
ಜೈಪುರ: ಅವರಿಬ್ಬರೂ ಜೈಲು ಹಕ್ಕಿಗಳು, ಇಬ್ಬರು ಕೊಲೆ ಪ್ರಕರಣಗಳಲ್ಲಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೋಡಿ ಈಗ ಅವರಿಗೆ ಜೈಲಿನಲ್ಲೇ ಪ್ರೀತಿಯಾಗಿದ್ದು, ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಮದುವೆಯಾಗುವುದಕ್ಕಾಗಿ ನ್ಯಾಯಾಲಯವೂ ಪೆರೋಲ್ ನೀಡಿದೆ. ಅವರು ಕೊಲೆ ಮಾಡಿದ ಸಂತ್ರಸ್ತರ ಕುಟುಂಬವೀಗ ಕೋರ್ಟ್‌ನ ಈ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. 34 ವರ್ಷದ ಪ್ರಿಯಾ ಸೇಥ್ ಹಾಗೂ 29 ವರ್ಷದ ಹನುಮಾನ್ ಪ್ರಸಾದ್ ಮದುವೆಗೆ ಸಿದ್ಧಗೊಂಡ ಜೈಲು ಹಕ್ಕಿಗಳು. ಇಬ್ಬರು ಬೇರೆ ಬೇರೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದು, ಅದರಲ್ಲೂ ಹನುಮಾನ್ ಪ್ರಸಾದ್ ನಾಲ್ವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದವ ಹೀಗಾಗಿ ಈಗ ಈ ವಿಚಾರವೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಪ್ರಿಯಾ ಸೇಥ್ 2018ರಲ್ಲಿ ಜೈಪುರದಲ್ಲಿ ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥೆಯಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಈಕೆ ಮದುವೆಯಾಗಲು ಹೊರಟಿರುವ ಹನುಮಾನ್ ಪ್ರಸಾದ್ ಆಕೆಗಿಂತಲೂ ಖತರ್ನಾಕ್, ಆತ 2017ರಲ್ಲಿ ರಾಜಸ್ಥಾನದ ಅಲ್ವಾರದಲ್ಲಿ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದ, ನಂತರ ಆ ಮಹಿಳೆಯ ಗಂಡ, ಮೂವರು ಗಂಡು ಮಕ್ಕಳು ಹಾಗೂ ಸೋದರಳಿಯನನ್ನು ಕೊಲೆ ಮಾಡಿದ್ದ. ಇಬ್ಬರಿಗೂ 2023ರಲ್ಲಿ ನ್ಯಾಯಾಲಯವೂ ಜೀವಾವಧಿ ಶಿಕ್ಷೆ ವಿಧಿಸಿದೆ.
ಆದರೆ ಈ ಇಬ್ಬರು ಕೊಲೆ ಆರೋಪಿಗಳು ಜೈಲಿನಲ್ಲೇ ಪರಿಚಯವಾಗಿ ಮದುವೆಯಾಗಲು ನಿರ್ಧರಿಸಿದ್ದು, ಮದುವೆಗಾಗಿ ಅವರಿಗೆ ಈಗ ರಾಜಸ್ಥಾನ ಹೈಕೋರ್ಟ್ 15 ದಿನಗಳ ಪೆರೋಲ್‌ನಲ್ಲಿ ಹೊರ ಬಂದಿದ್ದಾರೆ. ಜನವರಿ 7 ರಂದು ರಾಜಸ್ಥಾನ ಹೈಕೋರ್ಟ್ ಪೆರೋಲ್ ಸಮಿತಿಗೆ ಅವರ ಪೆರೋಲ್ ಅರ್ಜಿಗಳನ್ನು ಏಳು ದಿನಗಳಲ್ಲಿ ನಿರ್ಧರಿಸುವಂತೆ ನಿರ್ದೇಶನ ನೀಡಿತ್ತು. ಆ ಆದೇಶದ ಮೇರೆಗೆ ಕಾರ್ಯನಿರ್ವಹಿಸಿದ ಸಮಿತಿಯು ಇಬ್ಬರೂ ಅಪರಾಧಿಗಳಿಗೆ ಪೆರೋಲ್ ನೀಡಿದೆ ಎಂದು ಅವರ ವಕೀಲ ವಿಶ್ರಾಮ್ ಪ್ರಜಾಪತ್ ತಿಳಿಸಿದ್ದಾರೆ. ಪ್ರಸಾದ್ ಹುಟ್ಟೂರಾದ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬರೋದಮಿಯೊದಲ್ಲಿ ಅವರ ಮದುವೆ ನಿಗದಿಯಾಗಿದೆ. ಸಂಗನೇರ್‌ನಲ್ಲಿರುವ ತೆರೆದ ಜೈಲಿನಲ್ಲಿ ಇಬ್ಬರೂ ಸುಮಾರು ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂದು ಜೈಲಿನ ಮೂಲಗಳು ಹೇಳಿವೆ.
