* ಬ್ರಿಟನ್ ರೀತಿ ಹಬ್ಬಿದರೆ ನಿತ್ಯ 14 ಲಕ್ಷ ಪ್ರಕರಣ
* ಹೊಸ ವರ್ಷ, ಸಭೆ, ಅನಗತ್ಯ ಪ್ರಯಾಣ ನಿಲ್ಲಿಸಿ
* ಕೋವಿಡ್ ಕಾರ್ಯಪಡೆ ಮುಖ್ಯಸ್ಥ ನಿರ್ದೇಶನ
ನವದೆಹಲಿ(ಡಿ.18): ಇಡೀ ಜಗತ್ತಿನಾದ್ಯಂತ ತಲ್ಲಣಕ್ಕೆ ಕಾರಣವಾಗಿರುವ ‘ಒಮಿಕ್ರೋನ್’(Omicron) ಕೋವಿಡ್ ರೂಪಾಂತರಿ ತಳಿ ಬ್ರಿಟನ್‌ನಲ್ಲಿ(Britain) ವ್ಯಾಪಿಸುತ್ತಿರುವಂತೆ ಭಾರತದಲ್ಲಿ(India) ಸಮುದಾಯಕ್ಕೆ ಹರಡಿದರೆ ನಿತ್ಯ 14 ಲಕ್ಷ ಪ್ರಕರಣಗಳು ದೃಢಪಡುವ ಸಾಧ್ಯತೆ ಇದೆ. ಅದೇ ರೀತಿ ಫ್ರಾನ್ಸ್(France) ಮಾದರಿಯಲ್ಲಿ ಹರಡಿದರೆ ದೇಶದಲ್ಲಿ ನಿತ್ಯ 13 ಲಕ್ಷ ಜನರಿಗೆ ಸೋಂಕು ತಗುಲುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ(Central Government) ಎಚ್ಚರಿಸಿದೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನಗತ್ಯ ಓಡಾಟ ಮತ್ತು ಹೊಸ ವರ್ಷಾಚರಣೆ, ಸಭೆ-ಸಮಾರಂಭಗಳಲ್ಲಿ ಸೇರುವುದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಸರ್ಕಾರ ಶುಕ್ರವಾರ ಜನರಿಗೆ ಮನವಿ ಮಾಡಿದೆ. ಮಾಸ್ಕ್(Mask) ಮತ್ತು ಸಾಮಾಜಿಕ ಅಂತರ(Social Distance) ಸೇರಿ ಕೋವಿಡ್ ಮಾರ್ಗಸೂಚಿ(Covid Guidelines) ಕಡ್ಡಾಯ ಪಾಲನೆಗೆ ಕೋರಿದೆ.
Omicron Variant: ಒಮಿಕ್ರೋನ್ ಸೋಂಕಿತರ ಜತೆ ಸಂಪರ್ಕದಲ್ಲಿದ್ದ 39 ಜನ ಪತ್ತೆ
ಶುಕ್ರವಾರ ಸಂಜೆ ಆರೋಗ್ಯ ಇಲಾಖೆಯ(Department of Health) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ.ವಿ.ಕೆ.ಪೌಲ್, ‘ಸದ್ಯ ಬ್ರಿಟನ್‌ನಲ್ಲಿ ನಿತ್ಯ ಸರಾಸರಿ 1 ಲಕ್ಷ ಜನರಲ್ಲಿ ಸೋಂಕು ದೃಢಪಡುತ್ತಿದ್ದರೆ, ಫ್ರಾನ್ಸ್‌ನಲ್ಲಿ ನಿತ್ಯ 65,000 ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಅಲ್ಲಿನ ಜನಸಂಖ್ಯೆಗೆ ಅನುಗುಣವಾದ ಅಂಕಿ ಅಂಶ. ಭಾರತದ ಜನಸಂಖ್ಯೆಗೆ ಅನುಗುಣವಾಗಿ ಬ್ರಿಟನ್, ಫ್ರಾನ್ಸ್ ಮಾದರಿಯಲ್ಲಿ ಸೋಂಕು ಹರಡಿದರೆ ನಿತ್ಯ 13-14 ಲಕ್ಷ ಕೇಸು ಕಾಣಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಒಮಿಕ್ರೋನ್ ಭಾರತದಲ್ಲಿ ಸಮುದಾಯಕ್ಕೇನಾದರೂ ಹರಡಿದರೆ ಡೆಲ್ಟಾಗಿಂತ ಹೆಚ್ಚು ವೇಗದಲ್ಲಿ ಸೋಂಕು ಪ್ರಸರಣ ಆಗುತ್ತದೆ. ಒಮಿಕ್ರೋನ್ ಸಮುದಾಯಕ್ಕೆ ಹರಡಿದರೆ ಅತ್ಯಂತ ವೇಗವಾಗಿ ಹಬ್ಬುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಎಚ್ಚರಿಸಿದೆ. ಈ ನಡುವೆ ಶೇ.80ರಷ್ಟು