ಇನ್ನು ಇದೆ ಮೋದಿ ಅಲೆ, ಉತ್ತರದಲ್ಲಿ ಭದ್ರವಾಯ್ತಾ ಯೋಗಿ ನೆಲೆ?ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ!

By Suvarna News  |  First Published Aug 18, 2021, 7:53 PM IST
  • ಮೋದಿ ಆಡಳಿತ ಉತ್ತರ ಪ್ರದೇಶ ಚುನಾವಣೆ ಮೇಲೆ ಎಷ್ಟು ಪ್ರಭಾವ ಬೀರುತ್ತೆ?
  • ಯೋಗಿ ಮುಂದೆ ಮಾಯಾವತಿ ಮತ್ತು ಅಖಿಲೇಶ್ ಬಗ್ಗೆ ಎಷ್ಟಿದೆ ಜನರ ಒಲವು?
  • ಏಷ್ಯಾನೆಟ್ ಸುವರ್ಣನ್ಯೂಸ್-ಜನ್ ಕಿ ಬಾತ್ ನಡೆಸಿದ ಸಮೀಕ್ಷೆ ವರದಿ ಪ್ರಕಟ

 ಉತ್ತರ ಪ್ರದೇಶ(ಆ.18): ದೇಶದ ರಾಜಕಾರಣದಲ್ಲಿ ಉತ್ತರ ಪ್ರದೇಶದ ಚುನಾವಣೆಗೆ ಪ್ರಮುಖ ಸ್ಥಾನವಿದೆ. ಯುಪಿ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ತಿಂಗಳು ಮಾತ್ರ ಬಾಕಿ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 403 ಸ್ಥಾನಗಳ ಪೈಕಿ 315 ಸ್ಥಾನಗಳನ್ನು ಗೆದ್ದು ದಾಖಲೆ ಮೂಲಕ ಅಧಿಕಾರ ಹಿಡಿದಿದೆ.  ಸಮಾಜವಾದಿ ಪಾರ್ಟಿ(SP) ಹಾಗೂ ಬಹುಜನ್ ಸಮಾಜ್ ಪಾರ್ಟಿ (BSP )ಬಿಜೆಪಿಯನ್ನು ನಿಯಂತ್ರಿಸಲಿದೆ ಅನ್ನೋ ಲೆಕ್ಕಾಚಾರ 2017ರಲ್ಲಿ ತಲೆಕೆಳಗಾಗಿತ್ತು. ಕಳೆದ ಚುನಾವಣೆಯಲ್ಲಿ ಇದ್ದ ಪ್ರತಿಕೂಲ ಹವಾಮಾನ ಈಗ ಬಿಜೆಪಿಗಿಲ್ಲ ಅನ್ನೋದು ರಾಜಕೀಯ ಪಂಡಿತರ ಅಭಿಪ್ರಾಯ. ಆದರೆ ಉತ್ತರ ಪ್ರದೇಶದ ಜನರ ಒಲವು, ಸರ್ಕಾರದ ಮೇಲಿನ ವಿಶ್ವಾಸ ನೋಡಿದರೆ ಈ ಬಾರಿಯೂ ರಾಜಕೀಯ ಲೆಕ್ಕಾಚಾರ ಉಲ್ಟಾ ಆಗಲಿದೆ ಅನ್ನೋದು ಏಷ್ಯಾನೆಟ್-ಜನ್ ಕಿ ಬಾತ್ ನಡೆಸಿದ ಸಮೀಕ್ಷೆಯಿಂದ ಬಹಿರಂಗವಾಗಿದೆ.

"

Latest Videos

undefined

ಅಯೋಧ್ಯೆಯ ರಾಮ ಮಂದಿರ: ಉತ್ತರ ಪ್ರದೇಶ ಚುನಾವಣೆ ದಿಕ್ಕನ್ನೇ ಬದಲಾಯಿಸುತ್ತಾ?

2014ರ ಲೋಕಸಭಾ ಚುನಾವಣೆ, 2017ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ ಅಲೆಯ ಹೊಡೆತಕ್ಕೆ SP,BSP ಸೇರಿದಂತೆ ಇತರ ಪಕ್ಷಗಳು ಧೂಳೀಪಟವಾಗಿತ್ತು. ಇದರಲ್ಲಿ 2019ರ ಲೋಕಸಭಾ ಚುನಾವಣೆ ವೇಳೆ ಯೋಗಿ ಆದಿತ್ಯನಾಥ್ ಆಡಳಿತವೂ ನೆರವಾಗಿತ್ತು. ಈ ಬಾರಿಯ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲೂ ಮೋದಿ ಅಲೆ ಯೋಗಿ ಸರ್ಕಾರಕ್ಕೆ ನೆರವಾಗಲಿದೆ. ಮೋದಿ ಈಗಲೂ ಉತ್ತರ ಪ್ರದೇಶದ ಜನ ನಾಯಕನಾಗಿ ಮೊದಲ ಸ್ಥಾನದಲ್ಲೇ ಇದ್ದಾರೆ.

