ನವದೆಹಲಿ(ಜು.04): ಜಮ್ಮು ಮತ್ತು ಕಾಶ್ಮೀರದ ಮಿಲಿಟರಿ ಏರ್‌ಬೇಸ್ ಮೇಲೆ ಎರಡು ಡ್ರೋನ್ ದಾಳಿ ಭಾರತವನ್ನೇ ಬೆಚ್ಚಿ ಬೀಳಿಸಿತ್ತು. ಈ ದಾಳಿ ಹಿಂದಿನ ರೂವಾರಿ ಕುರಿತು ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಗಡಿ ಬಳಿ ಕೆಲ ಡ್ರೋನ್ ಪತ್ತೆಯಾಗಿದ್ದು ಮತ್ತಷ್ಟು ಆತಂಕ ತಂದಿದೆ. ಇದೀಗ ಕೇಂದ್ರ ಗುಪ್ರಚರ ಇಲಾಖೆ ಮತ್ತೊಂದು ವಾರ್ನಿಂಗ್ ನೀಡಿದೆ. ದಕ್ಷಿಣ ಭಾರತದ 2 ರಾಜ್ಯದ ಮೇಲೆ ಡ್ರೋನ್ ದಾಳಿ ಸಾಧ್ಯತೆಯನ್ನು ಬಿಚ್ಚಿಟ್ಟಿದೆ.
ಭಾರತದಲ್ಲಿ ಮೊದಲ ಬಾರಿ ಉಗ್ರರಿಂದ ಡ್ರೋನ್ ದಾಳಿ!.
ಕೇರಳ ಹಾಗೂ ತಮಿಳುನಾಡಿನ ಮೇಲೆ ಡ್ರೋನ್ ದಾಳಿಯಾಗು ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಹೈ ಅಲರ್ಟ್ ಆಗಬೇಕೆಂದು ಎಚ್ಚರಿಕೆ ನೀಡಿದೆ. ಕೇರಳ ಹಾಗೂ ತಮಿಳುನಾಡು ಗೃಹ ಇಲಾಖೆಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ. ಎಚ್ಚರಿಕೆ ಪಡೆದ 2 ರಾಜ್ಯ ಇದೀಗ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಶ್ರೀಲಂಕಾದ ಹಂಬಂತೋಟಾ ಬಂದರನ್ನು ಚೀನಾ ವಹಿಸಿಕೊಂಡಿದೆ. ಈ ಬೆಳವಣಿಗೆ ಬಳಿಕ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ನೌಕಾಪಡೆ ತಮಿಳುನಾಡಿನ ಕರಾವಳಿ ಪ್ರದೇಶ ಹಾಗೂ ಕೇರಳದ ದಕ್ಷಿಣ ಭಾಗಗಳಲ್ಲಿ ತೀವ್ರ ಎಚ್ಚರಿಕೆ ವಹಿಸಿದೆ. ಇದೀಗ ಗುಪ್ತಚರ ಇಲಾಖೆ ವಾರ್ನಿಂಗ್, ರಾಜ್ಯಗಳನ್ನು ಮತ್ತಷ್ಟು ಅಲರ್ಟ್ ಮಾಡಿದೆ.
ಜಮ್ಮು ಕಾಶ್ಮೀರದಲ್ಲಿ ಮತ್ತೆರಡು ಡ್ರೋನ್ ಪತ್ತೆ: ಸೇನೆಯಿಂದ ಗುಂಡಿನ ದಾಳಿ!
ಕೇರಳ ಹಾಗೂ ತಮಿಳುನಾಡಿನಲ್ಲಿ ಸ್ವದೇಶಿ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗುತ್ತಿದೆ. ಕೇರಳದಿಂದ ಉಗ್ರ ಚಟುವಟಿಕೆಗಾಗಿ ಸಿರಿಯಾ, ಹಾಗೂ ಆಫ್ಘಾನಿಸ್ತಾನಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಕೊಯಮತ್ತೂರು, ತಿರುಚ್ಚಿ, ಕನ್ಯಾಕುಮಾರಿ, ಮತ್ತು ತಮಿಳುನಾಡಿನ ಇತರ ದಕ್ಷಿಣ ಜಿಲ್ಲೆಗಳಲ್ಲಿ ಭಯೋತ್ಪಾದಕ ಚಟುವಟಿಕೆ ತಯಾರಿ, ನೇಮಕ ಪ್ರಕ್ರಿಯೆಗಳು ನಡೆಯುತ್ತಿರುವ ಕುರಿತು ಕೇಂದ್ರ ಗುಪ್ತಚರ ಎಜೆನ್ಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್ ಕಚೇರಿ ಬಳಿ ಡ್ರೋನ್ ಹಾರಾಟ!.
ದಕ್ಷಿಣ ಭಾರತದಲ್ಲಿನ ಉಗ್ರ ಚಟುವಟಿಕೆ ಹಾಗೂ ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಜೊತೆ ನೇರ ಸಂಪರ್ಕ ಹೊಂದಿದ ಘಟನೆಗಳು ವರದಿಯಾಗಿವೆ. ಈ ಎಲ್ಲಾ ಕಾರಣದಿಂದ ಕೇರಳ ಹಾಗೂ ತಮಿಳುನಾಡಿನಲ್ಲಿ ಡ್ರೋನ್ ದಾಳಿ ಸುಲಭವಾಗಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.