ಈಗ ಟ್ರಂಪ್‌ ಕೂಡ ಮೋದಿ ಬಳಿ ನೆರವು ಕೇಳ್ತಾರೆ; ನಮೋ ಕೊಂಡಾಡಿದ ರಾಜಾಹುಲಿ

By Shrilakshmi Shri  |  First Published May 30, 2020, 11:40 AM IST

ಮೋದಿ ವ್ಯಕ್ತಿತ್ವಕ್ಕೆ ಯಾವುದೇ ವ್ಯಕ್ತಿ ಮಾರುಹೋಗುತ್ತಾನೆ. ಇಡೀ ವಿಶ್ವದ ಜನತೆ ಭಾರತವನ್ನು ನಿಬ್ಬೆರಾಗುವಂತೆ ನೋಡಲು ಕಾರಣರಾಗಿದ್ದಾರೆ. ಮುಖ್ಯವಾಗಿ, ಒಂದು ಕಾಲದಲ್ಲಿ ಅಮೆರಿಕ ವೀಸಾ ನೀಡಲು ಹಿಂದು ಮುಂದು ನೋಡಲಾಗುತ್ತಿತ್ತು. ಈಗ ಅಮೆರಿಕವೇ ಭಾರತೀಯರನ್ನು ಗೌರವದಿಂದ ಕಾಣುತ್ತಿದೆ. ಅದಕ್ಕೆ ಕಾರಣ ಮೋದಿ ಅವರೇ.


ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅತೀವ ಒಲವು ಮತ್ತು ಅಭಿಮಾನ ಹೊಂದಿದವರು. ಜೊತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಾದಿಯಲ್ಲೇ ಹೆಜ್ಜೆ ಹಾಕುವ ಪ್ರಯತ್ನದಲ್ಲಿದ್ದಾರೆ.

ಮೋದಿ ಅವರು ಮೊದಲ ಅವಧಿಗೆ ಪ್ರಧಾನಿಯಾದ ವೇಳೆ ಯಡಿಯೂರಪ್ಪ ಅವರು ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸಿದ್ದರು. ಸುಮಾರು ನಾಲ್ಕು ವರ್ಷಗಳ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ದೆಹಲಿಯಲ್ಲಿ ಮೋದಿ ಅವರ ಆಡಳಿತವನ್ನು ಸಮೀಪದಿಂದ ಬಲ್ಲವರು. ಬಿಜೆಪಿ ತೊರೆದಿದ್ದ ಯಡಿಯೂರಪ್ಪ ಅವರು ಮಾತೃ ಪಕ್ಷಕ್ಕೆ ಮರಳುವುಕ್ಕೂ ಮೋದಿ ಅವರೇ ಪ್ರಮುಖ ಕಾರಣ. ಹೋರಾಟದ ಹಾದಿಯಿಂದಲೇ ಮೇಲೆ ಬಂದಿರುವ ಯಡಿಯೂರಪ್ಪ ಅವರ ಬಗ್ಗೆಯೂ ಮೋದಿ ಅವರಿಗೆ ಹೆಚ್ಚಿನ ಅಕ್ಕರೆ. ಇದೀಗ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

Latest Videos

undefined

'ಸಾಲ ಕೊಡುವುದೇ ಪ್ಯಾಕೇಜಾ? ಅಂಗೈಲಿ ಅರಮನೆ ತೋರಿಸಿದ ಕೇಂದ್ರ ಸರ್ಕಾರ'

* ಮೋದಿ ಅವರಲ್ಲಿ ನೀವು ಕಂಡಿರುವ ವಿಶೇಷತೆ ಏನು?

-ನೋಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸರಳ ಮತ್ತು ಸಜ್ಜನಿಕೆಯ ಸ್ವಭಾವವುಳ್ಳವರು. ಯಾರನ್ನಾದರೂ ಭೇಟಿಯಾದರೆ ಅತ್ಯಂತ ಗೌರವದಿಂದ ಕಾಣುವುದು. ನಾನು ಯಾವುದೇ ಸಂದರ್ಭದಲ್ಲಿ, ಎಲ್ಲೇ ಸಿಕ್ಕರೂ ಯಡಿಯೂರಪ್ಪಾಜೀ ಎಂತಲೇ ಕರೆಯುತ್ತಾರೆ. ಇದು ಸಣ್ಣ ವಿಷಯವಲ್ಲ. ಒಬ್ಬ ಪ್ರಧಾನಿ ಎಲ್ಲರ ಹೆಸರನ್ನೂ ಜ್ಞಾಪಕದಲ್ಲಿ ಇಟ್ಟುಕೊಂಡು ಮಾನ್ಯತೆ ನೀಡುವ ನಡವಳಿಕೆ ಮೆಚ್ಚುವಂಥದ್ದು. ಏನಾದರೂ ದುರಂತ, ಸಮಸ್ಯೆ ಬಗ್ಗೆ ವಿಷಯ ತಿಳಿಸಿದರೆ ತಕ್ಷಣ ಸ್ಪಂದಿಸುತ್ತಾರೆ.

ಲೋಕಸಭೆಯ ಕಾರ್ಯಕಲಾಪ ನಡೆಯುವ ವೇಳೆ ಹತ್ತಾರು ಜನ ಸಾಲಾಗಿ ನಿಂತಿದ್ದರೂ ಪ್ರಮುಖರನ್ನು ಕರೆಸಿ ಶಾಂತ ರೀತಿಯಲ್ಲಿ ಮಾತನಾಡಿ ಸಮಸ್ಯೆಗೆ ಸ್ಪಂದಿಸುವುದು ಅಪರೂಪ. ಇತ್ತೀಚೆಗೆ ಪ್ರಧಾನಿಗಳು ಬಿಡುವು ಮಾಡಿಕೊಂಡು ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿಯ ಹಿರಿಯ ಮುಖಂಡರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಅದನ್ನು ಕಲ್ಪನೆ ಮಾಡಲೂ ಸಾಧ್ಯವಿಲ್ಲ.

* ನರೇಂದ್ರ ಮೋದಿ ಅವರ ಮೂಲಕ ಭಾರತಕ್ಕೆ ವಿಶ್ವನಾಯಕತ್ವದ ಗೌರವ ಸಿಗಬಹುದೆ?

-ಮೋದಿ ವ್ಯಕ್ತಿತ್ವಕ್ಕೆ ಯಾವುದೇ ವ್ಯಕ್ತಿ ಮಾರುಹೋಗುತ್ತಾನೆ. ಇಡೀ ವಿಶ್ವದ ಜನತೆ ಭಾರತವನ್ನು ನಿಬ್ಬೆರಾಗುವಂತೆ ನೋಡಲು ಕಾರಣರಾಗಿದ್ದಾರೆ. ಮುಖ್ಯವಾಗಿ, ಒಂದು ಕಾಲದಲ್ಲಿ ಅಮೆರಿಕ ವೀಸಾ ನೀಡಲು ಹಿಂದು ಮುಂದು ನೋಡಲಾಗುತ್ತಿತ್ತು. ಈಗ ಅಮೆರಿಕವೇ ಭಾರತೀಯರನ್ನು ಗೌರವದಿಂದ ಕಾಣುತ್ತಿದೆ. ಅದಕ್ಕೆ ಕಾರಣ ಮೋದಿ ಅವರೇ. ವಿಶ್ವವೇ ಅವರ ಕಾರ್ಯವೈಖರಿಯನ್ನು ಮೆಚ್ಚಿದೆ.

ದೇವರಿಗೆ ಮೋದಿ ಬರೆದಿದ್ದ ಪತ್ರಕ್ಕೀಗ ಪುಸ್ತಕದ ಸ್ವರೂಪ

"

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ದೇಶದ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರು ಆಯ್ಕೆಯಾಗಿರುವುದು, ಭಾರತದ ಕೀರ್ತಿಪತಾಕೆಗೆ ಸಂದ ಗರಿ. ಪ್ರಧಾನಿ ಮೋದಿಯವರ ನಾಯಕತ್ವ ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಅಗತ್ಯ ಇದೆ ಎನ್ನುವುದನ್ನು ಸಾಬೀತು ಮಾಡಿದೆ ಈ ಬೆಳವಣಿಗೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹ ಏನಾದರೂ ಪ್ರಮುಖ ತೀರ್ಮಾನ ಕೈಗೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುತ್ತಿದ್ದಾರೆ. ಇದು ಅಗ್ರಮಾನ್ಯ ನಾಯಕರು ಮೋದಿ ಬಗ್ಗೆ ಇಟ್ಟಿಕೊಂಡಿರುವ ಗೌರವವಾಗಿದೆ. ಮೋದಿ ವ್ಯಕ್ತಿತ್ವಕ್ಕೆ ಇದಕ್ಕಿಂತ ಉದಾಹರಣೆ ಮತ್ತೊಂದು ಬೇಕಾಗಿಲ್ಲ.

