ಜಾಗತಿಕ ರಾಜಕಾರಣದ ವಿಶ್ಲೇಷಕರು, ಟಿವಿ ವ್ಯಾಖ್ಯಾನಕಾರರಾದ ಡಾ. ಗುಲ್‌ರೇಜ಼್ ಶೇಖ್ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಒಂದು ದಶಕದ ಆಡಳಿತದಡಿ ಕಾರ್ಯತಂತ್ರದ ಸ್ವಾತಂತ್ರ್ಯ ಉಳಿಸಿಕೊಂಡಿರುವ ಭಾರತದ ವಿದೇಶಾಂಗ ನೀತಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಪ್ರಸ್ತುತ 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಅಮೆರಿಕಾದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತ ಟೀಕೆಗಳು ಬಹಳಷ್ಟು ಹೆಚ್ಚಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣೆಯಲ್ಲಿ 543 ಸ್ಥಾನಗಳ ಪೈಕಿ, 400ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಕುರಿತು ಅಮೆರಿಕಾ ಆತಂಕ ಹೊಂದಿದೆ ಎಂದು ಭಾರತೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಪಾಶ್ಚಾತ್ಯ ಜಗತ್ತು ಭಾರತದ ಆಂತರಿಕ ವಿಚಾರಗಳ ಕುರಿತು ಅತಿಯಾಗಿ ವಿಚಾರಣೆ ನಡೆಸುವುದು, ಅಭಿಪ್ರಾಯ ವ್ಯಕ್ತಪಡಿಸುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಭಾರೀ ಬಹುಮತ ಲಭಿಸುವ ಕುರಿತಾದ ಆತಂಕದ ಕಾರಣದಿಂದಲೇ ಎಂದು ಭಾರತೀಯರ ಅಭಿಪ್ರಾಯವಾಗಿದೆ.
ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ
ಗುವಾಹಟಿಯಲ್ಲಿ ಎಪ್ರಿಲ್ 30, ಮಂಗಳವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರಾದ ಅಮಿತ್ ಶಾ ಅವರು, ಜೂನ್ 4ರಂದು ಪೂರ್ಣಗೊಳ್ಳುವ ಲೋಕಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಾರ್ಟಿಯ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಒಟ್ಟು 500 ಸ್ಥಾನಗಳ ಪೈಕಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಎರಡು ಹಂತಗಳ ಚುನಾವಣೆ ಪೂರ್ಣಗೊಂಡಿದೆ. 191 ಸ್ಥಾನಗಳ ಪೈಕಿ, ಎನ್‌ಡಿಎ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಮಿತ್ ಶಾ ವಿಶ್ವಾಸ ಹೊಂದಿದ್ದಾರೆ.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರು ತನ್ನ ಚುನಾವಣಾ ಪ್ರಚಾರ ಭಾಷಣಗಳಾದ್ಯಂತ ಭಾರತಕ್ಕೆ ಸ್ಥಿರವಾದ ಸರ್ಕಾರದ ಅವಶ್ಯಕತೆ ಇದೆ ಎಂದು ಹೇಳುತ್ತಾ ಬಂದಿದ್ದಾರೆ.
ಕಳೆದ ವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ನರೇಂದ್ರ ಮೋದಿಯವರು, "ಒಂದು ವೇಳೆ ಭಾರತ ಶಕ್ತಿಶಾಲಿಯಾದರೆ, ಅದು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಆಲೋಚನೆಗಳನ್ನು ಹಾಳುಗೆಡವುತ್ತವೆ. ಈ ಕಾರಣದಿಂದಲೇ ಅವುಗಳು ದುರ್ಬಲವಾದ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟವನ್ನು ಬೆಂಬಲಿಸಿ, ದುರ್ಬಲ ಸರ್ಕಾರವನ್ನು ಆಡಳಿತಕ್ಕೆ ತರಲು ಪ್ರಯತ್ನಿಸುತ್ತಿವೆ" ಎಂದಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳು ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನ ನಡೆಸುತ್ತಿರುವ ಕಳವಳಗಳ ಮಧ್ಯೆ ಮೋದಿಯವರು ಈ ಮಾತುಗಳನ್ನಾಡಿದ್ದಾರೆ.
