೆಯದ ಮಹಿಳೆಯನ್ನು ಕೊಂದಿದ್ದು, ದುರಂತವೇ ಸರಿ. ವರದಕ್ಷಿಣೆ ಪ್ರಕರಣಗಳು ಇನ್ನೂ ಜೀವಂತವಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