ರಾಜಸ್ಥಾನ ಕೈದಿಗಳ ಮುಕ್ತ ವಾಯು ಶಿಬಿರ ನಿಯಮ 1972 ರ (Rajasthan Prisoners Open Air Camp Rules 1972) ಅಡಿಯ ಪ್ರಕಾರ, ಆರು ಸದಸ್ಯರ ಸಮಿತಿಯು ಈ ಕೈದಿಗಳನ್ನು ತೆರೆದ ಗಾಳಿ ಶಿಬಿರಕ್ಕೆ ವರ್ಗಾಯಿಸುವ ಬಗ್ಗೆ ನಿರ್ಧಾರ ಮಾಡಲಿದೆ ಎಂದು ವರದಿಯಾಗಿದೆ., ಅಲ್ಲಿ ಅವರು ಕೆಲಸಕ್ಕೆ ಹೋಗಿ ಪ್ರತಿದಿನ ಸಂಜೆ ಶಿಬಿರಕ್ಕೆ ಮರಳಲು ಅವಕಾಶವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಈ ಕೊಲೆ ಆರೋಪಿಗಳ ಮದುವೆ ವಿಚಾರ ಈಗ ಕೊಲೆ ಸಂತ್ರಸ್ತರ ಕುಟುಂಬವನ್ನು ಮರುಗುವಂತೆ ಮಾಡಿದೆ. ಪ್ರಿಯಾ ಸೇಠ್ ಪ್ರಕರಣದಲ್ಲಿ ಸಂತ್ರಸ್ತನ ಕುಟುಂಬದ ವಕೀಲ ಸಂದೀಪ್ ಲೋಹರಿಯಾ ಅವರು ಆಕೆಗೆ ನೀಡಿರುವ ಪೆರೋಲ್ ಅನ್ನು ವಿರೋಧಿಸಿ, ಈ ನಿರ್ಧಾರವನ್ನು ಪ್ರಶ್ನಿಸುವುದಾಗಿ ಹೇಳಿದ್ದಾರೆ. ಪೆರೋಲ್ ಮಂಜೂರು ಮಾಡಿದ ನಂತರವೂ ಸಮಿತಿಯಿಂದ ನಮಗೆ ಮಾಹಿತಿ ನೀಡಲಾಗಿಲ್ಲ. ಇದರ ವಿರುದ್ಧ ನಾವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸೋದರನಿಗೆ ಅಪಘಾತವಾಗಿದೆ ಆಸ್ಪತ್ರೆಗೆ ಹೋಗಬೇಕು: ಹೆದ್ದಾರಿಯಲ್ಲಿ ಇದು ಹೊಸ ಸ್ಕ್ಯಾಮಾ? ಬೈಕರ್ ಮಾಡಿದ್ದೇನು?