ಇದೇ ರೀತಿ, ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು ಭಾರತದ ಪ್ರಜಾಪ್ರಭುತ್ವದ ಕುರಿತು ಋಣಾತ್ಮಕವಾಗಿ ಪ್ರಚಾರ ನಡೆಸುತ್ತಿರುವ ಪಾಶ್ಚಾತ್ಯ ಮಾಧ್ಯಮಗಳನ್ನು ಟೀಕಿಸಿದ್ದು, ಅವುಗಳು ಭಾರತೀಯ ಚುನಾವಣೆಯಲ್ಲಿ ರಾಜಕೀಯ ಆಟಗಾರರಂತೆ ವರ್ತಿಸುತ್ತಿವೆ ಎಂದಿದ್ದಾರೆ.
ರಷ್ಯನ್ ಮಾಧ್ಯಮ ಸಂಸ್ಥೆಯಾದ ಸ್ಪುಟ್ನಿಕ್ ತನ್ನ ವರದಿಯಲ್ಲಿ, ಮೋದಿಯವರ ಪಾಶ್ಚಾತ್ಯ ಟೀಕಾಕಾರರು ಮುಖ್ಯವಾಗಿ ಭಾರತದಲ್ಲಿನ ಮಾನವ ಹಕ್ಕುಗಳ ದಮನ, ವಿದೇಶಗಳಲ್ಲಿ ಹತ್ಯೆಗಳನ್ನು ಪ್ರಾಯೋಜಿಸಿದ ಆರೋಪಗಳು, ಬಿಜೆಪಿ ಸರ್ಕಾರದಡಿ ಮುಸ್ಲಿಮರನ್ನು ನಡೆಸಿಕೊಳ್ಳುವ ರೀತಿ, ನ್ಯಾಯಾಂಗ ಮತ್ತು ಕಾನೂನು ಜಾರಿ ವ್ಯವಸ್ಥೆಗಳಲ್ಲಿನ ಪಾರದರ್ಶಕತೆಯ ಕೊರತೆಗಳು, ಚುನಾವಣಾ ಪ್ರಕ್ರಿಯೆಗಳ ಕುರಿತ ವಿಚಾರಗಳೆಡೆಗೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ವರದಿ ಮಾಡಿದೆ.
ಪಾಶ್ಚಾತ್ಯ ಮಾಧ್ಯಮಗಳು, ಅಮೆರಿಕಾ ಮತ್ತು ಜರ್ಮನಿಗಳ ಅಧಿಕೃತ ಹೇಳಿಕೆಗಳ ಜೊತೆಗೆ, ಅಮೆರಿಕಾದ ನಾಗರಿಕ ಸಾಮಾಜಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸಹ ಇಂತಹ ವಿಚಾರಗಳನ್ನು ಚರ್ಚಿಸಲು ಸಮಾರಂಭಗಳನ್ನು ಆಯೋಜಿಸಿವೆ, ಇನ್ನೂ ಆಯೋಜಿಸಲು ಆಲೋಚಿಸುತ್ತಿವೆ.
ಜಾಗತಿಕ ರಾಜಕಾರಣದ ವಿಶ್ಲೇಷಕರು, ಟಿವಿ ವ್ಯಾಖ್ಯಾನಕಾರರಾದ ಡಾ. ಗುಲ್‌ರೇಜ಼್ ಶೇಖ್ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಒಂದು ದಶಕದ ಆಡಳಿತದಡಿ ಕಾರ್ಯತಂತ್ರದ ಸ್ವಾತಂತ್ರ್ಯ ಉಳಿಸಿಕೊಂಡಿರುವ ಭಾರತದ ವಿದೇಶಾಂಗ ನೀತಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಭಾರತದಲ್ಲಿ ದುರ್ಬಲ ಸರ್ಕಾರವಿದ್ದರೆ, ಅದರ ಮೇಲೆ ಸುಲಭವಾಗಿ ತಮ್ಮ ಪ್ರಭಾವ ಬೀರಬಹುದು ಎಂದು ಕೆಲವು ವಿದೇಶೀ ಶಕ್ತಿಗಳು ಭಾವಿಸಿವೆ ಎಂದು ಪ್ರಧಾನಿ ಮೋದಿಯವರು ಹೇಳಿರುವುದು ವಾಸ್ತವ ವಿಚಾರವಾಗಿದೆ ಎಂದು ಸ್ಪುಟ್ನಿಕ್ ವಿವರಿಸಿದೆ. ಪಾಶ್ಚಾತ್ಯ ರಾಷ್ಟ್ರಗಳು ಸಾಮಾನ್ಯವಾಗಿ ತಾವು ನಿಯಂತ್ರಿಸಲು ಸಾಧ್ಯವಾಗುವಂತಹ ಸರ್ಕಾರಗಳನ್ನು ಬೆಂಬಲಿಸುತ್ತವೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ, ಭಾರತ ಸ್ಥಿರ ಮತ್ತು ಪ್ರಬಲ ಸರ್ಕಾರವನ್ನು ಹೊಂದಿದೆ. ಈ ಕಾರಣದಿಂದಲೇ ಪಾಶ್ಚಾತ್ಯ ರಾಷ್ಟ್ರಗಳು ಈ ರೀತಿ ವರ್ತಿಸುತ್ತಿವೆ ಎಂದು ಡಾ. ಗುಲ್‌ರೇಜ಼್ ಶೇಖ್ ವಿವರಿಸಿದ್ದಾರೆ.
