ಮದುವೆ ಮನೆಯಲ್ಲೇ ವರನಿಗೆ ಚಾಕು ಇರಿತ: 2 ಕಿ.ಮೀವರೆಗೆ ಹಿಂಬಾಲಿಸಿದ ಡ್ರೋನ್ ಕ್ಯಾಮರಾ!

Published : Nov 12, 2025, 07:23 PM IST
drone capture stabing accused

ಸಾರಾಂಶ

ಮಹಾರಾಷ್ಟ್ರದ ಅಮರಾವತಿಯಲ್ಲಿ, ಮದುವೆ ದಿನವೇ ವರನಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಈ ಸಂಪೂರ್ಣ ಘಟನೆಯು ಮದುವೆಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಡ್ರೋನ್ ಆಪರೇಟರ್‌ನ ಸಮಯಪ್ರಜ್ಞೆಯಿಂದ ಆರೋಪಿಯನ್ನು ಸುಮಾರು 2 ಕಿ.ಮೀ ವರೆಗೆ ಹಿಂಬಾಲಿಸಲಾಗಿದೆ.

ಮದುವೆ ದಿನವೇ ವರನಿಗೆ ಚೂರಿ ಇರಿತ

ಮದುವೆ ದಿನವೇ ವರನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಂತಹ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಇಲ್ಲಿನ ಬದ್ನೇರಾ ರಸ್ತೆಯ ಸಾಹಿಲ್‌ ಮದುವೆ ಹಾಲ್‌ನಲ್ಲಿ 22 ವರ್ಷದ ಸುಜಲ್ ರಾಮ್ ಸಮುದ್ರ ಎಂಬುವವರ ಮದುವೆ ನಿಗದಿಯಾಗಿತ್ತು. ಮದುವೆ ಸಮಾರಂಭದ ಚಿತ್ರೀಕರಣಕ್ಕಾಗಿ ಡ್ರೋನ್ ಕ್ಯಾಮರಾಗಳನ್ನು ನಿಯೋಜಿಸಲಾಗಿತ್ತು. ರಾತ್ರಿ 9.30ರ ಸುಮಾರಿಗೆ ಮದುವೆ ಹಾಲ್‌ಗೆ ಬಂದ ದುಷ್ಕರ್ಮಿಗಳು ವೇದಿಕೆ ಏರಿ ಮದುಮಗನಿಗೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಆದರೆ ಮದುವೆಯನ್ನು ಶೂಟ್ ಮಾಡುವುದಕ್ಕೆ ಇದ್ದ ಡ್ರೋನ್ ಕ್ಯಾಮರಾ ಈ ದುಷ್ಕರ್ಮಿಗಳ ಚಲನವಲನವನ್ನು ಸೆರೆ ಹಿಡಿದಿದೆ. ಜೊತೆಗೆ ಡ್ರೋನ್ ಆಪರೇಟರ್‌ನ ಬುದ್ಧಿವಂತಿಕೆಯಿಂದಾಗಿ ಸುಮಾರು 2 ಕಿಲೋ ಮೀಟರ್ ದೂರದವರೆಗೆ ಅವರನ್ನು ಹಿಂಬಾಲಿಸಿಕೊಂಡು ಹೋಗಿದೆ.

ಮದುಮಗನಿಗೆ ಇರಿದು ಕೊಲೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ರಾಘೋ ಜಿತೇಂದ್ರ ಬಕ್ಷಿ ಎಂದು ಗುರುತಿಸಲಾಗಿದೆ. ಈತ ಸುಜಲ್ ರಾಮ್ ಸಮುದ್ರ ಎಂಬ ಯುವಕನ ಮದುಗೆ ಅತಿಥಿಯಂತೆ ಬಂದು ಸೀದಾ ವೇದಿಕೆ ಮೇಲೇರಿ ವರನಿಗೆ ಸುಮಾರು ಮೂರು ಬಾರಿ ಇರಿದಿದ್ದಾನೆ. ಇದರಿಂದ ವರ ಸುಜಲ್ ರಾಮ್ ಅವರ ತೊಡೆ ಮೊಣಕಾಲಿಗೆ ಗಾಯವಾಗಿದೆ.

ಅಪರಾಧಿಯ 2 ಕಿಲೋ ಮೀಟರ್ ಹಿಂಬಾಲಿಸಿದ ಡ್ರೋನ್ ಕ್ಯಾಮರಾ

ಆದರೆ ಈ ಸಮಯದಲ್ಲಿ ಸಮಯಪ್ರಜ್ಞೆ ಮೆರೆದ ಕ್ಯಾಮರಾಮನ್ & ಡ್ರೋನ್ ಕ್ಯಾಮರಾ ಅಪರೇಟರ್ ದುಷ್ಕರ್ಮಿ ಹಾಗೂ ಆತನ ಕೃತ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಈ ದೃಶ್ಯಗಳು ಈಗ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವರನಿಗೆ ಇರಿದಿದ್ದು ನೋಡಿ ಮದುವೆಗೆ ಬಂದ ಅತಿಥಿಗಳು ಭಯಗೊಂಡಿದ್ದಾರೆ. ಈ ವೇಳೆ ಡ್ರೋನ್ ಆಪರೇಟರ್ ದಾಳಿ ಮಾಡಿದ ಚಲನವಲನಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಲ್ಲದೇ ತಪ್ಪಿಸಿಕೊಳ್ಳಲು ಯತ್ನಿಸಿದ ಆತನನ್ನು ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ಡ್ರೋನ್ ಹಿಂಬಾಲಿಸುವಂತೆ ಮಾಡಿದ್ದಾನೆ.

