
ಮಣಿಪುರದಲ್ಲಿ ಕುಕಿ ಹಾಗೂ ಮೈಥಿಯೀ ಸಮುದಾಯದ ಜನರ ನಡುವಿನ ವೈಮನಸ್ಸಿನಿಂದಾಗಿ ಮಣಿಪುರ ಇನ್ನೂ ಬೂದಿ ಮುಚ್ಚಿದ ಕೆಂಡಂದಂತೆಯೇ ಇದೆ. ಈ ಎರಡು ಸಮುದಾಯಗಳ ಮಧ್ಯೆ ಭೂಮಿ, ಗುರುತು ಮತ್ತು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ 2023ರಿಂದಲೂ ತೀವ್ರ ವೈರತ್ವವಿದೆ. ಹೀಗಿರುವಾಗ ಕುಕೀ ಸಮುದಾಯದ ಹುಡುಗಿಯನ್ನು ಪ್ರೀತಿಸಿದ್ದ ಮೈಥಿಯೀ ಸಮುದಾಯದ ಯುವಕನೋರ್ವನನ್ನು ಆತ ಪ್ರೇಯಸಿಯ ಭೇಟಿಗೆ ಬಂದಿದ್ದ ವೇಳೆ ಕೈ ಕಾಲು ಕಟ್ಟಿ ಹಾಕಿ ಗುಂಡಿಕ್ಕಿ ಕೊಲೆ ಮಾಡಿದಂತಹ ಅಮಾನುಷ ಘಟನೆ ಮಣಿಪುರದಲ್ಲಿ ನಡೆದಿದೆ.
ಪ್ರೇಯಸಿಯನ್ನು ಭೇಟಿ ಮಾಡಲು ಬಂದ 31 ವರ್ಷದ ರಿಷಿಕಾಂತ್ ಕೊಲೆಯಾದ ಯುವಕ. ಇವರು ಚುರಾಚಂದ್‌ಪುರದಲ್ಲಿರುವ ತನ್ನ ಕುಕಿ ಸಮುದಾಯದ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿದ್ದಾಗ ಆತನನ್ನು ಅಪಹರಿಸಿದ ದುಷ್ಕರ್ಮಿಗಳ ಗುಂಪು ಕ್ಯಾಮರಾ ಮುಂದೆಯೇ ಆತನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬುಧವಾರ ಸಂಜೆ ಯುವಕ ರಿಷಿಕಾಂತ್‌ನನ್ನು ಅಪಹರಸಿ ಕೊಲೆ ಮಾಡಲಾಗಿದ್ದು, ಈ ಘಟನೆಯಿಂದಾಗಿ ಮಣಿಪುರ ಮತ್ತೆ ಉದ್ವಿಗ್ನಗೊಂಡಿದೆ. ಬುಧವಾರ ಸಂಜೆ 6.30ರ ಸುಮಾರಿಗೆ ಚುರಾಚಂದ್‌ಪುರ ಜಿಲ್ಲೆಯ ತುಯಿಬಾಂಗ್‌ನಲ್ಲಿರುವ ಅವರ ಗೆಳತಿಯ ನಿವಾಸದಿಂದ ರಿಷಿಕಾಂತ್‌ನನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಗಂಟೆಗಳ ನಂತರ ಜಿಲ್ಲೆಯ ನಟಜಂಗ್ ಗ್ರಾಮದ ಬಳಿ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಅವರನ್ನು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಇನ್ನೂ ಗುರುತಿಸಲಾಗಿಲ್ಲವಾದರೂ, ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಕೊಲೆಯಾದ ರಿಷಿಕಾಂತ ನೇಪಾಳದ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಕ್ರಿಸ್‌ಮಸ್‌ಗೆ ಮೊದಲು ಅವರು ತಮ್ಮ ಗೆಳತಿಯನ್ನು ಭೇಟಿ ಮಾಡಿದ್ದರು ಮತ್ತು ಡಿಸೆಂಬರ್ 19 ರಿಂದ ಚುರಚಂದಪುರದಲ್ಲಿರುವ ಆಕೆಯ ಮನೆಯಲ್ಲೇ ವಾಸಿಸುತ್ತಿದ್ದರು.
ಆತನ ಮೇಲೆ ಗುಂಡು ಹಾರಿಸಿದ ವೀಡಿಯೋವನ್ನು ದುಷ್ಕರ್ಮಿಗಳು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಆತ ಜೀವಕ್ಕಾಗಿ ಬೇಡಿಕೊಳ್ಳುವುದನ್ನು ಕಾಣಬಹುದು. ಆದರೂ ದುಷ್ಕರ್ಮಿಗಳು ಆತನ ಮೇಲೆ ಎರಡು ಬಾರಿ ಗುಂಡಿಕ್ಕಿದ್ದಾರೆ. ವೀಡಿಯೋದ ಕೊನೆಯಲ್ಲಿ ಆರೋಪಿಗಳು ನೋ ಪೀಸ್ ನೋ ಪಾಪ್ಯುಲರ್ ಗವರ್ನ್‌ಮೆಂಟ್ ಎಂಬ ಸಂದೇಶ ಸಾರಿದ್ದಾರೆ. ಶಾಂತಿ ಇಲ್ಲ, ಜನಪ್ರಿಯ ಸರ್ಕಾರವೂ ಇಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.
ಇದನ್ನೂ ಓದಿ: 29 ವರ್ಷಗಳ ನಂತರ ಮಂಗಳೂರು ಜೋಡಿ ಕೊಲೆ ಪ್ರಕರಣದ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ ಸದಸ್ಯ ಚಿಕ್ಕಹನುಮ ಬಂಧನ
ರಿಷಿಕಾಂತ್ ಸಾವು ಖಂಡಿಸಿ ರಿಷಿಕಾಂತ್ ಅವರ ಗ್ರಾಮವಾದ ಕಕ್ಚಿಂಗ್ ಜಿಲ್ಲೆಯ ಖುನೌದಲ್ಲಿ ಗುರುವಾರ ಭಾರಿ ಪ್ರತಿಭಟನೆಗಳು ನಡೆದಿವೆ. ಜನರು ವಾಬಗೈ-ಸುಗ್ನು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಜೋಡಿ ಚುರಾಚಂದ್‌ಪುರದಲ್ಲಿ ಉಳಿಯುವುದಕ್ಕೆ ಕುಕಿ ದಂಗೆಕೋರ ಗುಂಪುಗಳ ಒಂದು ಕೇಂದ್ರ ಸಂಸ್ಥೆಯಾದ ಕುಕಿ ರಾಷ್ಟ್ರೀಯ ಸಂಸ್ಥೆ (KNO) ಯಿಂದ ಅನುಮತಿ ಪಡೆದಿದ್ದರು ಎಂದು ವರದಿಯಾಗಿದೆ. ಆದರೆ ಈ ಕೆಎನ್‌ಒ ಮಾತ್ರ ರಿಷಿಕಾಂತ್ ಹತ್ಯೆಯಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದೆ.
ಇದನ್ನೂ ಓದಿ: ಬಯ್ಯೋ ಮೂಲಕವೇ ಎಲ್ಲರ ಮನ ಗೆದ್ದಿದ್ದ ಸೋಷಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ ನಿಧನ
ಹತ್ಯೆಯಾದ ರಿಷಿಕಾಂತ್ ಅವರ ಮರಣೋತ್ತರ ಪರೀಕ್ಷೆಯನ್ನು ಗುರುವಾರ ಚುರಾಚಂದ್‌ಪುರದಲ್ಲಿಯೇ ನಡೆಸಲಾಗಿದೆ. ಅವರ ಕುಟುಂಬ ಸದಸ್ಯರು ಚುರಾಚಂದ್‌ಪುರಕ್ಕೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ವೀಡಿಯೊ ಕರೆಯ ಮೂಲಕವೇ ಅವರು ಶವವನ್ನು ಗುರುತಿಸಿದರು. ಕಕ್ಚಿಂಗ್‌ನ ಎಸ್‌ಪಿ ಎಲ್ ಪ್ರಿಯದರ್ಶಿನಿ ಕುಟುಂಬವನ್ನು ಭೇಟಿ ಮಾಡಿ ಗುರುತು ಪತ್ತೆ ಪ್ರಕ್ರಿಯೆಯನ್ನು ಸುಗಮಗೊಳಿಸಿದರು. ಘಟನೆಯ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಲಾಗುತ್ತಿದೆ ಎಂದು ರಾಜ್ಯಪಾಲ ಎ.ಕೆ. ಭಲ್ಲಾ ಅವರು ಲೋಕಸಭಾ ಸಂಸದ ಡಾ. ಅಂಗೋಂಚ ಬಿಮೋಲ್ ಅಕೋಯಿಜಮ್ತ್ ನೇತೃತ್ವದ ಜಂಟಿ ಕ್ರಿಯಾ ಸಮಿತಿಯ ನಿಯೋಗಕ್ಕೆ ತಿಳಿಸಿದ್ದಾರೆ ಎಂದು ಮಣಿಪುರ ಲೋಕ ಭವನ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