* ಮೋದಿಯವರ ಈ ಮಟ್ಟದ ಯಶಸ್ಸಿಗೆ ಅವರಲ್ಲಿರುವ ಕಾರ್ಯಕ್ಷಮತೆ, ದಕ್ಷತೆಯೇ ಕಾರಣ ಎನ್ನಬಹುದೇ?

-ಖಂಡಿತವಾಗಿಯೂ ಹೌದು. ಅವರಲ್ಲಿ ಅದ್ಭುತವಾದ ಕಾರ್ಯಕ್ಷಮತೆ ಇದೆ. ದಿನದ 18 ತಾಸುಗಳ ಕಾಲ ಸಕ್ರಿಯವಾಗಿ ದೇಶಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿದೆ ಎಂದರೆ ಅದೇನೂ ಸಣ್ಣ ಸಾಧನೆಯಲ್ಲ. ಮೋದಿಯವರ ದಕ್ಷತೆ ಮತ್ತು ಪ್ರಾಮಾಣಿಕತೆ ಮನೆ ಮಾತಾಗಿದೆ. ಇತರ ಸಚಿವರೂ ಕೂಡ ಪ್ರಧಾನಿಯವರ ವೇಗಕ್ಕೆ ಹೆಜ್ಜೆ ಹಾಕಬೇಕಾದಂತಹ ಸನ್ನಿವೇಶ ಸೃಷ್ಟಿಯಾಗಿದೆ.

ಅಭಿವೃದ್ಧಿಯ ಹೊಸ ಪರ್ವ ಈಗಾಗಲೇ ಅರಂಭವಾಗಿದೆ. ಕೋವಿಡ್‌ ತೊಂದರೆಯಿಂದಾಗಿ ಈ ಅಭಿವೃದ್ಧಿಯ ವೇಗಕ್ಕೆ ಕೊಂಚ ತಡೆ ಉಂಟಾಗಿದ್ದರೂ ಮೋದಿಯವರ ನಾಯಕತ್ವ ಈ ಸವಾಲನ್ನು ಮೆಟ್ಟಿನಿಲ್ಲಲಿದೆ ಎನ್ನುವ ನಂಬಿಕೆ ದೇಶದ ಜನರಲ್ಲಿದೆ.

* ನರೇಂದ್ರ ಮೋದಿ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ?

-ಹೌದು. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿತ್ತು. ಮೋದಿಯವರ ಜನಪ್ರಿಯತೆಯು 2019ರಲ್ಲಿ ಮತ್ತಷ್ಟುಹೆಚ್ಚಿರುವುದು ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ. ಯಾರು ನಿರೀಕ್ಷೆ ಮಾಡದಂತಹ 303 ಸ್ಥಾನಗಳನ್ನು ಬಿಜೆಪಿಗೆ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಪಕ್ಷ ಭಾರೀ ಜಯಗಳಿಸಿದೆ. ಮೋದಿಯವರ ನಾಯಕತ್ವಕ್ಕೆ ಮತ್ತು ಹೆಚ್ಚುತ್ತಿರುವ ಜನಪ್ರಿಯತೆಗೆ ಇದು ಜೀವಂತ ಸಾಕ್ಷಿ.

ತೀವ್ರ ಸ್ವರೂಪ ಪಡೆದುಕೊಂಡ ಬಿಜೆಪಿ ಭಿನ್ನಮತ: ದೆಹಲಿಯತ್ತ ಅತೃಪ್ತರ ಚಿತ್ತ..!

* ಕರ್ನಾಟಕದಲ್ಲೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಅಲೆ ದೊಡ್ಡ ಪ್ರಮಾಣದಲ್ಲಿ ಬೀಸಿತಲ್ಲವೇ?

-ರಾಜ್ಯವೂ ಕೂಡ ಮೋದಿಯವರ ನಾಯಕತ್ವದಲ್ಲಿ ಭಾರೀ ಒಲವು ವ್ಯಕ್ತಪಡಿಸಿದ ಪರಿಣಾಮವಾಗಿ ಬಿಜೆಪಿ, 28 ರಲ್ಲಿ 25 ಸ್ಥಾನಗಳನ್ನು ಗೆದ್ದಿದ್ದಲ್ಲದೇ, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರನ್ನು ಗೆಲ್ಲಿಸುವಲ್ಲಿ ಪಕ್ಷವು ಯಶಸ್ವಿಯಾಯಿತು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಧೂಳಿಪಟವಾಗಿ ಕೇವಲ ಒಂದು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಂತಹ ಘಟಾನುಘಟಿಗಳೇ ಮೋದಿಯವರ ಜನಪ್ರಿಯತೆಯ ಹೊಡೆತಕ್ಕೆ ನೆಲ ಕಚ್ಚಿ ಸೋಲನುಭವಿಸಬೇಕಾಯಿತು.

* ಈಗ ಮೋದಿ ಟೀಕಾಕಾರರ ಬಾಯಿಗೆ ಬೀಗ ಬಿದ್ದಿದೆಯೇ?

-ಕಳೆದ 2019ರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಮೋದಿ ಟೀಕಾಕಾರರ ಬಾಯಿಗೆ ಬೀಗ ಬೀಳುವಂತಾಯಿತು. ನೋಟು ನಿಷೇಧ ಸೇರಿದಂತೆ ಅನೇಕ ಸುಧಾರಣಾ ಮತ್ತು ಕ್ರಾಂತಿಕಾರಕ ಕ್ರಮಗಳಿಂದಾಗಿ ಮೋದಿಯವರ ಜನಪ್ರಿಯತೆಯು 2019ರ ಚುನಾವಣೆಯ ವೇಳೆಗೆ ಭಾರೀ ಹೆಚ್ಚಳವಾಯಿತು. ಆದರೆ ಮೋದಿಯವರನ್ನು ವಿನಾಕಾರಣ ನಿಂದಿಸಿ ಮತದಾರರನ್ನು ಹಾದಿ ತಪ್ಪಿಸುವ ಯತ್ನ ಅವ್ಯಾಹತವಾಗಿ ನಡೆಯಿತು.

ಚುನಾವಣಾ ಫಲಿತಾಂಶವು ಇಂತಹ ನಿಂದನೆ, ಟೀಕೆಗಳಿಗೆ ಸಂಪೂರ್ಣ ವಿರಾಮ ಹಾಕಿತು. ಮೋದಿಯವರಲ್ಲಿ ಇದ್ದ ಅಪಾರವಾದ ಆತ್ಮವಿಶ್ವಾಸವು ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರ ಸಮೀಪ ಇದ್ದ ನಮಗೆಲ್ಲರಿಗೂ ಅನುಭವಕ್ಕೆ ಬಂದಿದೆ. ಮಾಧ್ಯಮಗಳಲ್ಲೂ ಫಲಿತಾಂಶದ ಬಗ್ಗೆ ಬರುತ್ತಿದ್ದ ವಿಶ್ಲೇಷಣೆಗಳ ಬಗ್ಗೆ ಮೋದಿಯವರು ತಲೆಕೆಡಿಸಿಕೊಂಡಿರಲೇ ಇಲ್ಲ. ದೇಶದ ಮತದಾರರ ಬಗ್ಗೆ ಅವರಿಗೆ ಅಷ್ಟುನಂಬಿಕೆ ಇತ್ತು. ದೇಶದೊಳಗೆ ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡಿದ ಮೋದಿಯವರು ದೇಶದ ಹೊರಗೂ ಭಾರತದ ವರ್ಚಸ್ಸು ವೃದ್ಧಿಗೆ ಕಾರಣರಾದರು. ಇದೆಲ್ಲದರ ಪರಿಣಾಮವೇ 2019ರ ಭಾರೀ ಯಶಸ್ಸಿಗೆ ಕಾರಣವಾಯಿತು.