ಆರೋಪಿಯು ತನ್ನ ಮುಖ ಮತ್ತು ತಪ್ಪಿಸಿಕೊಳ್ಳುವ ಮಾರ್ಗವನ್ನು ಸ್ಪಷ್ಟವಾಗಿ ತೋರಿಸುವ ಈ ದೃಶ್ಯಗಳನ್ನು ಈಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಇದನ್ನು ಪ್ರಕರಣದ ಪ್ರಮುಖ ಸಾಕ್ಷಿ ಎಂದು ಹೇಳಿದ್ದಾರೆ. ಒಂದು ನಿಮಿಷದ ವೀಡಿಯೋದಲ್ಲಿ ಆರೋಪಿ ಮದುವೆ ಹಾಲ್‌ಗೆ ಬಂದು ವರನಿಗೆ ಇರಿಯುವುರಿಂದ ಆರಂಭಿಸಿ ಅಲ್ಲಿಂದ ಹೊರಗೆ ಓಡಿ ಹೋಗಿ ಬೈಕ್ ಏರಿ ಹೊರಟು ಹೋಗುವ ದೃಶ್ಯಗಳು ಸೆರೆ ಆಗಿವೆ. ನವಜೋಡಿಯ ಸಂಬಂಧಿಯೊಬ್ಬರು ಆತನನ್ನು ಹಿಡಿಯುವುದಕ್ಕೆ ಯತ್ನಿಸಿದರು ಆತ ಕೈಗೆ ಸಿಗಲಿಲ್ಲ. ಜೊತೆಗೆ ಡ್ರೋನ್ ಕ್ಯಾಮರಾ ಆರೋಪಿಗಳನ್ನು ಎರಡು ಕಿಲೋ ಮೀಟರ್ ವರೆಗೆ ಹಿಂಬಾಲಿಸಿದ್ದು, ವೀಡಿಯೋದಲ್ಲಿ ಅದನ್ನು ಕಾಣಬಹುದಾಗಿದೆ.

ಮದುವೆ ಮನೆಯಲ್ಲಿ ಡ್ರೋನ್ ಆಪರೇಟರ್‌ನ ಜಾಗರೂಕತೆ ಹಾಗೂ ಸಮಯಪ್ರಜ್ಞೆ ನಮಗೆ ತುಂಬಾ ಸಹಾಯಕವಾಗಿದೆ ಆರೋಪಿಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಈ ವೀಡಿಯೊ ಗಮನಾರ್ಹವಾಗಿ ಸಹಾಯ ಮಾಡುತ್ತದೆ ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ಸುನಿಲ್ ಚೌಹಾಣ್ ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಡಿಜೆ ಪ್ರದರ್ಶನದ ಸಂದರ್ಭದಲ್ಲಿ ಉಂಟಾದ ಸಣ್ಣ ವಿವಾದದಲ್ಲಿ ಆರೋಪಿ ನೃತ್ಯ ಮಾಡುವಾಗ ವರನು ಆತನನ್ನು ತಳ್ಳಿದ್ದಾನೆ ಇದಾದ ನಂತರ ಈ ಕಿತ್ತಾಟದಿಂದ ಕುಪಿತಗೊಂಡ ಆರೋಪಿ ಜಿತೇಂದ್ರ ಬಕ್ಷಿ ತನ್ನ ಸ್ನೇಹಿತನ ಜೊತೆ ಸೇರಿ ಚಾಕು ತೆಗೆದುಕೊಂಡು ಬಂದು ವರನ ಮೇಲೆ ಹಲ್ಲೆ ಮಾಡಿದ್ದಾನೆ. ಇರಿತದ ನಂತರದ ಗದ್ದಲದಲ್ಲಿ, ಆರೋಪಿಯು ವರನ ತಂದೆ ರಾಮ್‌ಜಿ ಸಮುದ್ರ ಅವರ ಮೇಲೂ ಹಲ್ಲೆ ನಡೆಸಲು ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಠಾಣಾ ಅಧಿಕಾರಿ ಚೌಹಾಣ್ ಅವರ ತ್ವರಿತ ಕ್ರಮದ ನಂತರ, ಬದ್ನೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಡ್ರೋನ್ ದೃಶ್ಯಾವಳಿಗಳನ್ನು ಪರಿಶೀಲಿಸಿ ಹುಡುಕಾಟ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ವರನನ್ನು ಅಮರಾವತಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವರನಿಗೆ ಆಳವಾದ ಗಾಯಗಳಾಗಿದ್ದು, ಈಗ ಅವನ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ವೃದ್ಧ ಪೋಷಕರ ಹೊರ ಹಾಕಿದ್ದ ಮಕ್ಕಳು: ಹಸಿವಿನಿಂದ ಬೀದಿಯಲ್ಲಿ ಅಲೆಯುತ್ತಿದ್ದವರಿಗೆ ಪೊಲೀಸರಿಂದ ನೆರವು

ಇದನ್ನೂ ಓದಿ: ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು