ಶ್ರೀನಗರ: ಭಾರತದ ಲೈನ್ ಆಫ್ ಕಂಟ್ರೋಲ್(ಎಲ್‌ಒಸಿ) ಬಳಿ ಕುರಿ ಮೇಯಿಸುತ್ತಿದ್ದ ಭಾರತೀಯ ಕುರಿಗಾಹಿಗಳನ್ನು ಚೀನಾ ಸೈನಿಕರು ತಡೆಯಲು ಮುಂದಾದ ಘಟನೆ ನಡೆದಿದೆ. ತಮ್ಮನ್ನು ತಡೆದ ಚೀನಿ ಸೈನಿಕರನ್ನು ಭಾರತೀಯ ಕುರಿಗಾಹಿಗಳು ದಿಟ್ಟವಾಗಿ ಎದುರಿಸಿದ್ದಾರೆ. 2020ರಲ್ಲಿ ಇಂಡೋ ಚೀನಾ ಗಡಿಯ ಗ್ಯಾಲ್ವಾನ್‌ನಲ್ಲಿ ನಡೆದ ಭಾರತ ಚೀನಿ ಸೈನಿಕರ ಘರ್ಷಣೆಯ ನಂತರ ಸ್ಥಳೀಯ ಭಾರತೀಯ ಕುರಿಗಾಹಿಗಳು ಇಲ್ಲಿ ಕುರಿಮೇಯಿಸುವುದನ್ನು ನಿಲ್ಲಿಸಿದ್ದರು. ಆದರೆ ಈಗ ಅಲ್ಲಿ ಕುರಿ ಮೇಯಿಸುವುದನ್ನು ಚೀನಿ ಲಿಬರೇಷನ್ ಆರ್ಮಿಯ ಸೈನಿಕರು ತಡೆದಿದ್ದು, ಇದನ್ನು ಖಂಡಿಸಿ ಕುರಿಗಾಹಿಗಳು ವಿರೋಧಿಸಿ ನಾವು ನಮ್ಮ ದೇಶದ ವ್ಯಾಪ್ತಿಯಲ್ಲಿದ್ದೇವೆ ಎಂದು ಪ್ರತಿಪಾದಿಸುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕುರಿಗಾಹಿಗಳ ಈ ದಿಟ್ಟತನಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ, ಪೂರ್ವ ಲಡಾಖ್‌ನಲ್ಲಿ ಅಲೆಮಾರಿ ಕುರಿಗಾಹಿಗಳು ನಿಜವಾದ ನಿಯಂತ್ರಣ ರೇಖೆಯ ವ್ಯಾಪ್ತಿಯಲ್ಲಿ ಕುರಿ ಮೇಯಿಸುವುದನ್ನು ನಿಲ್ಲಿಸಿದ್ದರು. ಆದರೆ ಈಗ ಇದೇ ಮೊದಲ ಬಾರಿಗೆ ಅವರು ಈ ಪ್ರದೇಶದಲ್ಲಿ ತಮ್ಮ ಪ್ರಾಣಿಗಳನ್ನು ಮೇಯಿಸುವ ಹಕ್ಕನ್ನು ಸಮರ್ಥಿಸಿಕೊಂಡಿದ್ದು, ಚೀನೀ ಸೇನೆಯ ಯೋಧರನ್ನು ಇಲ್ಲಿಂದ ತೆರಳುವಂತೆ ಹೇಳಿದ್ದಾರೆ. ಎಲ್‌ಎಸಿ ಭಾರತೀಯ ಮತ್ತು ಚೀನಾದ ಪ್ರದೇಶಗಳನ್ನು ಪ್ರತ್ಯೇಕಿಸುವ ಗಡಿರೇಖೆಯಾಗಿದೆ. ಈ ಗಡಿಗೆ ಸಂಬಂಧಿಸಿದಂತೆ ಆಗಾಗ ಭಾರತ ಚೀನಾ ಮಧ್ಯೆ ವಿವಾದಕ್ಕೆ ಕಾರಣವಾಗಿವೆ. ಕೆಲವು ಸಂದರ್ಭಗಳಲ್ಲಿ ಇದು ಹಿಂಸಾತ್ಮಕ ಘರ್ಷಣೆಗಳಿಗೂ ಕಾರಣವಾಗಿವೆ. ಆದರೂ ಈ ಸಂದರ್ಭದಲ್ಲಿ, ಹಿಂಸಾಚಾರವನ್ನು ತಪ್ಪಿಸಲಾಗಿದೆ.
