ತನ್ನದೇ ಒರಿಜಿನಲ್ ಶಿವಸೇನೆ ಎಂದು ಸಾಬೀತುಪಡಿಸಿದ ಏಕನಾಥ ಶಿಂಧೆ

By Anusha Kb  |  First Published Nov 24, 2024, 1:22 PM IST

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಹುತೇಕ ಕ್ಷೇತ್ರಗಳಲ್ಲಿ ಜಯಗಳಿಸಿದೆ. ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿದ್ದು, ಎನ್‌ಸಿಪಿ ಮತ್ತು ಕಾಂಗ್ರೆಸ್‌ಗೂ ನಿರಾಸೆಯ ಫಲಿತಾಂಶ ಲಭಿಸಿದೆ.


ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆಯ ತಮ್ಮ ಬಣ ಸ್ಪರ್ಧಿಸಿದ ಬಹುತೇಕ ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ಮುಖ್ಯ ಮಂತ್ರಿ ಏಕನಾಥ್ ಶಿಂಧೆ ತಮ್ಮದೇ ಒರಿಜಿನಲ್ ಶಿವಸೇನೆ ಎಂದು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 'ಮಹಾಯುತಿ ಮೈತ್ರಿಕೂಟದಲ್ಲಿ ಶಿಂಧೆ ಬಣದ ಶಿವಸೇನೆ ಸ್ಪರ್ಧಿಸಿದ್ದ 81 ಕ್ಷೇತ್ರಗಳಲ್ಲಿ ಸುಮಾರು ಶೇ.70ರಷ್ಟು ಕ್ಷೇತ್ರದಲ್ಲಿ ಗೆದ್ದಿದೆ. ಮಹಾವಿಕಾಸ ಅಘಾಡಿ ಮೈತ್ರಿಕೂಟದಲ್ಲಿ ಉದ್ಭವ್ ಬಣದ ಶಿವಸೇನೆ ಸ್ಪರ್ಧಿಸಿದ್ದ 95 ಕ್ಷೇತ್ರಗಳಲ್ಲಿ ಸುಮಾರು ಶೇ.24 ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ.

2022ರಲ್ಲಿ ಶಿವಸೇನೆಯನ್ನು ಒಡೆದು, ಉದ್ದವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ಮಹಾವಿಕಾಸ ಆಘಾಡಿ ಸರ್ಕಾರವನ್ನು ಬೀಳಿಸಿ, ಬಿಜೆಪಿ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿ ಏಕನಾಥ್ ಶಿಂಧೆ ಸರ್ಕಾರ ರಚಿಸಿದ್ದರು. ಆಗ ತಮ್ಮದೇ ಮೂಲ ಶಿವಸೇನೆ ಎಂದು ಉದ್ದವ್ ಬಣ ಕೋರ್ಟ್‌ಗೆ ಹೋಗಿತ್ತು. ಆದರೆ ವಿಧಾನಸಭೆಯ ಸ್ಪೀಕರ್ ಅವರು ಶಿಂಧೆ ಬಣವೇ ಮೂಲ ಶಿವಸೇನೆಯೆಂದು ರೂಲಿಂಗ್ ನೀಡಿದ್ದರು. ಚುನಾವಣಾ ಪ್ರಚಾರದ ವೇಳೆ ಉದ್ದವ್ ಬಣವು ಶಿಂಧೆಯನ್ನು ಪಕ್ಷ ಒಡೆದ 'ವಂಚಕ' ಎಂದು ಜರೆದಿತ್ತು.