ಏಷ್ಯಾನೆಟ್ ಸುವರ್ಣನ್ಯೂಸ್ ಸರ್ವೇ ಪ್ರಕಾರ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಈ ಬಾರಿಯು ಮೋದಿ ಅಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಶೇಕಡಾ 25 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇಕಡಾ 24 ರಷ್ಟು ಮಂದಿ ಸಣ್ಣ ಮಟ್ಟದಲ್ಲಿ ಮೋದಿ ಅಲೆ ಯೋಗಿ ಸರ್ಕಾರಕ್ಕೆ ನೆರವಾಗಲಿದೆ ಎಂದಿದ್ದಾರೆ. ಶೇಕಡಾ 33 ರಷ್ಟು ಮಂದಿ ಮೋದಿ ಅಲೆ ಹೆಚ್ಚಿನ ಪರಿಣಾಮ ಬೀರಲ್ಲ ಎಂದಿದ್ದಾರೆ. ಕೇವಲ ಶೇಕಡಾ 18 ರಷ್ಟು ಮಂದಿ ಮಾತ್ರ ಮೋದಿ ಅಲೆ ಈ ಬಾರಿಯ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶ ಚುನಾವಣೆ: ಯೋಗಿ ಸರ್ಕಾರದ ಮುಂದಿರುವ ಸವಾಲೇನು? ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ!

ಇದರೊಂದಿಗೆ ಯೋಗಿ ಆದಿತ್ಯನಾಥ್ ಸರ್ಕಾರ ನೀಡಿದ ಜನಪರ ಆಡಳಿತವೂ ನೆರವಾಗಲಿದೆ. ಈ ಚುನಾಣೆಯಲ್ಲಿ ಬೆಲೆ ಏರಿಕೆ ವಿಚಾರ ಹೊರತು ಪಡಿಸಿದರೆ ಯೋಗಿ ಸರ್ಕಾರಕ್ಕೆ ತೀವ್ರ ಸವಾಲೊಡ್ಡುವ ವಿಚಾರಗಳಿಲ್ಲ. ಇನ್ನು ಈ ಹಿಂದಿನ ಚುನಾವಣೆಗೆ ರಾಮಬಾಣವಾಗಿದ್ದ ರಾಮ ಮಂದಿರ ನಿರ್ಮಾಣ ಕಾರ್ಯ ಈ ಬಾರಿಯ ಬಿಜೆಪಿಗೆ ಅಯೋಧ್ಯೆಯಲ್ಲಿ ಹೆಚ್ಚಿನ ಮತಗಳನ್ನು ತಂದುಕೊಡಲಿದೆ.  ಆದರೆ ಇತರೆಡೆ ರಾಮಮಂದಿರ ಬದಲು ಕುಂಭಮೇಳ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ ಹಾಗೂ ಸರ್ಕಾರದ ಕಾರ್ಯವೈಖರಿ ಯೋಗಿ ಸರ್ಕಾರಕ್ಕೆ ನೆರವಾಗಲಿದೆ.

ಯೋಗಿ, ಅಖಿಲೇಶ್, ಮಾಯಾ: ಉ. ಪ್ರದೇಶದಲ್ಲಿ ಯಾರು ಬೆಸ್ಟ್‌? ಸಮೀಕ್ಷೆಯಲ್ಲಿ ಸಿಕ್ತು ಉತ್ತರ!

ಸಣ್ಣ ಅತೀ ಸಣ್ಣ ರೈತರಿಗೆ ಆರ್ಥಿಕ ನೆರವನ್ನು ನೀಡಲು ಪ್ರಧಾನಿ ಮೋದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿ ಮಾಡಿದ್ದಾರೆ. 2018ರಿಂದ ಈ ಯೋಜನೆ ಮೂಲಕ ರೈತರಿಕೆ ವಾರ್ಷಿಕ 6,000 ರೂಪಾಯಿಯನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ರೈತರು ಇದರ ಫಲಾನುಭವಿಗಳಾಗಿದ್ದಾರೆ. ಆರೋಗ್ಯ ವಿಮೆಯಲ್ಲಿ ಮೋದಿ ಹೊಸ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ವಿಮೆ, ಜೀವನಜ್ಯೋತಿ ವಿಮೆ ಸೇರಿದಂತೆ ಎಲ್ಲಾ ಸರ್ಕಾರದ ಸೌಲಭ್ಯಗಳನ್ನು ಸುಲಭ ಬ್ಯಾಂಕಿಂಗ್ ಮೂಲಕ ಲಭ್ಯವಾಗುವಂತೆ ಮಾಡಿದ್ದಾರೆ. ಮೋದಿ ಯೋಜನೆಗಳು ಉತ್ತರ ಪ್ರದೇಶದ ಚುನಾವಣೆಯಲ್ಲೂ ನೆರವಾಗಲಿದೆ ಅನ್ನೋದು ಸುಳ್ಳಲ್ಲ.

