ಬಿಗ್ಬಾಸ್‌ನ ಅಜಾಜ್‌ ಖಾನ್‌ಗೆ ಫಾಲೋವರ್ಸ್‌ 6 ಲಕ್ಷ ಬಂದ ಮತ ಕೇವಲ 131

By Kannadaprabha News  |  First Published Nov 24, 2024, 12:43 PM IST

ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿ, ನಟ ಅಜಾಜ್ ಖಾನ್ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ಕಣಕ್ಕಿಳಿದು ಮುಖಭಂಗ
ಅನುಭವಿಸಿದ್ದಾರೆ.


ಮುಂಬೈ: ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿ, ನಟ ಅಜಾಜ್ ಖಾನ್ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ಕಣಕ್ಕಿಳಿದು ಮುಖಭಂಗ
ಅನುಭವಿಸಿದ್ದಾರೆ. ಅಜಾದ್ ಸಮಾಜ್ ಪಕ್ಷದಿಂದ ಸ್ಪರ್ಧಿಸಿದ್ದ ಅಜಾಜ್ ಖಾನ್ ಅವರು ಕೇವಲ 131 ಮತ ಪಡೆದಿದ್ದಾರೆ. ಇದು ಈ ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಿಂತ ಕಡಿಮೆ. ಅಜಾಜ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 5.6 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಆದರೆ ಅದನ್ನು ಮತವನ್ನಾಗಿ ಬದಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವರ್ಸೋವಾ ಕ್ಷೇತ್ರದಲ್ಲಿ ಶೇ.42ರಷ್ಟು ಮತದಾನವಾಗಿದ್ದು ಶಿವಸೇನೆಯ ಯುಬಿಟಿ ಬಣದ ಹರೂನ್ ಖಾನ್ ಜಯಗಳಿಸಿದ್ದಾರೆ. ಅಜಾಜ್ 131 ಮತ ಪಡೆದರೆ, ನೋಟಾಗೆ 1022 ಮತ ಬಂದಿವೆ. ಇದು ಅಜಾಜ್‌ಗೆ ಸಿಕ್ಕ ಮತಕ್ಕಿಂತ 6 ಪಟ್ಟು ಅಧಿಕ.

ಮಹಾರಾಷ್ಟ್ರದಲ್ಲಿ ಘಟಾನುಘಟಿ ನಾಯಕರಿಗೆ ಸೋಲು
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಘಟಾನುಘಟಿಗಳಿಗೆ ಸೋಲಾಗಿದೆ. ಅವರಲ್ಲಿ ಕರಾಡ್ ದಕ್ಷಿಣದಿಂದ ಸ್ಪರ್ಧೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಪ್ರಮುಖರು. ಇನ್ನು ಸಂಗಮ್ಮಾರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಳಾಸಾಹೇಬ್ ಥೋರಟ್, ಮಾಹಿಮ್‌ನಿಂದ ಸ್ಪರ್ಧಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಪಕ್ಷದ ಮುಖ್ಯಸ್ಥ ರಾಜ್  ಠಾಕ್ರೆ, ಅಜಿತ್ ಪವಾರ್ ವಿರುದ್ಧ ಸರ್ಧೆ ಮಾಡಿದ್ದ ಅವರ ಸಂಬಂಧಿ ಯುಗೇಂದ್ರ ಪವಾರ್, ಮುಂಬಾದೇವಿಯ ಶಿವಸೇನಾ ಅಭ್ಯರ್ಥಿ ಶೈನಾ ಎನ್.ಸಿ., ವಂದ್ರೆ ಪೂರ್ವದಿಂದ ಸ್ಪರ್ಧಿಸಿದ್ದ ಇತ್ತೀಚೆಗೆ ಹತ್ಯೆಗೀಡಾದ ಮಾಜಿ ಸಚಿವ ಬಾಬಾ ಸಿದ್ದಿಕಿ ಪುತ್ರ ಹಾಗೂ ಎನ್‌ಸಿಪಿ (ಅಜಿತ್) ಅಭ್ಯರ್ಥಿ ಜೀಶನ್ ಸಿದ್ದಿಕಿ, ವರ್ಲಿಯಿಂದ ಕಣಕ್ಕಿಳಿದಿದ್ದ ಶಿವಸೇನೆಯ ಮಿಲಿಂದ್ ದೇವ್ರಾ ಹಾಗೂ ಅನುಶಕ್ತಿ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನಟಿ ಸ್ಟರಾ ಭಾಸ್ಕರ್ ಪತಿ, ಎನ್‌ಸಿಪಿ (ಎಸ್ಪಿ)  ಫಹಾದ್ ಅಹ್ಮದ್ ಪರಾಭವಗೊಂಡಿದ್ದಾರೆ. ಮಿಲಿಂದ ದೇವ್ರಾ ವಿರುದ್ಧ ಶಿವಸೇನಾ ಯುವ ನಾಯಕ ಆದಿತ್ಯ ಠಾಕ್ರೆ ಗೆದ್ದಿದ್ದಾರೆ. ಪಟೋಲೆಗೆ ರೋಚಕ ಜಯ: ಕೊನೇ ಹಂತದವರೆಗೂ ಹಿಂದಿದ್ದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಕಡೇ ಹಂತದಲ್ಲಿ 208 ಮತದಿಂದ ಗೆದ್ದಿದ್ದಾರೆ.