ಪಾಶ್ಚಾತ್ಯ ರಾಷ್ಟ್ರಗಳು ಇತರ ದೇಶಗಳಲ್ಲಿ ಸರ್ಕಾರಗಳನ್ನು ಬದಲಾಯಿಸಲು ಮತ್ತು ಕ್ರಾಂತಿಗಳನ್ನು ನಡೆಸಲು ಯಶಸ್ವಿಯಾದಂತೆ ಭಾರತದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಶೇಖ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಲೋಕಸಭಾ ಚುನಾವಣೆ ಕಡ್ಡಾಯವಾಗಿ ಭಾರತದ ಆಂತರಿಕ ವಿಚಾರವಾಗಿದ್ದರೂ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ಡಾ. ಶೇಖ್ ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕಾ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳು ತಾವು ಹೇಳಿದಂತೆ ಕೇಳುವ, ತಮ್ಮ ಹಿತಾಸಕ್ತಿಗಳಿಗೆ ಅನುಕೂಲಕರವಾಗಿರುವ ದೇಶಗಳ ಪರವಾಗಿರುತ್ತವೆ. ಅದೇ ರೀತಿ, ಅವುಗಳು ಈಗ ಭಾರತವೂ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಮಣಿಯಬೇಕು ಎಂದು ಭಾವಿಸಿವೆ ಎಂದು ಡಾ. ಗುಲ್‌ರೇಜ಼್ ಶೇಖ್ ಹೇಳಿದ್ದಾರೆ. ಅಮೆರಿಕಾ ಮತ್ತು ಪಾಶ್ಚಾತ್ಯ ದೇಶಗಳಿಗೆ ನೈಜ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಅನುಭವಿಸುವ ರಾಷ್ಟ್ರಗಳನ್ನು ಒಪ್ಪಿಕೊಳ್ಳುವುದು ಕಷ್ಟಕರವಾಗಿದ್ದು, ತಮ್ಮ ರಾಷ್ಟ್ರೀಯ, ಭೌಗೋಳಿಕ ರಾಜಕಾರಣ ಮತ್ತು ಆರ್ಥಿಕ ಅಜೆಂಡಾಗಳಿಗೆ ನೆರವಾಗಲು ಅಂತಹ ಪ್ರಬಲ ಪ್ರಜಾಪ್ರಭುತ್ವಗಳನ್ನು ಕಡೆಗಣಿಸಲು ಪ್ರಯತ್ನಿಸುತ್ತವೆ ಎಂದು ಡಾ. ಶೇಖ್ ವಿವರಿಸಿದ್ದಾರೆ.
ಭೌಗೋಳಿಕ ರಾಜಕೀಯ ವಿಶ್ಲೇಷಕರಾದ ಕಮರ್ ಆಘ ಅವರು ಶೀತಲ ಸಮರದ ದಿನಗಳಿಂದಲೂ ಭಾರತದ ವಿದೇಶಾಂಗ ನೀತಿಯನ್ನು ಗಮನಿಸುತ್ತಾ ಬಂದಿದ್ದು, ಅಮೆರಿಕಾ ಭಾರತೀಯ ಮಾರುಕಟ್ಟೆಗೆ ತನ್ನ ಉದ್ಯಮಕ್ಕೆ ಪ್ರವೇಶ ದೊರಕಿಸುವುದರಿಂದ ಹಿಡಿದು, ಭಾರತದಿಂದ ವಿವಿಧ ರೀತಿಯ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ಭಾರತದ ವಿದೇಶಾಂಗ ನೀತಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಾ ಬಂದಿದೆ ಎಂದಿದ್ದಾರೆ.
