ಸಿಖ್ ಸಮುದಾಯದ ಕೆಲ ಧಾರ್ಮಿಕ ಮುಖಂಡರು, ಸಂಘಟನೆಗಳು ಯುವಕರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕಾಲ್ ತಖ್ತ್ ಸಂಘಟನೆಯ ಜತೇದಾರ್ ಆಗಿರುವ ಗಿಯಾನಿ ಹರ್‌ಪ್ರೀತ್ ಸಿಂಗ್ ಯುವಕರನ್ನು ಪ್ರಚೋದಿಸುತ್ತಿದ್ದಾರೆ ಎಂದು ಮನ್ನಾ ಆರೋಪಿಸಿದ್ದಾರೆ.
ಚಂಡೀಗಢ: ಸಿಖ್ಖರಿಗೆ ಪ್ರತ್ಯೇಕ ರಾಷ್ಟಕ್ಕಾಗಿ ಹೋರಾಟ ಮಾಡುತ್ತ ಯುವಕರನ್ನು ಪ್ರಚೋದಿಸಿ ಗಲಭೆಗೆ ಕಾರಣವಾಗಿದ್ದಲ್ಲದೇ ನಂತರ ದೇಶ ಬಿಟ್ಟು ಓಡಿ ಹೋದ ಖಲಿಸ್ತಾನ್ ಉಗ್ರ ಅಮೃತ್‌ಪಾಲ್ ಸಿಂಗ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈತನ ಜೊತೆ ಇನ್ನು ಸಿಖ್ ಸಮುದಾಯದ ಕೆಲ ಧಾರ್ಮಿಕ ಮುಖಂಡರು, ಸಂಘಟನೆಗಳು ಯುವಕರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕಾಲ್ ತಖ್ತ್ ಸಂಘಟನೆಯ ಜತೇದಾರ್ ಆಗಿರುವ ಗಿಯಾನಿ ಹರ್‌ಪ್ರೀತ್ ಸಿಂಗ್ ಯುವಕರನ್ನು ಪ್ರಚೋದಿಸುತ್ತಿದ್ದಾರೆ ಎಂದು ಮನ್ನಾ ಆರೋಪಿಸಿದ್ದಾರೆ.
ಅಮೃತ್‌ಪಾಲ್ ಸಿಂಗ್ ಪರಾರಿಯಾಗುವ ವೇಳೆ ನಡೆದ ಪೊಲೀಸ್ ದಾಳಿ ವೇಳೆ ಬಂಧಿತರಾಗಿದ್ದ ಎಲ್ಲಾ ಸಿಖ್ ಯುವಕರನ್ನು ಬಿಡುಗಡೆ ಮಾಡುವಂತೆ ಆಪ್ ಸರ್ಕಾರಕ್ಕೆ ಗಡುವು ನೀಡುವಂತೆ ಅವರು ಜನರನ್ನು ಪ್ರಚೋದಿಸಿದ್ದಾರೆ ಎಂದು ಮನ್ನಾ ಆರೋಪಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಹರ್‌ಪ್ರೀತ್ ಸಿಂಗ್, ಮುಗ್ಧ ಯುವಕರ ಬಗ್ಗೆ ಮಾತನಾಡುವುದು ಜತೇದಾರ್ ಹಕ್ಕು ಹಾಗೂ ಕರ್ತವ್ಯ ಎಂದು ಹೇಳಿದ್ದಾರೆ.
ಅಮೃತಪಾಲ್‌ಗೆ ಆಶ್ರಯ ನೀಡಿದ ಮಹಿಳೆ ಅರೆಸ್ಟ್, ಖಲಿಸ್ತಾನಿ ನಾಯಕನ ಲೋಕೇಶನ್ ಪತ್ತೆ ಹಚ್ಚಿದ ಪೊಲೀಸ್!
ಅಮೃತ್‌ಪಾಲ್ ಸಿಂಗ್ ಹಾಗೂ ಆತನ ಸಹಚರರ ಬಂಧನಕ್ಕೆ ಪೊಲೀಸರು ಮುಂದಾದ ಸಂದರ್ಭದಲ್ಲಿ ಒಟ್ಟು 353 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶಾಂತಿ ಭಂಗ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. ಅವರಲ್ಲಿ 197 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಪಂಜಾಬ್ ಪೊಲೀಸರು ಭಾನುವಾರ ತಿಳಿಸಿದ್ದರು.
