
ಲಕ್ನೋ(ಜು.04): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲು ಒಂದು ವರ್ಷ ಇರುವಾಗಲೇ ರಾಜಕೀಯ ಪೈಪೋಟಿ ಆರಂಭವಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಅಸಾದುದ್ದೀನ್ ಐವೈಸಿ ಪಕ್ಷ AIMIM ಸ್ಪರ್ಧಿಸುತ್ತಿರುವುದು ಮತ್ತಷ್ಟು ಬಿಸಿ ಏರುವಂತೆ ಮಾಡಿದೆ. ಸದ್ಯ AIMIM ಪಕ್ಷದಿಂದ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಓವೈಸಿ ಯೋಗಿ ಆದಿತ್ಯನಾಥ್‌ರಿಗೆ ಸವಾಲೊಂದನ್ನು ಎಸೆಯುತ್ತಾ, ಅವರನ್ನು ಉತ್ತರ ಪ್ರದೇಶದ ಮುಂದಿನ ಸಿಎಂ ಆಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಇದರ ಬೆನ್ನಲ್ಲೇ ಅತ್ತ ಸಿಎಂ ಯೋಗಿ ಈ ಸವಾಲನ್ನು ಸ್ವೀಕರಿಸಿದ್ದು, 2022ರಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿಯೇ ಆಡಳಿತ ನಡೆಸಲಿದೆ ಎಂದಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಈ ಬಗ್ಗೆ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು ಮಾತನಾಡುತ್ತಾ ಅಸಾದುದ್ದೀನ್ ಓವೈಸಿ ನಮ್ಮ ದೇಶದ ಓರ್ವ ದೊಡ್ಡ ನಾಯಕ. ಅವರು 2022ರ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆದಿದ್ದರೆ, ಕಾರ್ಯಕರ್ತರು ಅವರ ಸವಾಲನ್ನು ಸ್ವೀಕರಿಸುತ್ತಾರೆ. 2022ರಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೇರುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
75 ಜಿ.ಪಂ.ಗಳಲ್ಲಿ 67ರಲ್ಲಿ ಬಿಜೆಪಿ ಜಯಭೇರಿ
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿದೆ.
75 ಜಿಲ್ಲೆಗಳಲ್ಲಿ ಮುಖ್ಯಸ್ಥರ ಆಯ್ಕೆಗೆ ನಡೆದ ಚುನಾವಣೆಯಲ್ಲಿ 67 ಕ್ಷೇತ್ರಗಳಲ್ಲಿ ಬಿಜೆಪಿ ಜಯಿಸಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಕೇವಲ 6 ಸೀಟುಗಳಲ್ಲಿ ಜಯ ಗಳಿಸುವ ಮೂಲಕ ಹಿನ್ನಡೆ ಅನುಭವಿಸಿದೆ. ಈ ಪೈಕಿ ಬಿಜೆಪಿ 21 ಸೀಟು, ಸಮಾಜವಾದಿ ಪಕ್ಷ 1 ಕ್ಷೇತ್ರದಲ್ಲಿ ಮೊದಲೇ ಅವಿರೋಧವಾಗಿ ಆಯ್ಕೆಯಾಗಿತ್ತು. 2016ರಲ್ಲಿ ಯಾದವ್ ಪಕ್ಷ 60 ಸೀಟು ಗೆದ್ದಿತ್ತು.
ಶನಿವಾರದ ಗೆಲುವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಾಳಯದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