Latest Videos

undefined

ಅಜಿತ್ ಹೊಡೆತ: ಪವಾ‌ರ್ ಸರ್ವಾಧಿಕ ಕಳಪೆ ಸಾಧನೆ

ಇತ್ತ ಶರದ್ ಪವಾರ್ ಅವರ ಎನ್‌ಸಿಪಿ (ಎಸ್‌ಪಿ) ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 10 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ, ಶರದ್ ಪವಾರ್ ಅವರು ವೈಯಕ್ತಿಕವಾಗಿ ಸರ್ವಾಧಿಕ ಕಳಪೆ ಸಾಧನೆ ಮಾಡಿದಂತಾಗಿದೆ.  ಈ ಹಿನ್ನಡೆಗೆ ಬಂಡೆದ್ದ ಅಜಿತ್ ಪವಾರ್ ಅವರ ಬಣ ಸ್ಪರ್ಧೆ ಮಾಡಿರುವುದು ಪ್ರಮುಖ ಕಾರಣವಾಗಿದೆ. ಮಹಾಯುತಿ ಮೈತ್ರಿಯಿಂದ ಸ್ಪರ್ಧೆ ಮಾಡಿದ್ದ ಅಜಿತ್ ಬಣ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 288 ಸ್ಥಾನಗಳ ಪೈಕಿ 87 ಸ್ಥಾನಗಳಲ್ಲಿ ಸ್ಪರ್ಧಿಸಿದ ಎನ್‌ಸಿಪಿ (ಎಸ್‌ಪಿ) ಕೇವಲ 10 ಸ್ಥಾನಗಳಲ್ಲಿ ಜಯಗಳಿಸಿದೆ. 6 ತಿಂಗಳ ಹಿಂದೆ ಶರದ್ ಪವಾರ್ ಅವರ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಶೇ.80 ಸ್ಟೈಕ್ ರೇಟ್ ಹೊಂದಿತ್ತು. ಆದರೆ ಈಗ ಕೇವಲ ಶೇ.14.94 ರಷ್ಟು ಸ್ಟೈಕ್ ರೇಟ್ ಹೊಂದಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಕೈ ಹಿಡಿಯಲಿಲ್ಲ ಗ್ಯಾರಂಟಿ

ಮುಂಬೈ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ನೆರವಾಗಿದ್ದ ಗ್ಯಾರಂಟಿ ಯೋಜನೆಗಳು ಮಹಾರಾಷ್ಟ್ರದಲ್ಲಿಯೂ ಕೈ ಹಿಡಿಯಬಹುದು ಎನ್ನುವ ನಿರೀಕ್ಷೆಯಿಂದ ಮಹಾರಾಷ್ಟ್ರ ದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. ಆದರೆ ಮಹಾರಾಷ್ಟ್ರದ ಮತದಾರರು ಭರಪೂರ ಯೋಜನೆಗಳಿಗೆ ಮಣೆ ಹಾಕಲಿಲ್ಲ.  ಚುನಾವಣೆಗೂ ಮುನ್ನ ಮುಂಬೈನಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಈ ಪ್ರಣಾಳಿಕೆಯಲ್ಲಿ ಕರ್ನಾಟಕದ ಮಾದರಿಯಲ್ಲಿಯೇ ಹಲವು ಉಚಿತ ಯೋಜನೆಗಳನ್ನು ಘೋಷಿಸಲಾಗಿತ್ತು. 

ಕರ್ನಾಟಕದ ಶಕ್ತಿ ಯೋಜನೆಯಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕರ್ನಾಟಕದಲ್ಲಿರುವ ಗೃಹಲಕ್ಷ್ಮಿ ಯೋಜನೆಯಂತೆ ಮಹಿಳೆಯರಿಗೆ ಮಾಸಿಕ 3 ಸಾವಿರ ರು. ಸಹಾಯಧನ, ರೈತರಿಗೆ 3 ಲಕ್ಷದವರೆಗೆ ರೈತರ ಸಾಲ ಮನ್ನಾ, ಸಾಲ ಕಟ್ಟಿದರೆ 50 ಸಾವಿರ ರು. ಪ್ರೋತ್ಸಾಹಧನ, ಎಲ್ಲರಿಗೂ 25 ಲಕ್ಷ ರು.ರವರೆಗೆ ಆರೋಗ್ಯ ಮತ್ತು ಉಚಿತ ಔಷಧಿ ವಿತರಣೆ, ನಿರುದ್ಯೋಗಿಗಳಿಗೆ ಸರ್ಕಾರದಿಂದ ಮಾಸಿಕ 4 ಸಾವಿರ ನೀಡುವ ಯೋಜನೆಗಳನ್ನು ಘೋಷಿಸಿತ್ತು. ಈ ಉಚಿತ ಯೋಜನೆಗಳು ಮತದಾರರ ಮನ ಗೆಲ್ಲಲು ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ನಾಯಕರದ್ದಾಗಿತ್ತು. ಆದರೆ ಮತದಾರರು ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಶಾಕ್ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಸ್ಥಾನ ಗೆಲ್ಲುವ ಮೂಲಕ ಮುಜುಗರಕ್ಕೀಡಾಗಿದೆ.

ಮಹಾ ಫಲಿತಾಂಶ ಅನಿರೀಕ್ಷಿತ: ಖರ್ಗೆ, ರಾಹುಲ್ ಗಾಂಧಿ

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಳಗೊಂಡ ಮಹಾ ವಿಕಾಸ್ ಅಘಾಡಿ ಕೂಟ ಪರಾಜಿತವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅಧ್ಯಕ ಮಲ್ಲಿಕಾರ್ಜುನ ಖರ್ಗೆ, 'ಇದು ಅನಿರೀಕ್ಷಿತವಾಗಿದೆ. ಕೂಟದ ಸೋಲಿಗೆ ಅಸಲಿ ಕಾರಣವೇನು ಎಂಬುದನ್ನು ಅರಿಯಲು ಪಕ್ಷ ಪ್ರಯತ್ನಿಸುತ್ತಿದೆ. ಛತ್ರಪತಿ ಶಿವಾಜಿ, ಅಂಬೇಡ್ಕರ್ ಅವರ ನಿಜವಾದ ಪ್ರತಿನಿಧಿಗಳು ನಾವಾಗಿದ್ದು, ಈ ಹೋರಾಟವನ್ನು ಮುಂದುವರೆಸುತ್ತೇವೆ' ಎಂದರು. ಈ ವೇಳೆ ಜಾರ್ಖಂಡ್ ಜಯದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, 'ಜನ ವಿಭಜಕ, ಸುಳ್ಳು ರಾಜಕೀಯವನ್ನು ತಿರಸ್ಕರಿಸಿ ತಮ್ಮ ಹಕ್ಕುಗಳಿಗೆ ಬೆಲೆ ನೀಡಿದ್ದಾರೆ. ರಾಜ್ಯದಲ್ಲಿ ಜವಾಬ್ದಾರಿಯುತ ಸರ್ಕಾರ ರಚಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕಿದೆ' ಎಂದರು.

ರಾಹುಲ್ ಬೇಸರ: 'ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಅನಿರೀಕ್ಷಿತವಾಗಿದೆ. ಈ ಬಗ್ಗೆ ಕೂಲಂಕುಶವಾಗಿ ವಿಶ್ಲೇಷಣೆ ನಡೆಸುತ್ತೇವೆ' ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಫಲಿತಾಂಶ ಘೋಷಣೆಯ ಬಳಿಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಇದರೊಂದಿಗೇ ಜಾರ್ಖಂಡ್‌ನಲ್ಲಿ ಇಂಡಿಯಾ ಕೂಟ ಜಯಗಳಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಹುಲ್, 'ಈ ವಿಜಯವು ಸಂವಿಧಾನದೊಂದಿಗೆ ಜಲ, ಅರಣ್ಯ, ಭೂಮಿಯನ್ನು ರಕ್ಷಿಸುವುದರ ಜಯವಾಗಿದೆ' ಎಂದರು.

ಇದನ್ನು ಓದಿ: ಮಹಾರಾಷ್ಟ್ರ ವಿಧಾನಸಭೆಗೆ ಅಧಿಕೃತ ವಿರೋಧ ಪಕ್ಷ ಇಲ್ಲದಂತೆ ಮಾಡಿದ ಎನ್‌ಡಿಎ ಭರ್ಜರಿ ಗೆಲುವು

ಇದನ್ನು ಓದಿ:ಫೀನಿಕ್ಸ್‌ನಂತೆ ಎದ್ದು ಬಂದ ಹೇಮಂತ ಸೊರೇನ್: ಜಾರ್ಖಂಡ್‌ನಲ್ಲಿ ಬಿಜೆಪಿ ಸೋಲಿಗೆ ಕಾರಣವೇನು?

click me!