ಜನರು ಲಸಿಕೆ(Vaccine) ಪಡೆದಿದ್ದರೂ, ಈಗಾಗಲೇ ಡೆಲ್ಟಾ ವ್ಯಾಪಿಸಿದ್ದರೂ ಯುರೋಪಿಯನ್ ದೇಶಗಳಲ್ಲಿ ಒಮಿಕ್ರೋನ್ ಸೋಂಕಿನ ಪ್ರಮಾಣ ತೀವ್ರ ಏರುಗತಿಯಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾಗಿಂತ ವೇಗವಾಗಿ ಸೋಂಕು ಹರಡುತ್ತಿದೆ. ಭಾರತದಲ್ಲಿಯೂ ಈವರೆಗೆ 100ಕ್ಕೂ ಹೆಚ್ಚು ಒಮಿಕ್ರೋನ್ ಪ್ರಕರಣಗಳು ದೃಢಪಟ್ಟಿವೆ’ ಎಂದಿದ್ದಾರೆ.
2 ವಾರ ನಿರ್ಬಂಧ ಅಗತ್ಯ:
ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳು ಕಳೆದ 20 ದಿನಗಳಿಂದ 10,000ಕ್ಕಿಂತ ಕಡಿಮೆ ಇವೆ. ಇದು ಸಮಾಧಾನಕರವಾಗಿದ್ದರೂ, ದೇಶದ 19 ಜಿಲ್ಲೆಗಳಲ್ಲಿ ವಾರದ ಕೋವಿಡ್ ಪಾಸಿಟಿವಿಟಿ ದರ ಶೇ.5ರಿಂದ ಶೇ.10ರಷ್ಟಿದೆ. 5 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಹೆಚ್ಚಿದೆ. ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳು ಕನಿಷ್ಠ 2 ವಾರ ಕಠಿಣ ನಿರ್ಬಂಧ ವಿಧಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Covid 19 Variant Outbreak: ಡೆಲ್ಟಾಗಿಂತ 70 ಪಟ್ಟು ವೇಗವಾಗಿ ಹರಡುತ್ತೆ ಒಮಿಕ್ರೋನ್!
ರಾಜ್ಯದಲ್ಲೂ ಕೊರೋನಾ, ಒಮಿಕ್ರಾನ್ ಆತಂಕ:
ರಾಜ್ಯದಲ್ಲಿ ನಿನ್ನೆ(ಶುಕ್ರವಾರ) ಒಟ್ಟು 238 ಕೊರೋನಾ (Coronavirus) ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 3 ಮರಣ ಪ್ರಕರಣ ದಾಖಲಾಗಿದೆ. ಇನ್ನು ರಾಜ್ಯದಲ್ಲಿ ಕೊರೋನಾ ರೂಪಾಂತರಿ ತಳಿ ಒಮಿಕ್ರಾನ್(Omicron variant) ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 8ಕ್ಕೆ ಏರಿದೆ.
ಈ ಮೂಲಕ, ಕರ್ನಾಟಕದಲ್ಲಿ(Karnataka) ಕೊರೋನಾ ಸೋಂಕಿತರ ಸಂಖ್ಯೆ 30,01,792 ಕ್ಕೆ ಏರಿಕೆಯಾಗಿದ್ರೆ, ಈವರೆಗೆ ಕೊರೋನಾ ಸೋಂಕಿಗೆ 38,282 ಜನ ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 29,56,405 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ 7,076 ಕೊರೋನಾ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಶುಕ್ರವಾರ ಒಟ್ಟು 3,44,980 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಒಟ್ಟು 1,17,058 ಸ್ಯಾಂಪಲ್ (ಆರ್‌ಟಿಪಿಸಿಆರ್ 96,569 + 20,489 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.