ಪಾಶ್ಚಾತ್ಯ ದೇಶಗಳು ಐತಿಹಾಸಿಕವಾಗಿಯೂ ಭಾರತದ ವಿದೇಶಾಂಗ ನೀತಿಯನ್ನು ತಮ್ಮ ವಿದೇಶಾಂಗ ನೀತಿಗಳಿಗೆ ಅನುಗುಣವಾಗಿ ರೂಪಿಸಲು ಪ್ರಯತ್ನ ನಡೆಸಿವೆ. ಇತ್ತೀಚೆಗೆ ಉಕ್ರೇನ್ ಯುದ್ಧದ ಸಂದರ್ಭದಲ್ಲೂ ಭಾರತದ ತಟಸ್ಥ ನೀತಿಯನ್ನು ಬದಲಾಯಿಸಲು ಅವು ಒತ್ತಡ ಹೇರಿದ್ದು ಇದಕ್ಕೆ ಒಂದು ಉದಾಹರಣೆಯಾಗಿದೆ. ಇಂತಹ ಒತ್ತಡಗಳು ಏನೇ ಇದ್ದರೂ, ನವದೆಹಲಿ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪ್ರಥಮ ಆದ್ಯತೆ ನೀಡಲಿದೆ ಎಂದು ಆಘಾ ಅಭಿಪ್ರಾಯ ಪಟ್ಟಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧ ಕೊನೆಯಾಗಿ, ಶಾಂತಿ ನೆಲೆಸಬೇಕೆಂಬ ವಿಚಾರಕ್ಕೆ ಭಾರತ ಬದ್ಧವಾಗಿದ್ದರೂ, ಅದಕ್ಕಾಗಿ ಪಾಶ್ಚಾತ್ಯ ದೇಶಗಳ ಪರವಾಗಿ ನಿಂತು, ರಷ್ಯಾದ ಜೊತೆಗಿನ ತನ್ನ ಸಂಬಂಧ ಕಸಿದುಕೊಳ್ಳಲು ಭಾರತ ಸಿದ್ಧವಿಲ್ಲ.
ಉಕ್ರೇನ್ ಯುದ್ಧದ ನಡುವೆಯೂ ಭಾರತ ರಷ್ಯಾದೊಡನೆ ಸಹಯೋಗ ಮುಂದುವರಿಸಿದ್ದು ಬಿಡೆನ್ ಆಡಳಿತದೊಡನೆ ಭಾರತದ ಸಂಬಂಧಕ್ಕೆ ಧಕ್ಕೆ ಉಂಟುಮಾಡುವಂತಹ ಅಂಶವಾಗಿತ್ತು ಎಂದು ಆಘಾ ಹೇಳಿದ್ದಾರೆ.
"ರಷ್ಯಾ ಭಾರತದ ನಂಬಿಕಾರ್ಹ ಮಿತ್ರ ಎಂಬುದನ್ನು ಸಾಬೀತುಪಡಿಸಿದೆ. ಭಾರತದಲ್ಲಿ ಯಾವುದೇ ಸರ್ಕಾರವಿದ್ದರೂ, ರಷ್ಯಾದೊಡನೆ ಉತ್ತಮ ಬಾಂಧವ್ಯ ಹೊಂದುವುದು ಅನಿವಾರ್ಯವಾಗಿದೆ. ಅದರಲ್ಲೂ, ಈಗ ರಷ್ಯಾ ಭಾರತಕ್ಕೆ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರವಾಗಿದೆ" ಎಂದು ಆಘಾ ವಿವರಿಸಿದ್ದಾರೆ.
ಈ ಹಿಂದೆಯೇ ಭಾರತ ಮತ್ತು ರಷ್ಯಾಗಳೆರಡೂ 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಜಂಟಿ ಉದ್ಯಮಗಳನ್ನು ನಡೆಸುವುದಕ್ಕೆ ಒಪ್ಪಿಕೊಂಡಿದ್ದು, ಎರಡೂ ದೇಶಗಳ ನಡುವಿನ ರಕ್ಷಣಾ ಒಪ್ಪಂದಗಳು ಮುಂದುವರಿಯಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಒಂದು ವೇಳೆ, ಮೋದಿಯವರ ನೇತೃತ್ವದ ಸರ್ಕಾರಕ್ಕೆ ಹಿಂದೆ ರಾಜೀವ್ ಗಾಂಧಿಯವರಿಗೆ ಲಭಿಸಿದಂತೆ ದಾಖಲೆಯ 400ಕ್ಕೂ ಹೆಚ್ಚಿನ ಸ್ಥಾನಗಳು ಲಭಿಸಿದರೂ, ಭಾರತದ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ ಎಂದು ಆಘಾ ಹೇಳಿದ್ದಾರೆ. 1984ರಲ್ಲಿ, ಇಂದಿರಾ ಗಾಂಧಿಯವರ ಹತ್ಯೆ ನಡೆದ ಬಳಿಕ ನೆರವೇರಿದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜೀವ್ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಪಕ್ಷ 404 ಸ್ಥಾನಗಳನ್ನು ಗೆದ್ದಿತ್ತು.
"ಭಾರತದ ನೀತಿಗಳು ಬದಲಾವಣೆ ಮತ್ತು ನಿರಂತರತೆಗಳ ಮಿಶ್ರಣವಾಗಿವೆ. ಅಮೆರಿಕಾ ಮತ್ತು ರಷ್ಯಾ ಎರಡರ ಕುರಿತೂ ಕಾರ್ಯತಂತ್ರದ ಸ್ವಾಯತ್ತತೆ ಹೊಂದಿರುವ ಭಾರತದ ವಿದೇಶಾಂಗ ನೀತಿಯಲ್ಲಿ ಮುಂದೆಯೂ ಹೇಳಿಕೊಳ್ಳುವಂತಹ ಬದಲಾವಣೆಗಳು ಕಂಡುಬರುತ್ತವೆ ಎನ್ನಲು ಸಾಧ್ಯವಿಲ್ಲ" ಎಂದು ಆಘಾ ವಿವರಿಸುತ್ತಾರೆ.
ಭಾರತ ಉತ್ಪಾದನಾ ವಲಯದಲ್ಲಿ ಜಾಗತಿಕ ನಾಯಕನಾಗುವ ಮತ್ತು ಯುವ ಜನತೆಗೆ ಅವಶ್ಯಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಅಮೆರಿಕಾ ಮತ್ತು ಪಶ್ಚಿಮ ಯುರೋಪ್‌ಗಳು ವಿದೇಶೀ ಹೂಡಿಕೆಗಳ ಪ್ರಮುಖ ಮೂಲಗಳಾಗಿವೆ ಎಂದಿದ್ದಾರೆ ಆಘಾ.
ಭಾರತೀಯ ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಿದೆ ರಷ್ಯನ್ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್?
ಅದರೊಡನೆ, ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಪ್ರಕಟಿಸಿರುವ 'ಸ್ಟೇಟ್ ಆಫ್ ಎಕಾನಮಿ' ವರದಿಯ ಪ್ರಕಾರ, ಅಮೆರಿಕಾ, ನೆದರ್ಲ್ಯಾಂಡ್ಸ್, ಮತ್ತು ಜಪಾನ್ ಭಾರತದಲ್ಲಿ ಅಗ್ರ ಐದು ಹೂಡಿಕೆದಾರ ರಾಷ್ಟ್ರಗಳ ಪಟ್ಟಿಯಲ್ಲಿವೆ. ಅದರೊಡನೆ, ಈ ವರ್ಷ ಸಹಿ ಹಾಕಿರುವ ಒಪ್ಪಂದದ ಅನುಸಾರವಾಗಿ, ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ (ಇಎಫ್‌ಟಿಎ) ಭಾರತದಲ್ಲಿ 100 ಬಿಲಿಯನ್ ಡಾಲರ್‌ಗಳ ಹೂಡಿಕೆ ನಡೆಸುವ ಸಾಧ್ಯತೆಗಳಿವೆ.