ದೂರದರ್ಶನದಲ್ಲಿ ಬರೋಬ್ಬರಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಬಾಲಿವುಡ್‌ನ ಖ್ಯಾತ ನಟಿ ತಬಸ್ಸುಮ್ ತಮ್ಮ 78ನೇ ವರ್ಷದಲ್ಲಿ ನಿಧನರಾಗಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅವರ ಅಣ್ಣ ವಿಜಯ್ ಗೋವಿಲ್ ಅವರ ಪತ್ನಿ ಇವರಾಗಿದ್ದಾರೆ.
ನವದೆಹಲಿ (ನ.19): ದಿಗ್ಗಜ ಬಾಲಿವುಡ್ ನಟಿ ತಬಸ್ಸುಮ್ ಅವರು 78 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಪುತ್ರ ಈ ವಿಷಯವನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ತಬಸ್ಸುಮ್ ಅವರ ಪುತ್ರ ಹೋಶಾಂಗ್ ಗೋವಿಲ್ ಪ್ರಕಾರ, ತಬಸ್ಸುಮ್ ಅವರು ನವೆಂಬರ್ 18 ರ ಶುಕ್ರವಾರ ಸಂಜೆ ಕೊನೆಯುಸಿರೆಳೆದರು. ತಬಸ್ಸುಮ್ 1947 ರಲ್ಲಿ ಬೇಬಿ ತಬಸ್ಸುಮ್ ಹೆಸರಿನಲ್ಲಿ ಹಿಂದಿ ಚಲನಚಿತ್ರ 'ನರ್ಗೀಸ್' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 70 ರ ದಶಕದಲ್ಲಿ, ಅವರು ದೂರದರ್ಶನದ ಯಶಸ್ವಿ ನಿರೂಪಕರಾಗಿ ದೊಡ್ಡ ಮಟ್ಟದ ಪ್ರಖ್ಯಾತಿಯನ್ನೂ ಪಡೆದಿದ್ದರು. ದೂರದರ್ಶನದಲ್ಲಿ ಸುಮಾರು 21 ವರ್ಷಗಳ ಕಾಲ ನಡೆದ ಟಾಕ್ ಶೋ 'ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್ ಮೇ' ನಲ್ಲಿ ಅವರು ಅನೇಕ ದೊಡ್ಡ ವ್ಯಕ್ತಿಗಳ ಸಂದರ್ಶನ ಮಾಡಿದ್ದರು ಇದಲ್ಲದೆ, ಅವರು ಕಳೆದ ಹಲವಾರು ವರ್ಷಗಳಿಂದ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ನಿರಂತರವಾಗಿ ವೀಡಿಯೊಗಳನ್ನು ಸಹ ಮಾಡುತ್ತಿದ್ದರು.
ಶುಕ್ರವಾರ ಸಂಜೆಯ ವೇಳೆಗೆ ನಿವಾಸದಲ್ಲಿಯೇ ಹೃದಯಸ್ತಂಭನದಿಂದ ಅವರು ಸಾವು ಕಂಡಿದ್ದಾರೆ ಎಂದು ಕುಟುಂಬ ತಿಳಿಸಿದೆ. 1940ರ ದಶಕದಲ್ಲಿ ಬಾಲನಟಿಯಾಗಿ ಚಿತ್ರರಂಗದಲ್ಲಿ ತಮ್ಮ ವೃತ್ತಿ ಆರಂಭಿಸಿದ್ದ ತಬಸ್ಸುಮ್ ಆ ಬಳಿಕ, ಸಾಕಷ್ಟು ಚಿತ್ರಗಳಲ್ಲಿ ನಟನೆ ಮಾಡಿದ್ದರು. ಬೇಬಿ ತಬಸ್ಸುಮ್ ಎನ್ನುವ ಹೆಸರಿನಿಂದಲೇ ಅವರು ಪ್ರಖ್ಯಾತಿ ಪಡೆದಿದ್ದರು. ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅವರ ಅಣ್ಣ ವಿಜಯ್ ಗೋವಿಲ್ ಅವರ ಪತ್ನಿ ಇವರಾಗಿದ್ದಾರೆ. ತಬಸ್ಸುಮ್ ಭಾರತದ ಮೊದಲ ಟಾಕ್ ಶೋನ ನಿರೂಪಕಿಯಾಗಿದ್ದರು. ಬಾಲ್ಯದಲ್ಲಿ, ಅವರು ಚಲನಚಿತ್ರಗಳಲ್ಲಿ ನರ್ಗೀಸ್ ಮತ್ತು ಮೀನಾ ಕುಮಾರಿ ಅವರ ಕಿರಿಯ ವಯಸ್ಸಿನ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಯೂಟ್ಯೂಬ್‌ನಲ್ಲಿ ಅವರ ತಬಸ್ಸುಮ್ ಟಾಕೀಸ್ ಎಂಬ ಟಾಕ್ ಶೋ ಚಾನೆಲ್ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. 2006 ರಲ್ಲಿ, ಅವರು ದೂರದರ್ಶನಕ್ಕೆ ಮರಳಿದರು ಮತ್ತು ಪ್ಯಾರ್ ಕೆ ದೋ ನಾಮ್: ಏಕ್ ರಾಧಾ, ಏಕ್ ಶ್ಯಾಮ್ ಎಂಬ ಶೀರ್ಷಿಕೆಯ ದೈನಂದಿನ ಧಾರವಾಹಿಯನ್ನು ನಟಿಸಿದ್ದರು.