* ಕಳೆದೊಂದು ವರ್ಷದಲ್ಲಿ ಮೋದಿ ಅವರು ಹಲವಾರು ದೀರ್ಘಕಾಲದ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದರಲ್ಲವೇ?

-ಕೇವಲ ಒಂದೇ ವರ್ಷದ ಅವಧಿಯಲ್ಲಿ ಮೋದಿಯವರು ದೇಶ ಎದುರಿಸುತ್ತಿದ್ದ ಅನೇಕ ಗಂಭೀರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಇದರ ಪರಿಣಾಮವಾಗಿ ಹಲವು ದಶಕಗಳ ಸಮಸ್ಯೆಗಳಿಗೆ ಪರಿಹಾರ ದೊರೆಯಿತು. ದಶಕಗಳಿಂದ ಕಾನೂನು ಹೋರಾಟಕ್ಕೆ ಸಿಲುಕಿದ್ದ ಅಯೋಧ್ಯೆಯ ವಿವಾದ ಮೋದಿಯವರ ನಾಯಕತ್ವದಲ್ಲಿ ಇತ್ಯರ್ಥ ಕಾಣುವಂತಾಯಿತು. ಭಾರತೀಯರೆಲ್ಲರ ಶ್ರದ್ಧಾಬಿಂದು ಶ್ರೀರಾಮನಿಗೆ ಭವ್ಯವಾದ ಮಂದಿರ ನಿರ್ಮಾಣಕ್ಕೆ ಎದುರಾಗಿದ್ದ ತೊಡಕುಗಳೆಲ್ಲವೂ ನಿವಾರಣೆಯಾಯಿತು.

ಮೋದಿಯವರ ಮುತ್ಸದ್ದಿತನಕ್ಕೆ ಇದೊಂದು ಸಾಕ್ಷಿಯಾಯಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಇಡೀ ದೇಶಕ್ಕೆ ಒಂದೇ ಕಾನೂನು ಎನ್ನುವುದನ್ನು ಸಾರಿ ಹೇಳಿದ್ದು ಸಹ ಮೋದಿಯವರ ನಾಯಕತ್ವ ಎಂತಹದ್ದು ಎಂಬುದನ್ನು ಗಮನಿಸಬೇಕು.

ತ್ರಿವಳಿ ತಲಾಖ್‌ ಕಾಯಿದೆಯಿಂದ ಮುಸಲ್ಮಾನ ಮಳೆಯರಿಗೆ ಆಗುತ್ತಿದ್ದ ಅನ್ಯಾಯವನ್ನು ತೊಡೆದು ಅವರನ್ನು ಆತ್ಮವಿಶ್ವಾಸ ಮತ್ತು ನೆಮ್ಮದಿಯಿಂದ ಬದುಕುವಂತಹ ವಾತಾವರಣ ಮೂಡಿಸಿದ ಕೀರ್ತಿಯೂ ಮೋದಿಯವರಿಗೆ ಸಲ್ಲುತ್ತದೆ. ಪೌರತ್ವ ಕಾಯಿದೆ ತಿದ್ದುಪಡಿ ತರುವ ಮೂಲಕ ಸ್ವಾತಂತ್ರ್ಯೋತ್ತರ ಭಾರತದಿಂದ ಹೊರಗಿದ್ದ ಮೂಲ ಭಾರತೀಯರಿಗೆ ಪೌರತ್ವ ಹಕ್ಕು ನೀಡಲಾಯಿತು.

* ಜಗತ್ತಿಗೆ ಮಾರಕವಾಗಿ ಪರಿಣಮಿಸಿರುವ ಕೋವಿಡ್‌ 19 ಅನ್ನು ಭಾರತದಲ್ಲಿ ನಿಯಂತ್ರಣಕ್ಕೆ ತರುವಲ್ಲಿ ಪ್ರಧಾನಿ ಮೋದಿ ಅವರು ಯಶಸ್ಸು ಕಂಡಿದ್ದಾರೆಯೇ?