Tap to resize

Latest Videos

ಮಹಾ ಕುಟುಂಬ ಸಮರ 
ಮುಂಬೈ: : ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕುಟುಂಬಗಳ ಒಳಗಿನ ಕಾಳಗಕ್ಕೂ ಸಾಕ್ಷಿಯಾಗಿದೆ. ಎನ್‌ಸಿಪಿ ನಾಯಕ ಡಿಸಿಎಂ ಅಜಿತ್ ಪವಾರ್ ಅವರು ಮೊದಲ ಬಾರಿ ಕಣಕ್ಕಿಳಿದಿದ್ದ ತಮ್ಮ ಹತ್ತಿರದ ಸಂಬಂಧಿ ಯುಗೇಂದ್ರ ಪವಾರ್ ಅವರ ವಿರುದ್ಧ ಜಯ ಸಾಧಿಸಿದ್ದಾರೆ. ಅತ್ತ ಛತ್ರಪತಿ ಸಾಂಭಾಜಿನಗರ ಜಿಲ್ಲೆಯ ಕನ್ನಡ್ ಕ್ಷೇತ್ರದಲ್ಲಿ ಶಿವಸೇನೆಯಿಂದ ಟಿಕೆಟ್ ಪಡೆದ ಬಿಜೆಪಿ ನಾಯಕ ರಾವ್‌ ಸಾಹೇಬ್ ದಾನ್ ಅವರ ಪುತ್ರಿ ಸಂಜನಾ, ಸ್ವತಂತ್ರ ಅಭ್ಯರ್ಥಿಯಾಗಿದ್ದ ತಮ್ಮ ಪತಿಯ ವಿರುದ್ಧವೇ ಸರ್ಧಿಸಿ ಜಯ ಗಳಿಸಿದ್ದಾರೆ. ಗಡ್ಚಿರೋಲಿಯ ಅಪೇರಿ ಕ್ಷೇತ್ರದಲ್ಲಿ ಎನ್ ಸಿಪಿ(ಅಜಿತ್ ಬಣ)ಯ ಧರ್ಮರಾವ್‌ ಬಾಬಾ ಅತ್ರ೦ ಎನ್‌ಸಿಪಿ(ಶರದ್ ಬಣ)ಯಿಂದ ಕಣಕ್ಕಿಳಿದಿದ್ದ ತಮ್ಮ ಪುತ್ರಿ ಭಾಗ್ಯಶ್ರೀಯೊಂದಿಗೆ ಸ್ಪರ್ಧಿಸಿ ಜಯಿಸಿದ್ದಾರೆ. ಲೋಹಾದಲ್ಲಿ ಎನ್‌ಸಿಪಿಯ ಪ್ರತಾಪ್ ಪಾಟೀಲ್ ತಮ್ಮ ಸಹೋದರಿ ಆಶಾಬಾಯಿ ಶಿಂಧೆಯವರನ್ನು ಸೋಲಿಸಿದ್ದಾರೆ.

ಒವೈಸಿ ಪಕ್ಷದ ಅಭ್ಯರ್ಥಿ 162 ಮತದಿಂದ ಜಯ
ಮಾಲೆಗಾಂವ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಎಐಎಂಐಎಂ ಪಕ್ಷದ ಅಭ್ಯರ್ಥಿಗಳಾದ ಮಾಜಿ ಎನ್‌ಡಿಟಿವಿ ಪತ್ರಕರ್ತ ಇಮ್ತಿಯಾಜ್ ಜಲೀಲ್ ಹಾಗೂ ಹಿರಿಯ ಮುಖಂಡ ವಾರಿಜ್ ಪಠಾಣ್ ಭಾರಿ ಸೋಲು ಕಂಡಿದ್ದಾರೆ. ಆದರೆ, ಮಾಲೆಂಗಾವ್ ಸೆಂಟ್ರಲ್ ವಿಧಾನಸಭೆ ಚುನಾವಣೆಯಲ್ಲಿ ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷದ ಅಭ್ಯರ್ಥಿ ಮೊಹಮ್ಮದ್ ಇಸ್ಮಾಯಿಲ್ ಅಬ್ದುಲ್ ಖಾಲಿಕ್ ತಮ್ಮ ಸಮೀಪದ ಸ್ಪರ್ಧಿಯಿಂದ ಕೇವಲ 162 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.  2019ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಖಾಲಿಕ್ ಈ ಬಾರಿ ಅಲ್ಪ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯದ ಇಲ್ಲಿ 13 ಅಭ್ಯರ್ಥಿಗಳಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆಗೆ ಅಧಿಕೃತ ವಿರೋಧ ಪಕ್ಷ ಇಲ್ಲದಂತೆ ಮಾಡಿದ ಎನ್‌ಡಿಎ ಭರ್ಜರಿ ಗೆಲುವು

ಇದನ್ನೂ ಓದಿ: ಭಾರತದ ಇವಿಎಂ ವ್ಯವಸ್ಥೆ ಬಗ್ಗೆ ಉದ್ಯಮಿ ಎಲಾನ್ ಮಸ್ಕ್‌ ಶ್ಲಾಘನೆ

click me!