ಸಿಖ್ ಜತೇದಾರ್ ಅವರು ಬಾದಲ್ ಸಮುದಾಯದ ಬಗ್ಗೆ ಒಲವು ಹೊಂದಿದ್ದಾರೆ ಎಂದು ಸಿಎಂ ಮಾನ್ ಆರೋಪಿಸಿದ್ದು, ಬಾದಲ್‌ಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಹಲವು ಜತೇದಾರರನ್ನು ಬಳಸಿಕೊಂಡಿದ್ದಾರೆ ಎಂದು ದೂರಿದರು. ಅಲ್ಲದೇ ಸಿಖ್ಖರ ಅತ್ಯುನ್ನತ ತಾತ್ಕಾಲಿಕ ಸ್ಥಾನವಾದ ಅಕಲ್ ತಖ್ತ್‌ನ ಜತೇದಾರ್, ಅವರು ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ನ ತ್ಯಾಗ ಹಾಗೂ ಕಾಣೆಯಾದ 'ಸರೂಪ್‌ಗಳನ್ನು ಜನರಿಗೆ ತಿಳಿಸಿದ್ದರೆ ಬಹಳ ಒಳ್ಳೆಯ ಕೆಲಸವಾಗುತ್ತಿತ್ತು ಎಂದು ಮನ್ನಾ ಹೇಳಿದ್ದಾರೆ.
ಅಮೃತಪಾಲ್ ಸಿಂಗ್ (Amritpal Singh) ಮತ್ತು ಅವರ ಸಹಾಯಕರ ವಿರುದ್ಧ ಪೊಲೀಸ್ ದಾಳಿ ವೇಳೆ ಬಂಧಿತರಾಗಿರುವ ಎಲ್ಲಾ ಸಿಖ್ ಯುವಕರನ್ನು ಬಿಡುಗಡೆ ಮಾಡುವಂತೆ ಅಕಾಲ್ ತಖ್ತ್ ಜತೇದಾರ್ (Akal Takht Jathedar) ಗಿಯಾನಿ ಹರ್ಪೀತ್ ಸಿಂಗ್ (Giani Harpeet Singh) ಅವರು ಪಂಜಾಬ್ ಎಎಪಿ ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿದ ಒಂದು ದಿನದ ನಂತರ ಸಿಎಂ ಭಗವಂತ್ ಮಾನ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಪೊಲೀಸ್ ದಾಳಿ ವೇಳೆ ಕೆಲ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದ್ದಕ್ಕೂ ಪಂಜಾಬ್ ಸರ್ಕಾರದ ವಿರುದ್ಧ ಜತೇದಾರ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೂ ಮೊದಲು ಅಮೃತಸರದ (Amritsar) ಅಕಾಲ್ ತಖ್ತ್‌ನ ಜತೇದಾರ್, ಮಾರ್ಚ್ 18 ರಂದು ಅಮೃತ್‌ಪಾಲ್ ಸಿಂಗ್ ಜತೇದಾರ್ ಆಗಿರುವ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಅಂಶಗಳ ವಿರುದ್ಧ ಹಾಗೂ ಪಂಜಾಬ್‌ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಬುದ್ಧಿಜೀವಿಗಳು, ಸಿಖ್ ವಕೀಲರು, ಪತ್ರಕರ್ತರು, ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಸೇರಿದಂತೆ ಸಿಖ್ ಸಂಘಟನೆಗಳ ವಿಶೇಷ ಸಭೆಯನ್ನು ಕರೆದಿದ್ದರು.
ಇವಳೇ ನೋಡಿ ಖಲಿಸ್ತಾನಿ ಉಗ್ರನ ಎನ್‌ಆರ್‌ಐ ಪತ್ನಿ: ವಿದೇಶಿ ಹಣದ ಮೂಲದ ಬಗ್ಗೆಯೂ ಪಂಜಾಬ್ ಪೊಲೀಸರ ವಿಚಾರಣೆ
ಜತೇದಾರ್ ಸರ್ಕಾರಕ್ಕೆ ನೀಡಿದ ಅಂತಿಮ ಗಡುವಿನ ವಿಚಾರದ ಬಗ್ಗೆ ಪಂಜಾಬಿ ಭಾಷೆಯಲ್ಲಿ ಟ್ವಿಟ್ ಮಾಡಿದ್ದ ಪಂಜಾಬ್ ಸಿಎಂ,'ಜತೇದಾರ್ ಶ್ರೀ ಅಕಲ್ ತಖ್ತ್ ಸಾಹಿಬ್ ಜಿ ಅವರೇ ನೀವು ಹಾಗೂ ಎಸ್‌ಜಿಪಿಸಿ ಮತ್ತು ಬಾದಲ್‌ಗಳ ಬಗ್ಗೆ ಒಲವು ಹೊಂದಿರುವುದು ಎಲ್ಲರಿಗೂ ತಿಳಿದಿದೆ. ಇತಿಹಾಸವನ್ನು ಹಿಂದಿರುಗಿ ನೋಡಿದಾಗ, ಅನೇಕ ಜತೇದಾರರನ್ನು ಬಾದಲ್‌ಗಳು ಅವರ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಂಡರು. ನೀವು ಸಂತೋಷದಿಂದ ಬದುಕುವ ಜನರನ್ನು ಪ್ರಚೋದಿಸುವ ಬದಲು ಶ್ರೀ ಗುರು ಗ್ರಂಥ ಸಾಹಿಬ್ ಜಿಯವರ ತ್ಯಾಗ ಮತ್ತು ಕಾಣೆಯಾದ ಅದರ 'ಸರೂಪ್'ಗಳನ್ನು (saroops) ಹುಡುಕಲು ಅಂತಿಮ ಗಡುವು ನೀಡಿದ್ದರೆ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.
2015ರಲ್ಲಿ ಗುರು ಗ್ರಂಥ ಸಾಹೀಬ್‌ನ (Guru Granth Sahib) ಬೀರ್ ಅಂದರೆ ಪ್ರತಿಗಳು ಹಾಗೂ ಈ ಪವಿತ್ರ ಪುಸ್ತಕದ ಹರಿದ ಪುಟಗಳು ಫರೀದ್‌ಕೋಟ್‌ನಲ್ಲಿ ಕಂಡು ಬಂದಿದ್ದವು. ಅಲ್ಲದೇ ಪ್ರತ್ಯೇಕ ಘಟನೆಯಲ್ಲಿ, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (Shiromani Gurdwara Parbandhak Committee) ಪಬ್ಲಿಕೇಶನ್ ಹೌಸ್‌ನ ದಾಖಲೆಗಳಿಂದ ಗುರು ಗ್ರಂಥ ಸಾಹಿಬ್‌ನ 328 'ಸರೂಪ್'ಗಳು (ಪ್ರತಿಗಳು) ಕಾಣೆಯಾಗಿದ್ದವು.
ಇನ್ನು ಮನ್ನಾ ಹೇಳಿಕೆಗೆ ಪ್ರತಿಕ್ರಿಯಿಸಿದ ಜತೇದಾರ್, ' ಭಗವಂತ್ ಮನ್ ಜೀ ನೀವು ಪಂಜಾಬ್ ಅನ್ನು ಪ್ರತಿನಿಧಿಸುತ್ತಿರುವಂತೆ, ನಾನು ಕೂಡ ನನ್ನ 'ಕ್ವಾಮ್' (ಸಮುದಾಯ)ದ ವಿನಮ್ರ ಪ್ರತಿನಿಧಿ. ನನ್ನ ಸಮುದಾಯದ ಮುಗ್ಧ ಯುವಕರ ಹಕ್ಕುಗಳ ಬಗ್ಗೆ ಮಾತನಾಡುವುದು ನನ್ನ ಹಕ್ಕು ಮತ್ತು ನನ್ನ ಕರ್ತವ್ಯವೂ ಆಗಿದೆ ಎಂದು ಹೇಳಿದ್ದಾರೆ. ಮುಗ್ಧ ಜನರನ್ನು ರಾಜಕಾರಣಕ್ಕಾಗಿ ಕೆಲವರು ಬಳಸಿಕೊಳ್ಳುತ್ತಿದ್ದಾರೆ ಎಂಬ ಸಿಎಂ ಮಾತು ಸತ್ಯ ಎಂದು ಅವರು ಹೇಳಿದರಲ್ಲದೇ ಆ ಬಗ್ಗೆ ನನಗೆ ಅರಿವಿದೆ ಎಂದು ಹೇಳಿಕೊಂಡಿದ್ದಾರೆ.
ಅದೇ ಸಮಯದಲ್ಲಿ, ನಿಮ್ಮಂತಹ ರಾಜಕೀಯ ವ್ಯಕ್ತಿಗಳನ್ನು, ಕೆಲ ರಾಜಕಾರಣಿಗಳು ತಮ್ಮ ಕೆಲಸ ಮಾಡಿಕೊಳ್ಳಲು ಬಳಸದಂತೆ ಎಚ್ಚರಿಕೆ ವಹಿಸಬೇಕೆಂದು ಸಿಎಂ ಮಾನ್ ಅವರಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೇ ಸಿಖ್ಖರ ಬಿಡುಗಡೆಗಾಗಿ ರಾಜ್ಯ ಸರ್ಕಾರಕ್ಕೆ ನೀಡಿರುವ ಅಂತಿಮ ಗಡುವನ್ನು ಉಲ್ಲೇಖಿಸಿದ ಸಿಂಗ್, ಮೊದಲು, ನಾವು ಒಟ್ಟಾಗಿ ಪಂಜಾಬ್ ಅನ್ನು ಉಳಿಸೋಣ ಮತ್ತು ಜೈಲಿನಲ್ಲಿರುವ ತಮ್ಮ ಅಮಾಯಕ ಪುತ್ರರಿಗಾಗಿ ಕಾಯುತ್ತಿರುವ ತಾಯಂದಿರನ್ನು ಒಗ್ಗೂಡಿಸಿ ಅವರ ಆಶೀರ್ವಾದ ಪಡೆಯೋಣ ಎಂದು ಸಿಎಂಗೆ ಹೇಳಿದ್ದಾರೆ.