ಸಿನಿಮಾಗಳಿಗಿಂತ ಪ್ರೇಮ ಪ್ರಕರಣಗಳಿಗೇ ಫೇಮಸ್ ಸುಶ್ಮಿತಾ ಸೇನ್ ಅವರ ಲೈಫ್
ತಬಸ್ಸುಮ್ ಅವರ ಸಾವನ್ನು ಅವರ ಕುಟುಂಬ ಸದಸ್ಯರು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಿದ್ದಾರೆ. ಆಕೆಯ ಮೊಮ್ಮಗಳಾದ ಕರಿಷ್ಮಾ ಗೋವಿಲ್ ಮತ್ತು ಖುಷಿ ಗೋವಿಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ಅವರೊಂದಿಗೆ ಕೆಲವು ಭಾವುಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕರಿಷ್ಮಾ ಅವರು ತಬಸ್ಸುಮ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದು, 'ತಬಸ್ಸುಮ್ ಮೇ ಘುಮ್ ಕೊ ಚುಪಾವೋ ತೋ ಜಾನೆ, ಹುಮಾರಿ ತರಹ ಮುಸ್ಕುರಾವ್ ತೋ ಜಾನೆ. ರೆಸ್ಟ್ ಇನ್ ಪೀಸ್ ದಾದೀಜಿ. ನಿಮ್ಮ ನಗು, ಸ್ವಭಾವ ಹಾಗೂ ಪರಂಪರೆ ಎಂದಿಗೂ ಉಳಿಯುತ್ತದೆ' ಎಂದು ಬರೆದುಕೊಂಡಿದ್ದರೆ, 'ಇಂದು ನಗಿಸಿ, ನಾಳೆ ಅಳಿಸಿ' ಎಂದು ಅವರ ಇನ್ನೊಬ್ಬ ಮೊಮ್ಮಗಳು ಖುಷಿ ಬರೆದುಕೊಂಡಿದ್ದಾರೆ.ಗೋವಿಲ್ ಕುಟುಂಬವು ನವೆಂಬರ್ 21 ರಂದು ತಬಸ್ಸುಮ್ ಅವರ ಪ್ರಾರ್ಥನಾ ಸಭೆಯನ್ನು ಆಯೋಜಿಸಿದೆ. ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಹೊಸ ಸಂಗಾತಿಗೆ ಹೊಸ ಮನೆ ಖರೀದಿಸಿದ ಗ್ರೀಕ್ ಗಾಡ್, ಹೃತಿಕ್ ಮನೆ ನೋಡಿದ್ರಾ?
ತಬಸ್ಸುಮ್ 9 ಜುಲೈ 1944 ರಂದು ಅಯೋಧ್ಯೆಯಲ್ಲಿ ಜನಿಸಿದ್ದರು. ಅವರ ತಂದೆ ಅಯೋಧ್ಯಾ ನಾಥ್ ಸಚ್‌ದೇವ್ ಮತ್ತು ತಾಯಿ ಅಸ್ಗರಿ ಬೇಗಂ ಸ್ವಾತಂತ್ರ್ಯ ಹೋರಾಟಗಾರರು. ಮೂರರ ಹರೆಯದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ತಬಸ್ಸುಮ್ 'ದೀದಾರ್' ಚಿತ್ರದಲ್ಲಿ ನರ್ಗೀಸ್ ಅವರ ಬಾಲ್ಯದ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದರು.