ಭಾರತದಲ್ಲಿ ಮೊದಲ ಬಾರಿ ಉಗ್ರರಿಂದ ಡ್ರೋನ್ ದಾಳಿ!
* ಜಮ್ಮು ವಾಯುಪಡೆ ಕೇಂದ್ರದಲ್ಲಿ 2 ಬಾಂಬ್ ಸ್ಫೋಟ
* ಕಟ್ಟಡಕ್ಕೆ ಹಾನಿ, ಇಬ್ಬರು ಸಿಬ್ಬಂದಿಗೆ ಗಾಯ
* ಡ್ರೋನ್ ಬಳಸಿ ಮೊದಲ ಉಗ್ರ ದಾಳಿ!
* ಇದು ಭಯೋತ್ಪಾದಕರದ್ದೇ ಕೃತ್ಯ: ಪೊಲೀಸರು
* ಜಮ್ಮುವಿಗೆ ಎನ್‌ಐಎ, ಎನ್‌ಎಸ್‌ಜಿ ದೌಡು, ಗಡಿಯಲ್ಲಿ ಕಟ್ಟೆಚ್ಚರ
ಜಮ್ಮು/ನವದೆಹಲಿ(ಜೂ.28): ಡ್ರೋನ್‌ಗಳನ್ನು ಬಳಸಿಕೊಂಡು ಗಡಿಯಾಚೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತಾ್ರಸ್ತ್ರ, ಸ್ಫೋಟಕ ಪದಾರ್ಥ, ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಉಗ್ರರು, ಇದೀಗ ಅದೇ ಡ್ರೋನ್ ಬಳಸಿ ಜಮ್ಮು ಏರ್‌ಪೋರ್ಟ್‌ನ ಒಂದು ಭಾಗದಲ್ಲಿರುವ ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ದಾಳಿ ನಡೆಸುವ ಮೂಲಕ ಭಾರೀ ದುಷ್ಕೃತ್ಯ ಎಸಗಿದ್ದಾರೆ. ಭಯೋತ್ಪಾದಕರು ಡ್ರೋನ್ ಬಳಸಿ ದಾಳಿ ನಡೆಸಿದ ಮೊದಲ ಪ್ರಕರಣ ಇದಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಭಾನುವಾರ ನಸುಕಿನ ಜಾವ 1.40ರ ವೇಳೆಗೆ ಸ್ಫೋಟಕಗಳನ್ನು ಕಟ್ಟಲಾಗಿದ್ದ ಎರಡು ಡ್ರೋನ್‌ಗಳು ವಾಯುಪಡೆ ಕೇಂದ್ರದ ಮೇಲೆ ದಾಳಿ ನಡೆಸಿವೆ. ಪಾಕ್ ಸೇನೆ ಹಾಗೂ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಕುಮ್ಮಕ್ಕಿನಿಂದ ಜಿಪಿಎಸ್ ಹೊಂದಿದ್ದ ಡ್ರೋನ್‌ಗಳನ್ನು ಉಗ್ರರು ಬಳಸಿ ಸ್ಫೋಟಕ ಕಳಿಸಿರುವ ಶಂಕೆ ಇದೆ. ಇದು ಆರ್‌ಡಿಎಕ್ಸ್ ಸ್ಫೋಟಕ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ಪರಿಶೀಲನೆ ನಡೆದಿದೆ.
ಈ ದಾಳಿಯಲ್ಲಿ ಒಂದು ಕಟ್ಟಡದ ಮೇಲ್ಛಾವಣಿ ಧ್ವಂಸಗೊಂಡಿದ್ದರೆ, ಇನ್ನೊಂದು ಡ್ರೋನ್ ಖಾಲಿ ಜಾಗದಲ್ಲಿ ಬಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯಲ್ಲಿ ವಾಯುಪಡೆಯ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಬೆನ್ನಲ್ಲೇ ದೇಶಾದ್ಯಂತ ಎಲ್ಲಾ ಸೇನಾ ನೆಲೆಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಘಟನೆಯನ್ನು ಉಗ್ರ ದಾಳಿ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್‌ಬಾಗ್ ಸಿಂಗ್ ಘೋಷಿಸಿದ್ದಾರೆ. ಘಟನೆ ಸಂಬಂಧ ಜಮ್ಮುವಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿರುವ ಭದ್ರತಾ ಪಡೆಗಳು ಅವರನ್ನು ವಿಚಾರಣೆಗೆ ಒಳಪಡಿಸಿವೆ. ಮತ್ತೊಂದೆಡೆ ದಾಳಿಯ ಹಿಂದಿನ ಶಕ್ತಿಯನ್ನು ಪತ್ತೆ ಹಚ್ಚಲು ಮತ್ತು ಹೆಚ್ಚಿನ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳ ಮತ್ತು ಎನ್‌ಎಸ್‌ಜಿ ತಂಡ ಜಮ್ಮುವಿಗೆ ಆಗಮಿಸಿವೆ.
ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಪಾಕಿಸ್ತಾನದ ಪಾತ್ರ ಸಾಬೀತಾದರೆ ಎರಡೂ ದೇಶಗಳ ನಡುವೆ ಮತ್ತೆ ಭಾರೀ ವೈರತ್ವ ಬೆಳೆವ ಸಾಧ್ಯತೆ ಇದೆ. ‘ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಿದ್ದೇವೆ’ ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ರಕ್ಷಣಾ ಪಡೆಗಳ ಮುಖ್ಯಸ್ಥರು ತನಿಖೆಯ ಅವಲೋಕನ ನಡೆಸುತ್ತಿದ್ದಾರೆ.