ಮೋದಿ ಲೋಕಸಭಾ ಕ್ಷೇತ್ರವಾಗಿ ವಾರಣಾಸಿಯಲ್ಲಿನ ಅಭಿವೃದ್ಧಿ ಕಾರ್ಯಗಳು, ಮೇಕ್ ಇನ್ ಇಂಡಿಯಾ, ಆತ್ಮಿನಿರ್ಭರ್ ಭಾರತ, ಸ್ವಂತ ಉದ್ಯಮಕ್ಕಾಗಿ ಮುದ್ರಾ ಯೋಜನೆ ಸೇರಿದಂತೆ ಹಲವು ಯೋಜನೆಗಳು ಉತ್ತರ ಪ್ರದೇಶದಲ್ಲಿ ಹೊಸ ಬದಲಾವಣೆ ತಂದಿದೆ. ಹೀಗಾಗಿ ಮೋದಿ ಆಡಳಿತ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ.

UP ಚುನಾವಣೆ; ಜಾತಿ ಲೆಕ್ಕದ ನಡುವೆ ಜನ ಬಯಸುತ್ತಿರುವುದೇನು?ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷಾ ವರದಿ!

ಇತ್ತ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲೇ 2022ರ ಚುನಾವಣೆ ಎಂದು ಈಗಾಗಲೇ ಬಿಜೆಪಿ ವರಿಷ್ಠರು ಘೋಷಿಸಿದ್ದಾರೆ. ಯೋಗಿ ಕ್ಲೀನ್ ಇಮೇಜ್ ಕೂಡ ಈ ಬಾರಿಯ ಚುನಾವಣೆಯಲ್ಲಿ ನೆರವಾಗಲಿದೆ. ಅಖಿಲೇಶ್ ಯಾದವ್ ಆಡಳಿತದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಯೋಗಿ ಸರ್ಕಾರ ಯಶಸ್ವಿಯಾಗಿದೆ. ಈ ಮೂಲಕ ಭ್ರಷ್ಟಾಚಾರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಉತ್ತರ ಪ್ರದೇಶದ ಈ ಹಿಂದಿನ ಅಖಿಲೇಶ್ ಯಾದವ್‌ನ ಆಡಳಿತ  ಶೇಕಡಾ 48 ರಷ್ಟು ಭ್ರಷ್ಟಾಚಾರದಿಂದ ತುಂಬಿತ್ತು ಎಂದು ಸಮೀಕ್ಷೆಯಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪ್ರಮಾಣ ಯೋಗಿ ಆಡಳಿತದಲ್ಲಿ ಶೇಕಡಾ 28ಕ್ಕೆ ಇಳಿದಿದೆ. ಇನ್ನು ಮಾಯಾವತಿ ಆಡಳಿತದಲ್ಲಿ ಭ್ರಷ್ಟಾಚಾರರ ಶೇಕಡಾ 24 ರಷ್ಟಿತ್ತು. ಆದರೆ ಅಭಿವೃದ್ಧಿ ಕಾರ್ಯಗಳು ಕುಂಟಿತವಾಗಿತ್ತು ಅನ್ನೋದು ಉತ್ತರ ಪ್ರದೇಶದ ಜನರ ಅಭಿಪ್ರಾಯವಾಗಿದೆ.

ಮೋದಿ ಅಲೆ, ಯೋಗಿ ಆಡಳಿತ, ಉತ್ತರ ಪ್ರದೇಶದ ಅಭಿವೃದ್ಧಿ, ಕೇಂದ್ರ ಯೋಜನೆ, ಜನಪ್ರಿಯತೆ ಸೇರಿದಂತೆ ಹಲವು ಕಾರಣಗಳಿಂದ ಉತ್ತರ ಪ್ರದೇಶದ ಜನ ಯೋಗಿ ಮತ್ತೊಮ್ಮೆ ಎಂದಿದ್ದಾರೆ. ಜನರ ಒಲವು ಯೋಗಿ ಆದಿತ್ಯನಾಥ್ ಕಡೆಗಿದೆ. ಆದರೆ ಯೋಗಿಗೆ ಅಖಿಲೇಶ್ ಯಾದವ್ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯೋಗಿ ಮೇಲೆ ಜನರ ಒಲವು ಇದ್ದರೂ ಈ ಬಾರಿ ಅದರ ಪ್ರಮಾಣ ಹಿಂದಿನಂತಿಲ್ಲ ಅನ್ನೋದು ಗಣನೀಯ.

ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ಸರ್ಕಾರವಿರಲಿ ಅನ್ನೋ ಮಂದಿ ಸಂಖ್ಯೆ ಶೇಕಡಾ 48. ಅಂದರೆ ರಾಜ್ಯದ ಅರ್ಧಕ್ಕರ್ಧ ಜನ ಮತ್ತೊಮ್ಮೆ ಯೋಗಿ ಆಡಳಿತ ಬಯಸುತ್ತಿದ್ದಾರೆ. ಆದರೆ ಯೋಗಿಗೆ ಅಖಿಲೇಶ್ ಯಾದವ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಅಖಿಲೇಶ್ ಸರ್ಕಾರದತ್ತ ಶೇಕಡಾ 40 ರಷ್ಟು ಮಂದಿ ಒಲವು ತೋರಿದ್ದಾರೆ. ಈ ಅಂಕಿ ಸಂಖೆ ಯೋಗಿ ಸರ್ಕಾರಕ್ಕೆ ಎಚ್ಚರಿಕೆ ಕರೆಗಂಟೆಯಾಗಿದೆ. ಯೋಗಿ ಹಾಗೂ ಅಖಿಲೇಶ್ ಯಾದವ್ ನಡುವಿನ ಅಂತರ ಹೆಚ್ಚಿಲ್ಲ. ಹೀಗಾಗಿ ಚುನಾವಣೆಯಲ್ಲಿ ಅದಲು ಬದಲಾದರೂ ಅಚ್ಚರಿಯಿಲ್ಲ. ಇನ್ನು ಮಯಾವತಿ ಹಾಗೂ ಇತರರ ಮೇಲೆ ಜನರ ಒಲವು ಕೇವಲ 12 ಶೇಕಡಾ ಮಾತ್ರ.

ಉತ್ತರ ಪ್ರದೇಶಕ್ಕೆ ಮತ್ತೊಮ್ಮೆ ಯೋಗಿ? ಅಚ್ಚರಿ ಕೊಟ್ಟ ಏಷ್ಯಾನೆಟ್‌ ಸಮೀಕ್ಷೆ ವರದಿ!

ಯೋಗಿಗೆ ನೇರ ಸ್ಪರ್ಧೆ ಇರುವುದು ಅಖಿಲೇಶ್ ಯಾದವ್ ಹಾಗೂ ಅವರ ಸಮಾಜವಾದಿ ಪಾರ್ಟಿ ಹಾಗೂ ಮೈತ್ರಿ ಪಕ್ಷ. ಆದರೆ ಮಾಯಾವತಿ ಅಂಕಿ ಸಂಖ್ಯೆಯಲ್ಲೂ ಕಾಣಿಸುತ್ತಿಲ್ಲ. ಮಾಯಾವತಿ ಅವರ  ಬಹುಜನ್ ಸಮಾಜ್ ಪಾರ್ಟಿ ಪ್ರತಿ ಚುನಾವಣೆಯಲ್ಲಿ ಅತ್ಯಂತ ಕಳೆಪೆ ಪ್ರದರ್ಶನ ನೀಡಿದೆ. 2007ರ ವಿಧಾನಸಭಾ ಚುನಾವಣೆಯಲ್ಲಿ 206 ಸ್ಥಾನ ಗೆದ್ದಿದ್ದ ಬಿಎಸ್‌ಪಿ 2012ರ ಚುನಾವಣೆಗೆ 80 ಸ್ಥಾನಕ್ಕೆ ಇಳಿದಿತ್ತು. ಇನ್ನು 2017ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಕ್ಕೆ ಇಳಿದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲದ ಬಿಎಸ್‌ಪಿ, 2019ರ ವೇಳೆಗೆ 10  ಸ್ಥಾನ ಗೆದ್ದು ಸಮಾಧಾನ ಪಟ್ಟುಕೊಂಡಿತ್ತು.

ಈ ಬಾರಿಯ ಚುನಾವಣೆಯ ಸಮೀಕ್ಷೆಗಳಲ್ಲಿ ಮಾಯಾವತಿ ಹಾಗೂ ಬಿಎಸ್‌ಪಿ ಹೆಸರು ಕಾಣುತ್ತಿಲ್ಲ. ಅಂಕಿ ಸಂಖ್ಯೆಯಲ್ಲೂ ಬಿಎಸ್‌ಪಿ ದಾಖಲಾಗುತ್ತಿಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ. ಹೀಗಾಗಿ ಹಿಂದುಳಿದ ವರ್ಗಗಳ ಮತಗಳು ಎಸ್‌ಪಿ ಹಾಗೂ ಬಿಎಸ್‌ಪಿಯಲ್ಲಿ ಹಂಚಿಕೆಯಾಗಲಿದೆ. ಇದು ಬಿಜೆಪಿಗೂ ನೆರವಾಗಲಿದೆ.

click me!