ಲಡಾಕ್ ಆಯ್ತು ಈಗ ನೀತಿ ಪಾಸ್ ಬಳಿ ಚೀನಾ ಉಪಟಳ: ಸೇನಾ ಕ್ಯಾಂಪ್ ನಿರ್ಮಾಣ
ಚೀನಿ ಸೈನಿಕ ವಿರುದ್ಧ ತಿರುಗಿ ನಿಂತು ದಿಟ್ಟತನ ಮೇರೆದ ಸ್ಥಳೀಯ ಕುರಿಗಾಹಿಗಳ ಕಾರ್ಯವನ್ನು ಲಡಾಖ್ ಸ್ವಾಯತ್ತ ಬೆಟ್ಟಗಳ ಅಭಿವೃದ್ಧಿ ಮಂಡಳಿಯ ಮಾಜಿ ಕೌನ್ಸಿಲರ್, ಲಡಾಕ್ ಭಾಗದ ಕೌಶಲ್ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ್ದಾರೆ. ಅಲ್ಲದೇ ಕುರಿಗಾಹಿಗಳಿಗೆ ಧೈರ್ಯ ತುಂಬಿದ ಭಾರತೀಯ ಸೇನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 'ಪೂರ್ವ ಲಡಾಖ್‌ನ ಗಡಿ ಪ್ರದೇಶಗಳಲ್ಲಿ @firefurycorps_IA ಮಾಡಿದ ಧನಾತ್ಮಕ ಪ್ರಭಾವವನ್ನು ನೋಡುವುದು ಹರ್ಷದಾಯಕವಾಗಿದೆ, ಪ್ಯಾಂಗಾಂಗ್‌ನ ಉತ್ತರ ದಂಡೆಯಲ್ಲಿರುವ ಸಾಂಪ್ರದಾಯಿಕ ಹುಲ್ಲುಗಾವಲುಗಳಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಹುಲ್ಲುಗಾವಲು ಮತ್ತು ಅಲೆಮಾರಿಗಳಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಇಂತಹ ಬಲವಾದ ನಾಗರಿಕ-ಮಿಲಿಟರಿ ಸಂಬಂಧಗಳು ಮತ್ತು ಗಡಿ ಪ್ರದೇಶದ ಜನಸಂಖ್ಯೆಯ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತಿರುವುದಕ್ಕಾಗಿ ನಾನು ಭಾರತೀಯ ಸೇನೆಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿಯೂ ಅಲೆಮಾರಿ ಕುರಿಗಾಹಿಗಳ ಧೈರ್ಯವನ್ನು ಶ್ಲಾಘಿಸಿರುವ ಕೊಂಚೋಕ್ ಸ್ಟಾಂಜಿನ್, ನಮ್ಮ ಸ್ಥಳೀಯ ಜನರು ತಾವು ಇರುವ ಪ್ರದೇಶ ನಮ್ಮ ಅಲೆಮಾರಿಗಳ ಗೋಮಾಳ ಎಂದು ಹೇಳಿಕೊಂಡು ಚೀನಾದ ಲಿಬರೇಷನ್ ಆರ್ಮಿ ಮುಂದೆ ಹೇಗೆ ಧೈರ್ಯ ತೋರಿಸುತ್ತಿದ್ದಾರೆ ನೋಡಿ. ಪಿಎಲ್‌ಎ ನಮ್ಮ ಅಲೆಮಾರಿ ಕುರಿಗಾಹಿಗಳು ನಮ್ಮ ಪ್ರದೇಶದಲ್ಲಿ ಮೇಯುವುದಕ್ಕೆ ತಡೆಯೊಡ್ಡುತ್ತಿವೆ. ವಿಭಿನ್ನ ಗ್ರಹಿಕೆಗಳಿಂದಾಗಿ ಇದು ಎಂದಿಗೂ ಮುಗಿಯದ ಪ್ರಕ್ರಿಯೆ ಎಂದು ತೋರುತ್ತದೆ. ಆದರೆ ನಮ್ಮ ಭೂಮಿಯನ್ನು ರಕ್ಷಿಸಲು ಮತ್ತು ರಾಷ್ಟ್ರದ ಎರಡನೇ ರಕ್ಷಕ ಶಕ್ತಿಯಾಗಿ ನಿಲ್ಲುವ ನಮ್ಮ ಅಲೆಮಾರಿಗಳಿಗೆ ನಾನು ನಮಸ್ಕರಿಸುತ್ತೇನೆ ಎಂದು ಅವರು ಬರೆದಿದ್ದಾರೆ.
China Threat: ಯುದ್ಧಕ್ಕೆ ಬಂದ್ರೆ ಜಯ ನಮ್ಮದೆ, ಚೀನಾಕ್ಕೆ ಸೇನಾ ಮುಖ್ಯಸ್ಥ ಎಚ್ಚರಿಕೆ
ಭಾರತೀಯ ಅಲೆಮಾರಿ ಕುರಿಗಾಹಿಗಳ ಈ ದಿಟ್ಟತನಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲಿಯೂ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಕನಿಷ್ಠ ಮೂರು ಚೀನೀ ಶಸ್ತ್ರಸಜ್ಜಿತ ವಾಹನಗಳು ಮತ್ತು ಸ್ಥಳದಲ್ಲೇ ಹಲವಾರು ಸೈನಿಕರು ಬೀಡು ಬಿಟ್ಟಿರುವುದನ್ನು ತೋರಿಸುತ್ತಿದೆ. ಎಚ್ಚರಿಕೆಯ ಸೈರನ್ ಹೊಡೆಯುತ್ತಾ ಈ ಪ್ರದೇಶದಿಂದ ಹೋಗುವಂತೆ ಕುರಿಗಾಹಿಗಳಿಗೆ ಸೂಚಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಚೀನಿ ಸೈನಿಕರ ಈ ಬೆದರಿಕೆಗೆ ಬಗ್ಗದ ಕುರಿಗಾಹಿಗಳು ತಾವಿದ್ದಲ್ಲಿಯೇ ನಿಂತು ಇದು ನಮ್ಮ ದೇಶ ಎಂದು ಹೇಳುತ್ತಾರೆ. ಆದರೆ ವಾಗ್ವಾದ ಮುಂದುವರೆದಾಗ ಕುರಿಗಾಹಿಗಳು ನೆಲದಿಂದ ಕಲ್ಲುಗಳನ್ನು ಎತ್ತುವುದನ್ನು ಕಾಣಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