* ‘ಸುಪ್ರೀಂ’ ಜಡ್ಜ್ ಹುದ್ದೆಗೆ ಕೊಲಿಜಿಯಂ ಶಿಫಾರಸು
* ಕನ್ನಡತಿ ನ್ಯಾ| ನಾಗರತ್ನ ಪ್ರಥಮ ಮಹಿಳಾ ಸಿಜೆಐ ಆಗುತ್ತಾರಾ?
* 2027ಕ್ಕೆ ಮುಖ್ಯ ನ್ಯಾಯಮೂರ್ತಿ ಆಗುವ ಸಾಧ್ಯತೆ
ನವದೆಹಲಿ(ಆ.19): ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್ ಓಕ, ನ್ಯಾಯಮೂರ್ತಿ ಬಿ.ವಿ.ನಾಗರತ್ನ ಸೇರಿದಂತೆ ದೇಶದ ಬೇರೆ ಬೇರೆ ಹೈಕೋರ್ಟ್‌ಗಳ 9 ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ನೇಮಕಾತಿ ಶಿಫಾರಸು ಸಮಿತಿ (ಕೊಲಿಜಿಯಂ) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಪೈಕಿ ನ್ಯಾ.ನಾಗರತ್ನ ಪದೋನ್ನತಿ ಶಿಫಾರಸು ಮಹತ್ವದ್ದಾಗಿದ್ದು, ಅವರಿಗೆ 2027ರಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆ ಒಲಿದು ಬರುವ ಸಾಧ್ಯತೆ. ಅದು ನಿಜವಾದಲ್ಲಿ ಈ ಹುದ್ದೆ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹಿರಿಮೆ ಅವರದ್ದಾಗಲಿದೆ.
ಜೊತೆಗೆ ತಮ್ಮ ತಂದೆ ನಿರ್ವಹಿಸಿದ ಹುದ್ದೆಯನ್ನು ವಹಿಸಿಕೊಂಡ ಮೊದಲ ಮಹಿಳೆ ಎಂಬ ಗೌರವಕ್ಕೂ ಅವರು ಪಾತ್ರರಾಗಲಿದ್ದಾರೆ. ನ್ಯಾ.ನಾಗರತ್ನ ಅವರ ತಂದೆ ನ್ಯಾ.ಇ.ಎಸ್. ವೆಂಕಟರಾಮಯ್ಯ ಕೂಡ 1889ರಲ್ಲಿ ಕೆಲ ತಿಂಗಳ ಮಟ್ಟಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ಸುಪ್ರೀಂಗೆ 9 ಹೊಸ ನ್ಯಾಯಾಧೀಶರು, ಕರ್ನಾಟಕದ ಬಿವಿ ನಾಗರತ್ನ ಹೆಸರು ಫೈನಲ್
9 ಹೆಸರು ಶಿಫಾರಸು:
ಕರ್ನಾಟಕ ಹೈಕೋಟ್ ಸಿಜೆ ಅಭಯ್ ಓಕ, ನ್ಯಾ.ನಾಗರತ್ನ, ಕೇರಳ ಹೈಕೋರ್ಟ್‌ನ ನ್ಯಾ.ಸಿ.ಟಿ.ರವಿಕುಮಾರ್, ಮದ್ರಾಸ್ ಹೈಕೋರ್ಟ್‌ನ ನ್ಯಾ.ಎಂ.ಎಂ.ಸುಂದರೇಶ್, ಗುಜರಾತ್ ಹೈಕೋರ್ಟ್‌ನ ಸಿಜೆ ವಿಕ್ರಂ ನಾಥ್, ಗುಜರಾತ್ ಹೈಕೋರ್ಟ್‌ನ ನ್ಯಾ.ಬೇಲ ತ್ರಿವೇದಿ, ಸಿಕ್ಕಿಂ ಹೈಕೋರ್ಟ್‌ನ ಸಿಜೆ ಜಿತೇಂದ್ರ ಕುಮಾರ್ ಮಹೇಶ್ವರಿ, ತೆಲಂಗಾಣ ಹೈಕೋರ್ಟ್‌ನ ಸಿಜೆ ಹಿಮಾ ಕೊಹ್ಲಿ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ. 9 ಜನರ ಪೈಕಿ ನ್ಯಾ.ನಾಗರತ್ನ, ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ.ಬೇಲ ತ್ರಿವೇದಿ ಮಹಿಳೆಯರಾಗಿದ್ದಾರೆ.