ಜೈಪುರದ ಹೊರವಲಯದಲ್ಲಿ ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾದ ನಂತರ ನಗರ ಪೊಲೀಸರು ಪ್ರಿಯಾ ಸೇಠ್‌ನನ್ನು ಬಂಧಿಸಿದ್ದರು. ಹೀಗೆ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ವ್ಯಕ್ತಿ ನಗರದ ಜೋತ್ವಾರಾ ಪ್ರದೇಶದ ನಿವಾಸಿ ದುಷ್ಯಂತ್ ಶರ್ಮಾ (27) ಎಂದು ನಂತರ ಗುರುತಿಸಲಾಗಿತ್ತು. ಶರ್ಮಾಗೆ ಡೇಟಿಂಗ್ ಆ್ಯಪ್ ಮೂಲಕ ಪ್ರಿಯಾ ಸೇಠ್‌ನ ಪರಿಚಯವಾಗಿತ್ತು. ನಂತರ ವಿಚಾರಣೆ ವೇಳೆ ಆಕೆ ಬಜಾಜ್ ನಗರದಲ್ಲಿರುವ ಆಕೆಯ ಬಾಡಿಗೆ ಫ್ಲಾಟ್‌ನಲ್ಲಿ ಆತನನ್ನು ಬಂಧಿಯಾಗಿ ಇರಿಸಿಕೊಂಡಿದ್ದಳು. ನಂತರ ಆತನನ್ನು ಕೊಲೆ ಮಾಡಿ, ಆತನ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಎಸೆದಿದ್ದಳು ಎಂಬುದು ತಿಳಿದು ಬಂದಿತ್ತು.
ಇದನ್ನೂ ಓದಿ: ಅಯ್ಯೋ ಪಾಪಿ: ಹೊಟ್ಟೆಪಾಡಿಗಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಗುಲಾಬಿ ಹೂ ಮಾರುತ್ತಿದ್ದ 11 ವರ್ಷದ ಬಾಲಕಿಯ ಅಪಹರಿಸಿ ಅತ್ಯಾ*ಚಾರ
ಹಾಗೆಯೇ ಶಿಕ್ಷೆಗೊಳಗಾಗಿರುವ ಹನುಮಾನ್ ಪ್ರಸಾದ್ 2017 ರಲ್ಲಿ ಅಲ್ವಾರ್‌ನಲ್ಲಿ ನಡೆದ ವ್ಯಕ್ತಿ, ಆತನ ಮೂವರು ಗಂಡು ಮಕ್ಕಳು ಮತ್ತು ಸೋದರಳಿಯನ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿದ್ದಾನೆ. ಆರೋಪಿ ಪ್ರಸಾದ್ ಆ ವ್ಯಕ್ತಿಯ ಪತ್ನಿ ಸಂತೋಷ್ ಶರ್ಮಾ ಜೊತೆ ಸಂಬಂಧ ಬೆಳೆಸಿಕೊಂಡಿದ್ದ ನಂತರ ಇಬ್ಬರೂ ಸೇರಿ ಕುಟುಂಬವನ್ನು ಕೊಲ್ಲಲು ಸಂಚು ರೂಪಿಸಿದ್ದರು.
ಅದೇನೆ ಇರಲಿ ಇಷ್ಟೊಂದು ಭೀಕರ ಕೊಲೆಗಳನ್ನು ಮಾಡಿರುವ ಇವರಿಗೆ ಮದುವೆ ಹಾಗೂ ಜೈಲಿನಲ್ಲಿ ಸಂಸಾರ ಮಾಡುವುದಕ್ಕೂ ಅವಕಾಶ ನೀಡಿರುವುದು ಎಷ್ಟು ಸರಿ. ಈ ಮೂಲಕ ನ್ಯಾಯಾಲಯ ಸಮಾಜಕ್ಕೆ ಯಾವ ರೀತಿಯ ಸಂದೇಶ ಸಾರುವುದಕ್ಕೆ ಹೊರಟಿದೆ ಎಂಬುದನ್ನು ನ್ಯಾಯಾಲಯವೇ ತಿಳಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