ಏನಾಯ್ತು?:
ಭಾನುವಾರ ನಸುಕಿನ ಜಾವ 1.40ಕ್ಕೆ ಭಾರತೀಯ ವಾಯುಪಡೆ ಸ್ಟೇಷನ್‌ಗೆ ಸೇರಿದ ಕಟ್ಟಡವೊಂದರ ಮೇಲೆ ಡ್ರೋನ್ ಬಳಸಿ ಸ್ಫೋಟ ನಡೆಸಲಾಗಿದೆ. ಈ ಸ್ಫೋಟದ ತೀವ್ರತೆಗೆ ಒಂದು ಮಹಡಿಯ ಕಟ್ಟಡದ ಮೇಲ್ಛಾವಣಿಯಲ್ಲಿ ರಂಧ್ರ ಬಿದ್ದಿದೆ. ಇದಾದ 5 ನಿಮಿಷದಲ್ಲಿ ಸಮೀಪದಲ್ಲೇ ಇನ್ನೊಂದು ಡ್ರೋನ್ ಮೂಲಕ ಸ್ಫೋಟ ನಡೆಸಲಾಗಿದೆ. ಅದರೆ ಅದು ಖಾಲಿ ಜಾಗದಲ್ಲಿ ಬಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯಲ್ಲಿ ವಾಯುಪಡೆಯ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದೆ. ದಾಳಿಯ ಹೊರತಾಗಿಯೂ ಜಮ್ಮುವಿಗೆ ಆಗಮಿಸುವ ಮತ್ತು ತೆರಳುವ ನಾಗರಿಕ ವಿಮಾನಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.
ಡ್ರೋನ್‌ಗಳ ಸಂಚಾರದ ಪಥ ಪರಿಶೀಲಿಸಲಾಗುತ್ತಿದ್ದು, ಅದು ಪತ್ತೆಯಾದ ಬಳಿಕ ಡ್ರೋನ್ ಬಂದಿದ್ದು ಎಲ್ಲಿಂದ ಎಂದು ತಿಳಿಯಲಿದೆ ಎಂದು ಭದ್ರತಾ ಪಡೆಗಳು ಹೇಳಿವೆ. ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಡಬಹುದಾದ ಡ್ರೋನ್‌ಗಳನ್ನು ದಾಳಿಗೆ ಬಳಸಿಕೊಳ್ಳಲಾಗಿದೆ.
ಏನಾಯ್ತು?
ಸ್ಫೋಟಕ ಹೊತ್ತಿದ್ದ 2 ಡ್ರೋನ್‌ಗಳಿಂದ ದಾಳಿ. ಮೊದಲ ದಾಳಿಯಲ್ಲಿ ಕಟ್ಟಡಕ್ಕೆ ಹಾನಿ. 2ನೇ ದಾಳಿಯಲ್ಲಿ ಯಾವುದೇ ಹಾನಿ ಇಲ್ಲ.
ಯಾರ ಕೈವಾಡ?
ಪಾಕ್ ಸೇನೆ ಹಾಗೂ ಐಎಸ್‌ಐ ನಿರ್ದೇಶನದ ಮೇರೆಗೆ ಉಗ್ರರು ಜಿಪಿಎಸ್ ನಿರ್ದೇಶಿತ ಡ್ರೋನ್ ಮೂಲಕ ಕೃತ್ಯ ಎಸಗಿರುವ ಬಗ್ಗೆ ಬಲವಾದ ಶಂಕೆ
ವಾಯುಪಡೆ ಕಾಪ್ಟರ್‌ಗಳು ಟಾರ್ಗೆಟ್?
ಜಮ್ಮು ನಾಗರಿಕ ಏರ್‌ಪೋರ್ಟ್‌ನಲ್ಲಿ ಭಾರತೀಯ ವಾಯುಪಡೆ ಸ್ಟೇಷನ್ ಕೂಡ ಇದೆ. ಏರ್‌ಪೋರ್ಟ್‌ನ ರನ್‌ವೇ ಮತ್ತು ಎಟಿಸಿ ವಾಯುಪಡೆ ವಶದಲ್ಲಿದೆ. ವಿಮಾನ ನಿಲ್ದಾಣದಲ್ಲಿನ ವಾಯುಪಡೆ ಸ್ಟೇಷನ್‌ನಲ್ಲಿ ವಾಯುಪಡೆ ಕಾಪ್ಟರ್‌ಗಳನ್ನು ನಿಲ್ಲಿಸುವ ಸ್ಥಳ ಇದೆ. ಅದರ ಬಳಿಯೇ ಡ್ರೋನ್ ಬಳಸಿ ಸ್ಫೋಟ ನಡೆಸಲಾಗಿದೆ. ಹೀಗಾಗಿ ಉಗ್ರರ ಗುರಿ ಕಾಪ್ಟರ್‌ಗಳಾಗಿರಬಹುದು ಎಂದು ಊಹಿಸಲಾಗಿದೆ.
ಗಡಿಯಿಂದ ಕೇವಲ 14 ಕಿ.ಮೀ. ದೂರ
ಜಮ್ಮು ವಿಮಾನ ನಿಲ್ದಾಣವು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಿಂದ 14 ಕಿ.ಮೀ. ಅಂತರದಲ್ಲಿದೆ (ಇದು ವಾಯು ಮಾರ್ಗದಲ್ಲಿನ ಅಂತರ). ಡ್ರೋನ್‌ಗಳು ಗಡಿಯಾಚೆಯಿಂತ ಬಂದಿವೆಯೋ ಅಥವಾ ಸ್ಥಳೀಯವಾಗಿಯೇ ಸಕ್ರಿಯರಾಗಿರುವ ಉಗ್ರರನ್ನು ಬಳಸಿಕೊಂಡು ಹಾರಿಸಲಾಗಿದೆಯೋ ಎಂಬುದು ಇನ್ನೂ ಖಚಿತಪಟ್ಟಿಲ್ಲ.