ಎಲ್ಲಾ ಹುದ್ದೆ ಭರ್ತಿ?:
ನ್ಯಾ| ಎನ್.ವಿ. ರಮಣ ಅವರು ಮುಖ್ಯ ನ್ಯಾಯಮೂರ್ತಿ ಆಗುವ ಮುನ್ನ ಇದ್ದ ನ್ಯಾ| ಎಸ್.ಎ.ಬೋಬ್ಡೆ ಅವರ ಅಧಿಕಾರಾವಧಿಯ ಆರಂಭದಿಂದಲೂ ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ನಡೆದೇ ಇಲ್ಲ. ಹೀಗಾಗಿ 34 ಒಟ್ಟು ಹುದ್ದೆಗಳ ಪೈಕಿ 25 ನ್ಯಾಯಮೂರ್ತಿಗಳ ಹುದ್ದೆಗಳು ಮಾತ್ರ ಭರ್ತಿ ಇದ್ದು, ಇನ್ನುಳಿದ 9 ಖಾಲಿ ಇವೆ. ಈಗ ಈ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಒಪ್ಪಿದರೆ ಎಲ್ಲ ಹುದ್ದೆಗಳು ಭರ್ತಿ ಆದಂತಾಗಲಿದೆ.
ನ್ಯಾ.ನಾಗರತ್ನಗೆ ಸಿಜೆಐ ಹುದ್ದೆ?:
ಕೇಂದ್ರ ಸರ್ಕಾರವು ನ್ಯಾ.ನಾಗರತ್ನ ಪದೋನ್ನತಿಗೆ ಒಪ್ಪಿದರೆ ಅವರು 2027ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶೆ ಆಗುವ ಸಾಧ್ಯತೆ ಇದೆ. ನ್ಯಾ.ಸೂರ್ಯಕಾಂತ್ ಅವರ ಉತ್ತರಾಧಿಕಾರಿಯಾಗಿ 2027ರ ಅಕ್ಟೋಬರ್‌ನಲ್ಲಿ ಅವರು ಅಧಿಕಾರ ಸ್ವೀಕರಿಸಬಹುದು. ಆಗ 2027ರ ಅಕ್ಟೋಬರ್ 29ರವರೆಗೆ ನ್ಯಾ.ನಾಗರತ್ನ ಈ ಹುದ್ದೆಯಲ್ಲಿ ಇರಲಿದ್ದಾರೆ.
ಮಹಿಳಾ ಸಿಜೆಐ : ಕರ್ನಾಟಕ ಹೈಕೋರ್ಟ್ ನ್ಯಾ. ನಾಗರತ್ನಗೆ ಒಲಿಯುತ್ತಾ ಭಾಗ್ಯ?
ನೇಮಕ ಸಾಧ್ಯತೆ ಹೇಗೆ?
ಹಾಲಿ ಸಿಜೆಐ ಬಳಿಕ ಹಿರಿತನದ ಆಧಾರದಲ್ಲಿ ನ್ಯಾ.ಯು.ಯು.ಲಲಿತ್, ನ್ಯಾ.ಚಂದ್ರಚೂಡ್, ನ್ಯಾ.ಸಂಜೀವ್ ಖನ್ನಾ, ನ್ಯಾ.ಸೂರ್ಯಕಾಂತ್ ಅವರು ಮುಂದಿನ ಸಿಜೆಐ ಆಗುವ ಅವಕಾಶ ಹೊಂದಿದ್ದಾರೆ. ಈ ಪೈಕಿ ಕಡೆಯವರಾದ ನ್ಯಾ.ಸೂರ್ಯಕಾಂತ್ ಅವಧಿ 2027ರ ಫೆಬ್ರವರಿಗೆ ಮುಗಿಯಲಿದೆ. ಆ ಹಂತದಲ್ಲಿ ಹಿರಿತನ ಪಡೆಯುವವರ ಪೈಕಿ ನ್ಯಾ.ನಾಗರತ್ನ ಮುಂಚೂಣಿಗೆ ಬಂದು ಸಿಜೆಐ ಆಗುವ ಸಾಧ್ಯತೆಯಿದೆ.