-ಇಡೀ ದೇಶವನ್ನು ಕಾಡುತ್ತಿರುವ ಕೊರೋನಾ ವೈರಾಣು ಪಿಡುಗನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. 55 ದಿನಗಳ ಲಾಕ್‌ಡೌನ್‌ ಘೋಷಿಸುವ ಮೂಲಕ ವೇಗವಾಗಿ ಹರಡಬಹುದಾಗಿದ್ದ ಸೋಂಕನ್ನು ತಡೆಗಟ್ಟಿರುವುದಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಜನರು ತಮಗಾದ ಅನಾನುಕೂಲವನ್ನೂ ಲೆಕ್ಕಿಸದೇ ಪ್ರಧಾನಿಯವರ ಕರೆಗೆ ಸ್ಪಂದಿಸಿದರು. ಓರ್ವ ದೇಶದ ನೇತಾರ ಇಂತಹ ಸಂದರ್ಭದಲ್ಲಿ ಯಶಸ್ಸು ಗಳಿಸುವುದು ಭಾರೀ ಸವಾಲಿನ ಕೆಲಸ. ಆದರೆ ಮೋದಿಯವರ ಸಮರ್ಥ ನಾಯಕತ್ವಕ್ಕೆ ಇದು ಸಾಧ್ಯವಾಗಿದ್ದು, ಜನರ ಸಹಕಾರದಿಂದಲೇ ಎನ್ನುವುದು ಗಮನಾರ್ಹ.

* ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರು.ಗಳ ಪ್ಯಾಕೇಜ್‌ ಬಗ್ಗೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ?

-20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‌ ಘೋಷಣೆಯ ಮೂಲಕ ಸಂಕಷ್ಟದಲ್ಲಿರುವ ಬಹುತೇಕ ಎಲ್ಲ ಕ್ಷೇತ್ರಗಳ ಪುನಶ್ಚೇತನಕ್ಕೆ ಒತ್ತು ನೀಡಿರುವ ಕ್ರಮಕ್ಕೆ ವ್ಯಾಪಕ ಸ್ವಾಗತ ಸಿಕ್ಕಿದೆ. ಇದು ಧೀರ್ಘಕಾಲದ ಕಾರ್ಯಕ್ರಮ. ಒಂದು ವರ್ಷದ ಬಳಿಕ 20 ಲಕ್ಷ ಕೋಟಿ ರು. ಪರಿಹಾರದ ಪರಿಣಾಮ ಗೊತ್ತಾಗಲಿದೆ. ಪ್ರತಿಪಕ್ಷಗಳ ಮುಖಂಡರು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಟೀಕೆ-ಟಿಪ್ಪಣಿ ಮಾಡುತ್ತಿದ್ದಾರೆ. ಅರ್ಥ ಮಾಡಿಕೊಳ್ಳುವ ಕಾಲ ಬರುತ್ತದೆ.

* ನೆರೆ ಪರಿಹಾರ ಸೇರಿದಂತೆ ಕರ್ನಾಟಕದ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಅವರು ಸ್ಪಂದಿಸಿಲ್ಲ ಎಂಬ ಆಪಾದನೆಯಿದೆ?

-ನೂರಕ್ಕೆ ನೂರು ತಪ್ಪು. ಮೋದಿ ಅವರು ಯಾವುದೇ ಸಂದರ್ಭದಲ್ಲಿಯೂ ಸ್ಪಂದಿಸುತ್ತಾರೆ. ಕರ್ನಾಟಕ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯಗಳ ಸಮಸ್ಯೆಗಳಿಗೂ ಸ್ಪಂದಿಸುತ್ತಾರೆ. ಅವರಲ್ಲಿನ ವಿಶೇಷ ಗುಣವೆಂದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಷ್ಟೊಂದು ಹಗರುವಾಗಿ ಟೀಕೆ ಟಿಪ್ಪಣಿ ಮಾಡುತ್ತಿದ್ದರೂ ಅವರ ಜತೆ ವೈಮಾನಿಕ ಪ್ರದರ್ಶನ ಮಾಡಿ ಅಲ್ಲಿಯೇ ಒಂದು ಸಾವಿರ ಕೋಟಿ ರು. ಪರಿಹಾರ ಘೋಷಣೆ ಮಾಡಿದರು. ಇಡೀ ದೇಶದಲ್ಲಿ ಯಾವುದೇ ರಾಜ್ಯ, ಯಾವುದೇ ಪಕ್ಷ ಇದ್ದರೂ ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ.

* ರಾಷ್ಟ್ರೀಯತೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಪ್ರಾದೇಶಿಕತೆ ಹೆಚ್ಚಿನ ಒತ್ತು ನೀಡುತ್ತಿಲ್ಲ ಎಂಬ ಆರೋಪ ಇದೆ.

ಹಾಗೇನು ಇಲ್ಲ, ರಾಷ್ಟ್ರಮಟ್ಟದಲ್ಲಿ ಕುಳಿತು ಎಲ್ಲ ವಿಚಾರಗಳ ಬಗ್ಗೆ ಯೋಚನೆ ಮಾಡುತ್ತಾರೆ. ರಾಜ್ಯಗಳ ಸಮಸ್ಯೆಗಳಿಗೆ ಒತ್ತು ನೀಡುತ್ತಾರೆ. ಪ್ರಧಾನಿಯಾಗಿ ಅವರ ಕೆಲಸ ಮಾಡುತ್ತಿದ್ದಾರೆ. ಸುಮಾರು ನಾಲ್ಕು ಬಾರಿ ಎಲ್ಲಾ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್‌ ಮಾಡಿ ಅವರ ಸಲಹೆಗಳನ್ನು ಪಡೆದು ತೀರ್ಮಾನ ಕೈಗೊಳ್ಳಲಾಗುತ್ತಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕೈಗನ್ನಡಿಯಾಗಿದೆ. ದೇಶದ ಯಾವುದೇ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅದಕ್ಕೆ ಗೌರವ ನೀಡುವ ವಿಶಿಷ್ಟನಾಯಕತ್ವ ಗುಣಗಳನ್ನು ಹೊಂದಿದ್ದಾರೆ.

* ರಾಜ್ಯದಿಂದ 25 ಸಂಸದರು ಪ್ರತಿನಿಧಿಸುತ್ತಿದ್ದರೂ ಮೋದಿ ಮುಂದೆ ರಾಜ್ಯಕ್ಕೆ ಸರಿಯಾದ ಅನುದಾನ ತರುವ ಧೈರ್ಯ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪದೇ ಪದೇ ಲೇವಡಿ ಮಾಡುತ್ತಿರುತ್ತಾರೆ?

-ಪ್ರಧಾನಿಗಳು ಕರ್ನಾಟಕ ಮಾತ್ರವಲ್ಲ, ಎಲ್ಲಾ ರಾಜ್ಯಗಳ ಸಂಸದರ ಭೇಟಿಗೂ ಕಾಲಾವಕಾಶ ನೀಡುತ್ತಾರೆ. ರಾಜ್ಯದ ಜ್ವಲಂತ ಸಮಸ್ಯೆಗಳು ಚರ್ಚಿಸಲು ಎಲ್ಲರಿಗೂ ಸಮಯ ನೀಡುತ್ತಾರೆ. ಎಲ್ಲರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಟೀಕೆ ಮಾಡುವುದು ಇದ್ದೇ ಇರುತ್ತದೆ.

* ಜಿಎಸ್‌ಟಿ ಗೊಂದಲ ಮುಂದುವರಿದ್ದು, ರಾಜ್ಯಕ್ಕೆ ಬರಬೇಕಾದ ಅನುದಾನ ಬಂದಿಲ್ಲ ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತಿವೆ?

-ಜಿಎಸ್‌ಟಿ ಸಮಸ್ಯೆ ಕೇವಲ ರಾಜ್ಯದ್ದು ಮಾತ್ರವಲ್ಲ, ಎಲ್ಲಾ ಕಡೆ ಇದೆ. ದೇಶದಲ್ಲಿ ಹಣಕಾಸಿನ ಕೊರತೆ ಇದೆ. ಮುಂದೆ ಸಮಸ್ಯೆ ಬಗೆಹರಿಯಲಿದ್ದು, ಜಿಎಸ್‌ಟಿ ಪರಿಹಾರ ಸಕಾಲಕ್ಕೆ ಸಿಗಲಿದೆ.

- ಬಿ.ಎಸ್‌.ಯಡಿಯೂರಪ್ಪ

ಮುಖ್ಯಮಂತ್ರಿ

click me!